ETV Bharat / state

ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ ಮೇಲೆ ಕ್ರಮ ಆಗುತ್ತಾ, ಇಲ್ಲವೋ ಗೊತ್ತಿಲ್ಲ.. ಸಭೆಯಲ್ಲಿ ಭಾಗಿಯಾದ ಬಳಿಕ ಗೊತ್ತಾಗಲಿದೆ: ಕುಮಾರಸ್ವಾಮಿ

author img

By ETV Bharat Karnataka Team

Published : Oct 19, 2023, 1:00 PM IST

jds-core-committee-meeting-at-bengaluru
ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ ಮೇಲೆ ಕ್ರಮ ಆಗುತ್ತಾ, ಇಲ್ವವೋ ಗೊತ್ತಿಲ್ಲ. ಸಭೆಯಲ್ಲಿ ಭಾಗಿಯಾದ ಬಳಿಕ ಗೊತ್ತಾಗಲಿದೆ : ಕುಮಾರಸ್ವಾಮಿ

ಜೆಡಿಎಸ್​ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕೋರ್ ಕಮಿಟಿ ಸಭೆ ಕರೆದಿದ್ದಾರೆ. ಸಭೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಸೇರಿದಂತೆ ಸದಸ್ಯರು ಭಾಗಿಯಾಗಿದ್ದಾರೆ.

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು : ಜೆಡಿಎಸ್​ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರು ಕೋರ್ ಕಮಿಟಿ ಸಭೆ ಕರೆದಿದ್ದಾರೆ. ಕೋರ್ ಕಮಿಟಿ ಅಧ್ಯಕ್ಷರು ಸಭೆಗೆ ಬರಲು ಹೇಳಿದ್ದಾರೆ, ಅದಕ್ಕೆ ಬಂದಿದ್ದೇನೆ. ಸಭೆಯ ಬಳಿಕ ದೇವೇಗೌಡರು ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರ ಮೇಲೆ ಕ್ರಮ ಆಗುತ್ತಾ, ಇಲ್ಲವೋ ಗೊತ್ತಿಲ್ಲ. ಸಭೆಯ ಅಜೆಂಡಾ ಅಲ್ಲಿ ಭಾಗಿಯಾದ ಬಳಿಕ ಗೊತ್ತಾಗಲಿದೆ ಎಂದರು. ವಿಧಾನಸೌಧದಲ್ಲಿ ಅರಿಶಿನ, ಕುಂಕುಮ ಬಳಕೆಗೆ ನಿರ್ಬಂಧ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿಕೆ, ಹಿಂದೂ ಸಂಸ್ಕೃತಿಯಲ್ಲಿ ಅರಿಶಿನ ಕುಂಕುಮ ಹಾಕಬಾರದು ಅಂತ ಇದೆಯಾ?.
ಈ ಸರ್ಕಾರ ಬ್ಯಾಗ್ರೌಂಡ್ ಏನು ಎಂದು ಆದೇಶ ನೋಡಿದರೆ ಗೊತ್ತಾಗುತ್ತದೆ. ಸರ್ಕಾರ ಯಾವ ದಿಕ್ಕಿನಲ್ಲಿ ಇದೆ. ಸರ್ಕಾರದಿಂದ ನಾಡಿಗೆ ಯಾವುದೇ ಶುಭದಿನ ಕಾಣೋದಿಲ್ಲ ಎಂಬುದು ಇವರ ನಿರ್ಧಾರದಿಂದ ಗೊತ್ತಾಗಲಿದೆ ಎಂದು ಟೀಕಿಸಿದರು.

ಆಪರೇಷನ್ ಕಮಲ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನೇ ಎರಡು ಬಾರಿ ಆಪರೇಷನ್ ಮಾಡಿಸಿಕೊಂಡಿದ್ದೇನೆ. ಅದರ ಅನುಭವ ನನಗೆ ಇದೆ ಎಂದರು. ಪದೇ ಪದೇ ನನ್ನ ಟಾರ್ಗೆಟ್ ಮಾಡ್ತಾ ಇದ್ದಾರೆ ಅನ್ನೋ ಡಿಕೆಶಿ ಹೇಳಿಕೆ ಪ್ರತಿಕ್ರಿಯಿಸಿ, ನಾನು ಅದರ ಬಗ್ಗೆ ಮಾತಾಡಲ್ಲ. ಮುಂದೆ ನೋಡೋಣ ಏನಾಗುತ್ತದೆ ಎಂದರು. ದೇಶದಲ್ಲಿ ಹೇಗಿದೆ ಅಂದರೆ ದರೋಡೆ ಮಾಡುವವನಿಗೂ ಸಿಂಪತಿ ವ್ಯಕ್ತವಾಗುತ್ತದೆ. ಏನೂ ಮಾಡದೇ ಇರುವವರು ಸಮಸ್ಯೆ ಅನುಭವಿಸ್ತಾರೆ. ಅನುಕಂಪವನ್ನು ಯಾರು ಹೇಗೆ ಬೇಕಾದರೂ ಬಳಸಿಕೊಳ್ಳೋ ವಾತಾವರಣ ಇದೆ. ಅದಕ್ಕೆ ನಾನ್ಯಾಕೆ ಬಲಿಯಾಗಬೇಕು ಎಂದು ಹೇಳಿದರು.

ಡಿಕೆಶಿ ತಿಹಾರ್ ಜೈಲಿಗೆ ಹೋಗ್ತಾರೆ ಎಂಬ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಹೆಚ್​​ಡಿಕೆ, ತಮ್ಮ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಆ ಹೇಳಿಕೆ ನೀಡಿದ್ದೆ. ರಾಮನಗರದಿಂದ ಗಂಟು ಮೂಟೆ ಕಟ್ಟಿ ಹಾಸನಕ್ಕೆ ಕಳಿಸ್ತೀವಿ ಅಂತ ಡಿಕೆ ಬ್ರದರ್ಸ್ ಹೇಳುತ್ತಿದ್ದರು. ಇದಕ್ಕೆ ನಮ್ಮ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿ ನಾನು ಮಾತನಾಡಿ ಸಂತೋಷವಾಗಿ ಹಾಸನಕ್ಕೆ ಹೋಗಬಹುದು, ಅವರು ಎಲ್ಲಿಗೆ ಹೋಗಬಹುದು ಎಂದು ಕೇಳಿದ್ದೆ. ನನ್ನ ಹೇಳಿಕೆಗೂ, ಹೈ ಕೋರ್ಟ್ ಆದೇಶಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಿಬಿಐ ಕೊಟ್ಟ ಮಾಹಿತಿ ಆಧಾರದ ಮೇಲೆ ನ್ಯಾಯಾಲಯದ ತೀರ್ಪು ಕೊಟ್ಟಿದೆ. ಮೂರು ತಿಂಗಳಲ್ಲಿ ತನಿಖೆ ಮುಗಿಸಿ ಎಂದು ಸಿಬಿಐ ಅವರಿಗೂ ಗಡುವು ಕೊಟ್ಟಿದ್ದಾರೆ. ಮುಂದೆ ಏನಾಗಲಿದೆ ಅಂತ ಕಾದು ನೋಡೋಣ ಎಂದರು.

ಜೆಡಿಎಸ್ ಕೋರ್ ಕಮಿಟಿ ಸಭೆ ಆರಂಭ : ಸಭೆಯಲ್ಲಿ ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಸೇರಿದಂತೆ ಸದಸ್ಯರು ಭಾಗಿಯಾಗಿದ್ದಾರೆ. ಸಿಎಂ ಇಬ್ರಾಹಿಂ ಬಂಡಾಯ ಕುರಿತು ಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಇಬ್ರಾಹಿಂ ವಿರುದ್ದ ಶಿಸ್ತು ಕ್ರಮ ಕುರಿತು ಸದಸ್ಯರ ಜೊತೆ ಸಮಾಲೋಚನೆ ನಡೆಸಲಾಗುತ್ತಿದ್ದು, ಇಬ್ರಾಹಿಂ ವಿರುದ್ದ ಶಿಸ್ತು ಕ್ರಮ ಜರುಗಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ಡಿಕೆಶಿ ವಿರುದ್ಧದ ಸಿಬಿಐ ಎಫ್‌ಐಆರ್ ರದ್ದುಗೊಳಿಸಲು ಹೈಕೋರ್ಟ್ ನಕಾರ, ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.