ETV Bharat / state

ಹಣಕಾಸು ಇಲಾಖೆ ಅನುಮೋದನೆ ಪಡೆದು ವಾಲ್ಮೀಕಿ ಭವನಗಳ ನಿರ್ಮಾಣ: ಸಚಿವ ಶ್ರೀರಾಮುಲು

author img

By

Published : Feb 15, 2023, 5:32 PM IST

Updated : Feb 15, 2023, 5:52 PM IST

Minister B Sriramulu
ಹಣಕಾಸು ಇಲಾಖೆ ಅನುಮೋದನೆ ಪಡೆದು ವಾಲ್ಮೀಕಿ ಭವನಗಳ ನಿರ್ಮಾಣ: ಸಚಿವ ಶ್ರೀರಾಮುಲು

ರಾಜ್ಯದ ವಿವಿಧೆಡೆ ವಾಲ್ಮೀಕಿ ಭವನ ನಿರ್ಮಿಸಲು 20 ಕೋಟಿ ರೂ ಅನುದಾನ ಮೀಸಲಿಡಲಾಗಿದೆ - ಹೆಚ್ಚುವರಿ ಅನುದಾನ ನೀಡುವಂತೆ ಸಿಎಂ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗಿದೆ - ಸಚಿವ ಬಿ ಶ್ರೀರಾಮುಲು.

ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ ಶ್ರೀರಾಮುಲು

ಬೆಂಗಳೂರು: ಅಗತ್ಯವಿರುವ ಕಡೆ ಹಣಕಾಸು ಇಲಾಖೆಯ ಅನುಮೋದನೆ ಪಡೆದು ವಾಲ್ಮಿಕಿ ಭವನಗಳನ್ನು ನಿರ್ಮಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ವಿಧಾನಸಭೆಯಲ್ಲಿ ತಿಳಿಸಿದರು. ಇಂದು ಪ್ರಶ್ನೋತ್ತರ ವೇಳೆ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಅವರ ಪರವಾಗಿ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಅವರು ಕೇಳಿದ ಪ್ರಶ್ನೆಯಲ್ಲಿ ಹಾಸನ ಜಿಲ್ಲೆ ಸಕಲೇಶಪುರಲ್ಲಿ ವಾಲ್ಮೀಕಿ ಭವನ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಸಚಿವರು, ಹೊಳೆನರಸೀಪುರ ಸೇರಿದಂತೆ ರಾಜ್ಯದ ವಿವಿದೆಡೆ ವಾಲ್ಮೀಕಿ ಭವನ ನಿರ್ಮಿಸಲು 20 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಆದರೆ, ಒಂದೊಂದು ವಾಲ್ಮೀಕಿ ಭವನಕ್ಕೆ ಹೆಚ್ಚಿನ ಅನುದಾನ ಬೇಕಾಗಿರುವುದರಿಂದ ಅಗತ್ಯ ಇರುವ ಕಡೆಗಳಲ್ಲಿ ನಿರ್ಮಿಸಿಕೊಡುವ ಆಶ್ವಾಸನೆ ನೀಡಿದರು. ಹೆಚ್ಚುವರಿ ಅನುದಾನ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗಿದೆ. ಬಜೆಟ್‍ನಲ್ಲೂ ಇದಕ್ಕೆ ಹೆಚ್ಚಿನ ಅನುದಾನ ಕೊಡುವಂತೆ ಪ್ರಸ್ತಾವನೆ ಸಲ್ಲಿಸಿದ್ದು, ಸಕಾರಾತ್ಮವಾಗಿ ಸ್ಪಂಧಿಸಿದ್ದಾರೆ ಎಂದು ಹೇಳಿದರು.

ತೋಟಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ: ತೋಟಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ತೋಟಗಾರಿಕಾ ಸಚಿವ ಮುನಿರತ್ನ ತಿಳಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್‍ನ ಹೆಚ್.ಕೆ.ಕುಮಾರಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಲಾಖೆಯಲ್ಲಿ ಖಾಲಿ ಇದ್ದ 228 ಹುದ್ದೆಗಳ ಪೈಕಿ ಈಗಾಗಲೇ 117 ಹುದ್ದೆ ಭರ್ತಿ ಮಾಡಿದ್ದು, ಇನ್ನೂ 111 ಹುದ್ದೆಗಳು ಖಾಲಿ ಇವೆ. ಆರ್ಥಿಕ ಇಲಾಖೆ ಹೊಸ ನೇಮಕಾತಿಗೆ ಹೇರಿರುವ ನಿರ್ಬಂಧ ತೆರವಾದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು. ಹುದ್ದೆಗಳು ಖಾಲಿ ಇದ್ದರೂ ಇಲಾಖೆಯ ಕಾರ್ಯಕ್ರಮಗಳಿಗೆ ಯಾವುದೇ ರೀತಿ ತೊಂದರೆ ಆಗಿಲ್ಲ. ಇದುವರೆಗೂ ಶೇ.75ರಷ್ಟು ಕಾರ್ಯಕ್ರಮಗಳ ಅನುಷ್ಠಾನ ಪೂರ್ಣಗೊಂಡಿದೆ ಎಂದು ಹೇಳಿದರು.

ಇನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ತೋಟಗಾರಿಕೆ ವಲಯದ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಕಡೂರು ತಾಲೂಕಿನ ಶಾಸಕ ಬೆಳ್ಳಿ ಪ್ರಕಾಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ತೆಂಗು, ಅಡಕೆ, ದಾಳಿಂಬೆ, ಮಾವು ಮತ್ತು ಸಪೋಟಾ ಮುಂತಾದ ಆರ್ಥಿಕ ಬೆಳೆಗಳಲ್ಲಿ ರೈತರು ತೊಡಗಿಸಿಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ ಎಂದರು.

ಅಂಬೇಡ್ಕರ್ ವಸತಿ ಶಾಲೆಗಳಿಗೆ ಮೂಲ ಸೌಕರ್ಯ: ರಾಜ್ಯದ ಡಾ ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲು ಸರ್ಕಾರ ಬದ್ಧವಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವಿಧಾನಸಭೆಯಲ್ಲಿ ಶಾಸಕ ಮಸಾಲೆ ಜಯರಾಂ ಅವರ ಪ್ರಶ್ನೆಗೆ ಉತ್ತರಿಸಿದರು. ಸಚಿವರು, ರಾಜ್ಯದಲ್ಲಿ ಒಟ್ಟು 830 ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗಳಿದ್ದು, 590 ಸರ್ಕಾರಿ ಹಾಗೂ 240 ಖಾಸಗಿ ಶಾಲೆಗಳಿವೆ. ಖಾಸಗಿ ಶಾಲೆಗಳಿಗೆ ಬಾಡಿಗೆ ಮತ್ತಿತರ ವೆಚ್ಚಕ್ಕೆ 1000 ಕೋಟಿ ರೂ. ಅನುದಾನದ ಅಗತ್ಯವಿದೆ. ಇದರಲ್ಲಿ 700 ಕೋಟಿ ರೂ. ಆರು ತಿಂಗಳ ಅವಧಿಯಲ್ಲಿ ಬಿಡುಗಡೆ ಮಾಡಿದ್ದೇವೆ. ಉಳಿದ ಹಣವನ್ನು ಶೀಘ್ರ ಬಿಡುಗಡೆ ಮಾಡುವುದಾಗಿ ಹೇಳಿದರು.

ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದಂಡಿನಶಿವಾರ ಹೋಬಳಿಯ ಚಾಕೋವಳ್ಳಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುತ್ತೇವೆ. ಶೀಘ್ರದಲ್ಲೇ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸುವುದಾಗಿ ತಿಳಿಸಿದರು.

ಶಾಸಕ ಕೃಷ್ಣಾರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಮೊರಾರ್ಜಿ ದೇಸಾಯಿ ಶಾಲೆಗೆ ಹೆಚ್ಚಿನ ಆದ್ಯತೆ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ಮನವಿ ಮಾಡಿರುವುದಾಗಿ ಹೇಳಿದರು. ಕಳೆದ ಬಜೆಟ್‍ನಲ್ಲಿ 37 ವಸತಿ ಶಾಲೆ ಮಂಜೂರು ಮಾಡಲಾಗಿತ್ತು. ಇದರಲ್ಲಿ 11 ವಸತಿ ಶಾಲೆಗಳಿಗೆ ಕಾಮಗಾರಿ ಅರಂಭವಾಗಿದ್ದು, ಉಳಿದ ಶಾಲೆಗಳನ್ನು ಈ ವರ್ಷದ ಬಜೆಟ್‍ನಲ್ಲಿ ಸೇರಿಸಲು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗಿದೆ. ಬಜೆಟ್ ಬಳಿಕ ಉಳಿದ ಶಾಲೆಗಳ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.

ಇದನ್ನೂ ಓದಿ:ಭದ್ರಾವತಿ ವಿಎಸ್​ಎಲ್ ಕಾರ್ಖಾನೆ ಉಳಿಸಲು ಬಿಎಸ್​ವೈ ಒತ್ತಾಯ: ಕಾರ್ಖಾನೆ ಸ್ಥಗಿತಗೊಳಿಸದಂತೆ ಕ್ರಮ ಎಂದ ಸಚಿವ ಜೆ.ಸಿ.ಮಾಧುಸ್ವಾಮಿ

Last Updated :Feb 15, 2023, 5:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.