ETV Bharat / state

ತಾಯಿಯ ಜೀವನ ನಿರ್ವಹಣೆಗೆ ವೆಚ್ಚ ನೀಡುವಂತೆ ಡಿಸಿ ಆದೇಶ ಪ್ರಶ್ನಿಸಿ ಅರ್ಜಿ: ಇಬ್ಬರು ಪುತ್ರರಿಗೆ 5 ಸಾವಿರ ರೂ. ದಂಡ

author img

By

Published : Jul 14, 2023, 10:56 PM IST

high-court-rejected-petition-challenge-of-maintenance-expenses-of-the-mother-by-sons
ತಾಯಿಯ ಜೀವನ ನಿರ್ವಹಣೆಗೆ ವೆಚ್ಚ ನೀಡುವಂತೆ ಡಿಸಿ ಆದೇಶ ಪ್ರಶ್ನಿಸಿ ಅರ್ಜಿ: ಇಬ್ಬರು ಪುತ್ರರಿಗೆ 5 ಸಾವಿರ ದಂಡ

ತಾಯಿಯ ಜೀವನ ನಿರ್ವಹಣೆಗೆ ಮಾಸಿಕ 10 ಸಾವಿರ ರೂ.ಗಳನ್ನು ಪಾವತಿಸಲು ಮೈಸೂರು ಜಿಲ್ಲಾಧಿಕಾರಿ ನೀಡಿದ್ದ ಆದೇಶ ಪ್ರಶ್ನಿಸಿ ಪುತ್ರರಿಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಬೆಂಗಳೂರು: ವಯಸ್ಸಾಗಿದ್ದ ತಾಯಿಯ ಜೀವನ ನಿರ್ವಹಣೆಗೆ ಮಾಸಿಕ 10 ಸಾವಿರ ರೂ.ಗಳನ್ನು ಪಾವತಿಸಲು ಮೈಸೂರು ಜಿಲ್ಲಾಧಿಕಾರಿ ನೀಡಿದ್ದ ಆದೇಶ ಪ್ರಶ್ನಿಸಿದ್ದ ಪುತ್ರರಿಬ್ಬರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿರುವ ಹೈಕೋರ್ಟ್, ಅರ್ಜಿದಾರರಿಗೆ 5 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಜಿಲ್ಲಾಧಿಕಾರಿಯ ಆದೇಶ ಪ್ರಶ್ನಿಸಿ ಮೈಸೂರಿನ ಎನ್.ಆರ್. ಮೊಹಲ್ಲಾ ಪ್ರದೇಶದ ನಿವಾಸಿ ಗೋಪಾಲ್ ಮತ್ತು ಮಹೇಶ್ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಅಲ್ಲದೆ, ಈ ದಂಡದ ಮೊತ್ತವನ್ನು ಅರ್ಜಿದಾರರಿಬ್ಬರೂ ಒಟ್ಟಾಗಿ ತಮ್ಮ ವೃದ್ಧ ತಾಯಿಗೆ ಒಂದು ತಿಂಗಳೊಳಗೆ ಪಾವತಿಸಬೇಕು. ತಪ್ಪಿದರೆ, ಹಣ ಪಾವತಿಸುವ ವರೆಗೂ ಪ್ರತಿದಿನ 100 ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ ಎಂದು ಪೀಠ ತಿಳಿಸಿದೆ.

ಹೆಚ್ಚಿನ ಪ್ರಮಾಣದ ಜೀವನಾಂಶ ಕೋರಲಾಗಿದೆ ಎಂಬ ಅರ್ಜಿದಾರರ ವಾದ ತಿರಸ್ಕರಿಸಿರುವ ನ್ಯಾಯಪೀಠ, ರೊಟ್ಟಿಗಿಂತ ರಕ್ತ ದುಬಾರಿಯಾಗಿರುವ ಕಾಲದಲ್ಲಿ ನಾವು ಜೀವಿಸುತ್ತಿದ್ದೇವೆ. ಹಣವು ಖರೀದಿಯ ಶಕ್ತಿಯನ್ನು ಕಳೆದುಕೊಂಡಿದೆ. ದಿನ ದಿನಕ್ಕೆ ಬೆಲೆಗಳು ಏರುತ್ತಿವೆ. ಹೀಗಿರುವಾಗ ಹತ್ತು ಸಾವಿರ ಹಣವನ್ನು ಹೆಚ್ಚು ಎಂಬುದಾಗಿ ಹೇಳಲಾಗದು. ದೇಹ ಮತ್ತು ಆತ್ಮವನ್ನು ಹಿಡಿದಿಡಲು ಅಗತ್ಯಕ್ಕಿಂತ ಹೆಚ್ಚು ಹಣ ಬೇಕಾಗುತ್ತದೆ. ಆದರೆ, ಜೀವನಾಂಶವನ್ನು ಹೆಚ್ಚಳ ಮಾಡುವ ಬಗ್ಗೆ ತಾಯಿಯಿಂದ ಯಾವುದೇ ಮನವಿ ಇಲ್ಲ. ಇದರಿಂದ ಜೀನವಾಂಶ ಹೆಚ್ಚಿಸುವ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳುತ್ತಿಲ್ಲ ಎಂದು ತಿಳಿಸಿದ ಹೈಕೋರ್ಟ್, ಅರ್ಜಿ ವಜಾಗೊಳಿಸಿದೆ.

ಜತೆಗೆ, ಹೆಣ್ಣುಮಕ್ಕಳ ಕುಮ್ಮಕ್ಕಿನಿಂದ ತಾಯಿ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ ಎಂಬ ವಾದದ ಕುರಿತ ಯಾವುದೇ ಸಾಕ್ಷ್ಯ ಒದಗಿಸಿಲ್ಲ. ಕುಟುಂಬದ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಯಾವುದೇ ಭಾಗ ಕೋರಿಲ್ಲ. ಗಂಡು ಮಕ್ಕಳು ತ್ಯಜಿಸಿರುವ ತಾಯಿಯನ್ನು ಹೆಣ್ಣು ಮಕ್ಕಳು ನೋಡಿಕೊಂಡಿದ್ದಾರೆ. ಇಲ್ಲದಿದ್ದರೆ ತಾಯಿ ರಸ್ತೆಯ ಮೇಲಿರಬೇಕಿತ್ತು ಎಂದು ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು?: ಪ್ರಕರಣದಲ್ಲಿ ವೃದ್ಧೆ ತಾಯಿ ವೆಂಕಟಮ್ಮ (84) ಅವರ ಜೀವನ ನಿರ್ವಹಣೆಗಾಗಿ ತಲಾ ಐದು ಸಾವಿರ ರೂ. ಜೀವನಾಂಶ ನೀಡುವಂತೆ ಆಕೆಯ ಪುತ್ರರಾದ ಅರ್ಜಿದಾರರಿಗೆ ಮೈಸೂರಿನ ಉಪ ವಿಭಾಗಾಧಿಕಾರಿಯು ಪಾಲಕರ ಪೋಷಣೆ, ಸಂರಕ್ಷಣೆ ಮತ್ತು ಹಿರಿಯ ನಾಗರಿಕ ರಕ್ಷಣಾ ಕಾಯ್ದೆಯಡಿ ಆದೇಶಿಸಿದ್ದರು. ಈ ಆದೇಶ ಪ್ರಶ್ನಿಸಿ ಅರ್ಜಿದಾರರು ಜಿಲ್ಲಾಧಿಕಾರಿ ಮುಂದೆ ಮೇಲ್ಮನವಿ ಸಲ್ಲಿಸಿದ್ದರು.

ಮೇಲ್ಮನವಿ ವಜಾಗೊಳಿಸಿದ್ದ ಜಿಲ್ಲಾಧಿಕಾರಿ, ಜೀವನ ಸಂಧ್ಯಾಕಾಲದಲ್ಲಿರುವ ತಾಯಿಗೆ ಪ್ರತಿ ತಿಂಗಳು ತಲಾ 10 ಸಾವಿರ ರೂ. ಜೀವನಾಂಶ ನೀಡುವಂತೆ ನಿರ್ದೇಶಿಸಿದ್ದರು. ಈ ಎರಡೂ ಆದೇಶಗಳನ್ನು ರದ್ದುಪಡಿಸುವಂತೆ ಕೋರಿ ವೆಂಕಟಮ್ಮ ಅವರ ಪುತ್ರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ಸಹ ಅರ್ಜಿ ವಜಾಗೊಳಿಸಿ, ಜಿಲ್ಲಾಧಿಕಾರಿಯ ಆದೇಶವನ್ನು ಪುರಸ್ಕರಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಉಪ ವಿಭಾಗಾಧಿಕಾರಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದವರ ವಿರುದ್ಧವೇ ಜಿಲ್ಲಾಧಿಕಾರಿ ತೀರ್ಪು ನೀಡಿದ್ದು, ಐದು ಸಾವಿರ ರೂ. ಜೀವನಾಂಶ ಮೊತ್ತವನ್ನು 10 ಸಾವಿರ ರೂಗೆ ಹೆಚ್ಚಿಸಿದ್ದಾರೆ. ಅಷ್ಟು ಹಣ ಪಾವತಿಸುವಷ್ಟು ಆದಾಯ ಅರ್ಜಿದಾರರಿಗಿಲ್ಲ. ಸದ್ಯ ಅರ್ಜಿದಾರರ ಸಹೋದರಿಯರ ಮನೆಯಲ್ಲಿರುವ ತಾಯಿ ಅಲ್ಲಿಂದ ಹೊರಬಂದರೆ ಆಕೆಯನ್ನು ನೋಡಿಕೊಳ್ಳಲು ಸಿದ್ಧರಿದ್ದಾರೆ. ಹೆಣ್ಣು ಮಕ್ಕಳ ಕುಮ್ಮಕ್ಕಿನಿಂದಲೇ ತಾಯಿ ಜೀವನಾಂಶ ಕೇಳುತ್ತಿದ್ದಾರೆ. ಈ ಎಲ್ಲ ವಿಚಾರಗಳನ್ನು ವಿವರಿಸಿದ್ದರೂ ಜೀವನಾಂಶ ಪಾವತಿಸುವಂತೆ ಎಸಿ ಹಾಗೂ ಡಿಸಿ ಆದೇಶಿಸಿದ್ದು, ಆ ಆದೇಶಗಳನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದ್ದರು.

ಇದನ್ನೂ ಓದಿ: ಇಡಿಯಿಂದ ರಾಹುಲ್ ವಿಚಾರಣೆ ಖಂಡಿಸಿ ಪ್ರತಿಭಟನೆ: ಡಿಕೆಶಿ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.