ETV Bharat / state

ಡಿಕೆಶಿ, ಸಿದ್ದರಾಮಯ್ಯ ಎಂದರೆ 36 ಇದ್ದ ಹಾಗೆ, ಎರಡೂ ಮುಖ ಎಂದಿಗೂ ಕೂಡುವುದಿಲ್ಲ: ಸಚಿವ ಕಾರಜೋಳ

author img

By

Published : Oct 1, 2022, 3:52 PM IST

minister-govind-karajola-talks-on-dk-shivakumar-and-siddaramaiah
ಡಿಕೆಶಿ, ಸಿದ್ದರಾಮಯ್ಯ ಅಂದ್ರೆ 36 ಇದ್ದ ಹಾಗೆ, ಎರಡೂ ಮುಖ ಎಂದಿಗೂ ಕೂಡುವುದಿಲ್ಲ: ಸಚಿವ ಕಾರಜೋಳ

ಸಿದ್ದರಾಮಯ್ಯರದ್ದು ಒಂದು ದಾರಿ, ಡಿಕೆಶಿಯವರದ್ದು ಒಂದು ದಾರಿ ಇದೆ. ನಮ್ಮ ಉ‌ತ್ತರ ಕರ್ನಾಟಕದ ಕಡೆ ಒಂದು ಮಾತಿದೆ. ಅವರಿಬ್ಬರೂ 36 ಎಂದು. 36 ಎಂದೂ ಒಂದಾಗಲ್ಲ, ಮೂರು ಒಂದು ಕಡೆ ಇದ್ದರೆ, ಆರು ಒಂದು ಕಡೆ ಇರುತ್ತದೆ. ಮುಖ ಕೂಡುವುದಿಲ್ಲ ಎಂದು ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ.

ಬೆಂಗಳೂರು: ಡಿಕೆ ಶಿವಕುಮಾರ್​​ ಹಾಗೂ ಸಿದ್ದರಾಮಯ್ಯ ಅಂದರೆ 36 ಇದ್ದಂತೆ‌. ಎರಡೂ ಮುಖ ಎಂದಿಗೂ ಸೇರುವುದಿಲ್ಲ. ಎಣ್ಣೆ ಮತ್ತು ಸೀಗೇ ಕಾಯಿ ಒಂದಾಗಲು ಸಾಧ್ಯವೇ? ಎಂದೂ ಸಾಧ್ಯವಿಲ್ಲ. ಅವರಿಬ್ಬರೂ ಒಂದಾಗಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅವರಿಬ್ಬರೂ ಒಂದಾಗಲು ಪ್ರಯತ್ನ ಮಾಡುತ್ತಿಲ್ಲ ಎಂದು ಸಚಿವ ಗೋವಿಂದ ಕಾರಜೋಳ ಟೀಕಿಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಭಾರತ್ ಜೋಡೋದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಒಟ್ಟಾಗಿ ಹೋಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಅವರಿಬ್ಬರ ದಾರಿ ಬೇರೆ ಬೇರೆ, ಸಿದ್ದರಾಮಯ್ಯ ಅವರದ್ದು ಒಂದು ದಾರಿ, ಡಿಕೆಶಿಯ ಅವರದ್ದು ಒಂದು ದಾರಿ ಇದೆ. ನಮ್ಮ ಉ‌ತ್ತರ ಕರ್ನಾಟಕದ ಕಡೆ ಒಂದು ಮಾತಿದೆ.

ಅವರಿಬ್ಬರೂ 36 ಎಂದು. 36 ಎಂದೂ ಒಂದಾಗಲ್ಲ, ಮೂರು ಒಂದು ಕಡೆ ಇದ್ದರೆ, ಆರು ಒಂದು ಕಡೆ ಇರುತ್ತದೆ. ಮುಖ ಕೂಡುವುದಿಲ್ಲ. ಡಿಕೆಶಿ ಮತ್ತು ಸಿದ್ದರಾಮಯ್ಯ ಮೂವತ್ತಾರು. ಇಬ್ಬರ ಸಿದ್ದಾಂತವೂ ಬೇರೆ ಬೇರೆ. ಇಬ್ಬರು ಸಿಎಂ ಅಭ್ಯರ್ಥಿಗಳು ಒಂದೇ ಕುರ್ಚಿಯಲ್ಲಿ ಕೂರಲು ಸಾಧ್ಯವಿಲ್ಲ‌. ಹಗಲು ಕನಸು ಕಾಣುತ್ತಿದ್ದಾರೆ ಎಂದು ಕಿಚಾಯಿಸಿದರು.

ಮಲ್ಲಿಕಾರ್ಜುನ ಖರ್ಗೆಗೆ ಕಾಂಗ್ರೆಸ್ ಮೋಸ: ಮಲ್ಲಿಕಾರ್ಜುನ ಖರ್ಗೆ ಹಿರಿಯ ನಾಯಕ. 11 ಬಾರಿ ಗೆಲ್ಲುತ್ತಾರೆ. ಅವರನ್ನು ಸಿಎಂ ಮಾಡಬೇಕಾಗಿತ್ತು. ಕಾಂಗ್ರೆಸ್ ಯಾರ್ಯಾರನ್ನೋ ಸಿಎಂ ಮಾಡಿತು. ಆದರೆ, ಖರ್ಗೆಯವರನ್ನು ಮಾಡಲಿಲ್ಲ. ಆ ಮೂಲಕ ಅವರಿಗೆ ಅನ್ಯಾಯ ಮಾಡಿದೆ. ದಲಿತರ ಬಗ್ಗೆ ಕಾಂಗ್ರೆಸ್​ಗೆ ನಿಜವಾದ ಕಾಳಜಿ ಇಲ್ಲ. ಖರ್ಗೆ ಎಷ್ಟೇ ಪ್ರಯತ್ನಪಟ್ಟರೂ ಸಹ ಅವರನ್ನು ಸಿಎಂ ಮಾಡಲಿಲ್ಲ. ಅವರ ಹಿರಿತನ, ಅನುಭವ ಹೊಂದಿದ್ದಾರೆ ಎಂದರು.

ಕಾಂಗ್ರೆಸ್ ಮುಳುಗುವ ಹಡಗಾಗಿದೆ. ಅವಸಾನದ ಅಂಚಿನಲ್ಲಿದೆ. ಅಂಥ ಸಂದರ್ಭದಲ್ಲಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡುತ್ತಿರುವುದಕ್ಕೆ ನಾನು ಹೇಳಬೇಕು ಎಂಬುದು ಗೊತ್ತಿಲ್ಲ. ಕಾಂಗ್ರೆಸ್​​ ಅವರೊಂದಿಗೆ ಮೋಸದ ಆಟವಾಡಿದೆ. ಈಗಲಾದರೂ ಮುಂದಿನ ಸಿಎಂ ಖರ್ಗೆ ಎಂದು ಘೋಷಣೆ ಮಾಡಲಿ.

ಇದು ಕಾಂಗ್ರೆಸ್​​ಗೆ ನನ್ನ ಸವಾಲು. 60 ವರ್ಷ ಆಡಳಿತ ನಡೆಸಿದ್ದಾರೆ. ದಲಿತರ ಮತದ ಮೇಲೆ 60 ವರ್ಷ ಆಳ್ವಿಕೆ ಮಾಡಿದ್ದಾರೆ. ದಲಿತರಿಗೆ ಮೋಸ ಮಾಡಿದ ಮೇಲೆ ನಮ್ಮ ಜನ ಬಿಜೆಪಿ ಕಡೆ ಬರುತ್ತಿದ್ದಾರೆ. ಈಗ ದಲಿತ ಸಮುದಾಯ ಕಾಂಗ್ರೆಸ್​​ ನಂಬಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು‌.

ರಾಣಿ ಚೆನ್ನಮ್ಮ ಉತ್ಸವ: ಕಿತ್ತೂರು ರಾಣಿ ಚೆನ್ನಮ್ಮ ಉತ್ಸವ ಹಿನ್ನೆಲೆ ನಾಳೆ ಟೌನ್ ಹಾಲ್​ನಿಂದ ವೀರ ಜ್ಯೋತಿ ಕಳಿಸಲಾಗುವುದು. ಇದಕ್ಕೆ ನಾಳೆ ಸಿಎಂ ಚಾಲನೆ ಕೊಡಲಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಅ. 23ರಿಂದ ಮೂರು ದಿನಗಳ ಕಾಲ ಅದ್ಧೂರಿ ಚೆನ್ನಮ್ಮ ಜಯಂತಿ ಆಯೋಜಿಸಲಾಗುತ್ತದೆ. ಈ ಉತ್ಸವದಲ್ಲಿ ರಾಜ್ಯದ ಜನತೆ ಭಾಗವಹಿಸಬೇಕು. ಅ. 25ರಂದು ವಿಶಿಷ್ಟ ಕಾರ್ಯಕ್ರಮ ಇರಲಿದೆ. ಅಂದು ಜಿಲ್ಲೆಯಲ್ಲಿರುವ ಮಾಜಿ ಸೈನಿಕರಿಗೆ ಗೌರವ ಸಲ್ಲಿಸುತ್ತೇವೆ‌ ಎಂದರು.

ಭಾರತ ಜೋಡೋ ಯಾತ್ರೆಗೆ ರಕ್ಷಣೆ: ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೋ ಯಾತ್ರೆಗೆ ನಾವು ರಕ್ಷಣೆ ಕೊಡುತ್ತೇವೆ. ಅದರಿಂದ ಅವರಿಗೆ ಏನು ಲಾಭ ಆಗುತ್ತದೆಯೋ ಗೊತ್ತಿಲ್ಲ. ಅವರ ಯಾತ್ರೆ ಎಷ್ಟರಮಟ್ಟಿಗೆ ಕಾಂಗ್ರೆಸ್​​ಗೆ ಬಲ ಕೊಡುತ್ತದೆಯೋ ಗೊತ್ತಿಲ್ಲ. ಆದರೆ ಅವರಿಗೆ ರಕ್ಷಣೆ ಕೊಡುವುದು ನಮ್ಮ ಕೆಲಸ, ಅದನ್ನು ಮಾಡುತ್ತೇವೆ ಎಂದು ತಿಳಿಸಿದರು.

ಈ ಪಾದಯಾತ್ರೆಯಿಂದ ಬಿಜೆಪಿಗೆ ಯಾವುದೇ ಸಮಸ್ಯೆ ಇಲ್ಲ. ನರೇಂದ್ರ ಮೋದಿ ಕಟ್ಟಿಹಾಕಲು ರಾಹುಲ್ ಸಮರ್ಥರಲ್ಲ. ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪುಡಾರಿಗಳು ಪೊಲೀಸರಿಗೆ ಬೆದರಿಸುತ್ತಿದ್ದಾರೆ. ಇನ್ನು ಆರು ತಿಂಗಳಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುತ್ತಿದ್ದಾರೆ ಎ‌ಂದು ಟೀಕಿಸಿದರು.

ಇದನ್ನೂ ಓದಿ: ಡಿಕೆಶಿಗೂ ಮುನ್ನ ಮಾರ್ಗ ಮಧ್ಯದಲ್ಲೇ ರಾಹುಲ್​ಗೆ ಸ್ವಾಗತ ಕೋರಿದ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.