ETV Bharat / state

ಚುನಾವಣಾಧಿಕಾರಿಗಳ ವಿರುದ್ಧವೇ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಕೃಷ್ಣ ಭೈರೇಗೌಡ

author img

By

Published : Mar 30, 2023, 8:06 PM IST

ಚುನಾವಣಾಧಿಕಾರಿಗಳ ವಿರುದ್ಧವೇ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಕೃಷ್ಣ ಭೈರೇಗೌಡ
ಚುನಾವಣಾಧಿಕಾರಿಗಳ ವಿರುದ್ಧವೇ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಕೃಷ್ಣ ಭೈರೇಗೌಡ

ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಅಕ್ರಮ ನಡೆಯುತ್ತಿದ್ದರೂ ಪರೋಕ್ಷವಾಗಿ ಚುನಾವಣಾ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ. ಅವರು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವ ಕೃಷ್ಣ ಭೈರೇಗೌಡ ಅವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ ಮಾಡಿದ್ದಾರೆ.

ಬೆಂಗಳೂರು: ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮಕ್ಕೆ ಪರೋಕ್ಷವಾಗಿ ಚುನಾವಣಾ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವ ಕೃಷ್ಣಭೈರೇಗೌಡ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ ಮಾಡಿದ್ದಾರೆ. ಇಂದು ತಮ್ಮ ವಕೀಲರೊಂದಿಗೆ ತೆರಳಿ ದೂರು ನೀಡಿದ ಮಾಜಿ ಸಚಿವ ಹಾಗೂ ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಭೈರೇಗೌಡ ಶೇಷಾದ್ರಿ ರಸ್ತೆಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಗೆ ದೂರು ಸಲ್ಲಿಕೆ ಮಾಡಿದ್ದಾರೆ.

ಬೇನಾಮಿ ವ್ಯಕ್ತಿಯ ಮೇಲೆ ಪ್ರಕರಣ- ಕೃಷ್ಣ ಭೈರೇಗೌಡ: ಚುನಾವಣಾ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ. ಮತದಾರರಿಗೆ ಆಮಿಷವೊಡ್ಡಲು ಬಿಜೆಪಿ ಅಭ್ಯರ್ಥಿ ಕೋಟ್ಯಂತರ ಮೌಲ್ಯದ ಸಾಮಗ್ರಿಗಳನ್ನು ಸಂಗ್ರಹಿಸಿದ್ದರು. ಆದರೂ ಸಂಬಂಧಪಟ್ಟ ಅಭ್ಯರ್ಥಿ ಮೇಲೆ ಯಾವುದೇ ಪ್ರಕರಣ ದಾಖಲಿಸಿಲ್ಲ. ಯಾರೋ ಬೇನಾಮಿ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆ ಮೂಲಕ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆದಿದೆ ಎಂದು ದೂರು ಸಲ್ಲಿಸಿದ್ದಾರೆ.

ದೂರು ಸಲ್ಲಿಕೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕೃಷ್ಣ ಭೈರೇಗೌಡ, ನಿನ್ನೆ ಚುನಾವಣೆ ಘೋಷಣೆ ಆಗಿದೆ‌. ಅನೇಕ ಚುನಾವಣಾಧಿಕಾರಿಗಳು ತಾರತಮ್ಯ ಮಾಡ್ತಾ ಇದ್ದಾರೆ. ಕಾನೂನು ವಿರುದ್ಧವಾಗಿ ಕೆಲಸ ಮಾಡ್ತಾ ಇದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹ ಮಾಡಿದ್ದೇವೆ. ಸಾಕ್ಷಿ ಸಮೇತವಾಗಿ ದೂರು ಕೊಡಲಾಗಿದೆ. ನನ್ನ ಕ್ಷೇತ್ರದಲ್ಲಿ‌ 3. 6 ಕೋಟಿ ವೆಚ್ಚದ ಸಾಮಗ್ರಿಗಳನ್ನು ಸೀಜ್‌ ಮಾಡಿದ್ದಾರೆ. ಜನರಿಗೆ ಕೊಡಲು ಸಿದ್ಧವಾಗಿರುವ ಸಾಮಗ್ರಿಗಳು ಅವು. ಆ ಸಾಮಗ್ರಿಗಳ‌ ಮೇಲೆ ಬಿಜೆಪಿ ಅಭ್ಯರ್ಥಿ ಹೆಸರು, ಫೋಟೋ ಇದೆ‌. ಆದರೂ ಅವರ ಮೇಲೆ ಕ್ರಮ ಆಗಿಲ್ಲ.

ಏಜೆಂಟ್​ಗಳಾಗಿ ಕೆಲಸ ಮಾಡ್ತಾ ಇದ್ದಾರೆ-ಭೈರೇಗೌಡ: ಈಶ್ವರ ಖಂಡ್ರೆ, ರೂಪಾ ಶಶಿಧರ್ ಮೇಲೆ ಎಫ್.ಐ.ಆರ್ ಮಾಡ್ತಾರೆ. ಕಾಂಗ್ರೆಸ್ ನವರ ಮೇಲೆ ಎಫ್‌.ಐ.ಆರ್ ಮಾಡ್ತಾರೆ. ಆದರೆ ಬಿಜೆಪಿಯ ಅಭ್ಯರ್ಥಿ ಮೇಲೆ ಎಫ್​ಐಆರ್ ಆಗಲ್ಲ. ಅವರ ಹೆಸರು ಸಹ ಪ್ರಕರಣದಲ್ಲಿ ಬರುವುದಿಲ್ಲ. ಅಧಿಕಾರಿಗಳು ಬಿಜೆಪಿಯವರು ಮಾಡುತ್ತಿರುವ ಅಕ್ರಮಗಳಿಗೆ ರಕ್ಷಣೆ ಕೊಡುತ್ತಿದ್ದಾರೆ. ಅವರ ಏಜೆಂಟ್​ಗಳಾಗಿ ಕೆಲಸ ಮಾಡ್ತಾ ಇದ್ದಾರೆ. ಮಂತ್ರಿಗಳ ಒತ್ತಡದಿಂದ ಆ ರೀತಿ ಮಾಡುತ್ತಿದ್ದಾರೆ ಎಂದರು.

ನಾವು ಮತದಾರರ ಬಳಿ ಹೋಗುತ್ತೇವೆ: ಕಾಂಗ್ರೆಸ್ - ಬಿಜೆಪಿಯವರು ನಮ್ಮನ್ನು ಸಂಪರ್ಕ ಮಾಡಿದ್ರು ಎಂಬ ಹೆಚ್ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ರಾಜಕೀಯವಾಗಿ ಅವರವರ ಅನುಕೂಲಕ್ಕೆ ತಕ್ಕಂತೆ ಹೇಳಿಕೆ ಕೊಡ್ತಾರೆ. ಎಲೆಕ್ಷನ್ ಶುರುವಾಗಿದೆ, ಜನ ತೀರ್ಪು ಕೊಡ್ತಾರೆ. ಮತದಾರರಲ್ಲಿ ಗೊಂದಲ ಸೃಷ್ಟಿ ಮಾಡಲು ಹೇಳಿಕೆ ಕೊಟ್ಟಿದ್ದಾರೆ. ಅವರ ತಂತ್ರಗಾರಿಕೆ ಅವರು ಮಾಡ್ತಾರೆ. ನಾವು ಮತದಾರರ ಬಳಿ ಹೋಗುತ್ತೇವೆ. ಕುದುರೆ, ಕತ್ತೆ ವ್ಯಾಪಾರ ಬೇಡ. ಯಾವುದಾದರೂ ಗಟ್ಟಿ ಸರ್ಕಾರ ಬೇಕು. ಸುಭದ್ರ ಸರ್ಕಾರ ಬೇಕು, ಜನರ ಮನಸ್ಸಿನಲ್ಲಿ ಇದೆ. ಹಾಗಾಗಿ ಅವರಿವರ ಅವಶ್ಯಕತೆ ನಮಗಿಲ್ಲ ಎಂದರು.

ಬಿಎಸ್​ವೈ ‌ಅವರನ್ನು‌ ಮೂಲೆ ಗುಂಪು ಮಾಡಿದ್ದಾರೆ- ಕೃಷ್ಣ ಭೈರೇಗೌಡ: ಬಿಜೆಪಿಯಲ್ಲಿರುವ ಮಂತ್ರಿಗಳು, ಸಿಎಂ ಆದಿಯಾಗಿ ಸಂತೋಷ್​ ಅವರು ಸಹ ಕೇಸ್ ಹಾಕಬೇಡಿ ಎಂದು ಒತ್ತಡ ಹಾಕಿದ್ದಾರೆ. ಈ‌‌ ಮಾಹಿತಿ ಬಿಜೆಪಿಯವರೇ ನನಗೆ ಕೊಟ್ಟಿದ್ದು. ವರುಣದಿಂದ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವ ಬಿಎಸ್​ವೈ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಬಿಜೆಪಿ ಧೂಳಿಪಟ ಆಗುವುದನ್ನ ತಡೆಗಟ್ಟುವ ಬಗ್ಗೆ ಚಿಂತನೆ ಮಾಡಬೇಕು. ನಿನ್ನೆ ಬಂದ ಸರ್ವೆ ಪ್ರಕಾರ, 60 ಸ್ಥಾನ ಬರುವುದಿಲ್ಲ. ನಾಲ್ಕು ವರ್ಷಗಳಿಂದ 40% ಹೇಸಿಗೆ ತಿಂದಿದ್ದಾರೆ. ಜನ ಕಾಯ್ತಾ ಇದ್ದಾರೆ. ಇವರಿಗೆ ಮಾರಿ ಹಬ್ಬ ಮಾಡಬೇಕು ಅಂತ. ಮತದಾನ ಎಂಬುವ ದೊಣ್ಣೆ ಹಿಡಿದು ಕಾಯ್ತಾ ಇದ್ದಾರೆ. ಹಾಗಾಗಿ ಯಡಿಯೂರಪ್ಪ ಅವರ ಸ್ಥಾನ ಉಳಿಸಿಕೊಳ್ಳಲಿ. ಇನ್ನೊಬ್ಬರ ಬಗ್ಗೆ ಕನಿಕರ ಆಸರೆ ನಮಗೆ ಬೇಕಾಗಿಲ್ಲ. ಅವರ ಪಕ್ಷದಲ್ಲಿ ಅವರಿಗೆ ಹಿಂಸೆ ಮಾಡಿದ್ದಾರೆ. ಅವರಿಂದ ಲಾಭ ಪಡೆದುಕೊಂಡು, ಬಿಎಸ್​ವೈ ‌ಅವರನ್ನು‌ ಮೂಲೆಗುಂಪು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅದನ್ನು‌ ಮುಚ್ಚಿಹಾಕಿಕೊಳ್ಳಲು ಯಡಿಯೂರಪ್ಪ ಅವರು ಮಾತನಾಡುತ್ತಾರೆ‌. ಎಲ್. ಕೆ‌ ಅಡ್ವಾಣಿ ಪರಿಸ್ಥಿತಿ ಬಿಎಸ್​ವೈಗೆ ಬಂದಿದೆ‌. ಅಡ್ವಾಣಿ ತಂದೆ ಇದ್ದಂಗೆ, ವಾಜಪೇಯಿ ತಾಯಿ ಇದ್ದ ಹಾಗೆ. ಬಿಜೆಪಿ ಕಟ್ಟಿ ಬೆಳೆಸಿದವರು ಎಲ್ಲಿ ಹೋದ್ರು? ದೇಶದ ಮೂಲೆ‌‌ ಮೂಲೆಯಲ್ಲಿ ಸುತ್ತಿ ಪಕ್ಷ ಕಟ್ಟಿದರು. ಎಸ್.‌ಎಂ.‌ ಕೃಷ್ಣ ಅವರಿಗೆ ಕಾಂಗ್ರೆಸ್ ನಲ್ಲಿ ಶಾಸಕ, ಎಂ ಪಿ,‌ ಮಿನಿಸ್ಟರ್, ಸಿಎಂ ಸ್ಥಾನ ಕೊಟ್ಟು ಗೌರವ ನೀಡಿದ್ದೆವು. ಅವರನ್ನು ಒಂದು ಹಂತಕ್ಕೆ ನಾವು ಬೆಳೆಸಿದ್ದೆವು. ಬಿಜೆಪಿ ಅವರನ್ನು ಕರೆದುಕೊಂಡು ಹೋಗಿ ಹೆಸರನ್ನ ಇಲ್ಲದಂಗೆ ಮಾಡಿದರು. ಅವರ ಅಳಿಯನನ್ನು ಕಳೆದುಕೊಂಡ, ಅವರ ಶೋಚನೀಯ ಸ್ಥಿತಿಯಲ್ಲಿ ಬಿಜೆಪಿ ನಿಲ್ಲಿಸಿದೆ.

ಸಿದ್ದರಾಮಯ್ಯ ಅವರ ಬಗ್ಗೆ ಚಿಂತೆ ಬೇಡ: ಎಸ್ಎಂಕೆ ಅವಮಾನ, ಕನ್ನಡಿಗರೇ ಅವಮಾನ ಮಾಡಿದ್ದಾರೆ. ಯೂಸ್ ಅಂಡ್ ಥ್ರೋ ಮಾಡಿದ್ದಾರೆ. ಇರುವ ರಸವನ್ನು ಎಳೆದುಕೊಂಡು ಉಗಿಯುವಂತೆ ಮಾಡಿದ್ದಾರೆ. ಆ ಪಟ್ಟಿಯಲ್ಲಿ ಅಡ್ವಾಣಿ ಅಗ್ರಸ್ಥಾನದಲ್ಲಿದ್ದಾರೆ. ಎಸ್​ಎಂಕೆ ಇದ್ದಾರೆ. ಯಡಿಯೂರಪ್ಪ ಅವರನ್ನು ಅದೇ ದಾರಿಯಲ್ಲಿ ತೆಗೆದುಕೊಂಡು ಹೋಗಿದ್ದಾರೆ. ನಿಮ್ಮ ಕ್ಷೇತ್ರದಲ್ಲಿ ಬಿಜೆಪಿಯವರು ನಿಮಗೆ ಏನು ಮಾಡ್ತಾರೆ ಗೊತ್ತಿಲ್ಲ. ಅದನ್ನು ನೋಡಿಕೊಳ್ಳಿ. ಸಿದ್ದರಾಮಯ್ಯ ಅವರ ಬಗ್ಗೆ ಚಿಂತೆ ಬೇಡ ಎಂದರು.

ಸಿದ್ದರಾಮಯ್ಯ ಕೋಲಾರ ಸ್ಫರ್ಧೆ ವಿಚಾರ ಮಾತನಾಡಿ, ಕೋಲಾರದಿಂದ ಸ್ಪರ್ಧೆ ಮಾಡಬೇಕು ಎಂಬುದು ಆ ಭಾಗದ ನಾಯಕರ ಅಭಿಪ್ರಾಯ. ಅಂತಿಮವಾಗಿ ಸಿದ್ದರಾಮಯ್ಯ, ಖರ್ಗೆ, ರಾಹುಲ್‌ ಗಾಂಧಿ, ಸುರ್ಜೇವಾಲ ತೀರ್ಮಾನ ಮಾಡ್ತಾರೆ. ದೆಹಲಿಯಿಂದ ಬಂದ ಬಳಿಕ ಮತ್ತೊಂದು ಸುತ್ತಿನ ಸಭೆ ಸಿದ್ದರಾಮಯ್ಯ ಮಾಡಿದ್ದಾರೆ. ಮತ್ತೊಮ್ಮೆ ದೆಹಲಿಗೆ ಹೋಗಿ ಖರ್ಗೆ, ಸುರ್ಜೇವಾಲ ರಾಹುಲ್ ಗಾಂಧಿ ಜೊತೆ ಚರ್ಚೆ ಮಾಡಿ ಒಂದು ತೀರ್ಮಾನ ಮಾಡ್ತಾರೆ. ಕೋಲಾರದಲ್ಲಿ ಸ್ಪಷ್ಟವಾಗಿ ಸಿದ್ದರಾಮಯ್ಯ ಗೆಲ್ತಾರೆ. ಎರಡು ಕ್ಷೇತ್ರದಿಂದ ಗೆಲ್ಲೋದರ ಕುರಿತು ಪಕ್ಷ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

ಬಿಜೆಪಿಯಿಂದಲೂ ದೂರು ಸಲ್ಲಿಕೆ : ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರು ವರುಣಾ ಕ್ಷೇತ್ರದ ಬಿಳಗುಲಿ ಗ್ರಾಮದಲ್ಲಿ ತಮ್ಮ ಚುನಾವಣಾ ಪ್ರಚಾರದ ವೇಳೆ ಚುನಾವಣಾ ನೀತಿಸಂಹಿತೆ ಜಾರಿಯಾದ ಬಳಿಕ, ಅಂದರೆ ಮಾರ್ಚ್ 29ರ ಸಂಜೆ 4.15ರ ಸುಮಾರಿಗೆ ಪ್ರಚಾರ ಸ್ಥಳದಲ್ಲಿದ್ದ ವಾಲಗ ಮತ್ತು ಡೋಲು ಬಾರಿಸುವವರಿಗೆ ಸುಮಾರು 1 ಸಾವಿರ ರೂಪಾಯಿ ನೀಡಿ ಮಾದರಿ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಮಾಡಿದ್ದಕ್ಕಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಬಿಜೆಪಿ ಮನವಿ ಮಾಡಿದೆ. ಈ ಸಂಬಂಧ ಇಂದು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಹಣ ಹಂಚಿರುವ ವಿಡಿಯೋದ ಲಿಂಕ್ ವಿವರವನ್ನು ಮನವಿಪತ್ರದಲ್ಲಿ ನೀಡಲಾಗಿದೆ. ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾ ವಕ್ತಾರ ಡಾ. ರಾಘವೇಂದ್ರ ರಾವ್, ಕಾನೂನು ಪ್ರಕೋಷ್ಠದ ಸದಸ್ಯ ಶಿವಕುಮಾರ್ ಅವರ ನಿಯೋಗವು ಈ ದೂರುಗಳನ್ನು ಸಲ್ಲಿಸಿತ್ತು.

ಚುನಾವಣಾ ಆಯೋಗದ ವಿಶ್ವಾಸಾರ್ಹತೆಗೆ ಚ್ಯುತಿ ಬರುವಂತೆ ಸಿದ್ದರಾಮಯ್ಯನವರು ಮಾತನಾಡಿದ್ದಾಗಿ ಇನ್ನೊಂದು ದೂರು ನೀಡಲಾಗಿದೆ. 'ಕಾಂಗ್ರೆಸ್ ಕಟ್ಟಿಹಾಕುವುದಕ್ಕಾಗಿಯೇ ಹೆಚ್ಚು ಆದಾಯ ತೆರಿಗೆ ಅಧಿಕಾರಿಗಳನ್ನು ಚುನಾವಣಾ ಆಯೋಗ ನಿಯೋಜಿಸಿದೆ' ಎಂದು ಹೇಳಿದ್ದು, ಇದು ಸಂವಿಧಾನಾತ್ಮಕ ಸಂಸ್ಥೆಯ ವಿರುದ್ಧ ಆಧಾರರಹಿತ ಆರೋಪವಾಗಿದೆ. ಇದರಿಂದ ಜನರ ಮನಸ್ಸಿನಲ್ಲಿ ಸಂಸ್ಥೆಯ ವಿರುದ್ಧ ನಕಾರಾತ್ಮಕ ಅಭಿಪ್ರಾಯ ಮೂಡಿಸುವಂತಿದೆ. ಆದ್ದರಿಂದ ಸಿದ್ದರಾಮಯ್ಯರ ವಿರುದ್ಧ ಸೂಕ್ತ ಕ್ರಮಕ್ಕೆ ಕೋರಲಾಗಿದೆ.

ಸುರ್ಜೇವಾಲಾ ವಿರುದ್ಧವೂ ದೂರು : ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಬಿಜೆಪಿ ವಿರುದ್ಧ ಆಧಾರರಹಿತ ಆರೋಪ ಮಾಡಿದ್ದಾರೆ. ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕರ್ನಾಟಕ ಚುನಾವಣೆ ಸಂಬಂಧ ನೀಡಿದ ಹೇಳಿಕೆಯಲ್ಲಿ “ದಿ ಬಿಜೆಪಿ 40% ಕಮಿಷನ್ ಸರ್ಕಾರ, ವಿಚ್ ಹ್ಯಾಸ್ ಬ್ರೇಜನ್ಲಿ ಲೂಟೆಡ್ ದಿ ಸ್ಟೇಟ್” ಎಂಬುದಾಗಿ ಬಿಜೆಪಿ ವಿರುದ್ಧ ಆಧಾರರಹಿತ ಆರೋಪ ಮಾಡಿ ಮತದಾರರಲ್ಲಿ ತಪ್ಪು ಮಾಹಿತಿ ನೀಡಿ, ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಸುರ್ಜೇವಾಲಾ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ನಿಯೋಗ ಕೋರಿದೆ.

ಇದನ್ನೂ ಓದಿ : ಸಾರಿಗೆ ನೌಕರರ ವೇತನ ಶ್ರೇಣಿ ಶೇ.15ರಷ್ಟು ಹೆಚ್ಚಳ ಮಾಡಿ ಸರ್ಕಾರದ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.