ETV Bharat / state

ಜೀತದಾಳು ಪುನರ್ವಸತಿ ಯೋಜನೆಯ ಎರಡು ಷರತ್ತು ರದ್ದು ಕೋರಿ ಅರ್ಜಿ: ಮಾನವ ಹಕ್ಕುಗಳ ಆಯೋಗಕ್ಕೆ ತುರ್ತು ನೋಟಿಸ್​

author img

By ETV Bharat Karnataka Team

Published : Dec 11, 2023, 6:50 PM IST

high-court-notice-to-national-human-rights-commission
ಜೀತದಾಳು ಪುನರ್ವಸತಿ ಯೋಜನೆಯ ಎರಡು ಷರತ್ತು ರದ್ದು ಕೋರಿ ಅರ್ಜಿ : ಮಾನವ ಹಕ್ಕುಗಳ ಆಯೋಗಕ್ಕೆ ತುರ್ತು ನೋಟಿಸ್​

High court notice to NHRC: ಜೀತದಾಳು ಪುನರ್ವಸತಿ ಯೋಜನೆಯ ಕೆಲ ಷರತ್ತು ರದ್ದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ತುರ್ತು ನೋಟಿಸ್​ ಜಾರಿಗೊಳಿಸಿದೆ.

ಬೆಂಗಳೂರು: ಕೇಂದ್ರ ಸರ್ಕಾರದ ಜೀತದಾಳು ಪುನರ್ವಸತಿ ಯೋಜನೆಯ ಎರಡು ಷರತ್ತುಗಳನ್ನು ರದ್ದುಪಡಿಸಬೇಕು, ಜೀತದಾಳುಗಳನ್ನು ಗುರುತಿಸಿ ಪುನರ್ವಸತಿ ಕಲ್ಪಿಸುವುದು ಮತ್ತು ಜೀತಕ್ಕೆ ದುಡಿಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದಿಷ್ಟ ಮಾರ್ಗಸೂಚಿಗಳನ್ನು ವಜಾಗೊಳಿಸಬೇಕು ಹಾಗೂ ಜೀತ ಪದ್ಧತಿ (ನಿರ್ಮೂಲನೆ) ಕಾಯ್ದೆ-1976ನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಹೈಕೋರ್ಟ್ ತುರ್ತು ನೋಟಿಸ್ ಜಾರಿ ಮಾಡಿದೆ.

'ಜೀತ ವಿಮುಕ್ತಿ ಕರ್ನಾಟಕ' ಇದರ ಸಂಯೋಜಕ ಡಾ. ಕಿರಣ ಕಮಲ ಪ್ರಸಾದ್ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಲೆ ಹಾಗೂ ನ್ಯಾಯಮೂರ್ತಿ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ, ತುರ್ತು ನೋಟಿಸ್ ಜಾರಿ ಮಾಡಿತು.

ಈ ಹಿಂದೆ ಅರ್ಜಿ ವಿಚಾರಣೆ ನಡೆಸಿದ್ದ ಪೀಠ, ಅರ್ಜಿಯಲ್ಲಿ ಮನವಿ ಮಾಡಲಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಸರ್ಕಾರ ಸೇರಿದಂತೆ ವಿವಿಧ ಸಕ್ಷಮ ಪ್ರಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಗಳನ್ನು ಅರ್ಜಿಯೊಂದಿಗೆ ಅಡಕ ಮಾಡಬೇಕು ಎಂದು ಸೂಚಿಸಿತು. ಅಲ್ಲದೇ ಅರ್ಜಿ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪ್ರಧಾನ ನಿರ್ದೇಶಕರು ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ನೋಟಿಸ್ ಜಾರಿಗೆ ಆದೇಶಿಸಿತು. ಆದರೆ, ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ನೋಟಿಸ್ ತಲುಪದ ಹಿನ್ನೆಲೆಯಲ್ಲಿ ಮತ್ತೊಂದು ಬಾರಿ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.

ಅರ್ಜಿಯಲ್ಲಿ ಏನಿದೆ?: ಜೀತ ಪದ್ಧತಿಯಿಂದ ಬಿಡುಗಡೆ ಹೊಂದಿದವರಿಗೆ ಕೇಂದ್ರ ಸರ್ಕಾರ ನೀಡುವ ಪರಿಹಾರ ಹಣದ ಬಾಕಿ ಮೊತ್ತ ಬಿಡುಗಡೆ ಮಾಡಬೇಕಾದರೆ ಜೀತದಾಳುಗಳ ಬಿಡುಗಡೆ ಪತ್ರ ಹಾಗೂ ಪ್ರಕರಣದ ಸಂಕ್ಷಿಪ್ತ ವಿಚಾರಣೆ ನಡೆಸಿದ ದಾಖಲೆ ಒದಗಿಸಬೇಕು. ಮತ್ತು ರಾಜ್ಯ ಸರ್ಕಾರ ಜೀತದಾಳು ಪುನರ್ವಸತಿ ಯೋಜನೆ ಸಲ್ಲಿಸಬೇಕು ಎಂಬ ಕೇಂದ್ರ ಸರ್ಕಾರದ ಜೀತದಾಳು ಪುನರ್ವಸತಿ ಯೋಜನೆ-2016ರ ಷರತ್ತುಗಳನ್ನು ರದ್ದುಪಡಿಸಬೇಕು. ಇದೇ ಯೋಜನೆಯಡಿ ಜೀತದಾಳುಗಳ ಗುರುತಿಸುವಿಕೆ, ಅವರ ರಕ್ಷಣೆ ಹಾಗೂ ಜೀತಕ್ಕೆ ದುಡಿಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಸೂಚಿಸಲಾಗಿರುವ ಮಾರ್ಗಸೂಚಿಗಳನ್ನು ರದ್ದು ಮಾಡಬೇಕು. ಜೊತೆಗೆ ಜೀತದಾಳುಗಳ ಕಲ್ಯಾಣ ಮತ್ತು ಅವರ ಆರ್ಥಿಕ ಹಿತಾಸಕ್ತಿ ಕಾಪಾಡಲು ಜಾರಿಗೆ ತಂದಿರುವ ಜೀತ ಪದ್ಧತಿ (ನಿರ್ಮೂಲನೆ) ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಇದನ್ನೂ ಓದಿ: 2019-23ರಲ್ಲಿ ನಡೆದ ವಿವಿಧ ಕಾಮಗಾರಿಗಳ ತನಿಖೆಗೆ ಸಮಿತಿ ರಚನೆ: ಮಧ್ಯಂತರ ತಡೆ ನೀಡಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.