ETV Bharat / state

ಕರ್ನಾಟಕದಲ್ಲಿ ಸಂಕ್ರಾಂತಿ ಸಂಭ್ರಮ: ಇಲ್ಲಿನ ಆಚರಣೆ ಮತ್ತು ಹಬ್ಬದ ವಿಶೇಷತೆ

author img

By

Published : Jan 14, 2023, 1:02 PM IST

ಕರ್ನಾಟಕದಲ್ಲಿ ಸಂಕ್ರಾಂತಿ ಸಂಭ್ರಮ; ಇಲ್ಲಿನ ಆಚರಣೆ ಮತ್ತು ಹಬ್ಬದ ವಿಶೇಷತೆ
makara-sankranti-celebration-in-karnataka

ಕರ್ನಾಟಕದಲ್ಲಿ ಸುಗ್ಗಿ ಸಂಭ್ರಮದ ಆಚರಣೆ ಬಲು ಜೋರು- ಮಕರ ಸಂಕ್ರಾತಿ ಸೂರ್ಯಾರಾಧನೆಗೆ ವಿಶೇಷ- ಹಬ್ಬದ ಹಿಂದಿದೆ ಜ್ಯೋತಿಷ್ಯದ ತಳಹದಿ

ಬೆಂಗಳೂರು: ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ವಿಶೇಷ ಹಬ್ಬ. ಕರ್ನಾಟಕದಲ್ಲಿಯೂ ಇದನ್ನು ಸುಗ್ಗಿ ಸಂಭ್ರಮವಾಗಿ ಆಚರಿಸಲಾಗುತ್ತದೆ. ರೈತರು ತಾವು ಬೆಳೆದ ಬೆಳೆ ಕೈಗೆ ಬರುವ ಸಂದರ್ಭದಲ್ಲಿ ಪೂಜೆ ಸಲ್ಲಿಸುವ ಸಾಂಪ್ರದಾಯಿಕ ಆಚರಣೆ ಇದಾಗಿದೆ. ಇಂದು ಇದನ್ನು ಗ್ರಾಮೀಣ ಭಾಗದಲ್ಲಿ ಮಾತ್ರವಲ್ಲ, ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ನಗರ, ಪಟ್ಟಣಗಳಲ್ಲಿಯೂ ಆಚರಿಸಲಾಗುತ್ತದೆ.

ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆಯಾದರೂ ವೇದಾಂಗ ಜ್ಯೋತಿಷ್ಯ ಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂ ಧರ್ಮದವರಿಂದ ಆಚರಿಸಲ್ಪಡುತ್ತದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದು ಎನ್ನುವುದು ವಿಶೇಷ.

ಜ್ಯೋತಿಷ್ಯದ ತಳಹದಿ: ಸೂರ್ಯನು ನಿರ್ಯಾಣ ಮಕರರಾಶಿಯನ್ನು ಪ್ರವೇಶಿಸಿದಾಗ, "ಮಕರ ಸಂಕ್ರಾಂತಿ"ಯಾಗುತ್ತದೆ. ಈ ಕಾಲವು ಪ್ರತಿವರ್ಷ ಗ್ರೆಗೋರಿಯನ್ ಪಂಚಾಂಗದ ಜನವರಿ 14ರ ಸುಮಾರಿಗೆ ಬೀಳುತ್ತದೆ. ಹಿಂದೆ, ಈ ಕಾಲವೇ ಉತ್ತರಾಯಣ ಅಥವಾ ಸೂರ್ಯನ ಉತ್ತರದಿಕ್ಕಿನ ಪಯಣದ ಆರಂಭವನ್ನು ಸೂಚಿಸುವ ಕಾಲವೂ ಆಗಿತ್ತಾದ್ದರಿಂದ ಭೂಮಿಯ ಉತ್ತರಾರ್ಧಗೋಳದಲ್ಲಿ ಚಳಿ-ಬೆಚ್ಚನೆಯ ವಾತಾವರಣ ಆರಂಭವಾಗಿ, ಬೆಳೆ ಕಟಾವಿನ ಕಾಲವೂ ಆಗಿತ್ತು. ಈಗ ಉತ್ತರಾಯಣ ಡಿಸೆಂಬರ್ 22ಕ್ಕೇ ಆದರೂ, ಹಿಂದಿನಂತೆಯೇ ಜನವರಿ 14 ರಂದು ನಡೆಯುವ ಮಕರಸಂಕ್ರಾಂತಿಯಂದೇ ಉತ್ತರಾಯಣದ ಆಚರಣೆಯೂ ನಡೆಯುತ್ತದೆ. ಮಹಾಭಾರತದ ಕತೆಯಲ್ಲಿ ಇಚ್ಛಾ ಮರಣಿಯಾದ ಭೀಷ್ಮರು ಪ್ರಾಣ ಬಿಡಲು ಉತ್ತರಾಯಣ ಪರ್ವ ಕಾಲವನ್ನು ಕಾದಿದ್ದರು ಎಂಬ ಉಲ್ಲೇಖವಿದೆ.

ಉತ್ತರಾಯಣ ಆರಂಭದ ದಿನ: ಇಲ್ಲಿಂದ ಸೂರ್ಯೋದಯ ಇನ್ನು ಆರು ತಿಂಗಳು ಉತ್ತರದ ದಿಕ್ಕಿನಲ್ಲಿ ಚಲಿಸುತ್ತದೆ. ಉತ್ತರಕ್ಕೆ ಹೆಚ್ಚು ಹೋದಂತೆಲ್ಲಾ ಹಗಲಿನ ಪ್ರಮಾಣ ಹೆಚ್ಚಾಗಿ, ಇರುಳು ಕಡಿಮೆಯಾಗುತ್ತಾ ಹೋಗುತ್ತದೆ. ಸೂರ್ಯನ ತಾಪ ಹೆಚ್ಚಾಗುತ್ತಾ ಬೇಸಿಗೆಯನ್ನು ಅನುಭವಿಸುತ್ತೇವೆ. ಸಂಕ್ರಾಂತಿ ಸೂರ್ಯಾರಾಧನೆಯ ಹಬ್ಬವಾಗಿದೆ. ಮಕರ ಸಂಕ್ರಾಂತಿ ಪ್ರಸಿದ್ದವಾಗಿರುವ ಸುಗ್ಗಿಯ ಕಾಲದ ಹಬ್ಬ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಂಧಿ ಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಹೆಸರು. ಸೌರಮಾನದ ಪ್ರಕಾರ ಸೂರ್ಯನು ಮೇಷಾದಿ ಹನ್ನೆರಡು ರಾಶಿಗಳನ್ನು ಪ್ರವೇಶಿಸುವಾಗಲೂ ಸಂಕ್ರಾಂತಿ ಬರುತ್ತದೆ. ಆದರೆ ಅವುಗಳಲ್ಲಿ ಕರ್ಕಾಟಕ ಸಂಕ್ರಾಂತಿ ಹಾಗೂ ಮಕರ ಸಂಕ್ರಾಂತಿಗಳು ದಕ್ಷಿಣಾಯನ, ಉತ್ತರಾಯಣಗಳ ಪ್ರಾರಂಭದ ದಿನಗಳಾದ್ದರಿಂದ ವಿಶೇಷ ಮಹತ್ವವುಳ್ಳವುಗಳಾಗಿವೆ. ಸಂಕ್ರಾಂತಿ ಒಂದು ವಿಧದಲ್ಲಿ ಸೂರ್ಯಾರಾಧನೆ.

ಕರ್ನಾಟಕದಲ್ಲಿ ಆಚರಣೆ: ಕರ್ನಾಟಕದಲ್ಲಿ ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು "ಎಳ್ಳು ಬೆಲ್ಲ". ಮನೆಯಲ್ಲಿ ಎಳ್ಳು ಬೆಲ್ಲವನ್ನು ತಯಾರಿಸಿ ಸುತ್ತಲಿನ ಮನೆಗಳಿಗೆ "ಎಳ್ಳುಹಂಚುವುದು" ಸಂಕ್ರಾಂತಿಯ ಸಂಪ್ರದಾಯ. ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು, ಹಣ್ಣು ಮತ್ತು ಕಬ್ಬಿನ ತುಂಡುಗಳನ್ನು ಸಹ ಬೀರುವುದುಂಟು. ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ, ಒಣ ಕೊಬ್ಬರಿ, ಹುರಿಗಡಲೆ, ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ "ಎಳ್ಳು ಬೆಲ್ಲ" ತಯಾರಿಸಲಾಗುತ್ತದೆ.

ಕರ್ನಾಟಕದ ರೈತರಿಗೆ ಸುಗ್ಗಿಯ ಹಬ್ಬ. ಈ ಮಂಗಳಕರ ದಿನದಂದು, ಹೊಸ ಬಟ್ಟೆಗಳನ್ನು ಧರಿಸಿ ಒಂದು ತಟ್ಟೆಯಲ್ಲಿ ಎಳ್ಳುಬೆಲ್ಲದೊಂದಿಗೆ ಹತ್ತಿರದ ಜನರನ್ನು ಮತ್ತು ಸಂಬಂಧಿಗಳನ್ನು ಭೇಟಿಯಾಗಿ ಎಳ್ಳುಬೆಲ್ಲವನ್ನು ವಿನಿಮಯ ಮಾಡಿಕೊಳ್ಳುತ್ತಾರೆ. "ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡೋಣ" ಎಂದು ಹೇಳಿಕೊಳ್ಳುತ್ತಾರೆ.

ಮಹಿಳೆಯರು ಗುಂಪು ಗುಂಪಾಗಿ ರಂಗೋಲಿಯನ್ನು ಬಿಡಿಸುವುದು ಸಂಕ್ರಾಂತಿಯ ಸಮಯದ ಮತ್ತೊಂದು ಜನಪ್ರಿಯ ಆಚರಣೆಯಾಗಿದೆ. ದನಕರುಗಳನ್ನು ಸಿಂಗರಿಸುವುದು ಮತ್ತು ಮೆರವಣಿಗೆ ಮಾಡುವುದು ಇನ್ನೊಂದು ಧಾರ್ಮಿಕ ಪದ್ಧತಿಯಾಗಿದೆ. ಅವುಗಳನ್ನು "ಕಿಚ್ಚು ಹಾಯಿಸುವುದು" ಹಳ್ಳಿಗಳಲ್ಲಿ ಸಾಮಾನ್ಯವಾಗಿದೆ. ತಮಿಳುನಾಡಿನಲ್ಲಿ ಈ ಹಬ್ಬವನ್ನು "ಪೊಂಗಲ್" ಎಂದು ಕರೆಯಲಾಗುತ್ತದೆ. ಇಲ್ಲಿ ಇದು ನಾಲ್ಕು ದಿನಗಳ ಹಬ್ಬ. ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸಂಕ್ರಾಂತಿಯ ದಿನದಂದು ಗಾಳಿಪಟಗಳನ್ನು ಹಾರಿಬಿಡುವ ಸಂಪ್ರದಾಯವುಂಟು. ಮಹಾರಾಷ್ಟ್ರದಲ್ಲಿಯೂ, ಎಳ್ಳು ಮತ್ತು ಸಕ್ಕರೆಯ ಕುಸುರಿಕಾಳನ್ನು ಬಂಧು ಮಿತ್ರರಿಗೆ ಹಂಚುವ ರೂಢಿ ಇದೆ. ಪಂಜಾಬ್ ಮತ್ತು ಹರಿಯಾಣಗಳಲ್ಲಿ ಸಂಕ್ರಾಂತಿಯನ್ನು "ಲೋಹರಿ" ಎಂಬ ಹೆಸರಿನಲ್ಲಿ ಆಚರಿಸುತ್ತಾರೆ.

ಇದನ್ನೂ ಓದಿ: ಸಂಕ್ರಾಂತಿ ಸಂಭ್ರಮ: ವಾರಣಾಸಿ, ಕೋಲ್ಕತ್ತಾದ ಗಂಗಾಸಾಗರ್​ ಮೇಳಕ್ಕೆ ಹರಿದು ಬಂದ ಭಕ್ತ ಸಾಗರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.