ETV Bharat / state

ಭೂ ಕಬಳಿಕೆ ಮಟ್ಟ ಹಾಕಲು ಕಠಿಣ ಕಾನೂನು ತರಲು ನಾನು ಸಿದ್ಧನಿದ್ದೇನೆ: ಸಚಿವ ಆರ್.ಅಶೋಕ್

author img

By

Published : Mar 17, 2021, 7:17 PM IST

ಅಕ್ರಮ ಭೂ ಕಬಳಿಕೆಯನ್ನು ತಡೆ ಹಿಡಿದರೆ ಮಾತ್ರ ಆದಾಯ ತರಬಹುದು. ಇಲ್ಲವಾದರೆ ಇದು ಬೆಳೆಯುತ್ತಾ ಹೋಗುತ್ತದೆ. ತಪ್ಪು ಮಾಡಿದ ಅಧಿಕಾರಿಗಳನ್ನು ಬಗ್ಗು ಬಡಿಯಬೇಕು ಎಂದು ಸಚಿವ ಆರ್.ಅಶೋಕ್ ಹೇಳಿದರು.

r ashok
ಸಚಿವ ಆರ್. ಅಶೋಕ್

ಬೆಂಗಳೂರು: ಸರ್ಕಾರಿ ಭೂ ಕಬಳಿಕೆ ಅಕ್ರಮ ಬೃಹದಾಕಾರವಾಗಿ ಬೆಳೆದಿದ್ದು, ಇದನ್ನು ಮಟ್ಟ ಹಾಕಲು ಕಠಿಣ ಕಾನೂನು ತರಬೇಕು. ಅದಕ್ಕೆ ನಾನು ಸಿದ್ಧನಿದ್ದೇನೆ ಎಂದು ಸಚಿವ ಆರ್.ಅಶೋಕ್ ಹೇಳಿದರು.

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಶಾಸಕ ಎ.ಟಿ.ರಾಮಸ್ವಾಮಿ ಅವರು ಸರ್ಕಾರಿ ಭೂ ಕಬಳಿಕೆ ಸಂಬಂಧ ಪ್ರಸ್ತಾಪಿಸಿದ ವಿಚಾರಕ್ಕೆ ಸಚಿವ ಆರ್.​ಅಶೋಕ್​​ ಪ್ರತಿಕ್ರಿಯಿಸಿದರು. ಈ ಅಕ್ರಮ ಭೂ ಕಬಳಿಕೆಯನ್ನು ತಡೆ ಹಿಡಿದರೆ ಮಾತ್ರ ಆದಾಯ ತರಬಹುದು. ಇಲ್ಲವಾದರೆ ಇದು ಬೆಳೆಯುತ್ತಾ ಹೋಗುತ್ತದೆ. ತಪ್ಪು ಮಾಡಿದ ಅಧಿಕಾರಿಗಳನ್ನು ಬಗ್ಗು ಬಡಿಯಬೇಕು. ಹಳೆಯ ಕಾನೂನಿನಲ್ಲಿ ಅದು ಸಾಧ್ಯವಿಲ್ಲ. ಬದಲಾವಣೆ ತರೋಣ. ನೈಸ್ ಅಕ್ರಮಗಳನ್ನೂ ಮಟ್ಟ ಹಾಕೋಣ ಎಂದರು.

ನಾನು ಬಂದ ಬಳಿಕ 8 ಸಬ್ ರಿಜಿಸ್ಟ್ರಾರ್ ಅಮಾನತು ಮಾಡಿದ್ದೇನೆ. ಐದು ತಿಂಗಳಿಂದ ಎಲ್ಲಾ ಬಡಾವಣೆ ನೋಂದಣಿಯನ್ನು ಸ್ಥಗಿತಗೊಳಿಸಿದ್ದೇನೆ ಎಂದು ತಿಳಿಸಿದರು. ನೈಸ್ ಮೇಲೆ ಕ್ರಮ ಕೈಗೊಂಡಿದ್ದಕ್ಕೆ ಕಾನೂನು ಸಚಿವರೇ ಬದಲಾವಣೆ ಆಗಿದ್ದಾರೆ ಎಂದು ಹೆಚ್.ಡಿ.ರೇವಣ್ಣ ಇದೇ ವೇಳೆ ಆರೋಪಿಸಿದರು.

ಸರ್ಕಾರಿ ವಕೀಲರಿಗೆ ಖಾಸಗಿಯವರು ಹಣ ನೀಡುತ್ತಾರೆ: ಭೂ ಅಕ್ರಮ ಪ್ರಕರಣಗಳ ಸಂಬಂಧ ಸರ್ಕಾರದ ವಕೀಲರು ಖಾಸಗಿಯವರ ಜೊತೆ ಶಾಮೀಲಾಗಿದ್ದಾರೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ಆರೋಪಿಸಿದ್ದಾರೆ. ಸರ್ಕಾರಿ ವಕೀಲರಿಗೆ ಖಾಸಗಿಯವರು ಹಣ ನೀಡುತ್ತಾರೆ‌. ಹೀಗಾಗಿ ದೊಡ್ಡ ದೊಡ್ಡ ಪ್ರಕರಣಗಳ ಸಂಬಂಧ ಸರ್ಕಾರಿ ವಕೀಲರು ಕೋರ್ಟ್​ನಲ್ಲಿ ಸುಮ್ಮನೆ ಇರುತ್ತಾರೆ. ಖಾಸಗಿಯವರು ಅವರ ವಕೀಲರಿಗೆ ಬಾಯಿ ಬಿಡಿ ಎಂದು ದುಡ್ಡು ಕೊಡುತ್ತಾರೆ, ಸರ್ಕಾರಿ ವಕೀಲರಿಗೆ ಬಾಯಿ ಮುಚ್ಚಿ ಎಂದು ದುಡ್ಡು ಕೊಡ್ತಾರೆ ಎಂದು ಕಿಡಿಕಾರಿದರು.

ತಪ್ಪು ಮಾಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡರೆ ಕೆಎಟಿಗೆ ಹೋಗಿ ತಡೆಯಾಜ್ಞೆ ತರುತ್ತಾರೆ ಎಂದು ಸಚಿವ ಆರ್.ಅಶೋಕ್ ಅಸಹಾಯಕತೆ ವ್ಯಕ್ತಪಡಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡ, ಕೆಎಟಿಯನ್ನು ತೆಗೆದು ಹಾಕಿ ಎಂದು ಆಗ್ರಹಿಸಿದರು. ಕೆಎಟಿ ಭ್ರಷ್ಟ ಅಧಿಕಾರಿಗಳ ಅಮಾನತಿಗೆ ತಡೆಯಾಜ್ಞೆ ತಂದರೆ ಅದನ್ನೇ ರದ್ದು ಮಾಡಿ. ಅದು ಯಾಕೆ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ: ಪರಿಷತ್​ನಲ್ಲಿ ಕರ್ನಾಟಕ ಪೌರಾಡಳಿತ ಸಭೆಗಳ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ

ಬಿಡಿಎ ಬೆಂಗಳೂರನ್ನು ಹಾಳು ಮಾಡುವ ಅಭಿವೃದ್ಧಿ ಪ್ರಾಧಿಕಾರವಾಗಿದೆ. ಬಿಡಿಎ ಬೇಕಾ?. ಕಾನೂನು ಬಾಹಿರ ಬಡಾವಣೆಗಳಿಗೆ ನಿಯಂತ್ರಣ ಹೇರಲು ಬಿಡಿಎಗೆ ಆಗಲ್ವೇ ಎಂದು ರಾಮಸ್ವಾಮಿ ಕಿಡಿಕಾರಿದರು.

ಕಳ್ಳರೆಲ್ಲರೂ ಇಲ್ಲೇ ಇದ್ದಾರೆ: ನ್ಯಾಯಾಂಗದಲ್ಲಿಯೂ ಅಕ್ರಮ ನಡೆಯುತ್ತದೆ. ಕೇವಲ ವಕೀಲರು ಮಾತ್ರವಲ್ಲ, ನ್ಯಾಯಮುಯರ್ತಿಗಳು ನಿವೃತ್ತಿ ಸಮಯದಲ್ಲಿ ಗಂಟು ಬರುತ್ತದೆ ಎಂದರೆ ತೆಗೆದುಕೊಂಡು ಜಾತ್ರೆ ಮಾಡುತ್ತಾರೆ ಎಂದು ಬಸನಗೌಡ ಪಾಟೀಲ್​​ ಯತ್ನಾಳ್ ಆರೋಪಿಸಿದರು. ನೈಸ್ ಬಗ್ಗೆ ಎಲ್ಲರೂ ಮಾತನಾಡುತ್ತೀರಿ. ಇಲ್ಲಿದ್ದವರು ಎಷ್ಟು ಜನ ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದೀರಿ ಅದನ್ನು ವಾಪಸ್ ನೀಡಿ. ಆ ಮೇಲೆ ಬೇರೆಯವರ ಒತ್ತುವರಿ ತೆರವು ಮಾಡಿ. ಕಳ್ಳರು ಎಲ್ಲಿದ್ದಾರೆ ಅಂತ ಹುಡುಕಿದರೆ ಎಲ್ಲರೂ ಇಲ್ಲೇ ಇದ್ದಾರೆ ಎಂದು ಸೂಚ್ಯವಾಗಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.