ETV Bharat / state

ಅಭಿವೃದ್ದಿ ವಿಚಾರದಲ್ಲಿ ಕಲ್ಯಾಣ ಕರ್ನಾಟಕದ ಬಗ್ಗೆ ತಾರತಮ್ಯ : ಬಸವರಾಜ ಪಾಟೀಲ್ ಇಟಗಿ

author img

By

Published : Mar 23, 2021, 6:17 PM IST

in-the-matter-of-development-hyderbad-karnataka-will-be-discriminated-by-the-govt-basavaraj-itagi
ಬಸವರಾಜ ಪಾಟೀಲ್ ಇಟಗಿ

ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದರು. ಆದರೆ, ಈವರೆಗೂ ರೈತರ ಆದಾಯ ದುಪ್ಪಟ್ಟು ಆಗಿಲ್ಲ.ರಾಜ್ಯ ಸರ್ಕಾರ ಇದಕ್ಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹೀಗಿರುವಾಗ ರೈತರ ಅಭಿವೃದ್ಧಿ ಹೇಗೆ ಆಗುತ್ತದೆ..

ಬೆಂಗಳೂರು : ಅಭಿವೃದ್ದಿ ವಿಚಾರದಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಬಗ್ಗೆ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಮೊದಲಿನಿಂದಲೂ ಇದೇ ಆಗುತ್ತಿದೆ. ಕನಿಷ್ಠ ಮುಂದಿನ ದಿನಗಳಲ್ಲಾದರೂ ಅನುದಾನ ಹೆಚ್ಚಿನ ರೀತಿಯಲ್ಲಿ ನೀಡಬೇಕು ಎಂದು ಕಾಂಗ್ರೆಸ್ ಸದಸ್ಯ ಬಸವರಾಜ ಪಾಟೀಲ್ ಇಟಗಿ ಒತ್ತಾಯಿಸಿದರು.

ವಿಧಾನ ಪರಿಷತ್ ವಿತ್ತೀಯ ಕಲಾಪದಲ್ಲಿ 2021-22ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಮುಂದುವರೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿದ್ದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟಿನ್​ಗಳನ್ನ ಬಿಜೆಪಿ ಸರ್ಕಾರ ಮುಚ್ಚುತ್ತಿದೆ.

ಈಗಾಗಲೇ ಕೆಲ ಕ್ಯಾಂಟೀನ್‌ಗಳು ಮುಚ್ಚಿವೆ. ಕನಿಷ್ಠ ಈಗ ಉಳಿದಿರುವ ಕ್ಯಾಂಟೀನ್​ಗಳನ್ನು ಮುಚ್ಚಬೇಡಿ. ಹಸಿದವರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್ ಮುಚ್ಚುವ ನಿರ್ಧಾರವನ್ನು ಸರ್ಕಾರ ಕೈ ಬಿಡಬೇಕು ಎಂದರು.

ಪರಿಷತ್ ಕಲಾಪದಲ್ಲಿ ಕಾಂಗ್ರೆಸ್‌ ಸದಸ್ಯ ಬಸವರಾಜ ಪಾಟೀಲ್ ಇಟಗಿ

ಮದ್ಯಪಾನ ನಿಷೇಧಕ್ಕೆ ಬೀದರ್​ನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಸರ್ಕಾರದ ಗಮನಕ್ಕೂ ಬಂದಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಮನವಿ ತಲುಪಿದೆ. ಈ‌ ಬಗ್ಗೆ ಸರ್ಕಾರ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

32 ಸಾವಿರ ಕೋಟಿ ರೂ.ಗಳ ಅನುದಾನವನ್ನು ಕೃಷಿಗೆ ಇಡಲಾಗಿದೆ. ಬಜೆಟ್ ಎರಡು ಭಾಗಗಳಾಗಿ ವಿಭಾಗಿಸಬೇಕು. ಸಂಬಳ ಸೇರಿದಂತೆ ಕಮಿಟೆಡ್ ಖರ್ಚುಗಳು ಒಂದು ಭಾಗ, ಅಭಿವೃದ್ಧಿ ಖರ್ಚು ಅಂತಾ ಮತ್ತೊಂದು ಭಾಗ ಮಾಡಬೇಕು ಎಂದು ಸಲಹೆ ನೀಡಿದರು.

ಪರಿಷತ್‌ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಬಸವರಾಜ ಪಾಟೀಲ್ ಇಟಗಿ

ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದರು. ಆದರೆ, ಈವರೆಗೂ ರೈತರ ಆದಾಯ ದುಪ್ಪಟ್ಟು ಆಗಿಲ್ಲ. ರಾಜ್ಯ ಸರ್ಕಾರ ಇದಕ್ಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಹೀಗಿರುವಾಗ ರೈತರ ಅಭಿವೃದ್ಧಿ ಹೇಗೆ ಆಗುತ್ತದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಇಟಗಿ, ಸ್ವಾಮಿನಾಥನ್ ಆಯೋಗದ ವರದಿಯನ್ನು ದೇಶ್ಯಾದ್ಯಂತ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಎಂಎಸ್​ಪಿಯನ್ನ ಕಾನೂನಿನ ಅನ್ವಯ ಜಾರಿಗೆ ತರಬೇಕು. ರೈತರಿಗೆ ಅನುಕೂಲ ಆಗುವ ಯೋಜನೆ ಜಾರಿಗೆ ಬರಬೇಕು. ಮಣ್ಣು ಆರೋಗ್ಯ ಕಾರ್ಡ್ ಕೊಡುತ್ತೇವೆ ಅಂತಾ ಹೇಳುತ್ತಾರೆ. ಆದರೆ, ಈವರೆಗೂ ಕೊಟ್ಟಿಲ್ಲ. ಪ್ರಧಾನಮಂತ್ರಿಗಳ ಕಿಸಾನ್ ಸಮ್ಮಾನ್ ಯೋಜನೆ ಸರಿಯಾಗಿ ರೈತರಿಗೆ ಸಿಗುತ್ತಿಲ್ಲ.

ಒಬ್ಬ ರೈತನಿಗೆ 10 ಸಾವಿರ ಕೊಡುವ ಬದಲು ಒಂದು ಎಕರೆಗೆ 10 ಸಾವಿರ ಕೊಡಿ. ತೆಲಂಗಾಣದಲ್ಲಿ ಪ್ರತಿ ಎಕರೆಗೆ ಹಣ ಕೊಡುತ್ತಾರೆ. ಅದರಂತೆ ನಮ್ಮ ರಾಜ್ಯದಲ್ಲೂ ಪ್ರತಿ ಎಕರೆಗೆ ₹10 ಸಾವಿರ ಕೊಡಿ. ಎಷ್ಟು ಎಕರೆ ಇದೆ ಅಷ್ಟು ಹಣ ಕೊಡಿ ಎಂದು ಒತ್ತಾಯಿಸಿದರು.

ಪರಿಷತ್‌ ಕಲಾಪದಲ್ಲಿ ಕಾಂಗ್ರೆಸ್‌ ಸದಸ್ಯ ಬಸವರಾಜ ಪಾಟೀಲ್ ಇಟಗಿ

ಕಲ್ಯಾಣ ಕರ್ನಾಟಕಕ್ಕೆ ಈ ಬಜೆಟ್​ನಲ್ಲಿ 1500 ಕೋಟಿ ಕೊಡಲಾಗಿದೆ. ಕಳೆದ ಬಾರಿ ಬರೀ ಸಾವಿರ ಕೋಟಿ ಅಷ್ಟೇ ಕೊಟ್ಟಿದ್ದು, ಇದನ್ನು ಹೆಚ್ಚಿಸಬೇಕು. ಈಗ ರಾಯಚೂರು ವಿವಿ ಆರಂಭಿಸಿದ್ದಾರೆ. ಆದರೆ, ಅದಕ್ಕೆ ಹಣ ಇಲ್ಲ. ಸಿಬ್ಬಂದಿಯೂ ಇಲ್ಲ. ಏರೋಡ್ರಂ, ರಾಯಚೂರು ವಿವಿ ಎಲ್ಲದಕ್ಕೂ 372ಜೆ ಯಿಂದ ಅನುದಾನ ತೆಗೆದುಕೊಳ್ಳಿ ಎನ್ನುತ್ತಾರೆ. ಹೀಗಾದರೆ ಹೇಗೆ? ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಓದಿ: ಕುವೆಂಪು ವಿವಿ ಹೆಸರಿಗೆ ಮಸಿ ಬಳಿಯುವ ಯತ್ನ ನಡೆಸಲಾಗುತ್ತಿದೆ: ಕುಲಪತಿ ಪ್ರೊ. ವೀರಭದ್ರಪ್ಪ

ರೈಲ್ವೆ ಕೇಂದ್ರ, ಜವಳಿ ಪಾರ್ಕ್, ಐಐಟಿ ರಾಯಚೂರಿಗೆ ಮಂಜೂರಾಗಿತ್ತು. ಆದರೆ, ಅದು ಸ್ಥಳಾಂತರ ಆಗಿ ಬೇರೆ ಕಡೆ ಅನುಷ್ಠಾನಕ್ಕೆ ತರಲಾಯಿತು. ಈಗ ಏಮ್ಸ್ ಮಂಜೂರಾಗಿದೆ. ಅದೂ ಕೂಡ ಹುಬ್ಬಳ್ಳಿಗೆ ಸ್ಥಳಾಂತರಗೊಳಿಸಲಾಗುತ್ತದೆ ಎನ್ನುವ ಮಾತುಕತೆ ಕೇಳಿ ಬರುತ್ತಿವೆ. ಅತ್ಯಾಧುನಿಕ ಇಎಸ್ಐ ಆಸ್ಪತ್ರೆ ಇದೆ. ಆದರೆ, ಅದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಇದನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.