ETV Bharat / state

ಜನರಿಗೆ ಹಾದಿ ಬೀದೀಲಿ ಹೋಗೋರು ಅಂತಿರೋದು ಸರಿಯಲ್ಲ: ಕೆ ಎಸ್ ಈಶ್ವರಪ್ಪ

author img

By

Published : May 21, 2023, 4:26 PM IST

ks-eshwarappa-reaction-on-d-k-shivakumar-statement
ಜನರಿಗೆ ಹಾದಿ ಬೀದೀಲಿ ಹೋಗೋರು ಅಂತಿರೋದು ಸರಿಯಲ್ಲ: ಕೆ.ಎಸ್.ಈಶ್ವರಪ್ಪ

ಕಾಂಗ್ರೆಸ್ ರಾಜ್ಯದ ಮತದಾರರಿಗೆ ಅವಮಾನ ಮಾಡಿದೆ. ಸಿಎಂ, ಡಿಸಿಎಂ ಇಬ್ಬರೂ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ ಆಗ್ರಹಿಸಿದರು.

ಜನರಿಗೆ ಹಾದಿ ಬೀದೀಲಿ ಹೋಗೋರು ಅಂತಿರೋದು ಸರಿಯಲ್ಲ: ಕೆ.ಎಸ್.ಈಶ್ವರಪ್ಪ

ಬೆಂಗಳೂರು ಮತದಾರರ ಕಾಲಿಗೆ ಬಿದ್ದು ವೋಟ್​ ಪಡೆದು ಸಿಎಂ, ಡಿಸಿಎಂ ಆಗಿದ್ದಾರೆ. ಈಗ ಅದೇ ಜನರಿಗೆ ಈಗ ಹಾದಿ ಬೀದೀಲಿ ಹೋಗೋರು ಅಂತಿರೋದು ಸರಿಯಲ್ಲ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್​ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಂಗಳೂರಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾದಿ ಬೀದಿಯಲ್ಲಿ ಹೋಗೋರಿಗೆಲ್ಲ ಗ್ಯಾರಂಟಿ ಸ್ಕೀಂ ಕೊಡಲ್ಲ ಎಂಬ ಡಿಸಿಎಂ ಡಿ ಕೆ ಶಿವಕುಮಾರ್​ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಚುನಾವಣೆ ಮುಂಚೆ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್​ ಗ್ಯಾರಂಟಿ ಜಾರಿಯ ಭರವಸೆ ಕೊಟ್ಟಿದ್ರು. ಮೊದಲ ಸಂಪುಟ ಸಭೆಯಲ್ಲೇ ಜಾರಿಯ ಭರವಸೆ ಕೊಟ್ಟಿದ್ರು. ಜಾರಿಗೆ ತರೋದು ಬಿಡೋದು ಆಮೇಲೆ, ಆದ್ರೆ ಹಾದಿ ಬೀದೀಲಿ ಹೋಗೋರಿಗೆಲ್ಲ ಕೊಡೋಕಾಗಲ್ಲ ಅಂತಿದಾರೆ ಈಗ. ಮತ್ತೆ ಅದೇ ಜನರ ಎದುರು ಲೋಕಸಭೆ ಚುನಾವಣೆಗೆ ಮತ ಕೇಳೋಕ್ಕೆ ಹೋಗಬೇಕು ಎಂದು ಕಿಡಿಕಾರಿದರು.

ಆಗ ಹಾದಿ ಬೀದಿಲಿರೋರ ಬಳಿ ಮತ ಕೇಳಬೇಡಿ ಅಂತ ಜನ ಇವರಿಬ್ಬರಿಗೆ ಛೀಮಾರಿ ಹಾಕಿ ಮನೆಗೆ ಕಳಿಸ್ತಾರೆ. ಚುನಾವಣೆ ಮೊದಲು ಎಲ್ಲರಿಗೂ ಉಚಿತ ಅಂತ ಭರವಸೆ ಕೊಟ್ರು. ಆದ್ರೆ ಈಗ ಕಾಂಗ್ರೆಸ್ ನಾಯಕರು ಮಾತನಾಡುತ್ತಿರೋ ರೀತಿ ಸರಿಯಲ್ಲ. ಕಾಂಗ್ರೆಸ್ ರಾಜ್ಯದ ಮತದಾರರಿಗೆ ಅವಮಾನ ಮಾಡಿದೆ. ಸಿಎಂ, ಡಿಸಿಎಂ ಇಬ್ಬರೂ ರಾಜ್ಯದ ಜನರ ಕ್ಷಮೆ ಕೇಳಬೇಕು. ರಾಜ್ಯದ ಜನ ಹಾದಿ ಬೀದಿಯಲ್ಲಿ ಹೋಗೋರಲ್ಲ. ಜನ ನಿಮ್ಮ ಕಾಲಿಗೆ ಬಿದ್ದು ಮತ ಕೊಡುತ್ತೇವೆ ಅಂತ ಹೇಳಲಿಲ್ಲ. ನೀವೇ ಜನರ ಕಾಲಿಗೆ ಬಿದ್ದು ಮತ ಕೊಡಿ ಮತ ಕೊಡಿ ಅಂದಿದ್ರಿ. ಈಗ ಹಾದಿ ಬೀದೀಲಿ ಹೋಗೋರಿಗೆ ಗ್ಯಾರಂಟಿ ಕೊಡಲ್ಲ ಅಂತಿದೀರಿ. ತಕ್ಷಣ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.

ಮೊದಲ ಕ್ಯಾಬಿನೆಟ್‌ನಲ್ಲಿ ಗ್ಯಾರಂಟಿ ಜಾರಿಗೆ ತಾತ್ವಿಕ ಒಪ್ಪಿಗೆ ಮಾತ್ರ ತೆಗೆದುಕೊಂಡ ಹಿನ್ನೆಲೆ ವಾಗ್ದಾಳಿ ನಡೆಸಿದ ಮಾಜಿ ಸಚಿವರು, ಮೊದಲ ಸಭೆಯಲ್ಲೇ ಜಾರಿಗೆ ತರುತ್ತೇವೆ ಅಂತ ಹೇಳಿದ್ರಲ್ಲ. ಹತ್ತು ಹತ್ತು ಸಲ ಮೊದಲ ಸಭೆಯಲ್ಲೇ ಜಾರಿ ಮಾಡ್ತೀವಿ ಅಂತ ಹೇಳ್ಕೊಂಡು ಬಂದ್ರು. ನಿನ್ನೆಯ ಸಭೆಯಲ್ಲಿ ಯಾಕೆ ಜಾರಿ ನಿರ್ಧಾರ ಮಾಡ್ಲಿಲ್ಲ?. ಕಾಂಗ್ರೆಸ್ ನಾಯಕರಿಗೆ ಭರವಸೆ ಕೊಡುವಾಗ ಮೈಮೇಲೆ ಪ್ರಜ್ಞೆ ಇರಲಿಲ್ವಾ? ಎಂದು ಪ್ರಶ್ನಿಸಿದರು.

ಬರೀ‌ ಬಂಡಲ್ ಭರವಸೆ ಕೊಟ್ರಾ?. ಈಗ ಆರ್ಥಿಕ ಪರಿಸ್ಥಿತಿ ಬಗ್ಗೆ ಮಾತಾಡ್ತಿದೀರ. ಜನರಿಗೆ ಮೋಸ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಮೊದಲ ಸಭೆಯಲ್ಲಿ ಜಾರಿಗೆ ತರದಿರುವುದು ಜನರಿಗೆ ಮಾಡಿದ ದ್ರೋಹ. ಕಾಂಗ್ರೆಸ್ ಜನರಿಗೆ ಮೋಸ ಮಾಡಿದ ಬಗ್ಗೆ, ಹಾದಿ ಬೀದಿಯಲ್ಲಿ ಹೋಗೋರಿಗೆ ಗ್ಯಾರಂಟಿ ಇಲ್ಲ ಅಂತ ಹೇಳಿದ ಬಗ್ಗೆ ಹೋರಾಟ ಮಾಡ್ತೇವೆ. ಪಕ್ಷದ ರಾಜ್ಯಾಧ್ಯಕ್ಷರ ಜತೆ ಚರ್ಚೆ ಮಾಡಿ ಹೋರಾಟದ ರೂಪುರೇಷೆ ರೂಪಿಸುತ್ತೇವೆ ಎಂದರು.

ಇದನ್ನೂ ಓದಿ:ಮೋದಿಯಿಂದ ರಾಜ್ಯಕ್ಕೆ 5,495 ಕೋಟಿ ರೂ. ನಷ್ಟ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.