ETV Bharat / state

ಮುಂದುವರಿದ ಸಂಪುಟ ಸರ್ಜರಿ ಸಸ್ಪೆನ್ಸ್; ಹೈಕಮಾಂಡ್​ ನಿಗೂಢ ನಡೆಯಿಂದ ಸಚಿವಾಕಾಂಕ್ಷಿಗಳಲ್ಲಿ ತಳಮಳ!

author img

By

Published : Nov 21, 2020, 11:26 PM IST

Karnataka Cabinet Expansion Is Continued
ಸಿಎಂ ಯಡಿಯೂರಪ್ಪ

ಸಂಪುಟ ಸರ್ಜರಿ ಸಸ್ಪೆನ್ಸ್ ಮುಂದುವರೆದಿದ್ದರಿಂದ ಸಚಿವ ಆಕಾಂಕ್ಷಿಗಳಲ್ಲಿನ ಕುತೂಹಲ, ಆತಂಕ‌, ಗೊಂದಲವೂ ಕೂಡ ಮುಂದುವರಿದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಶಾ ಶೀಘ್ರದಲ್ಲೇ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಹಾಗಾಗಿ ಅವರು ತೆರಳಿದ ಬಳಿಕವೇ ಈ ಸಸ್ಪೆನ್ಸ್​ಗೆ ಕೊನೆ ಹಾಡಲಾಗುತ್ತದೆ ಎಂಬ ಮಾತುಗಳು ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ.

ಬೆಂಗಳೂರು: ಸಂಪುಟ ಸರ್ಜರಿ ಮೇಲಿನ ಸಸ್ಪೆನ್ಸ್ ಇನ್ನೂ ಮುಂದುವರಿದಿದೆ. ಸಿಎಂ ದೆಹಲಿಗೆ ಹೋಗಿ ಮೂರು ದಿನಗಳಾದರೂ ಹೈಕಮಾಂಡ್​​ನಿಂದ ಸಿಎಂಗೆ ಈವರೆಗೆ ಯಾವುದೇ ಕರೆ ಬಂದಿಲ್ಲ. ಹಾಗಾಗಿ ಸಂಪುಟ ಸಸ್ಪೆಂನ್ಸ್ ಇನ್ನೂ ಮುಂದುವರಿದಿದೆ.

ಅದೇ ರೀತಿ ಸಚಿವ ಆಕಾಂಕ್ಷಿಗಳಲ್ಲಿ ಕುತೂಹಲ, ಆತಂಕ‌, ಗೊಂದಲವೂ ಮುಂದುವರಿದಿದೆ. ಇತ್ತ ಸಿಎಂಗೂ ಹೈ ಕಮಾಂಡ್​ನಿಂದ ಯಾವಾಗ ಗ್ರೀನ್ ಸಿಗ್ನಲ್ ಸಿಗುತ್ತೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಸಂಪುಟ ಪುನರಚನೆಯೋ, ವಿಸ್ತರಣೆಯೋ ಎಂಬ ಬಗೆಗಿನ ಗೊಂದಲ ಹಾಗೇ ಉಳಿದುಕೊಂಡಿದೆ. ನವಂಬರ್​ನಲ್ಲಿ ಸಂಪುಟ ಸರ್ಜರಿಗೆ ಮುಹೂರ್ತ ಫಿಕ್ಸ್ ಆಗುವುದು ಬಹುತೇಕ ಅನುಮಾನ ಎಂಬಂತಾಗಿದ್ದು, ಇನ್ನೇನಿದ್ದರೂ ಡಿಸೆಂಬರ್​ನಲ್ಲಿ ಸಂಪುಟ ಸರ್ಜರಿ ನಡೆಯಲಿದೆ‌ ಎಂದು ಹೇಳಲಾಗಿದೆ. ಹೀಗಾಗಿ ಸಚಿವ ಆಕಾಂಕ್ಷಿಗಳಲ್ಲಿ ಹೈಕಮಾಂಡ್ ಸಿಹಿ ಕೊಡಿತ್ತೋ ಅಥವಾ ಶಾಕ್ ಕೊಡುತ್ತೋ ಎಂಬ ಆತಂಕ ಶುರುವಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ:

ಇನ್ನು ಡಿಸೆಂಬರ್ ಮೂರನೇ ವಾರದಲ್ಲಿ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ‌‌.ಪಿ‌. ನಡ್ಡಾ ಭೇಟಿ ನೀಡಲಿದ್ದಾರೆ. ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ನಡ್ಡಾ ಭೇಟಿ ವೇಳೆ ಬಿಜೆಪಿ ರಾಜ್ಯ ಕೋರ್ ಕಮಿಟಿ ಮತ್ತು ರಾಜ್ಯ ವಿಶೇಷ ಸಭೆ ನಡೆಯಲಿದೆ. ಅಲ್ಲಿಯವರೆಗೆ ಸಂಪುಟ ಸರ್ಜರಿ ನಡೆಯಲ್ವಾ ಎಂಬ ಬಗ್ಗೆನೂ ಸಚಿವ ಆಕಾಂಕ್ಷಿಗಳಲ್ಲಿ ಗೊಂದಲ ಮೂಡಿದೆ. ರಾಜ್ಯ ಭೇಟಿ ವೇಳೆ ಸಚಿವರು, ಬಿಜೆಪಿ ಸಂಸದರು, ಶಾಸಕರ ಜೊತೆ ಸಭೆ ನಡೆಸಲಿದ್ದಾರೆ.

ಸಿಎಂ ಯಡಿಯೂರಪ್ಪ ಕೂಡಾ ಭೇಟಿ ಮಾಡಿ ಸಮಾಲೋಚನೆ ಮಾಡಲಿರುವ ನಡ್ಡಾ, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳ ಜೊತೆ ಕೂಡಾ ಸಭೆ ನಡೆಸಲಿದ್ದಾರೆ. ಸಭೆಗಳ ದಿನಾಂಕ ಮತ್ತು ಸ್ಥಳ ನಿಗದಿ ವೇಳಾಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಜೆ.ಪಿ. ನಡ್ಡಾ ಭೇಟಿವರೆಗೂ ಸಂಪುಟ ವಿಸ್ತರಣೆ ಇಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿದೆ. ಇನ್ನು ಗೃಹ ಸಚಿವ ಅಮಿತ್ ಶಾ ಡಿಸೆಂಬರ್ ಮೊದಲ ವಾರದಲ್ಲಿ ರಾಜ್ಯಕ್ಕೆ ಬರಲಿದ್ದಾರೆ. ಆ ಬಳಿಕ ಸಂಪುಟ ಸರ್ಜರಿ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಇತ್ತ ದೆಹಲಿ ಪ್ರವಾಸ ಕೈಗೊಂಡು ವಾಪಸಾಗಿರುವ ಸಚಿವ ರಮೇಶ್ ಜಾರಕಿಹೊಳಿ ಬಳಿ ಸಚಿವಾಕಾಂಕ್ಷಿಗಳು ಸಚಿವ ಸಂಪುಟ ವಿಸ್ತರಣೆ ಸಂಬಂಧದ ಗೊಂದಲ ನಿವಾರಣೆಗೆ ಮುಂದಾಗಿದ್ದಾರೆ. ವರಿಷ್ಠರ ಜೊತೆಗಿನ ಮಾತುಕತೆಯಲ್ಲಿ ಏನೆಲ್ಲಾ ವಿಚಾರ ಚರ್ಚೆಯಾಯಿತು? ಸಂಪುಟ ಸರ್ಜರಿ ಸಂಬಂಧ ವರಿಷ್ಠರ ನಿಲುವು, ಯಾವಾಗ ಸಂಪುಟ ಸರ್ಜರಿಗೆ ಗ್ರೀನ್ ಸಿಗ್ನಲ್ ಸಿಗುತ್ತೆ? ಎಂಬ ಬಗ್ಗೆ ಸಚಿವಾಕಾಂಕ್ಷಿಗಳು ಸಚಿವ ರಮೇಶ್ ಜಾರಕೊಹೊಳಿರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಆದರೆ, ಇತ್ತ ಹೈ ಕಮಾಂಡ್ ಮಾತ್ರ ಸಂಪುಟ ಸರ್ಜರಿ ಬಗ್ಗೆ ರಾಜ್ಯ ನಾಯಕರಿಗೆ ಯಾವುದೇ ಗುಟ್ಟು ಬಿಟ್ಟು ಕೊಡುತ್ತಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.