ETV Bharat / state

ವರ್ಗಾವಣೆ ವಿಚಾರ: ಮುಖ್ಯ ಕಾರ್ಯದರ್ಶಿಗೆ ಖಡಕ್ ಪತ್ರ ಬರೆದ ಮುಖ್ಯ ಚುನಾವಣಾಧಿಕಾರಿ

author img

By

Published : Mar 16, 2023, 1:44 PM IST

Updated : Mar 16, 2023, 2:57 PM IST

Chief Electoral Officer Manoj Kumar Meena
ಮುಖ್ಯ ಚುನಾವಾಣಾಧಿಕಾರಿ ಮನೋಜ್ ಕುಮಾರ್ ಮೀನಾ

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ತಮ್ಮ ಗಮನಕ್ಕೆ ಬಾರದೇ ಯಾವುದೇ ಸಿಬ್ಬಂದಿಯನ್ನು ವರ್ಗಾವಣೆ ಮಾಡಬಾರದು ಎಂದು ಮುಖ್ಯ ಚುನಾವಣಾಧಿಕಾರಿ ಪತ್ರದಲ್ಲಿ ತಿಳಿಸಿದ್ದಾರೆ.

ಬೆಂಗಳೂರು: ಮುಖ್ಯ ಚುನಾವಣಾಧಿಕಾರಿಯ ಅನುಮತಿ ಪಡೆದು ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳುವಂತೆ ಮುಖ್ಯ ಚುನಾವಾಣಾಧಿಕಾರಿ ಮನೋಜ್ ಕುಮಾರ್ ಮೀನಾ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಕಟ್ಟುನಿಟ್ಟಿನ ಪತ್ರ ಬರೆದಿದ್ದಾರೆ. ಕೆಲವು ವರ್ಗಾವಣೆಗಳನ್ನು ಮುಖ್ಯ ಚುನಾವಣಾಧಿಕಾರಿಯ ಗಮನಕ್ಕೆ ತಾರದೇ ಮಾಡಿರುವುದು ತಿಳಿದು ಬಂದ ಹಿನ್ನೆಲೆಯಲ್ಲಿ ಈ ಪತ್ರ ಬರೆದಿದ್ದಾರೆ.

ತಮ್ಮ ಪತ್ರದಲ್ಲಿ ಮೀನಾ, 2023ರ ಸಾರ್ವತ್ರಿಕ ಕರ್ನಾಟಕ ವಿಧಾನಸಭಾ ಚುನಾವಣೆಯು ಸನ್ನಿಹಿತವಾಗುತ್ತಿದ್ದು, ಭಾರತ ಚುನಾವಣಾ ಆಯೋಗ ಸದ್ಯದಲ್ಲಿಯೇ ಮಾದರಿ ನೀತಿ ಸಂಹಿತೆ ಜಾರಿಗೊಳಿಸಲಿದೆ. ಈ ಹಂತದಲ್ಲಿ ಚುನಾವಣಾ ಕಾರ್ಯದಲ್ಲಿ ನಿರತರಾದ ಸಿಬ್ಬಂದಿಯನ್ನು ಮುಖ್ಯ ಚುನಾವಣಾಧಿಕಾರಿಯ ಸಹಮತಿ ಪಡೆಯದೇ ವರ್ಗಾವಣೆ ಮಾಡುತ್ತಿರುವುದು‌ ಗಮನಕ್ಕೆ ಬಂದಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

8/03/2023 ರಂದು ಪತ್ರದ ಮೂಲಕ ಎಲ್ಲಾ ವರ್ಗಾವಣೆ ಪ್ರಕ್ರಿಯೆಗಳಿಗೆ ಮುಖ್ಯ ಚುನಾವಣಾಧಿಕಾರಿಯವರ ಸಹಮತಿ ಪಡೆಯಲು ತಿಳಿಸಿದ್ದರೂ, ಹಲವು ಇಲಾಖೆಗಳು ಈ ನಿರ್ದೇಶನವನ್ನು ಪರಿಗಣಿಸದೇ ವರ್ಗಾವಣೆ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳುವ ಪೂರ್ವ ಮುಖ್ಯ ಚುನಾವಣಾಧಿಕಾರಿಯವರ ಸಹಮತಿ ಪಡೆದು, ನಂತರ ವರ್ಗಾವಣೆ ಆದೇಶಗಳನ್ನು ಹೊರಡಿಸುವಂತೆ ಎಲ್ಲಾ ಸಕ್ಷಮ ಪ್ರಾಧಿಕಾರಗಳಿಗೆ ಇಂದೇ ಸೂಕ್ತ ನಿರ್ದೇಶನ ನೀಡುವಂತೆ ಮತ್ತೊಮ್ಮೆ ತಮ್ಮನ್ನು ಕೋರುತ್ತಿದ್ದೇನೆ ಎಂದು ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ.

ಇನ್ನು ಮುಂದೆ ಸಹಮತಿ ಪಡೆಯದೇ ವರ್ಗಾವಣೆ ಪ್ರಕ್ರಿಯೆ ಕೈಗೊಂಡಲ್ಲಿ ಅಂತಹ ಅಂಶಗಳನ್ನು ಭಾರತ ಚುನಾವಣಾ ಆಯೋಗದ ಗಮನಕ್ಕೆ ತರಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ತಮಗೆ ತಿಳಿಸ ಬಯಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ತಿಂಗಳಾಂತ್ಯಕ್ಕೆ ಚುನಾವಣೆ ದಿನಾಂಕ ಘೋಷಣೆ ಆಗುವ ಸಾಧ್ಯತೆ ಇದೆ. ಈ ಸಂಬಂಧ ಭಾರತೀಯ ಚುನಾವಣೆಗೆ ಆಯೋಗ ಆಯುಕ್ತರು ಮೂರು ದಿನಗಳ ಪ್ರವಾಸ ಕೈಗೊಂಡು ಪೂರ್ವ ತಯಾರಿ ಬಗ್ಗೆ ಪರಿಶೀಲನೆ ನಡೆಸಿದ್ದರು. ಬಳಿಕ ಮುಖ್ಯ ಚುನಾವಣಾಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದ್ದರು. ಚುನಾವಣಾ ಆಯೋಗ ಕಳೆದ ವಾರ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ ಜೊತೆ ಸಭೆ ನಡೆಸಿದ್ದರು. ಈ ವೇಳೆ ರಾಜಕೀಯ ಪಕ್ಷಗಳು ಚುನಾವಣೆ ಹಿನ್ನೆಲೆ ಸಿಬ್ಬಂದಿ ವರ್ಗಾವಣೆ ಸಂಬಂಧ ನಿಗಾ ವಹಿಸುವಂತೆ ಮನವಿ ಮಾಡಿದ್ದರು. ಜೊತೆಗೆ ಒಂದೇ ಸ್ಥಳದಲ್ಲಿ ಮೂರು ವರ್ಷ ಆದ ಅಧಿಕಾರಿಗಳನ್ನು ವರ್ಗಾಯಿಸುವಂತೆ ಕೋರಿದ್ದರು.

ಸಾಮಾನ್ಯವಾಗಿ ಚುನಾವಣೆ ಹೊಸ್ತಿಲಲ್ಲಿ ಯಾವುದೇ ವರ್ಗಾವಣೆ ಮಾಡಬೇಕಾದರೆ ಚುನಾವಣಾ ಆಯೋಗದ ಅನುಮತಿ ಅಗತ್ಯವಿದೆ. ಚುನಾವಣಾಧಿಕಾರಿಗಳ ಗಮನಕ್ಕೆ ಬಾರದೇ ಸರ್ಕಾರ ಸಿಬ್ಬಂದಿಯನ್ನು ವರ್ಗಾಯಿಸುವಂತಿಲ್ಲ. ಈ ಸಂಬಂಧ ಮುಖ್ಯ ಚುನಾವಣಾಧಿಕಾರಿ ಮಾರ್ಚ್ 8ಕ್ಕೆ ಸಿಎಸ್​ಗೆ ಪತ್ರ ಬರೆದು ಚುನಾವಣಾ ಕಾರ್ಯದಲ್ಲಿ ನಿರತರಾದ ಸಿಬ್ಬಂದಿಯನ್ನು ಮುಖ್ಯ ಚುನಾವಣಾಧಿಕಾರಿ ಸಹಮತಿ ಪಡೆಯದೇ ವರ್ಗಾಯಿಸದಂತೆ ಸೂಚಿಸಿದ್ದರು.

ಆದರೆ, ರಾಜ್ಯ ಸರ್ಕಾರ ಸಿಬ್ಬಂದಿ ವರ್ಗಾವಣೆಯನ್ನು ಮುಂದುವರಿಸಿತ್ತು. ಕೆಲ ಇಲಾಖೆಗಳು ಅಧಿಕಾರಿಗಳನ್ನು ವರ್ಗಾಯಿಸಿ ಆದೇಶ ಹೊರಡಿಸಿತ್ತು. ಇದು ಗಮನಕ್ಕೆ ಬಂದ ಹಿನ್ನೆಲೆ ಮುಖ್ಯ ಚುನಾವಣಾಧಿಕಾರಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾಗೆ ಮತ್ತೆ ಪತ್ರ ಬರೆದು ಅನುಮತಿ ಇಲ್ಲದೇ ವರ್ಗಾವಣೆ ಮಾಡದಂತೆ ಖಡಕ್ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಆಡಳಿತ ಯಂತ್ರಕ್ಕೆ ಸರ್ಜರಿ: 17 ಐಎಎಸ್ ಅಧಿಕಾರಿಗಳ ವರ್ಗಾವಣೆ

Last Updated :Mar 16, 2023, 2:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.