ETV Bharat / state

ಜನ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಸೆಪ್ಟೆಂಬರ್ 27ರಂದು ಭಾರತ್ ಬಂದ್ : ಕುರುಬೂರು ಶಾಂತಕುಮಾರ್

author img

By

Published : Sep 7, 2021, 5:30 PM IST

kurubur-shanthakumar-talk-about-bharat-bandh
ಕುರುಬೂರು ಶಾಂತಕುಮಾರ್ ಮಾತನಾಡಿದರು

ಮೇಕೆದಾಟು, ಬೆಂಬಲ ಬೆಲೆ, ಪೆಟ್ರೋಲ್, ಡೀಸೆಲ್, ಗ್ಯಾಸ್ ರೇಟ್ ಹೆಚ್ಚಳದ ವಿರುದ್ಧ ಪ್ರತಿಭಟಿಸುತ್ತೇವೆ. ಭಾರತ್ ಬಂದ್‌ಗೆ ನಮ್ಮ ಬೆಂಬಲವಿದೆ. ಈ ಬಗ್ಗೆ ನಮ್ಮ ಹೋರಾಟಕ್ಕೆ ಆಯಾ ಜಿಲ್ಲೆಗಳಲ್ಲಿ ಟೀಂ ರಚನೆ ಮಾಡಿ ಜವಾಬ್ದಾರಿ ವಹಿಸುತ್ತೇವೆ. ಈ ಬಗ್ಗೆ ನಾವು ಮೊದಲನೇ ಸುತ್ತಿನ ಚರ್ಚೆ ಮಾಡಿದ್ದೇವೆ..

ಬೆಂಗಳೂರು : ರೈತರ ಚಳವಳಿ ಪ್ರಾರಂಭವಾಗಿ ಸೆಪ್ಟೆಂಬರ್ 27ಕ್ಕೆ ಒಂದು ವರ್ಷವಾಗುತ್ತದೆ. ಹೀಗಾಗಿ, ನಾವು ರಾಜ್ಯದಲ್ಲಿ ಬಂದ್​ಗೆ ಸಂಪೂರ್ಣ ಬೆಂಬಲ‌ ಕೊಡುತ್ತೇವೆ. ರೈತ ವಿರೋಧಿ ಕಾನೂನುಗಳನ್ನು ಸಂಪೂರ್ಣ ವಾಪಸ್ ಪಡೆಯಬೇಕು. ಇಲ್ಲದೆ ಹೋದರೆ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಸಿದ್ದಾರೆ.

ಕುರುಬೂರು ಶಾಂತಕುಮಾರ್ ಮಾತನಾಡಿರುವುದು..

ಭಾರತ್ ಬಂದ್ ಮಾಡುವ ವಿಚಾರವಾಗಿ ಗಾಂಧಿ ಭವನದಲ್ಲಿ ರಾಜ್ಯ ರೈತ ಸಂಘಟನೆಗಳ ಮುಖಂಡರಿಂದ ಮಂಗಳವಾರ ಪತ್ರಿಕಾಗೋಷ್ಠಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಲ್ಲಾ ಸಂಘಟನೆಗಳು ಸೇರಿ ಸೆ. 27ರಂದು ದೇಶಾದ್ಯಂತ ಎಲ್ಲಾ ಚಟುವಟಿಕೆಗಳ ಬಂದ್​ಗೆ ಕರೆ ಕೊಡುತ್ತಿದ್ದೇವೆ ಎಂದು ಘೋಷಿಸಿದರು.

ಕಬ್ಬಿಗೆ ಸೂಕ್ತ ಬೆಲೆ ನಿಗದಿ ಮಾಡಿ : ಕೇಂದ್ರದ ರೈತ ವಿರೋಧ ನೀತಿಗಳ ವಿರುದ್ಧ ತುಂಬಾ ಬೇಸರವಿದೆ. ಕಬ್ಬಿನ ನೀತಿಗೆ ವಿರೋಧ ವ್ಯಕ್ತಪಡಿಸುತ್ತೇವೆ. ಕ್ವಿಂಟಾಲ್‌ಗೆ 5 ರೂಪಾಯಿ ಮಾತ್ರ ಏರಿಕೆ ಮಾಡಲಾಗಿದೆ. ಕಬ್ಬಿನ‌ ಬೆಲೆಯನ್ನು ಹೆಚ್ಚಳ ಮಾಡಿಲ್ಲ. ರೈತರಿಗೆ ಉತ್ಪಾದನಾ ವೆಚ್ಚಕ್ಕೆ ಹಣವನ್ನು ಕೂಡ ನೀಡುತ್ತಿಲ್ಲ.

ರಾಜ್ಯದಲ್ಲಿ 28 ಜನ ಸಂಸದರು ಇದ್ದಾರೆ. ಅವರು ಎಂತಹ ಸಂದರ್ಭ ಬಂದರೂ ಮಾತನಾಡುತ್ತಿಲ್ಲ. ಇದರಿಂದಾಗಿ ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ಸಿಕ್ಕಿಲ್ಲ. ಹೀಗಾಗಿ, ಕೇಂದ್ರ ಸರ್ಕಾರಕ್ಕೆ ಅಂತಿಮ ಎಚ್ಚರಿಕೆ ಕೊಡುತ್ತೇವೆ. ಈ ವಿಚಾರವಾಗಿ ಮತ್ತೊಮ್ಮೆ ಕೇಂದ್ರ ಸರ್ಕಾರ ಪರಿಶೀಲನೆ ಮಾಡಬೇಕು ಎಂದರು.

ಭಾರತ್ ಬಂದ್ ಕುರಿತು ಕುರುಬೂರು ಶಾಂತಕುಮಾರ್ ಮಾತನಾಡಿರುವುದು..

ಕೇಂದ್ರ ಮಂತ್ರಿಗಳ ಲಘು ಮಾತು : ಹಲವು ಕೇಂದ್ರ ಮಂತ್ರಿಗಳು ಹೋರಾಟದ ಬಗೆಗೆ ಲಘುವಾಗಿ ಮಾತನಾಡಿದ್ದಾರೆ. ಸಂಘಟನೆಗಳಲ್ಲಿ ನಕ್ಸಲ್​ ಇದ್ದಾರೆ. ದಲ್ಲಾಳಿಗಳಿದ್ದಾರೆ ಎಂದೆಲ್ಲ ಮಾತನಾಡುತ್ತಿದ್ದಾರೆ. ಹೀಗಾಗಿ, ಕಿಸಾನ್ ಸಮಿತಿಯಿಂದ ಹೋರಾಟ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಈ ಹಿನ್ನೆಲೆ ಭಾರತ್ ಬಂದ್‌ಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.

ಸಂಸದರು ದೇವಲೋಕದಿಂದ ಇಳಿದು ಬಂದಿದ್ದಾರೆಯೇ? : ರಾಜ್ಯದ ಸಂಸದರ ಮನೆ ಮುಂದೆ ಹೋರಾಟ ಮಾಡಿದ್ದೇವೆ. ಅನೇಕ ಬಾರಿ ಮನವಿ ಮಾಡಿದ್ದೇವೆ. ಅವರೇನು ದೇವಲೋಕದಿಂದ‌ ಇಳಿದು ಬಂದವರೆ?. ಇಂತವರನ್ನು ಮೂಖ ಕತ್ತೆಗಳು ಅಂತಾರೆ ನಮ್ಮ‌ ಕಡೆ. ಇಂತಹ ನಾಯಕರಿಂದ ಆಕ್ಸಿಜನ್ ಇಲ್ಲದೆ ಜನ ಸತ್ತಿದ್ದು, ಲಸಿಕೆ ಕೊರತೆಯಿಂದ ಜನ ಸತ್ತಿದ್ದು ಗೊತ್ತಿದೆ ಎಂದು ವ್ಯಂಗ್ಯವಾಡಿದರು.

ಸ್ವಾಮಿನಾಥನ್ ವರದಿ ಜಾರಿ ಮಾಡಿ : ಕಬ್ಬು ಬೆಳೆಗೆ ಸರ್ಕಾರ ಸ್ವಾಮಿನಾಥನ್ ವರದಿ ಜಾರಿ ಮಾಡುತ್ತೇವೆ ಎಂದರು. ಆದರೆ, ಮಾಡಿಲ್ಲ. ಉತ್ಪಾದನಾ ವೆಚ್ಚಕ್ಕಿಂತ ಹೆಚ್ಚುವರಿ ಬೆಲೆ ನಿಗದಿ ಮಾಡಿ ಅಂತಾ ನಾವು ಕೇಳುತ್ತಲೇ ಇದ್ದೇವೆ. ಈ ಬಾರಿ ಎಲ್ಲರೂ ಒಟ್ಟಾಗಿ ಭಾರತ್ ಬಂದ್ ಯಶಸ್ವಿ ಮಾಡಬೇಕೆಂದು ತೀರ್ಮಾನ ಮಾಡಿದ್ದೇವೆ.

ಮೇಕೆದಾಟು, ಬೆಂಬಲ ಬೆಲೆ, ಪೆಟ್ರೋಲ್, ಡೀಸೆಲ್, ಗ್ಯಾಸ್ ರೇಟ್ ಹೆಚ್ಚಳದ ವಿರುದ್ಧ ಪ್ರತಿಭಟಿಸುತ್ತೇವೆ. ಭಾರತ್ ಬಂದ್‌ಗೆ ನಮ್ಮ ಬೆಂಬಲವಿದೆ. ಈ ಬಗ್ಗೆ ನಮ್ಮ ಹೋರಾಟಕ್ಕೆ ಆಯಾ ಜಿಲ್ಲೆಗಳಲ್ಲಿ ಟೀಂ ರಚನೆ ಮಾಡಿ ಜವಾಬ್ದಾರಿ ವಹಿಸುತ್ತೇವೆ. ಈ ಬಗ್ಗೆ ನಾವು ಮೊದಲನೇ ಸುತ್ತಿನ ಚರ್ಚೆ ಮಾಡಿದ್ದೇವೆ ಎಂದರು.

ಮೇಕೆದಾಟಿನಿಂದ ವಿಧಾನಸೌಧದವರೆಗೆ ಪಾದಯಾತ್ರೆ : ರೈತ ಮುಖಂಡ ಸಂಪತ್‌ಕುಮಾರ್ ಮೇಕೆದಾಟು ವಿಚಾರವಾಗಿ ಮಾತನಾಡಿದರು. ಸರ್ಕಾರಕ್ಕೆ ಈ ತಿಂಗಳ 23ರವರೆಗೆ ಡೆಡ್‌ಲೈನ್​ ನೀಡುತ್ತೇವೆ. ಇಲ್ಲದೇ ಇದ್ದರೆ ಆರು ಜಿಲ್ಲೆಯ ರೈತರಿಂದ ಸೆಪ್ಟೆಂಬರ್ 23ರಿಂದ ಮೇಕೆದಾಟಿನಿಂದ ಪಾದಯಾತ್ರೆ ಕೈಗೊಳ್ಳಲಿದ್ದೇವೆ. ಮೇಕೆದಾಟಿನಿಂದ ವಿಧಾನಸೌಧದವರೆಗೆ ಪಾದಯಾತ್ರೆಗೆ ನಿರ್ಧರಿಸಲಿದ್ದೇವೆ ಎಂದರು. ಒಕ್ಕೂಟದ ಹಲವು ಮುಖಂಡರು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಓದಿ: ಕೋವಿಡ್ ಭೀತಿಯ ನಡುವೆ ಸಂತಸದ ನಗೆ ಬೀರಿದ ಕಬ್ಬು ಬೆಳೆಗಾರರು : ಮಂಗಳೂರಿನಲ್ಲಿ ಭರ್ಜರಿ ಮಾರಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.