ETV Bharat / state

'ಯತ್ನಾಳ್ ತಮ್ಮ ದಾಖಲೆಗಳನ್ನು ತನಿಖಾ ಆಯೋಗಕ್ಕೆ ನೀಡಲಿ'

author img

By ETV Bharat Karnataka Team

Published : Dec 27, 2023, 10:38 PM IST

ಸಚಿವ ದಿನೇಶ್ ಗುಂಡೂರಾವ್
ಸಚಿವ ದಿನೇಶ್ ಗುಂಡೂರಾವ್

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಬಳಿಯಿರುವ ದಾಖಲೆಗಳನ್ನು ತನಿಖಾ ಆಯೋಗಕ್ಕೆ ನೀಡಲಿ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ

ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ 40 ಸಾವಿರ ಕೋಟಿ ರೂ ಕೋವಿಡ್ ಹಗರಣ ನಡೆದಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೇವಲ ಬಾಯಿ ಮಾತಲ್ಲಿ ಹೇಳಿದರೆ ಸಾಲದು. ತಮ್ಮ ಬಳಿ ಇರುವ ಮಾಹಿತಿ ಹಾಗೂ ದಾಖಲೆಗಳನ್ನು ಜಸ್ಟಿಸ್ ಕುನ್ನಾ ಅವರ ತನಿಖಾ ಆಯೋಗಕ್ಕೆ ನೀಡಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ತಮ್ಮ ನಿವಾಸದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯತ್ನಾಳ್ ಹೇಳುತ್ತಿರುವುದರಲ್ಲಿ ಸತ್ಯ ಇದೆ. ಬಿಜೆಪಿ ಪಕ್ಷದ ಶಾಸಕರಾಗಿ ಸ್ವಪಕ್ಷದ ನಾಯಕರ ಮೇಲೆಯೇ 40 ಸಾವಿರ ಕೋಟಿ ರೂ ಅಕ್ರಮ ನಡೆದಿರುವ ಬಗ್ಗೆ ಆರೋಪ ಮಾಡಿದ್ದಾರೆ. ಆದರೆ ಬಿಜೆಪಿ ನಾಯಕರು ಯಾರೂ ಕೂಡ ಯತ್ನಾಳ್ ಅವರಿಗೆ ಒಂದು ನೋಟಿಸ್ ಕೂಡ ನೀಡುವುದಿಲ್ಲ. ಶಿಸ್ತು ಕ್ರಮ ಜರುಗಿಸುವ ಬಗ್ಗೆ ಬಿಜೆಪಿಯ ಯಾವೊಬ್ಬ ಹಿರಿಯ ನಾಯಕರಿಗೂ ಧೈರ್ಯ ಇಲ್ಲ.

ಜಸ್ಟಿಸ್ ಕುನ್ನಾ ಅವರ ತನಿಖಾ ಆಯೋಗ ಸ್ವಯಂಪ್ರೇರಿತವಾಗಿ ಯತ್ನಾಳ್ ಅವರಿಂದ ಮಾಹಿತಿ ಪಡೆಯಬಹುದು ಅಥವಾ ಯತ್ನಾಳ್ ಅವರು ತಮ್ಮ ಬಳಿ ಇರುವ ಮಾಹಿತಿಗಳನ್ನು ಸರ್ಕಾರಕ್ಕೆ ಸಲ್ಲಿಸಿದರೆ ಅದನ್ನು ತನಿಖಾ ಆಯೋಗಕ್ಕೆ ಸರ್ಕಾರವೇ ಸಲ್ಲಿಸಲಿದೆ. 40 ಸಾವಿರ ಕೋಟಿ ಭ್ರಷ್ಟಾಚಾರದ ಬಗ್ಗೆ ಮಾತಾಡಿರುವ ಯತ್ನಾಳ್‌ಗೆ ಸರ್ಕಾರದಿಂದ ಕೂಡ ನೋಟಿಸ್ ನೀಡಿ ಮಾಹಿತಿ ಒದಗಿಸುವಂತೆ ಕೇಳಲಾಗುವುದು ಎಂದರು.

ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಎಲ್ಲವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೋಡಿಕೊಳ್ಳುತ್ತಿದ್ದರು. ಆದರಿಂದ ಅವರ ಭ್ರಷ್ಟಾಚಾರದ ಕೆಲವು ದಾಖಲೆಗಳು ಯತ್ನಾಳ್ ಬಳಿ ಇರಬಹುದು. ಹೀಗಾಗಿ ಶಿಸ್ತು ಕ್ರಮ ಕೈಗೊಳ್ಳಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ವಿಜಯೇಂದ್ರ ಕೂಡ ಶಿಸ್ತು ಕ್ರಮ ಕೈಗೊಳ್ಳಲು ಹಿಂಜರಿಯುತ್ತಿದ್ದಾರೆ. ಯತ್ನಾಳ್ ಅವರ ರೀತಿಯಲ್ಲಿ ಬೇರೆ ಯಾವುದೇ ಪಕ್ಷದಲ್ಲಿ ಹೇಳಿಕೆಗಳನ್ನು ನೀಡಿದ್ದರೆ, ನೋಟಿಸ್ ನೀಡಿ ಶಿಸ್ತು ಕ್ರಮ ಜರುಗಿಸಲಾಗುತ್ತಿತ್ತು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಮೋದಿ ಸುಮ್ಮನಿರೋದೇಕೆ?: ಭ್ರಷ್ಟಾಚಾರ ವಿಚಾರದಲ್ಲಿ ಸಹಿಸಲ್ಲ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮದೇ ಪಕ್ಷದ ಶಾಸಕ 40 ಸಾವಿರ ಕೋಟಿ ಅಕ್ರಮದ ಆರೋಪ ಮಾಡಿದರೂ ಮೌನವಾಗಿದ್ದಾರೆ. ಭ್ರಷ್ಟಾಚಾರದಲ್ಲಿ ಪಾಲು ಕೇಂದ್ರಕ್ಕೂ ತಲುಪಿದೆಯಾ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಭ್ರಷ್ಟಾಚಾರದ ಪಾಲು ಕೇಂದ್ರಕ್ಕೆ ಮುಟ್ಟಿರುವ ಹಿನ್ನೆಲೆಯಲ್ಲೇ ವಿಜಯೇಂದ್ರ ಅವರನ್ನ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ ಎಂಬ ಮಾತುಗಳಿವೆ. ಮೊದಲ ಬಾರಿ ಶಾಸಕರಾದವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿದೆ. ಆದರೆ ರಾಜ್ಯಾಧ್ಯಕ್ಷರ ಮೇಲೆ ಅವರ ಪಕ್ಷದ ಶಾಸಕ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಬಿಜೆಪಿ ಭ್ರಷ್ಟಾಚಾರ ಪಾರ್ಟಿ ಆಗಿದೆ ಎಂದು ವಾಗ್ದಾಳಿ ನಡೆಸಿದರು.

ಇಡಿ, ಐಟಿ, ಸಿಬಿಐ ತನಿಖಾ ಸಂಸ್ಥೆಗಳು ಇಂಥಹ ವಿಚಾರಗಳು ಬಂದಾಗ ಯಾವುದೇ ತನಿಖೆಗಳನ್ನು ಕೈಗೊಳ್ಳಲ್ಲ. ಇದೇ ಕಾಂಗ್ರೆಸ್ ನಾಯಕರ ಮೇಲೆ ಆರೋಪಗಳು ಬಂದಿದ್ದರೆ ಇಷ್ಟರೊಳಗೆ ಐಟಿ ದಾಳಿಗಳು ನಡೆದಿರುತ್ತಿದ್ದವು. ಕೇಂದ್ರ ತನಿಖಾ ಸಂಸ್ಥೆಗಳು ಬಿಜೆಪಿ ಕೈಗೊಂಬೆಯಾಗಿ ಕೆಲಸ ಮಾಡುತ್ತಿವೆ ಎಂದು ಸಚಿವರು ಆರೋಪಿಸಿದರು.

ಇದನ್ನೂ ಓದಿ: ದಾಖಲೆಗಳಿದ್ದರೆ ಬಿಡುಗಡೆ ಮಾಡುವಂತೆ ಯತ್ನಾಳ್‌ಗೆ ಸಚಿವ ಪ್ರಿಯಾಂಕ್ ಖರ್ಗೆ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.