ETV Bharat / state

ಇತ್ತೀಚೆಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿರುಚುವ ಕೆಲಸ ಆಗುತ್ತಿದೆ: ರಾಮಲಿಂಗಾರೆಡ್ಡಿ ಬೇಸರ

author img

By

Published : Jan 26, 2023, 5:14 PM IST

kpcc-working-president-ramalingareddy-participated-in-republic-day-celebration
ಇತ್ತೀಚೆಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿರುಚುವ ಕೆಲಸ ಆಗುತ್ತಿದೆ : ರಾಮಲಿಂಗರೆಡ್ಡಿ ಬೇಸರ

ಬೆಂಗಳೂರಿನ ರೇಸ್​ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಗಣರಾಜ್ಯೋತ್ಸವ - ಧ್ವಜಾರೋಹಣ ನೆರವೇರಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ - ಹಲವು ನಾಯಕರು ಕಾರ್ಯಕ್ರಮಕ್ಕೆ ಗೈರು

ಬೆಂಗಳೂರು : 74 ನೇ ಗಣರಾಜ್ಯೋತ್ಸವ ನಿಮಿತ್ತ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಪಕ್ಷದ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದರು.
ಬೆಂಗಳೂರಿನ ರೇಸ್​ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ನಮಗೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದೆ. ಇಷ್ಟು ವರ್ಷ ದೇಶ ಕಟ್ಟುವ ಕೆಲಸ ಆಗಿದೆ. ಸ್ವಾತಂತ್ರ್ಯ ಬರುವುದಕ್ಕೆ ಹಲವರ ಕೊಡುಗೆ ಇದೆ. ಆದರೆ ಇತ್ತೀಚೆಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿರುಚುವ ಕೆಲಸ ಆಗುತ್ತಿದೆ ಎಂದು ಹೇಳಿದರು.

ಪ್ರಧಾನಿ ಜವಾಹರಲಾಲ್ ನೆಹರು ದೇಶವನ್ನು ಕಟ್ಟಿದರು. ಅಂದಿನಿಂದ ಇಂದಿನವರೆಗೂ ಹಲವು ಪ್ರಧಾನಿಗಳು ದೇಶ ಕಟ್ಟುವ ಕೆಲಸ ಮಾಡಿದ್ದಾರೆ. ಅಂಬೇಡ್ಕರ್ ದೇಶಕ್ಕೆ ಸಂವಿಧಾನ ಕೊಟ್ಟರು. ಆದರೆ ಇದನ್ನು ತಿರುಚುವ ಕೆಲಸ ಆಗುತ್ತಿದೆ. ಈ ಬಗ್ಗೆ ನಾವು ಯುವಕರಿಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಅಭಿಪ್ರಾಯಪಟ್ಟರು. ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವ ರಾಷ್ಟ್ರೀಯ ಹಬ್ಬಗಳು. ಇದನ್ನು ಜಾತಿ, ಬೇಧ, ಭಾವ, ಭಾಷೆ, ಪ್ರಾಂತ್ಯ ಬೇಧ ಇಲ್ಲದೇ ದೇಶಾದ್ಯಂತ ಆಚರಿಸಲಾಗುತ್ತಿದೆ. ಎರಡೂ ದಿನದ ಆಚರಣೆ ನಮಗೆ ಬಹಳ ಮುಖ್ಯ. ದಶಕಗಳ ಕಾಲ ದೇಶಕ್ಕಾಗಿ ಹೋರಾಡಿದವರನ್ನು ನೆನಪಿಸಿಕೊಳ್ಳುವ ಕಾರ್ಯ ಆಗಬೇಕು.

ಹೊಸ ಪೀಳಿಗೆಗೆ ನಿಜವಾದ ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸುವ ಕಾರ್ಯ ಆಗಬೇಕಿದೆ. ರಾಜ ಮಹಾರಾಜರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಕೆಲ ಪ್ರಾಂತ್ಯಗಳಿಗೆ ಸೀಮಿತವಾಗಿದ್ದ ಹೋರಾಟ ಮಹಾತ್ಮ ಗಾಂಧಿ ಬಂದ ನಂತರ ಇಡೀ ದೇಶ ಜಾತಿ, ಮತ ಹಾಗೂ ಪಂಥ ಮೀರಿ ಹೋರಾಟದ ರೂಪ ಪಡೆಯಿತು. ನೆಹರು ಅವರಿಂದ ಹಿಡಿದು ಇಂದಿನ ನರೇಂದ್ರ ಮೋದಿ ಅವರವರೆಗೂ ಪ್ರಧಾನಿಯಾದವರು ದೇಶಕ್ಕೆ ಅವರದ್ದೇ ಆದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ನಾಯಕರ ಅನುಪಸ್ಥಿತಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೈಸೂರಿನಲ್ಲಿ ಕಾರ್ಯಕ್ರಮ ಇದ್ದ ಹಿನ್ನೆಲೆ ಸಮಾರಂಭಕ್ಕೆ ಗೈರಾಗಿದ್ದರು. ಆದರೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪಕ್ಷದ ಕಾರ್ಯಕ್ರಮದಿಂದ ದೂರವೇ ಉಳಿದರು. ಪಕ್ಕದ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಅಗಮಿಸಿದ್ದ ಸಿದ್ದರಾಮಯ್ಯ ಒಂದು ಗಂಟೆ ಮುನ್ನ ನಡೆದ ಕಾಂಗ್ರೆಸ್ ಪಕ್ಷದ ಕಚೇರಿಯ ಗಣರಾಜ್ಯೋತ್ಸವಕ್ಕೆ ಬರಲಿಲ್ಲ. ಕೂಗಳತೆಯ ದೂರದಲ್ಲಿಯೇ ಮನೆ ಇದ್ದರೂ, ಅವರು ಕಾರ್ಯಕ್ರಮದಿಂದ ದೂರ ಉಳಿದದ್ದು ಅಚ್ಚರಿ ಮೂಡಿಸಿತು. ಇತ್ತೀಚಿನ ದಿನಗಳಲ್ಲಿ ಅವರು ಪಕ್ಷದ ಕಾರ್ಯಕ್ರಮದಿಂದ ದೂರವೇ ಉಳಿದಿದ್ದಾರೆ.

ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರೂ ಸೇರಿದಂತೆ ಬಹುತೇಕ ಪ್ರಮುಖ ನಾಯಕರು ಕಾಂಗ್ರೆಸ್ ಪಕ್ಷದ ಕಚೇರಿಯ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಸದ್ಯವೇ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ಇದರಲ್ಲಿ ಭಾಗಿಯಾಗಬೇಕು. ಆದ್ದರಿಂದ ಹೆಚ್ಚಿನ ನಾಯಕರು ತಮ್ಮ ಸ್ವಕ್ಷೇತ್ರಗಳಲ್ಲಿ ಭಾಗಿಯಾದ ಹಿನ್ನೆಲೆ ಇಂದಿನ ಕಾರ್ಯಕ್ರಮ ಕಳೆಗುಂದಿತ್ತು.

ಚಾಮರಾಜನಗರದಲ್ಲಿ ಪ್ರಜಾಧ್ವನಿ ಸಮಾವೇಶ : ಇಂದು ಚಾಮರಾಜನಗರದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಭಾಗಿಯಾಗಬೇಕಿರುವ ಹಿನ್ನೆಲೆ ಹೆಚ್ಚಿನ ನಾಯಕರು ಅಲ್ಲಿಗೆ ತೆರಳಿದ್ದಾರೆ. ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸಿದ್ದರಾಮಯ್ಯ ಕೂಡ ಪ್ರಜಾಧ್ವನಿಯಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಈ ಹೋರಾಟ ಅತ್ಯಂತ ಯಶಸ್ವಿಯಾಗಿ ಸಾಗಿದ್ದು, ಪಕ್ಷದ ವರ್ಚಸ್ಸನ್ನು ಹೆಚ್ಚಿಸುವ ಕಾರ್ಯ ಮಾಡುತ್ತಿದೆ. ಇದರಿಂದ ಕೈ ನಾಯಕರು ಈ ಯಾತ್ರೆಯ ಯಶಸ್ಸಿಗೆ ಇನ್ನಷ್ಟು ತೊಡಗಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : ಮೋದಿ ಅಮಿತ್ ಶಾ ಬಂದ ಕಡೆ ಕಮಲ ಅರಳುತ್ತೆ: ಸಚಿವ ಆರ್.ಅಶೋಕ್ ವಿಶ್ವಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.