ETV Bharat / state

ಕಾರ್ಮಿಕರ ಹಕ್ಕು ಮೊಟಕುಗೊಳಿಸುವುದು ಅಷ್ಟು ಸಲೀಸಲ್ಲ: ಇವಕ್ಕಿದೆ ಸಂವಿಧಾನದ ಬೆಂಬಲ

author img

By

Published : May 14, 2020, 7:55 PM IST

ಕಾರ್ಮಿಕ ಹಕ್ಕುಗಳನ್ನು ಮೊಟಕುಗೊಳಿಸುವುದು ಅಥವಾ ಈಗಿರುವ ಕಾರ್ಮಿಕ ಕಾಯ್ದೆಗಳನ್ನು ಬದಲಾವಣೆ ಮಾಡುವುದು ಸುಲಭವೇ? ಈ ಬಗ್ಗೆ ಕಾನೂನು ತಜ್ಞರು ಏನು ಹೇಳುತ್ತಾರೆ.

Is it easy to curtail workers rights?
ಸಂಗ್ರಹ ಚಿತ್ರ

ಬೆಂಗಳೂರು: ಲಾಕ್​ಡೌನ್​ ಬಳಿಕ ಸಂಕಷ್ಟಕ್ಕೆ ಸಿಲುಕಿರುವ ಕೈಗಾರಿಕೆಗಳನ್ನು ಪುನಶ್ಚೇತನಗೊಳಿಸಲು ಹಾಗೂ ಕೈಗಾರಿಕೋದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ರಾಜ್ಯ ಸರ್ಕಾರ ಮುಂದಾಗಿದೆ. ಅದಕ್ಕಾಗಿ ಈಗಿರುವ ಕಾರ್ಮಿಕ ಪರ ಕಾಯ್ದೆಗಳನ್ನು ಬದಲಾವಣೆ ಮಾಡಲು ಅಥವಾ ಮೂರು ವರ್ಷಗಳ ಕಾಲ ಅಮಾನತು ಮಾಡಲು ಮುಂದಾಗಿದೆ ಎಂಬ ಸರ್ಕಾರದ ನಿಲುವಿಗೆ ಭಾರೀ ಟೀಕೆ ವ್ಯಕ್ತವಾಗಿದೆ. ಆದರೆ, ಕಾರ್ಮಿಕ ಹಕ್ಕುಗಳನ್ನು ಮೊಟಕುಗೊಳಿಸುವುದು ಅಥವಾ ಈಗಿರುವ ಕಾರ್ಮಿಕ ಕಾಯ್ದೆಗಳನ್ನು ಬದಲಾವಣೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಏಕೆಂದರೆ, ಬಹುತೇಕ ಎಲ್ಲ ಕಾರ್ಮಿಕ ಕಾಯ್ದೆಗಳು ಸಂವಿಧಾನದ ಮೂಲಭೂತ ಹಕ್ಕುಗಳ ಮೇಲೆ ನಿಂತಿವೆ ಎನ್ನುತ್ತಾರೆ ಕಾನೂನು ತಜ್ಞರು.

Is it easy to curtail workers rights?
ಸಂಗ್ರಹ ಚಿತ್ರ

ಕಾರ್ಮಿಕರಿಗೆ ಸಂಬಂಧಿಸಿದಂತೆ ದೇಶದ ಪ್ರತಿ ರಾಜ್ಯವೂ ತನ್ನದೇ ಆದ ಕಾಯ್ದೆಗಳನ್ನು ಹೊಂದಿದೆ. ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದ್ದರೂ ಈ ಕಾಯ್ದೆಗಳ ಅಂತಿಮ ಗುರಿ ಕಾರ್ಮಿಕರ ಕಲ್ಯಾಣವೇ ಆಗಿದೆ. ಇಂತಹ ಕಾಯ್ದೆಗಳಲ್ಲಿ ಪ್ರಮುಖವಾದದು ಔದ್ಯೋಗಿಕ ವಿವಾದಗಳ ಕಾಯ್ದೆ-1947. ಈ ಕಾಯ್ದೆಯ ಪ್ರಕಾರ ಯಾವುದೇ ಒಬ್ಬ ಕಾರ್ಮಿಕನನ್ನು ಅನುಚಿತ ನಡವಳಿಕೆ ಹೊರತಾಗಿಯೂ ಕೆಲಸದಿಂದ ಏಕಾಏಕಿ ತೆಗೆಯಲು ಸಾಧ್ಯವಿಲ್ಲ. ವಜಾ ಮಾಡುವುದಾದರೆ ಕಾರ್ಮಿಕ ಇಲಾಖೆ ಆಯುಕ್ತರು ಅಥವಾ ಸೂಕ್ತ ಪ್ರಾಧಿಕಾರಕ್ಕೆ ಮಾಹಿತಿ ನೀಡಿಯೇ ಕೆಲಸದಿಂದ ವಜಾಗೊಳಿಸಬೇಕು. ಇದಕ್ಕೂ ಸಾಕಷ್ಟು ಕಾನೂನಾತ್ಮಕ ಪ್ರಕ್ರಿಯೆಗಳನ್ನು ಅನುಸರಿಸಬೇಕು.

ಇನ್ನು ಈ ಕಾಯ್ದೆಯ 5b ಪ್ರಕಾರ ನೂರಕ್ಕಿಂತ ಹೆಚ್ಚು ಕಾರ್ಮಿಕರು ಕೆಲಸ ಮಾಡುವ ಕಾರ್ಖಾನೆಗಳನ್ನು ಮುಚ್ಚುವ ಮುನ್ನ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ. ಸರ್ಕಾರವೀಗ ಈ ನಿಯಮಕ್ಕೆ ತಿದ್ದುಪಡಿತರಲು ಮುಂದಾಗಿದ್ದು ಹೊಸ ನಿಯಮದ ಪ್ರಕಾರ 300ಕ್ಕಿಂತ ಕಡಿಮೆ ಕಾರ್ಮಿಕರಿರುವ ಕಾರ್ಖಾನೆಗಳನ್ನು ಯಾವುದೇ ಮಾಹಿತಿ ನೀಡದೇ ಮುಚ್ಚ ಬಹುದಾಗಿದೆ. ಇದು ಕಾರ್ಮಿಕ ವಲಯದಲ್ಲಿ ಆತಂಕ ಸೃಷ್ಟಿಸಿದೆ.

ವಿದ್ಯುತ್ ಆಧಾರಿತ ಯಂತ್ರಗಳಿದ್ದು, ಹತ್ತು ಜನ ಕಾರ್ಮಿಕರು ಕೆಲಸ ಮಾಡುವ ಉದ್ಯಮವನ್ನು ಕೈಗಾರಿಕೆ ಎಂದು ಗುರುತಿಸಲಾಗುತ್ತದೆ. ಇದೀಗ ರಾಜ್ಯ ಸರ್ಕಾರ ಈ ಮಿತಿಯನ್ನು 50 ಜನ ಕಾರ್ಮಿಕರಿಗೆ ಹೆಚ್ಚಿಸಲು ಮುಂದಾಗಿದೆ. ಇದು ಸಣ್ಣಪುಟ್ಟ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ದೊಡ್ಡ ಆಘಾತವನ್ನೇ ಉಂಟುಮಾಡಿದೆ. ಬದಲಾವಣೆ ಆದಲ್ಲಿ ಸಣ್ಣ ಉದ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಲಭ್ಯವಿರುವ ಯಾವುದೇ ರಕ್ಷಣೆಗಳು, ಅನುಕೂಲಗಳು, ಇಎಸ್ಐ-ಫಿಎಫ್, ಸಂಬಳ, ಸವಲತ್ತುಗಳು ಈಗಿರುವಂತೆ ದೊರೆಯುವುದಿಲ್ಲ. ಅದೇ ರೀತಿ ಕಾರ್ಮಿಕ ಕಾಯ್ದೆಗಳನ್ನು ಮೂರು ವರ್ಷಗಳ ಕಾಲ ಅಮಾನತು ಮಾಡಿದ್ದೆ ಆದರೆ ದುಡಿಮೆಯ ಅವಧಿ ಎಂಟು ಗಂಟೆ ಬದಲು 10 ರಿಂದ 12ಗಂಟೆಗೆ ಹೆಚ್ಚಾಗಬಹುದು.

Is it easy to curtail workers rights?
ಸಂಗ್ರಹ ಚಿತ್ರ

ಕಾರ್ಖಾನೆಗಳ ಅಧಿನಿಯಮ 1948 ರ ಪ್ರಕಾರ ಕಾರ್ಮಿಕರ ಹಿತ ರಕ್ಷಣೆಗೆ ಸಂಬಂಧಿಸಿದಂತೆ ಕಾರ್ಖಾನೆಗಳು ಹತ್ತು ಹಲವು ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಆರೋಗ್ಯ ಸೇವೆಗಳು, ಕ್ಯಾಂಟೀನ್, ಕುಡಿಯುವ ನೀರು, ಶುದ್ಧ ವಾತಾವರಣ, ಶೌಚಾಲಯ‌,‌ ಇತರ ಹಲವು ಅವಶ್ಯಕತೆಗಳನ್ನು ಕಡ್ಡಾಯವಾಗಿ ಪೂರೈಸಿಕೊಡಬೇಕಾಗಿದೆ. ಒಂದು ವೇಳೆ, ಈ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ವಿಫಲವಾದರೆ ಕಾರ್ಖಾನೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಅವಕಾಶವಿದೆ. ಕಾಯ್ದೆ ಅಮಾನತು ಮಾಡಿದರೆ ಕಾರ್ಮಿಕರಿಗಿರಲಿ, ಸರ್ಕಾರ ನೇಮಿಸಿರುವ ಕಾರ್ಖಾನೆಗಳ ಇನ್ಸ್​ಪೆಕ್ಟರ್​ಗಳಿಗೇ ಈ ಕನಿಷ್ಠ ಸೌಲಭ್ಯಗಳನ್ನು ಕೊಡಬೇಕೆಂದು ಕೇಳುವ ಅಧಿಕಾರ ಇರುವುದಿಲ್ಲ. ಹೀಗಾಗಿಯೇ ಕಾರ್ಮಿಕ ಸಂಘಟನೆಗಳು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.

ಕಾರ್ಮಿಕರ ಪರ ಇರುವ ಮತ್ತೊಂದು ಕಾಯ್ದೆ ನಷ್ಟ ಪರಿಹಾರ ಅಧಿನಿಯಮ. ಇದರ ಪ್ರಕಾರ ಕಾರ್ಮಿಕರು ಉದ್ಯೋಗದ ಅವಧಿಯಲ್ಲಿ ಯಾವುದೇ ರೀತಿಯ ದೈಹಿಕ-ಮಾನಸಿಕ ಅಪಘಾತಗಳಿಗೆ ಒಳಗಾದರೆ ಅವರಿಗೆ ಪರಿಹಾರವನ್ನು ಕಡ್ಡಾಯವಾಗಿ ಕೊಡಲೇಬೇಕು. ಇವಲ್ಲದೆ ಕನಿಷ್ಠ ವೇತನ ಕಾಯ್ದೆ, ಕಾರ್ಮಿಕ ಭವಿಷ್ಯ ನಿಧಿ ಕಾಯ್ದೆ, ವಿಮೆ ಪರಿಹಾರ ಕಾಯ್ದೆ ಸೇರಿದಂತೆ ಕೈಗಾರಿಕೆ ಮತ್ತು ಕಾರ್ಮಿಕರಿಗೆ ಸೇರಿದ ಬಹುತೇಕ ಕಾಯ್ದೆಗಳು ದುಡಿಯುವ ವರ್ಗವಾದ ಕಾರ್ಮಿಕರ ಪರವಾಗಿಯೇ ಇವೆ.

Is it easy to curtail workers rights?
ವಿಧಾನಸೌಧ (ಸಂಗ್ರಹ ಚಿತ್ರ)

ಹಾಗೆಂದು ಈ ಕಾಯ್ದೆಗಳನ್ನು ಏಕಾಏಕಿ ಜಾರಿ ಮಾಡಿಲ್ಲ. ಕೈಗಾರಿಕೆಯಲ್ಲಿ ದೊಡ್ಡ ಯಶಸ್ಸು ಸಾಧಿಸಿದ ಮತ್ತು ಕಾರ್ಮಿಕ-ಮಾಲೀಕರ ನಡುವಿನ ಗಲಭೆಗಳಿಗೆ ಸಾಕ್ಷಿಯಾದ ಪಾಶ್ಚಿಮಾತ್ಯ ದೇಶಗಳಲ್ಲಿನ ಬೆಳವಣಿಗೆಗಳನ್ನು ಗಮನಿಸಿದ ನಂತರವೇ ನಮ್ಮ ದೇಶದ ಸ್ಥಿತಿಗತಿಗಳಿಗೆ ಅನುಗುಣವಾಗಿ ರೂಪಿಸಲಾಗಿದೆ. ಮುಖ್ಯವಾಗಿ ಕಾರ್ಮಿಕ ಕಾಯ್ದೆಗಳಿಗೆ ನಮ್ಮ ಸಂವಿಧಾನವೇ ಮೂಲಾಧಾರವಾಗಿದೆ. ಸಂವಿಧಾನದ ಅನುಚ್ಛೇದ 14 ರಿಂದ 18 ರವರೆಗಿನ ವಿಧಿಗಳು ಸಮಾನತೆಯ ಹಕ್ಕುಗಳನ್ನು ಪ್ರತಿಪಾದಿಸುತ್ತದೆ ಮತ್ತು ರಕ್ಷಿಸುತ್ತವೆ. ಅದೇ ರೀತಿ ಅನುಚ್ಛೇದ 23 ಮತ್ತು 24 ಶೋಷಣೆಯ ವಿರುದ್ಧದ ಹಕ್ಕುಗಳನ್ನು ಎತ್ತಿಹಿಡಿಯುತ್ತದೆ. ಇನ್ನು ಸಂವಿಧಾನಾತ್ಮಕ ಹಕ್ಕುಗಳಿಗೆ ಚ್ಯುತಿ ಬಂದಾಗ ಅವುಗಳನ್ನು ರಕ್ಷಿಸಿಕೊಳ್ಳಲು ಅನುಚ್ಛೇದ 32 ರಿಂದ 35 ರವರೆಗೆ ಸಾಂವಿಧಾನಿಕ ಪರಿಹಾರದ ಹಕ್ಕುಗಳನ್ನು ನೀಡಿದೆ.

ಸಂವಿಧಾನದ ರಾಜನೀತಿ ನಿರ್ದೇಶಕ ತತ್ವಗಳು ಸಮಾಜದ ಸರ್ವತೋಮುಖ ಅಭಿವೃದ್ಧಿ ಮಾಡುವಂತೆ ಸರ್ಕಾರಕ್ಕೆ ಸೂಚಿಸುತ್ತವೆ. ಈ ಪ್ರಕಾರ ಸರ್ಕಾರ ಕಾರ್ಮಿಕರಿಗೆ ವಿರುದ್ಧವಾದ ನಿಯಮಗಳನ್ನು ರೂಪಿಸುವಂತಿಲ್ಲ. ಆದರೆ, ಈ ನಿರ್ದೇಶನಗಳು ಸರ್ಕಾರಕ್ಕೆ ಸಂವಿಧಾನ ನೀಡಿರುವ ಜವಾಬ್ದಾರಿಯಾಗಿದ್ದು ಇದನ್ನು ನಿರ್ವಹಿಸಲೇಬೇಕು ಎಂದು ತಾಕೀತು ಮಾಡಲು ನ್ಯಾಯಾಂಗಕ್ಕೆ ಅವಕಾಶ ಇಲ್ಲ. ಹೀಗಾಗಿ ರಾಜ್ಯ ಅಥವಾ ಕೇಂದ್ರ ಸರ್ಕಾರಗಳು ತಮಗೆ ಸೂಕ್ತ ಎಂಬಂತೆ ಕಾಯ್ದೆಗಳಿಗೆ ಬದಲಾವಣೆ ತರಬಹುದಾಗಿದೆ.

Is it easy to curtail workers rights?
ಸಂಗ್ರಹ ಚಿತ್ರ

ಆದರೆ, ಕಾರ್ಮಿಕ ಕಾಯ್ದೆಗಳು ಸಂವಿಧಾನದ ಮೂಲಭೂತ ಹಕ್ಕುಗಳ ಆಧಾರದ ಮೇಲೆಯೇ ರೂಪಿತಗೊಂಡಿವೆ. ಈ ಮೂಲಭೂತ ಹಕ್ಕುಗಳ ರಕ್ಷಕನಾಗಿ ನ್ಯಾಯಾಂಗ ಕೆಲಸ ಮಾಡುತ್ತದೆ. ಈ ನಿಟ್ಟಿನಲ್ಲಿ ನೋಡಿದಾಗ ಕಾರ್ಮಿಕ ಕಾಯ್ದೆಗಳ ಬದಲಾವಣೆ ಅಷ್ಟು ಸುಲಭವಿಲ್ಲ. ಹಾಗಿದ್ದೂ, ಸರ್ಕಾರ ಕಾರ್ಮಿಕ ಕಾಯ್ದೆಗಳಲ್ಲಿ ಬದಲಾವಣೆ ಮಾಡಿದರೆ ಅಥವಾ ಅಮಾನತುಗೊಳಿಸಿದರೆ ದುಡಿಯುವ ವರ್ಗ ನ್ಯಾಯಾಲಯದ ಮೆಟ್ಟಿಲೇರುವುದರಲ್ಲಿ ಯಾವುದೇ ಸಂಶಯವಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.