ETV Bharat / state

ಎಸ್ಸಿ-ಎಸ್ಟಿ ಆಯೋಗದ ಅಧ್ಯಕ್ಷರಾಗಿ ನೆಹರು ಓಲೆಕಾರ್ ನೇಮಕ ವಿವಾದ : ದಾಖಲೆ ಕೇಳಿದ ಹೈಕೋರ್ಟ್

author img

By

Published : Aug 4, 2021, 1:21 AM IST

high-court-asked-documents-on-appointment-of-nehru-olekar-as-chairman-of-sc-st-commission
ಎಸ್ಸಿ-ಎಸ್ಟಿ ಆಯೋಗದ ಅಧ್ಯಕ್ಷರಾಗಿ ನೆಹರು ಓಲೆಕಾರ್ ನೇಮಕ ವಿವಾದ

ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷರನ್ನಾಗಿ ನೆಹರು ಓಲೆಕಾರ್ ನೇಮಕ ಪ್ರಶ್ನಿಸಿ ಕೆ.ಸಿ. ರಾಜಣ್ಣ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಬೆಂಗಳೂರು: ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷರನ್ನಾಗಿ ಶಾಸಕ ನೆಹರು ಓಲೇಕಾರ್ ಅವರನ್ನು ನೇಮಕ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಆಯೋಗಕ್ಕೆ ನೆಹರು ಓಲೆಕಾರ್ ನೇಮಕ ಪ್ರಶ್ನಿಸಿ ಕೆ.ಸಿ. ರಾಜಣ್ಣ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರಿ ವಕೀಲರು, ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರದ ಪರ ಅಡ್ವೋಕೇಟ್ ಜನರಲ್ ವಾದ ಮಂಡಿಸಲಿದ್ದಾರೆ. ಹೀಗಾಗಿ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಇದಕ್ಕೆ ಅರ್ಜಿದಾರರ ಪರ ವಕೀಲರು ಆಕ್ಷೇಪಿಸಿ, ಸರ್ಕಾರ ಹಿಂದೆಯೂ 2 ಬಾರಿ ಇದೇ ರೀತಿ ಕೇಳಿದ್ದು, ಇದೀ ಮತ್ತೆ ಸಮಯಾವಕಾಶ ಕೇಳುತ್ತಿದೆ. ಹೀಗಾಗಿ, ನೇಮಕಾತಿ ಆದೇಶಕ್ಕೆ ತಡೆ ನೀಡಬೇಕು ಎಂದು ಸಲ್ಲಿಸಿರುವ ಮಧ್ಯಂತರ ಮನವಿ ಪರಿಗಣಿಸಬೇಕು ಎಂದು ಕೋರಿದರು.

ನೆಹರು ಓಲೇಕಾರ್ ಪರ ವಕೀಲರು ವಾದಿಸಿ, ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿರುವ ನೆಹರು ಓಲೇಕಾರ್ ಈ ಹಿಂದೆಯೂ ಆಯೋಗದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಕೆಲಸ ನಿರ್ವಹಿಸುವ ಅರ್ಹತೆ ಅವರಿಗಿದೆ ಎಂದು ಸಮರ್ಥಿಸಿಕೊಂಡರು.

ವಾದ-ಪ್ರತಿವಾದ ಆಲಿಸಿದ ಪೀಠ, ಜಾತಿ ಒಂದೇ ಅರ್ಹತೆ ಆಗುವುದಿಲ್ಲ. ನೇಮಕಾತಿ ನಿಯಮಾನುಸಾರ ನಡೆದಿದೆಯೇ ಎಂಬುದು ಮುಖ್ಯ. ಕಳೆದ ಬಾರಿ ಸರ್ಕಾರ ಸಲ್ಲಿಸಿರುವ ದಾಖಲೆಗಳಲ್ಲಿ ಸಿಎಂ ಆದೇಶ ಹೊರತುಪಡಿಸಿದರೆ ಬೇರೆ ಯಾವ ದಾಖಲೆಗಳನ್ನು ನೀಡಿಲ್ಲ. ಯಾವ ಅರ್ಹತೆ ಮತ್ತು ಮಾನದಂಡಗಳ ಆಧಾರದಲ್ಲಿ ಮುಖ್ಯಮಂತ್ರಿಗಳು ನೇಮಕ ಮಾಡಿದ್ದಾರೆ ಹಾಗೂ ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ಪಂಗಡಗಳ ಆಯೋಗ ಕಾಯ್ದೆ-2002ರ ಆಯ್ಕೆ ಮಾನದಂಡಗಳನ್ನು ಅನುಸರಿಸಲಾಗಿದೆಯೇ ಎಂಬುದನ್ನು ತಿಳಿಯಬೇಕಿದೆ. ಹೀಗಾಗಿ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ ಎಂದು ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಆಗಸ್ಟ್ 18ಕ್ಕೆ ಮುಂದೂಡಿತು.

ಇದನ್ನೂ ಓದಿ: ಬೆಂಗಳೂರಲ್ಲಿ 678 ವಿದೇಶಿಯರ ಅಕ್ರಮ ವಾಸ, 27 ಮಂದಿ ಗಡಿಪಾರಿಗೆ ಸಿದ್ಧತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.