ETV Bharat / state

ಬೆಂಗಳೂರಲ್ಲಿ 77ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ಹೈಲೈಟ್ಸ್.. ಎಲ್ಲೆಲ್ಲಿ, ಏನೇನಾಯ್ತು ತಿಳಿಯಿರಿ

author img

By

Published : Aug 15, 2023, 6:08 PM IST

highlights-of-77th-independence-day-celebrations-in-bengaluru
ಬೆಂಗಳೂರಲ್ಲಿ 77ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ಹೈಲೈಟ್ಸ್: ಎಲ್ಲೆಲ್ಲಿ ಏನೇನಾಯ್ತು ತಿಳಿಯಿರಿ

ಬೆಂಗಳೂರಲ್ಲಿ ಇಂದು ವಿವಿಧೆಡೆ ನಡೆದ 77ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಇಂದು ಸಂಭ್ರಮದ 77ನೇ ಸ್ವಾತಂತ್ರ್ಯೋತ್ಸವ ನಡೆಯಿತು. ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯ ಸರ್ಕಾರದಿಂದ ಅದ್ಧೂರಿ ಸ್ವಾತಂತ್ರ್ಯ ದಿನಾಚರಣೆ ನೆರವೇರಿತು. ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ಮಾಡುವ ಮೂಲಕ 77ನೇ ಸ್ವಾತಂತ್ರ್ಯ ದಿನವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ಕೆಲ ಹೈಲೈಟ್ಸ್ ಇಲ್ಲಿದೆ..

ಸಿಎಂ ಅಧಿಕೃತ ನಿವಾಸದಲ್ಲಿ ಧ್ವಜಾರೋಹಣ: ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ಮಾಡುವ ಮೂಲಕ ಸ್ವಾತಂತ್ರೋತ್ಸವವನ್ನು ಆಚರಿಸಿದರು. ಈ ವೇಳೆ ಅಧಿಕಾರಿಗಳು ಭಾಗವಹಿಸಿದ್ದರು. ಬಳಿಕ ಮಾಣಿಕ್ ಷಾ ಪರೇಡ್ ಮೈದಾನಕ್ಕೆ ತೆರಳಿ 77 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿದರು.

ಸಾಹಸ ಮತ್ತು ಸಾಂಸ್ಕೃತಿಕ ಮೆರಗು: ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕವಾಯತು, ಸಾಹಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಯಿತು. ಬೆಂಗಳೂರು ದಕ್ಷಿಣ ವಲಯದ ಜೆ ಪಿ ನಗರದ ಕರ್ನಾಟಕ ಪಬ್ಲಿಕ್ ಶಾಲೆಯ 750 ಮಕ್ಕಳು 'ವೀರ ನಮನ' ನೃತ್ಯ ಪ್ರದರ್ಶಿಸಿದರು. ಬೆಂಗಳೂರು ಉತ್ತರ ವಲಯದ ಹಾರೋಹಳ್ಳಿಯ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ 700 ಮಕ್ಕಳಿಂದ 'ವೀರ ಭೂಮಿ ವಿಧುರಾಶ್ವತ್ಥ ಧ್ವಜ ಸತ್ಯಾಗ್ರಹ' ಹಾಗೂ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ 50 ಮಕ್ಕಳಿಂದ 'ರೋಪ್ ಸ್ಕಿಪಿಂಗ್' ಪ್ರದರ್ಶಿಸಿದರು. ಎಂಇಜಿ ಸೆಂಟರ್ ತಂಡದವರು 'ಕಲಾರಿಪಯಟ್ಟು', ಎಎಸ್​ಸಿ ತಂಡದವರಿಂದ 'ಟೆಂಟ್ ಪೆಗ್ಗಿಂಗ್' ಹಾಗೂ ಎಎಸ್​ಸಿ ತಂಡದವರು ಮೈ ನವಿರೇಳಿಸುವ 'ಮೊಟಾರ್ ಸೈಕಲ್' ಸಾಹಸ ಪ್ರದರ್ಶನ ಮಾಡಿದರು.

ಹುಬ್ಬೇರಿಸಿದ ಡಿಕೆಶಿ ಉಪಸ್ಥಿತಿ: ಮಾಣಿಕ್ ಷಾ ಪರೇಡ್ ಗ್ರೌಂಡ್​ನಲ್ಲಿ ನಡೆದ ರಾಜ್ಯ ಸರ್ಕಾರದ ಅಧಿಕೃತ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಡಿಸಿಎಂ ಡಿ. ಕೆ. ಶಿವಕುಮಾರ್ ಪಾಲ್ಗೊಳ್ಳುವ ಮೂಲಕ ಹುಬ್ಬೇರಿಸುವಂತೆ ಮಾಡಿದರು. ಅಧಿಕೃತ ಕಾರ್ಯಕ್ರಮದಲ್ಲಿ ಸಿಎಂ ಜೊತೆ ವೇದಿಕೆ ಹಂಚಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದರು. ವಿಜೇತರಾದವರಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬಹುಮಾನ ವಿತರಿಸಿದರು.

ಸಾಮಾನ್ಯವಾಗಿ ಸಿಎಂ ಮಾತ್ರ ವೇದಿಕೆಯಲ್ಲಿದ್ದು ಪ್ರಶಸ್ತಿ ಪ್ರದಾನ ಮಾಡುತ್ತಾರೆ. ಸಚಿವರ ಕಾರ್ಯಕ್ರಮಕ್ಕೆ ಆಗಮಿಸಿದರೂ ಸಭಿಕರ ಗ್ಯಾಲರಿಯಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಣೆ ಮಾಡುತ್ತಾರೆ. ಸಿಎಂ ಜೊತೆ ವೇದಿಕೆ ಏರುವುದಿಲ್ಲ. ಆದರೆ ಈ ಬಾರಿ ಡಿಸಿಎಂ ಡಿ ಕೆ ಶಿವಕುಮಾರ್ ಸಿಎಂ ಜೊತೆ ವೇದಿಕೆ ಹಂಚಿಕೊಳ್ಳುವುದರ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Highlights of 77th Independence Day celebrations in bengaluru
ಜನಾರ್ಧನ ಹೋಟೆಲ್​ನಲ್ಲಿ ಉಪಹಾರ ಸೇವಿಸಿದ ಸಿಎಂ, ಡಿಸಿಎಂ

ಜನಾರ್ಧನ ಹೋಟೆಲ್​ನಲ್ಲಿ ಉಪಹಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜನಾರ್ಧನ ಹೋಟೆಲ್​ನಲ್ಲಿ ಒಟ್ಟಾಗಿ ಉಪಹಾರ ಸೇವಿಸಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 226ನೇ ಜಯಂತ್ಯುತ್ಸವದ ಅಂಗವಾಗಿ ಬೆಂಗಳೂರು ಮೆಜೆಸ್ಟಿಕ್​ನ ದೇವರಾಜ ಅರಸು ವೃತ್ತದಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಕಾರ್ಯಕ್ರಮ ನೆರವೇರಿಸಿದ ಬಳಿಕ ಸಿಎಂ ಮತ್ತು ಡಿಸಿಎಂ ಶಿವಾನಂದ ವೃತ್ತದ ಬಳಿಯ ಜನಾರ್ಧನ ಹೋಟೆಲ್​ನಲ್ಲಿ ಉಪ್ಪಿಟ್ಟು ಸವಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಟ ಸಾಧು ಕೋಕಿಲ ಅವರೊಂದಿಗೆ ಉಪಸ್ಥಿತರಿದ್ದರು.

ಪಂಚ ಗ್ಯಾರಂಟಿಗಳ ಕಿರುಹೊತ್ತಿಗೆ ಬಿಡುಗಡೆ: ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ತಮ್ಮ ಭಾಷಣದ ಪುಸ್ತಕದ ಜೊತೆಗೆ ಸರ್ಕಾರದ ಅಭಿವೃದ್ಧಿ ಕೆಲಸಗಳ ಕುರಿತ ಕಿರುಹೊತ್ತಿಗೆ ಬಿಡುಗಡೆ ಮಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಿದ್ಧಪಡಿಸಿರುವ ಕಿರುಹೊತ್ತಿಗೆ ಬಿಡುಗಡೆ ಮಾಡಿದರು. ಕಿರುಹೊತ್ತಿಗೆಯಲ್ಲಿ ಸಿಎಂ ಹಾಗೂ ಡಿಸಿಎಂ ಅವರ ಸಂದೇಶ ಹೊಂದಿದ್ದು, ಪ್ರಗತಿಪರ ಅಭಿವೃದ್ಧಿಗಾಗಿ ನುಡಿದಂತೆ ನಡೆದಿದ್ದೇವೆ ಎಂದು ವ್ಯಾಖ್ಯಾನಿಸಲಾಗಿದೆ. ಕಿರುಹೊತ್ತಿಗೆಯಲ್ಲಿ ಗ್ಯಾರಂಟಿಗಳ ಅನುಷ್ಠಾನ ಹಾಗೂ ಜಾರಿಯಾಗಿರುವ ಗ್ಯಾರಂಟಿಗಳ ಮಾಹಿತಿ ನೀಡಲಾಗಿದೆ. ಕಿರುಹೊತ್ತಿಗೆಯಲ್ಲಿ ಐದು ಗ್ಯಾರಂಟಿಗಳ ಮಾಹಿತಿ ಜೊತೆಗೆ ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ಬಗ್ಗೆ ಮಾಹಿತಿ ನೀಡಲಾಗಿದೆ.

ವಿಧಾನಸೌಧದಲ್ಲಿ ಧ್ವಜಾರೋಹಣ: ವಿಧಾನಸೌಧ ಪೂರ್ವ ಭಾಗದ ಭವ್ಯ ಮೆಟ್ಟಿಲುಗಳ (ಗ್ರಾಂಡ್ ಸ್ಟೆಪ್) ಮುಂಭಾಗದಲ್ಲಿ ಸಭಾಪತಿ ಬಸವರಾಜ್ ಹೊರಟ್ಟಿ 77ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು. ಇದೇ ವೇಳೆ ಮಾತನಾಡಿದ ಅವರು, ಭಾರತಕ್ಕೆ ಸ್ವಾತಂತ್ರ್ಯ ಸುಮ್ಮನೆ ಬಂದಿಲ್ಲ, ಲಕ್ಷಾಂತರ ಭಾರತೀಯರ ಅಮೂಲ್ಯ ಜೀವ ಬಲಿದಾನದ ಫಲವಾಗಿದೆ. ಸ್ವಾತಂತ್ರ್ಯ ಯೋಧರ ಆತ್ಮಕ್ಕೆ ಶಾಂತಿ ಕೋರುವುದರ ಜೊತೆಗೆ ಅವರ ಕುಟುಂಬಕ್ಕೆ ನಾವು ಸದಾ ಚಿರಋಣಿಯಾಗಿ ಇರಬೇಕು. ಸ್ವಾತಂತ್ರ್ಯ ಎನ್ನುವುದು ಬಹುದೊಡ್ಡ ಆಸ್ತಿ. ಅದು ಒಮ್ಮೆ ಕಳೆಯಿತೆಂದರೆ ಮರಳಿ ಪಡೆಯಲು ಅದರ ಹತ್ತರಷ್ಟು ಬೆಲೆ ಕಟ್ಟಬೇಕಾಗುತ್ತದೆ. ಅದರ ಮೌಲ್ಯ ಅರಿತು ಹಿರಿಯರು ತಂದುಕೊಟ್ಟ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು ದೇಶಾಭಿಮಾನವನ್ನು ಹೆಚ್ಚಿಸಿಕೊಂಡು ಭವ್ಯ ಭಾರತ ಕಟ್ಟುವತ್ತ ಸಂಕಲ್ಪ ಮಾಡೋಣ ಎಂದು ಹೊರಟ್ಟಿ ಕರೆ ನೀಡಿದರು.

ಇದನ್ನೂ ಓದಿ: Vidhana Soudha: ವಿಧಾನಸೌಧ ಜಗಮಗ: ವೀಕ್ಷಿಸಲು ಬರುವ ಸಾರ್ವಜನಿಕರಿಗೆ ಸಂಚಾರಿ ಪೊಲೀಸರ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.