ETV Bharat / state

ಹರಿಹರ ರಾಮಪ್ಪಗೆ ಟಿಕೆಟ್ ಮಿಸ್, ಡಿ.ಎಸ್.ಹುಲಗೇರಿಗೆ ಲಕ್: ಅಖಂಡ, ಮುನಿಯಪ್ಪ ವೇಟಿಂಗ್​ ಲಿಸ್ಟ್

author img

By

Published : Apr 18, 2023, 10:13 PM IST

Updated : Apr 18, 2023, 10:21 PM IST

ಶಾಸಕ ಡಿ ಎಸ್​ ಹೊಲಗೇರಿ
ಶಾಸಕ ಡಿ ಎಸ್​ ಹೊಲಗೇರಿ

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆಯಾಗಿದೆ. ಲಿಂಗಸಗೂರು ಶಾಸಕ ಡಿ.ಎಸ್. ಹೊಲಗೇರಿ ಕಾಂಗ್ರೆಸ್​ನಿಂದ ಟಿಕೆಟ್​ ಪಡೆಯುವಲ್ಲಿ ಸಫಲರಾಗಿದ್ದಾರೆ.

ಬೆಂಗಳೂರು: ನಿರೀಕ್ಷೆಯಂತೆ ಹರಿಹರ ಶಾಸಕ ರಾಮಪ್ಪಗೆ ಟಿಕೆಟ್ ಮಿಸ್ ಆಗಿದ್ದು, ಲಿಂಗಸಗೂರು ಶಾಸಕ ಡಿ.ಎಸ್.ಹೂಲಗೇರಿ ಕೊನೆಗೂ ಟಿಕೆಟ್ ಪಡೆಯುವಲ್ಲಿ ಯಶ ಕಂಡಿದ್ದಾರೆ. 15 ಸ್ಥಾನಗಳಿಗೆ ಟಿಕೆಟ್ ಘೋಷಣೆ ಆಗಬೇಕಿತ್ತು. ಆದರೆ ಜಗದೀಶ್ ಶೆಟ್ಟರ್‌ಗೆ ಈಗಾಗಲೇ ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನಸಭೆ ಕ್ಷೇತ್ರದ ಬಿ ಫಾರಂ ವಿತರಣೆ ಮಾಡಿದ್ದರಿಂದ ಪಟ್ಟಿಯಲ್ಲಿ ಅಧಿಕೃತ ಘೋಷಣೆ ಮಾಡುವುದು ಮಾತ್ರ ಬಾಕಿ ಇತ್ತು. ಇಂದು ಆ ಕಾರ್ಯ ಆಗಿದೆ.

ಕಾಂಗ್ರೆಸ್ ಪಕ್ಷ ಇಂದು ಬಾಕಿ ಇರುವ 14ರ ಪೈಕಿ 10 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಏಳು ಕ್ಷೇತ್ರಗಳಿಗೆ ಮಾತ್ರ ಟಿಕೆಟ್ ಘೋಷಣೆ ಮಾಡಿದೆ. ಈ ಸಾರಿ ಪಟ್ಟಿಯಲ್ಲಿ ಗಮನಿಸಬಹುದಾದ ಅಂಶ ಎಂದರೆ ಹರಿಹರ ಹಾಲಿ ಶಾಸಕ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ರಾಮಪ್ಪ ಟಿಕೆಟ್ ಮಿಸ್ ಆಗಿದ್ದು ನಂದಗವಿ ಶ್ರೀನಿವಾಸ್‌ಗೆ ಹರಿಹರ ಟಿಕೆಟ್ ನೀಡಲಾಗಿದೆ.

ಶಿಡ್ಲಘಟ್ಟ ಟಿಕೆಟ್ ಆಕಾಂಕ್ಷಿ ವಿ ಮುನಿಯಪ್ಪ
ಶಿಡ್ಲಘಟ್ಟ ಟಿಕೆಟ್ ಆಕಾಂಕ್ಷಿ ವಿ ಮುನಿಯಪ್ಪ

ಬೆಂಗಳೂರು ನಗರದ ಪುಲಕೇಶಿನಗರ, ಕೆ.ಆರ್.ಪುರ ಟಿಕೆಟ್ ಪೆಂಡಿಂಗ್ ಉಳಿದಿದೆ. ಕಾಂಗ್ರೆಸ್ ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿರುವ ಅಖಂಡ ಶ್ರೀನಿವಾಸ್ ಮೂರ್ತಿ ಕಾಂಗ್ರೆಸ್​ಗೆ ಬಂಡಾಯವಾಗಿ ನಿಲ್ಲಲು ತೀರ್ಮಾನಿಸಿದ್ದಾರೆ. ವಿಶೇಷ ಅಂದರೆ ಈಗಲೂ ಕಾಂಗ್ರೆಸ್ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಜಮೀರ್ ಅಹಮದ್ ಮೇಲೆ ವಿಶ್ವಾಸ ಇಟ್ಟಿರುವ ಅವರು ಪಕ್ಷದ ಸದಸ್ಯತ್ವಕ್ಕೆ ಇನ್ನೂ ರಾಜೀನಾಮೆ ಸಲ್ಲಿಸಿಲ್ಲ. ಅಖಂಡ ಶ್ರೀನಿವಾಸ್​ಗೆ ಟಿಕೆಟ್ ನೀಡುವಂತೆ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ. ಖಾಸಗಿ ಹೋಟೆಲ್​ನಲ್ಲಿ ಈ ಸಂಬಂಧ ಚರ್ಚೆ ನಡೆದಿದ್ದು, ಅಂತಿಮ ತೀರ್ಮಾನ ಏನಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಧಾರವಾಡ ಪ್ರವೇಶ ಮಾಡದಂತೆ ಕೋರ್ಟ್ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಧಾರವಾಡದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಈ ಸಾರಿ ಶಿಗ್ಗಾಂವಿಯಿಂದ ಸ್ಪರ್ಧೆ ಮಾಡಲಿದ್ದು, ಸಿಎಂ ವಿರುದ್ಧ ಇದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕಾಂಗ್ರೆಸ್ ಪಟ್ಟಿಯಲ್ಲಿ ಅವರ ಹೆಸರು ಇಲ್ಲದಿರುವುದು ಅಚ್ಚರಿ ತರಿಸಿದೆ. ಸಿಎಂ ಕ್ಷೇತ್ರ ಶಿಗ್ಗಾಂವ್ ಗೆ ಮುಸ್ಲಿಂ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಮೊಹಮ್ಮದ್ ಯೂಸುಫ್ ಸವಣೂರು ಸಿಎಂ ವಿರುದ್ಧ ಅಕಾಡಕ್ಕೆ ಇಳಿದಿದ್ದಾರೆ. ಹು- ಧಾ ಸೆಂಟ್ರಲ್ ಗೆ ಜಗದೀಶ್ ಶೆಟ್ಟರ್ ಹೆಸರು ಘೋಷಿತವಾಗಿದೆ.

ಹರಿಹರ ರಾಮಪ್ಪ
ಹರಿಹರ ರಾಮಪ್ಪ

ಲಿಂಗಸಗೂರಿನಿಂದ ಕೊನೆಗೂ ಡಿ.ಎಸ್.ಹೂಲಗೇರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಹಾಲಿ ಶಾಸಕ ಹೂಲಗೇರಿಗೆ ನಾಲ್ಕನೇ ಪಟ್ಟಿಯಲ್ಲಿ ಮಣೆ ಹಾಕಲಾಗಿದೆ. ಬಹುತೇಕ ಇವರಿಗೆ ಟಿಕೆಟ್ ಕೈತಪ್ಪಿದೆ ಎಂದೇ ಹೇಳಲಾಗಿತ್ತು. ಇನ್ನೊಂದೆಡೆ ಶಿಡ್ಲಘಟ್ಟ ಟಿಕೆಟ್ ಆಕಾಂಕ್ಷಿ ವಿ.ಮುನಿಯಪ್ಪ ಹಾಗೂ ಇದುವರೆಗೂ ನಾಲ್ಕನೇ ಪಟ್ಟಿಯಲ್ಲಿಯೂ ಟಿಕೆಟ್ ಸಿಕ್ಕಿಲ್ಲ. ಇವರು ಪಂಚ ನಿರೀಕ್ಷೆ ಉಳಿಸಿಕೊಳ್ಳಬಹುದಾದ ಅಂಶವೆಂದರೆ ಶಿಡ್ಲಘಟ್ಟಗೆ ಬೇರೆ ಅಭ್ಯರ್ಥಿಯ ಹೆಸರನ್ನು ಸಹ ಕಾಂಗ್ರೆಸ್ ಪಕ್ಷ ಇನ್ನೂ ಪ್ರಕಟಿಸಿಲ್ಲ.

ನಾಲ್ಕನೇ ಪಟ್ಟಿ ಪ್ರಕಟವಾದ ಬಳಿಕವೂ ಎಂಟು ಕ್ಷೇತ್ರಗಳ ಟಿಕೆಟ್ ಕಗ್ಗಂಟು ಮುಂದುವರಿಕೆಯಾಗಿದೆ. ಟಿಕೆಟ್ ಘೋಷಿಸದೆ ಬಾಕಿ ಉಳಿಸಿಕೊಂಡಿರುವ ಕಾಂಗ್ರೆಸ್​ನ ಕ್ಷೇತ್ರಗಳೆಂದರೆ ಪುಲಕೇಶಿ ನಗರ, ಸಿ ವಿ ರಾಮನ್ ನಗರ, ಮುಳಬಾಗಿಲು, ರಾಯಚೂರು ಸಿಟಿ, ಅರಕಲಗೂಡು, ಮಂಗಳೂರು ಉತ್ತರ, ಶಿಡ್ಲಘಟ್ಟ ಹಾಗು ಕೆ.ಆರ್.ಪುರಂ.

ಅಖಂಡ ಶ್ರೀನಿವಾಸ್ ಮೂರ್ತಿ
ಅಖಂಡ ಶ್ರೀನಿವಾಸ್ ಮೂರ್ತಿ

ರಾಜ್ಯ ಕಾಂಗ್ರೆಸ್‌ಗೆ ಮತ್ತೊಂದು ಬಿಗ್ ಶಾಕ್: ರಾಯಚೂರಿನಿಂದ ವಿಧಾನಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಮುಖ ನಾಯಕ ಬಿ.ವಿ.ನಾಯಕ್ ಇಂದು ಕಾಂಗ್ರೆಸ್​ಗೆ ಗುಡ್ ಬೈ ಹೇಳಿದ್ದಾರೆ. ರಾಯಚೂರು ಭಾಗದ ಪ್ರಬಲ ನಾಯಕರಾಗಿ ಇವರು ಗುರುತಿಸಿಕೊಂಡಿದ್ದರು. ರಾಯಚೂರು ಜಿಲ್ಲೆಯ ದೇವದುರ್ಗ ಟಿಕೆಟ್ ಆಕಾಂಕ್ಷಿಯಾಗಿದ್ದ ನಾಯಕ್ ತಮಗೆ ಟಿಕೆಟ್ ಸಿಕ್ಕಿಲ್ಲ ಎಂಬುದರ ಜೊತೆಗೆ ತಮ್ಮ ಸಹೋದರನ ಪತ್ನಿಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಬೇಸರಗೊಂಡು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಾರೆ. ಕಾಂಗ್ರೆಸ್ ರಾಯಚೂರು ಜಿಲ್ಲಾಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿರುವ ಅವರು ಫ್ಯಾಕ್ಸ್ ಮೂಲಕ ತಮ್ಮ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ.

ಬಂಡಾಯ ಏಳ್ತಾರಾ ರಾಮಪ್ಪ? ಇಂದು ಬಿಡುಗಡೆಗೊಂಡಿರುವ ಕಾಂಗ್ರೆಸ್​​ನ ನಾಲ್ಕನೇ ಪಟ್ಟಿಯಲ್ಲಿ ದಾವಣಗೆರೆ ಜಿಲ್ಲೆಯ ಹರಿಹರ ಕ್ಷೇತ್ರದ ಅಭ್ಯರ್ಥಿಯಾಗಿ ನಂದಿಗಾವಿ ಶ್ರೀನಿವಾಸ್ ಹೆಸರು ಪ್ರಕಟವಾಗಿದ್ದು ಅಚ್ಚರಿಯ ಘೋಷಣೆ ಆಗಿದೆ. ಕಾಂಗ್ರೆಸ್​​ನಲ್ಲಿ ಹರಿಹರ ಕ್ಷೇತ್ರದ ಅಭ್ಯರ್ಥಿಯಾಗಿ ಹಾಲಿ ಶಾಸಕ ರಾಮಪ್ಪ ಬದಲಿಗೆ ಬೇರೊಬ್ಬರಿಗೆ ಟಿಕೆಟ್ ಸಿಗಲಿದೆ ಎಂದು ಹೇಳಲಾಗಿತ್ತು. ಆದರೆ ಇಷ್ಟೊಂದು ಆಶ್ಚರ್ಯ ಅಭ್ಯರ್ಥಿಯ ಆಯ್ಕೆಯನ್ನು ಯಾರು ನಿರೀಕ್ಷೆ ಮಾಡಿರಲಿಲ್ಲ. ಎರಡನೇ ಪಟ್ಟಿಯಲ್ಲಿ ರಾಮಪ್ಪ ಹೆಸರು ಇಲ್ಲದಿರುವಾಗಲೇ ಬಹುತೇಕ ಅವರಿಗೆ ಟಿಕೆಟ್ ಮಿಸ್ ಆಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಈ ಕ್ಷೇತ್ರದಿಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಲ್ಲವೇ ಮಾಜಿ ಸಚಿವ ಹೆಚ್ಎಂ ರೇವಣ್ಣ ಕಣಕ್ಕಿಳಿದರು ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ಹೈಕಮಾಂಡ್ ಆಯ್ಕೆ ದೊಡ್ಡ ಆಶ್ಚರ್ಯವನ್ನು ನೀಡಿದೆ. ತಮ್ಮ ಬದಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಿಕೆಟ್ ನೀಡಿದರೆ ಯಾವುದೇ ತಕರಾರಿಲ್ಲದೆ ಕ್ಷೇತ್ರ ಬಿಟ್ಟು ಕೊಡುವುದಾಗಿ ರಾಮಪ್ಪ ತಿಳಿಸಿದ್ದರು. ಒಂದು ವೇಳೆ ಇತರರಿಗೆ ಪಕ್ಷ ಟಿಕೆಟ್ ನೀಡಿದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಸಹ ಈಚೆಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದರು. ಈಗ ಕಾಂಗ್ರೆಸ್ ನಾಲ್ಕನೇ ಪಟ್ಟಿಯಲ್ಲಿ ಕೊನೆಗೂ ಎಸ್. ರಾಮಪ್ಪಗೆ ಟಿಕೆಟ್ ತಪ್ಪಿದ್ದು, ನಂದಿಗಾವಿ ಶ್ರೀನಿವಾಸ್​ಗೆ ಟಿಕೆಟ್ ಒಲಿದಿದೆ. ರಾಮಪ್ಪನವರ ಮುಂದಿನ ನಡೆಯೇನೆಂಬುದು ಕಾದು ನೋಡಬೇಕಿದೆ.

ಇದನ್ನೂ ಓದಿ : ಕೈ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಹುಬ್ಬಳ್ಳಿ ಧಾರವಾಡದಿಂದ ಶೆಟ್ಟರ್​, ಸಿಎಂ ಬೊಮ್ಮಾಯಿ ವಿರುದ್ಧ ಮೊಹಮ್ಮದ್ ಸವಣೂರು ಕಣಕ್ಕೆ

Last Updated :Apr 18, 2023, 10:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.