ETV Bharat / state

ಧಾರವಾಡ ಮಾನಸಿಕ ಆರೋಗ್ಯ ಸಂಸ್ಥೆಗೆ ಸೌಲಭ್ಯ ನೀಡದ್ದಕ್ಕೆ ಹೈಕೋರ್ಟ್ ಅಸಮಾಧಾನ

author img

By

Published : Oct 5, 2021, 7:29 PM IST

ಧಾರವಾಡ ಮಾನಸಿಕ ಆರೋಗ್ಯ ಸಂಸ್ಥೆಗೆ ಸೌಲಭ್ಯ ನೀಡದ್ದಕ್ಕೆ ಹೈಕೋರ್ಟ್ ಅಸಮಾಧಾನ
ಧಾರವಾಡ ಮಾನಸಿಕ ಆರೋಗ್ಯ ಸಂಸ್ಥೆಗೆ ಸೌಲಭ್ಯ ನೀಡದ್ದಕ್ಕೆ ಹೈಕೋರ್ಟ್ ಅಸಮಾಧಾನ

ನ್ಯಾಯಾಲಯದ ಆದೇಶದ ಹೊರತಾಗಿಯೂ ಇಲ್ಲಿತನಕ ಎಂಆರ್‌ಐ ಯಂತ್ರ ಒದಗಿಸದ ಮತ್ತು ವೈದ್ಯಕೀಯ ಅಧೀಕ್ಷಕರನ್ನು ನೇಮಕ ಮಾಡದಿರುವುದು ದುರಾದೃಷ್ಟಕರ. ಹಾಗಾಗಿ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರನ್ನು ಖುದ್ದು ವಿಚಾರಣೆಗೆ ಹಾಜರಾಗಲು ನಿರ್ದೇಶನ ನೀಡುವುದು ಬಿಟ್ಟರೆ ನ್ಯಾಯಾಲಯಕ್ಕೆ ಬೇರೆ ಮಾರ್ಗವಿಲ್ಲ ಎಂದು ಹೈಕೋರ್ಟ್​ ಪೀಠ ಅಭಿಪ್ರಾಯಪಟ್ಟಿದೆ.

ಬೆಂಗಳೂರು: ಉತ್ತರ ಕರ್ನಾಟಕ ಭಾಗದ ಜನರ ಪಾಲಿಗೆ ಪ್ರಮುಖ ಆರೋಗ್ಯ ಸಂಸ್ಥೆಯಾಗಿರುವ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ' (ಡಿಮ್ಹಾನ್ಸ್)ಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತು ವಿವರಣೆ ನೀಡಲು ನ.8ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ.

ಈ ವಿಚಾರವಾಗಿ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ ಚಂದ್ರ ಶರ್ಮಾ ಹಾಗೂ ನ್ಯಾ. ಸಚಿನ್ ಶಂಕರ್ ಮಗದಮ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ, ಡಿಮ್ಹಾನ್ಸ್ ಸಂಸ್ಥೆಗೆ ತಕ್ಷಣ ಎಂಆರ್‌ಐ ಸ್ಕಾನಿಂಗ್ ಯಂತ್ರ ಖರೀದಿಸಬೇಕು. ಸಂಸ್ಥೆಗೆ ಖಾಯಂ ವೈದ್ಯಕೀಯ ಅಧೀಕ್ಷಕ ರನ್ನು ಮೂರು ತಿಂಗಳಲ್ಲಿ ನೇಮಕ ಮಾಡಬೇಕು ಎಂದು 2020ರ ಮಾ.5ರಂದು ನ್ಯಾಯಾಲಯ ಆದೇಶಿಸಿತ್ತು. ಆದರೆ, ಇಲ್ಲಿತನಕ ಎಂಆರ್‌ಐ ಖರೀದಿಸಿಲ್ಲ. ವೈದ್ಯಕೀಯ ಅಧೀಕ್ಷಕರನ್ನು ನೇಮಕ ಮಾಡಲಾಗಿಲ್ಲ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

ನ್ಯಾಯಾಲಯದ ಆದೇಶದ ಹೊರತಾಗಿಯೂ ಇಲ್ಲಿತನಕ ಎಂಆರ್‌ಐ ಮಷಿನ್ ಒದಗಿಸದ ಮತ್ತು ವೈದ್ಯಕೀಯ ಅಧೀಕ್ಷಕರನ್ನು ನೇಮಕ ಮಾಡದಿರುವುದು ದುರಾದೃಷ್ಟಕರ. ಹಾಗಾಗಿ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರನ್ನು ಖುದ್ದು ವಿಚಾರಣೆಗೆ ಹಾಜರಾಗಲು ನಿರ್ದೇಶನ ನೀಡುವುದು ಬಿಟ್ಟರೆ ನ್ಯಾಯಾಲಯಕ್ಕೆ ಬೇರೆ ಮಾರ್ಗವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು. ಅಲ್ಲದೇ, ಈ ಬಗ್ಗೆ ವಿವರಣೆ ನೀಡಲು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಖುದ್ದು ವಿಚಾರಣೆಗೆ ಹಾಜರಾಗಬೇಕು ನಿರ್ದೇಶನ ನೀಡಿದ ಪೀಠ ವಿಚಾರಣೆಯನ್ನು ಮುಂದೂಡಿತು.

ಇದಕ್ಕೂ ಮೊದಲು ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಸಂಸ್ಥೆಯ ಹಗಲು ಆರೈಕೆ (ಡೇ ಕೇರ್) ಕೇಂದ್ರಕ್ಕೆ ಸಿಬ್ಬಂದಿ ಒದಗಿಸಲಾಗಿದೆ. ಬಣ್ಣ ಹಚ್ಚುವ ಕೆಲಸ ಆಗಿದೆ. ಜೊತೆಗೆ ಕೆಲವೊಂದು ಮೂಲಕಸೌಕರ್ಯಗಳನ್ನು ಒದಗಿಸುವ ಕೆಲಸವೂ ಆಗಿದೆ. ಹಣಕಾಸಿನ ಕೊರತೆಯಿಂದಾಗಿ ಎಂಆರ್‌ಐ ಯಂತ್ರ ಖರೀದಿ ಸಾಧ್ಯವಾಗಿಲ್ಲ. ಇದಕ್ಕಾಗಿ ಮೂರು ತಿಂಗಳು ಕಾಲಾವಕಾಶ ಬೇಕು ಎಂದು ಕೋರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.