ETV Bharat / state

ಪಿಎಫ್‌ಐ ಬ್ಯಾನ್ ಎತ್ತಿ ಹಿಡಿದ ಹೈಕೋರ್ಟ್

author img

By

Published : Nov 30, 2022, 3:56 PM IST

Updated : Nov 30, 2022, 10:46 PM IST

high-court-dismissed-the-petition-questioning-pfi-ban
ಪಿಎಫ್‌ಐ ಬ್ಯಾನ್ ಎತ್ತಿ ಹಿಡಿದ ಹೈಕೋರ್ಟ್

ದೇಶದಲ್ಲಿ ಪಿಎಫ್‌ಐ ಸಂಘಟನೆ ನಿಷೇಧ ಮಾಡಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಬೆಂಗಳೂರು: ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾ(ಪಿಎಫ್​ಐ) ಸಂಘಟನೆ ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿರುವ ಹೈಕೋರ್ಟ್​, ಕಾನೂನು ಬಾಹಿರ ಚಟುವಟಿಕೆಗಳ (ತಡೆ ಕಾಯಿದೆ) 1967ರ (ಯುಎಪಿಎ) ಪ್ರಕಾರ ಯಾವುದೇ ಸಂಸ್ಥೆಯನ್ನು ತಕ್ಷಣಕ್ಕೆ ಜಾರಿಯಾಗುವಂತೆ ನಿಷೇಧಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ ಎಂದು ತಿಳಿಸಿದೆ.

ಪಿಎಫ್​ಐ ರದ್ದು ಮಾಡಿರುವುದನ್ನು ಪ್ರಶ್ನಿಸಿ ಬೆಂಗಳೂರಿನ ನಿವಾಸಿ ನಾಸಿರ್​ ಪಾಷಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಸರ್ಕಾರ, ಸಂಘಟನೆಯು ಕಾನೂನು ಬಾಹಿರ ಎಂದು ಕಾಯಿದೆಯ ಸೆಕ್ಷನ್​ 3ರಲ್ಲಿ ಅವಕಾಶ ಕಲ್ಪಿಸಿದೆ ಎಂದು ತಿಳಿಸಿದೆ.

ಜೊತೆಗೆ, ಪಿಎಫ್‌ಐ ಸಂಘಟನೆಯನ್ನು ನಿಷೇಧ ಮಾಡಿರುವ ವಿಚಾರ ಸಂಬಂಧಪಟ್ಟ ಪ್ರಕರಣ ಯುಎಪಿಎ ಅಡಿ ರಚನೆ ಮಾಡಿರುವ ನ್ಯಾಯಾಧೀಕರಣದ ಮುಂದಿದೆ. ಹೀಗಿದ್ದಾಗ, ನಿಷೇಧವನ್ನು ತಕ್ಷಣದಿಂದ ಜಾರಿಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸದ್ಯ ನ್ಯಾಯಾಲಯ ಪರಿಶೀಲಿಸಬೇಕಿದೆ. ಅದರಂತೆ, ನಿಷೇಧವನ್ನು ತಕ್ಷಣದಿಂದ ಜಾರಿಗೆ ತಂದಿರುವುದನ್ನು ಡಾ. ಜಾಕಿರ್ ನಾಯ್ಕ್ ಅವರ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ (ಐಆರ್‌ಎಸ್) ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ನೀಡಿರುವ ತೀರ್ಪನ್ನು ಸುಪ್ರೀಂಕೋರ್ಟ್ ಮಹಮ್ಮದ್ ಜಾಫರ್ ಪ್ರಕರಣದಲ್ಲಿ ಪರಿಗಣಿಸಿರುವುದನ್ನು ನ್ಯಾಯಪೀಠವು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಅಲ್ಲದೇ ಸಂವಿಧಾನದ ಅನುಚ್ಛೇದ 19(1) (ಸಿ) ಅಡಿಯಲ್ಲಿ ದೊರಕುವ ಹಕ್ಕು ಮತ್ತು ಸ್ವಾತಂತ್ರ್ಯ ಅನುಚ್ಛೇದ 19(4)ನ್ನು ಅವಲಂಬಿಸಿದೆ. ದೇಶದ ಸಮಗ್ರತೆ ಹಾಗೂ ಐಕ್ಯತೆಗೆ ಧಕ್ಕೆ ಬರುವ ಸಂದರ್ಭಗಳಿದ್ದಾಗ ಕೆಲವು ನಿರ್ಬಂಧಗಳನ್ನು ಹೇರಬಹುದು. ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ನಿಷೇಧಕ್ಕೆ ಕಾರಣಗಳನ್ನು ಆಧಾರ ಸಹಿತವಾಗಿ ಕೊಡಲಾಗಿದೆ. ಹಾಗಾಗಿ, ಕೇಂದ್ರ ಸರ್ಕಾರದ ಅಧಿಸೂಚನೆಯಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿದೆ.

ವಿಚಾರಣೆ ವೇಳೆ ನಿಷೇಧವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದ ಕೇಂದ್ರ ಸರ್ಕಾರ, ಪಿಎಫ್‌ಐ ಸಂಘಟನೆ ದೇಶವಿರೋಧಿ ಕೃತ್ಯಗಳನ್ನು ನಡೆಸುತ್ತಿದೆ. ಅದು ಭಯೋತ್ಪಾದಕ ಸಂಘಟನೆಗಳ ಜೊತೆ ಕೈ ಜೋಡಿಸಿ ದೇಶದಲ್ಲಿ ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸುವುದಲ್ಲದೇ, ಅಂತಹ ಕೃತ್ಯಗಳಿಗೆ ಕುಮ್ಮಕ್ಕು ಸಹ ನೀಡುತ್ತಿದೆ.

ಸಂಘಟನೆಯ ಕಾರ್ಯಕರ್ತರು ದೇಶದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ಎಲ್ಲಾ ಆಧಾರಗಳನ್ನು ಸಂಗ್ರಹಿಸಿದ ಬಳಿಕವೇ ನಿಷೇಧ ಹೇರಲಾಗಿದೆ. ಕಾರಣವಿಲ್ಲದೆ ನಿಷೇಧ ಮಾಡಲಾಗಿದೆ ಎಂಬ ವಾದ ಒಪ್ಪಿತವಲ್ಲ. ಇದರಲ್ಲಿ ಕಾನೂನು ಬಾಹಿರ ಎನ್ನುವುದೇನು ಇಲ್ಲ. ಆದ್ದರಿಂದ ಅರ್ಜಿಯನ್ನು ಪರಿಗಣಿಸಬಾರದು ಎಂದು ವಾದಿಸಿತ್ತು.

ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ(ಯುಎಪಿಎ)- 1967ರ ಸೆಕ್ಷನ್ 3ರ, ಉಪ ನಿಯಮ ೩ರಡಿ ಪಿಎಫ್‌ಐ ಸಂಘಟನೆ ನಿಷೇಧಿಸಿರುವುದು ಕಾನೂನುಬಾಹಿರವಾಗಿದೆ. ಸಂಘಟನೆಯನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿರುವುದು ಸಂವಿಧಾನ ವಿರೋಧಿ ಕ್ರಮವಾಗಿದೆ.

ಸಂಘಟನೆಯನ್ನು ಕಾನೂನು ಬಾಹಿರ ಎಂದು ಘೋಷಿಸಿರುವುದಕ್ಕೆ ಮತ್ತು ನಿಷೇಧ ತಕ್ಷಣದಿಂದಲೇ ಅನ್ವಯವಾಗಲಿದೆ ಎಂಬುದಕ್ಕೆ ಪ್ರತ್ಯೇಕ ಕಾರಣಗಳನ್ನು ಕೇಂದ್ರ ಸರ್ಕಾರದ ಆದೇಶದಲ್ಲಿ ನೀಡಲಾಗಿಲ್ಲ. ಅಲ್ಲದೇ ಪಿಎಫ್‌ಐ ಸಂಘಟನೆಗೆ ತನ್ನ ವಾದ ಮಂಡಿಸಲೂ ಅವಕಾಶ ನೀಡದೇ ಏಕಾಏಕಿ ನಿಷೇಧದ ಆದೇಶ ಹೊರಡಿಸಲಾಗಿದೆ. ಯುಎಪಿಎ ಕಾಯ್ದೆಗೆ ವಿರುದ್ಧವಾಗಿ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ಇದನ್ನೂ ಓದಿ: ಬಾಬಾ ಬುಡನ್ ಗಿರಿಯಲ್ಲಿ ದತ್ತ ಜಯಂತಿಗೆ ಅವಕಾಶ ನೀಡಿದ ಹೈಕೋರ್ಟ್

Last Updated :Nov 30, 2022, 10:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.