ETV Bharat / state

Chaluvarayaswamy: ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಲಂಚ ಪತ್ರ: ಸತ್ಯಾಸತ್ಯತೆಗೆ ಸಿಐಡಿ ತನಿಖೆ

author img

By

Published : Aug 8, 2023, 3:22 PM IST

Updated : Aug 8, 2023, 4:48 PM IST

Agriculture Minister Cheluvarayaswamy: ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಮಂಡ್ಯ ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳು ಬರೆದಿದ್ದಾರೆ ಎನ್ನಲಾದ ಲಂಚ ಆರೋಪ ಪತ್ರದ ಸತ್ಯಾಸತ್ಯತೆ ತಿಳಿಯಲು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕೃಷಿ ಸಚಿವ ಚಲುವರಾಯಸ್ವಾಮಿ
ಕೃಷಿ ಸಚಿವ ಚಲುವರಾಯಸ್ವಾಮಿ

ಬೆಂಗಳೂರು: ಮಂಡ್ಯ ಜಿಲ್ಲೆಯ ಕೃಷಿ ಅಧಿಕಾರಿಗಳು ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಬರೆದಿದ್ದಾರೆ ಎನ್ನಲಾದ ಪತ್ರದ ಕುರಿತು ಸಿಐಡಿ (CID) ತನಿಖೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಗೃಹ ಸಚಿವರೊಂದಿಗೆ ಚರ್ಚಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಕರಣವನ್ನು ಸಿಐಡಿಗೆ ಒಪ್ಪಿಸಲು ಸೂಚಿಸಿದ್ದಾರೆ. ಸಚಿವ ಚಲುವರಾಯಸ್ವಾಮಿ ವಿರುದ್ಧ ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎಂಬರ್ಥದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಚಾರ ಇದೀಗ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ನಡುವೆ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ.

'ವ್ಯವಸ್ಥಿತ ಪಿತೂರಿ'- ಚಲುವರಾಯ ಸ್ವಾಮಿ: ಈ ಸಂಬಂಧ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಪತ್ರದ ಬಗ್ಗೆ ತನಿಖೆಗೆ ಮನವಿ ಸಲ್ಲಿಸಿದ್ದರು. ಮನವಿ ಪತ್ರದಲ್ಲಿ ಸಚಿವರು, "ಕಳೆದ ಎರಡು ತಿಂಗಳ ಹಿಂದೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತದೊಂದಿಗೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹತಾಶರಾಗಿರುವ ಕೆಲವು ರಾಜಕೀಯ ವಿರೋಧಿಗಳು ಮತ್ತು ಕಿಡಿಗೇಡಿಗಳು, ಷಡ್ಯಂತ್ರ ರೂಪಿಸಿ, ಇಲ್ಲಸಲ್ಲದ ಆರೋಪಗಳನ್ನು ಹೊರಿಸುತ್ತಿದ್ದಾರೆ. ಈ ಮೂಲಕ ಸರ್ಕಾರ ಮತ್ತು ನನ್ನ ಮೇಲೆ ಕಳಂಕ ಹಚ್ಚುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ" ಎಂದು ದೂರಿದ್ದಾರೆ.

  • ಮಂಡ್ಯ ಜಿಲ್ಲೆಯ ಕೃಷಿ ಅಧಿಕಾರಿಗಳು ಕೃಷಿ ಸಚಿವರ ವಿರುದ್ಧ ಬರೆದಿದ್ದಾರೆನ್ನಲಾದ ಪತ್ರದ ಕುರಿತು CID ತನಿಖೆ ನಡೆಸಲು ತೀರ್ಮಾನಿಸಲಾಗಿದೆ.
    - ಮುಖ್ಯಮಂತ್ರಿ @siddaramaiah pic.twitter.com/972rN79B53

    — CM of Karnataka (@CMofKarnataka) August 8, 2023 " class="align-text-top noRightClick twitterSection" data=" ">

"ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳ ಅನುಷ್ಠಾನದಿಂದ ಹತಾಶರಾಗಿರುವ ಕೆಲವು ನಿರುದ್ಯೋಗಿ ರಾಜಕಾರಣಿಗಳು ಸಮಾಜಕ್ಕೆ ಮಾರಕವಾಗಿರುವ ಕಿಡಿಗೇಡಿಗಳಿಗೆ ಕುಮ್ಮಕ್ಕು ನೀಡಿ, ಇಲಾಖೆಯ ಅಧಿಕಾರಿಗಳ ಹೆಸರನ್ನು ಬಳಸಿಕೊಂಡು ಸತ್ಯಕ್ಕೆ ದೂರವಾದ ಕಪೋಲಕಲ್ಪಿತ ಕಥೆಗಳನ್ನು ಸೃಷ್ಟಿಸುತ್ತಿದ್ದಾರೆ. ನಕಲಿ ಪತ್ರಗಳನ್ನು ರಾಜ್ಯಪಾಲರು ಹಾಗೂ ಇನ್ನಿತರ ಸಾಂವಿಧಾನಿಕ ಸಂಸ್ಥೆಗಳಿಗೆ ಸಲ್ಲಿಸಿ, ಕುಚೋದ್ಯದ ನಡವಳಿಕೆ ಪದರ್ಶಿಸುತ್ತಿದ್ದಾರೆ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ. ಇಲ್ಲವಾದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನಪರವಾಗಿ ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸುವುದು ಕಷ್ಟ" ಎಂದು ಸಚಿವರು ಮನವಿ ಮಾಡಿದ್ದರು.

"ಯಾವುದೇ ಆಧಾರ, ದಾಖಲಾತಿಗಳಿಲ್ಲದ ಆರೋಪಗಳನ್ನು ಸಾರ್ವಜನಿಕವಾಗಿ ಮಾಡುತ್ತಾ, ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು, ಮಾಧ್ಯಮಗಳ ಮೂಲಕ ನಮ್ಮ ಮೇಲೆ ಕಳಂಕ ಹಚ್ಚಲು ಪ್ರಯತ್ನಿಸುತ್ತಿರುವುದು ಶೋಚನೀಯ. ಇಂತಹ ಕೃತ್ಯ ಎಸಗುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಅವಶ್ಯಕ. ಆದ್ದರಿಂದ, ತಾವು ಈ ಕೂಡಲೇ ಗೃಹ ಸಚಿವರು ಮತ್ತು ಗೃಹ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ, ನನ್ನ ಮೇಲೆ ಮತ್ತು ಸರ್ಕಾರದ ಮೇಲೆ ಷಡ್ಯಂತ್ರ ರೂಪಿಸಿ ಸರ್ಕಾರಿ ಅಧಿಕಾರಿಗಳ ನಕಲಿ ಸಹಿ ಬಳಸಿ ಸುಳ್ಳು ಆರೋಪಗಳನ್ನು ಸೃಷ್ಟಿಸಿ, ರಾಜ್ಯಪಾಲರಿಗೆ ನಕಲಿ ಪತ್ರ ಸಲ್ಲಿಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೋರಿದ್ದು, ಇಂತಹ ನಕಲಿ ಪತ್ರಗಳನ್ನು ಬರೆಯುವ ಮತ್ತು ಅದಕ್ಕೆ ಕುಮ್ಮಕ್ಕು ನೀಡುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ಕೋರಿದ್ದರು.

ಕೆಪಿಸಿಸಿ ನಿಯೋಗದಿಂದ ದೂರು: ಕೃಷಿ ಅಧಿಕಾರಿಗಳ ಹೆಸರಿನಲ್ಲಿ ಸಚಿವ ಚಲುವರಾಯಸ್ವಾಮಿ ಹಾಗೂ ಕಾಂಗ್ರೆಸ್ ಸರ್ಕಾರದ ತೇಜೋವಧೆಯಾಗುವಂತೆ ಸುಳ್ಳು ಆರೋಪ ಮಾಡಿ, ನಕಲಿ ಸಹಿಯೊಂದಿಗೆ ರಾಜ್ಯಪಾಲರಿಗೆ ದೂರು ನೀಡಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಶಾಸಕ ನರೇಂದ್ರಸ್ವಾಮಿ ಮತ್ತು ದಿನೇಶ್ ಗೂಳಿಗೌಡ ನೇತೃತ್ವದ ಕೆಪಿಸಿಸಿ ನಿಯೋಗ ಗೃಹ ಸಚಿವ ಪರಮೇಶ್ವರ್​ಗೆ ಮನವಿ ಪತ್ರ ಸಲ್ಲಿಸಿದ್ದರು.

ಇದನ್ನೂ ಓದಿ: ಸಚಿವ ಚಲುವರಾಯಸ್ವಾಮಿ ವಿರುದ್ಧ ಪತ್ರ.. ಪೊಲೀಸ್ ತನಿಖೆಗೆ ಸೂಚನೆ: ಸಿಎಂ ಸಿದ್ದರಾಮಯ್ಯ

Last Updated : Aug 8, 2023, 4:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.