ETV Bharat / state

ಈ ದೇಶಕ್ಕೆ ಇಂದಿರಾ ಗಾಂಧಿಯವರು ಅಪಾರ ಕೊಡುಗೆ ನೀಡಿದ್ದಾರೆ : ಡಿ ಕೆ ಶಿವಕುಮಾರ್​ ಬಣ್ಣನೆ

author img

By

Published : Oct 30, 2022, 9:20 PM IST

ನೀವೆಲ್ಲರೂ ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಇಂದಿರಾ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಂತೆ ಹೋರಾಟ ಮಾಡಬೇಕು. ಈ ದೇಶಕ್ಕೆ ಇಂದಿರಾ ಗಾಂಧಿಯವರು ಅಪಾರ ಕೊಡುಗೆಯನ್ನು ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಹೇಳಿದ್ದಾರೆ.

indira-gandhi-has-contributed-immensely-to-this-country-says-dk-shivakumar
ಈ ದೇಶಕ್ಕೆ ಇಂದಿರಾಗಾಂಧಿಯವರು ಅಪಾರ ಕೊಡುಗೆಯನ್ನು ನೀಡಿದ್ದಾರೆ : ಡಿಕೆಶಿ

ಬೆಂಗಳೂರು: ಈ ದೇಶಕ್ಕೆ ಇಂದಿರಾಗಾಂಧಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ನಗರದ ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರದ ಕೊಟ್ಟಿಗೆಪಾಳ್ಯದ ಒಕ್ಕಲಿಗರ ಸಂಘದ ಶಾಲೆ ಮೈದಾನದಲ್ಲಿ ನಡೆದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 38ನೇ ಪುಣ್ಯಸ್ಮರಣೆ ನಿಮಿತ್ತ ಇಂದಿರಾ ನಮನ ಹಾಗೂ ಮಹಿಳಾ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.

ಹೆಣ್ಣು ಕುಟುಂಬದ ಕಣ್ಣು. ಮಹಿಳೆ ಮನಸ್ಸು ಮಾಡಿದರೆ ಏನೆಲ್ಲ ಸಾಧನೆ ಮಾಡಬಹುದು ಎಂಬ ಸಂಕಲ್ಪ ಮಾಡಲು ಸೇರಿದ್ದೇವೆ. ನಾನು ಅಧ್ಯಕ್ಷನಾದ ನಂತರ ನನಗೆ ಬಂದ ಅನುಭವ ಏನೆಂದರೆ ರಾಜ್ಯ ಹಾಗೂ ದೇಶದಲ್ಲಿ ಬದಲಾವಣೆ ತರಬೇಕು. ಈ ಬದಲಾವಣೆ ಸಾಧ್ಯವಾಗುವುದು ಈ ದೇಶದ ಮಹಿಳೆಯರಿಂದ ಮತ್ತು ಯುವಕರಿಂದ. ಮಹಿಳೆಯರು ಹಾಗೂ ಯುವ ವರ್ಗಕ್ಕೆ ಜಾತಿ, ಧರ್ಮದ ಬೇಧವಿಲ್ಲ ಎಂದರು.

ಮಹಿಳೆಯರಿಗೆ ಶಕ್ತಿ ತುಂಬಲು ಈ ಕಾರ್ಯಕ್ರಮ: ಮಹಿಳೆಯರಿಗೆ ಶಕ್ತಿ ತುಂಬಲು ಈ ಕಾರ್ಯಕ್ರಮ ಮಾಡಲಾಗುತ್ತಿದೆ. ಈ ಸಂಕಲ್ಪದ ಉದ್ದೇಶ ಈ ಕ್ಷೇತ್ರದಲ್ಲಿ ಬದಲಾವಣೆ ತರುವುದಾಗಿದೆ. ನನ್ನ ಪ್ರಕಾರ ಇಲ್ಲಿರುವ ಎಲ್ಲರೂ ನಾಯಕಿಯರು. ನಾವು ನಮ್ಮ ಪಕ್ಷದಲ್ಲಿ ನಾ ನಾಯಕಿ ಎಂಬ ಕಾರ್ಯಕ್ರಮ ಮಾಡಿದ್ದು, ಒಂದು ಕುಟುಂಬದಲ್ಲಿ ಒಬ್ಬ ತಂದೆ, ಮಗ, ಸಹೋದರ ಯಶಸ್ಸು ಸಾಧಿಸಬೇಕಾದರೆ ಅವರ ಹಿಂದೆ ಮಹಿಳೆ ಬೆಂಬಲವಾಗಿ ಶಕ್ತಿಯಾಗಿ ಇರುತ್ತಾಳೆ. ಇಂದು ಮಹಿಳೆಯರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಇಂದಿರಾ ಗಾಂಧಿಯವರು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ : ಇಂದು ನಾವು ಇಂದಿರಾ ಗಾಂಧಿ ಅವರು ದೇಶಕ್ಕಾಗಿ ಮಾಡಿರುವ ತ್ಯಾಗ ಅವರ ಕಾರ್ಯಕ್ರಮಗಳ ಬಗ್ಗೆ ನೋಡಿದ್ದೇವೆ. ಅವರು ಬ್ಯಾಂಕ್ ರಾಷ್ಟ್ರೀಕರಣ ಮಾಡಿ ದೇಶದ ಆರ್ಥಿಕತೆಗೆ ಉತ್ತೇಜನ ನೀಡಿದರು. ಆ ಮೂಲಕ ಬಡವರಿಗೆ ಬ್ಯಾಂಕ್ ಹಾಗೂ ಸಾಲ ಸೌಲಭ್ಯ ಸಿಗುವಂತಾಗಿದೆ. ಇನ್ನು ಸ್ತ್ರಿಶಕ್ತಿ ಸಂಘಟನೆ ಮಾಡಲಾಗಿದೆ. ಇವೆಲ್ಲವೂ ಕಾಂಗ್ರೆಸ್ ಕಾರ್ಯಕ್ರಮ. ಇನ್ನು ರಾಹುಲ್ ಗಾಂಧಿ ಅವರು ಭಾರತ ಐಕ್ಯತಾ ಯಾತ್ರೆ ಸಂದರ್ಭದಲ್ಲಿ ಮಹಿಳೆಯರ ಜತೆ ಮಾತುಕತೆ ನಡೆಸಿ ಅವರ ನೋವು, ಸಂಕಷ್ಟಗಳನ್ನು ಆಲಿಸಿದರು. ಅಂಗನವಾಡಿ, ಆಶಾ ಕಾರ್ಯಕರ್ತರು, ದೇವದಾಸಿಯರು, ನರೇಗಾ ಕೂಲಿ ಕಾರ್ಮಿಕರು ಸೇರಿದಂತೆ ಹಲವು ಮಹಿಳಾ ಕಾರ್ಮಿಕರ ಜತೆ ಚರ್ಚೆ ಮಾಡಿದ್ದಾರೆ ಎಂದರು.

ಎಲ್ಲಾ ವರ್ಗದ ಜನರಿಗೆ ಕಾಂಗ್ರೆಸ್​​ ನೆರವು ನೀಡಿದೆ : ಇನ್ನು, ಈ ಎಲ್ಲ ವರ್ಗದವರಿಗೆ ಉದ್ಯೋಗ ಸಿಗುವಂತಹ ಕಾರ್ಯಕ್ರಮಗಳನ್ನು ನೀಡಿರುವುದು ಕಾಂಗ್ರೆಸ್ ಪಕ್ಷ. ಆ ಮೂಲಕ ಎಲ್ಲ ವರ್ಗದ ಜನರಿಗೆ ಕಾಂಗ್ರೆಸ್ ನೆರವಾಗಿದೆ. ಈ ಹಸ್ತ ಈ ದೇಶಕ್ಕೆ ಸ್ವಾತಂತ್ರ್ಯ, ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತಂದುಕೊಟ್ಟಿದೆ. ಉಳುವವನಿಗೆ ಭೂಮಿ, ಅವಿದ್ಯಾವಂತರಿಗೆ ಶಿಕ್ಷಣ, ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದೆ. ಆ ಮೂಲಕ ಬಡತನ ನಿರ್ಮೂಲನೆಗೆ ಹಲವು ಕಾರ್ಯಕ್ರಮ ನೀಡಿದೆ ಎಂದು ಹೇಳಿದರು.

ಪ್ರತಿ ಪಕ್ಷದವರು ಇಂದು ಸಾಕಷ್ಟು ಟೀಕೆ ಮಾಡುತ್ತಿದ್ದಾರೆ. ಅವರು ಏನಾದರೂ ಮಾತನಾಡಲಿ. ಆದರೆ ಇತಿಹಾಸವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ದೇಶದಲ್ಲಿ ಸೋನಿಯಾ ಗಾಂಧಿ ಅವರ ಮಾರ್ಗದರ್ಶನದಲ್ಲಿ ಮನಮೋಹನ್ ಸಿಂಗ್ ಅವರ ನೇತೃತ್ವದ ಸರ್ಕಾರ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದಿತ್ತು. ಅದಕ್ಕೆ ಸಿದ್ದರಾಮಯ್ಯನವರು ರಾಜ್ಯದಲ್ಲಿ ಹೆಚ್ಚುವರಿ ಹಣ ಹಾಕಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದರು. ಕಾಂಗ್ರೆಸ್ ಅವಧಿಯಲ್ಲಿ 400 ರೂ. ಇದ್ದ ಅಡುಗೆ ಅನಿಲ ದರ ಇಂದು 1100 ಆಗಿದೆ. ಆಮೂಲಕ ದಿನನಿತ್ಯ ನಿಮ್ಮ ಜೇಬಿಗೆ ಕನ್ನ ಹಾಕಲಾಗುತ್ತಿದೆ. ಆದಾಯ ಹೆಚ್ಚುತ್ತಿಲ್ಲ, ವೆಚ್ಚ ಹೆಚ್ಚುತ್ತಿದೆ. ಇಂದು ನೀವೆಲ್ಲ ನಾನೂ ಕೂಡ ನಾಯಕಿ, ನಾವು ಹೋರಾಟ ಮಾಡಿ ಬದಲಾವಣೆ ತರಲು ಸಾಧ್ಯವಿದೆ. ಮುಂದಿನ ಚುನಾವಣೆಯಲ್ಲಿ ಓರ್ವ ಹೆಣ್ಣುಮಗಳನ್ನು ಈ ಕ್ಷೇತ್ರದಿಂದ ಆರಿಸುತ್ತೇವೆ ಎಂದು ಸಂಕಲ್ಪ ಮಾಡಬೇಕು ಎಂದು ಡಿಕೆಶಿ ಕರೆ ನೀಡಿದರು.

ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ನೀಡಲು ಪ್ರಯತ್ನ: ನೀವೆಲ್ಲರೂ ಮಹಿಳೆಯರ ಜತೆ ನಿಮ್ಮ ಕಷ್ಟ ಸುಖ ಹೇಳಿಕೊಳ್ಳಬಹುದು. ಈ ರಾಜ್ಯದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ನೀಡಲು ಪ್ರಯತ್ನಿಸಲಾಗುತ್ತಿದೆ. ನೀವೆಲ್ಲರೂ ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಇಂದಿರಾ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಂತೆ ಹೋರಾಟ ಮಾಡಬೇಕು. ಆ ನಿಟ್ಟಿನಲ್ಲಿ ನೀವು ಸಂಕಲ್ಪ ಮಾಡಬೇಕು. ರಾಜಕಾರಣದಲ್ಲಿ ಸಾಧ್ಯವಾಗದಿರುವುದು ಏನೂ ಇಲ್ಲ.

ಮಹಿಳೆ ಮನಸ್ಸು ಮಾಡಿದರೆ ಏನುಬೇಕಾದರೂ ಸಾಧಿಸಬಹುದು : ನಾನು 2004ರಲ್ಲಿ ತೇಜಸ್ವಿನಿ ರಮೇಶ್ ಅವರನ್ನು ದೇವೇಗೌಡರ ವಿರುದ್ಧ ಸ್ಪರ್ಧಿಸುವಂತೆ ಮಾಡಿದ್ದೆ. ಎಲ್ಲರೂ ದೇವೇಗೌಡರನ್ನು ಮಣಿಸಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದರು. ಆದರೆ ಮಹಿಳೆಯರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬ ಇತಿಹಾಸ ನಿರ್ಮಾಣವಾಗಿತ್ತು. ಹೀಗಾಗಿ ನೀವು ಕೂಡ ಬದಲಾವಣೆ ತರುತ್ತೀರಿ ಎಂದು ನಿಮ್ಮ ಮೇಲೆ ನನಗೆ ವಿಶ್ವಾಸವಿದೆ ಎಂದರು. ಇನ್ನು, ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸದಸ್ಯ ಡಿ ಕೆ ಸುರೇಶ್, ಮುಖಂಡರಾದ ಕುಸುಮಾ ಎಚ್, ಹನುಮಂತರಾಯಪ್ಪ, ಬೆಟ್ಟಸ್ವಾಮಿಗೌಡ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ :ಈ ಸರ್ಕಾರ ಜೆಸಿಬಿ, ಹಿಟಾಚಿಯಲ್ಲಿ ಹಣ ಬಾಚುತ್ತಿದೆ: ಭ್ರಷ್ಟಾಚಾರದ ವಿರುದ್ಧ ಹೆಚ್ ಡಿ ಕುಮಾರಸ್ವಾಮಿ ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.