ETV Bharat / state

ಬೆಂಗಳೂರಲ್ಲಿ ಅಬ್ಬರಿಸಿದ ಮಳೆ: ರಸ್ತೆಗಳಲ್ಲಿ ನೀರು ನಿಂತು ಪರದಾಡಿದ ಪ್ರಯಾಣಿಕರು

author img

By ETV Bharat Karnataka Team

Published : Aug 31, 2023, 11:02 PM IST

Bengaluru rain
Bengaluru rain

ಬೆಂಗಳೂರು, ಮಂಡ್ಯದಲ್ಲಿ ಇಂದು ಸಂಜೆ ವರುಣ ಅಬ್ಬರಿಸಿದ್ದಾನೆ. ಕೆಲವೆಡೆ ರಸ್ತೆಯಲ್ಲಿ ನೀರು ನಿಂತು ಸವಾರರು ಪರದಾಡಿದರು.

ಬೆಂಗಳೂರಲ್ಲಿ ಅಬ್ಬರಿಸಿದ ಮಳೆ

ಬೆಂಗಳೂರು: ಬಿಸಿಲಿನ ಬೇಗೆಯಿಂದ ಬಳಲಿದ್ದ ಬೆಂಗಳೂರು ಮಂದಿಗೆ ಇಂದು ವರುಣ ತಂಪೆರೆದಿದ್ದಾನೆ. ನಗರದ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮೆಜೆಸ್ಟಿಕ್, ಗಾಂಧಿ ನಗರ, ಕೆ.ಆರ್ ಸರ್ಕಲ್, ಕಾರ್ಪೋರೇಷನ್ ಸೇರಿ ಹಲವು ಕಡೆಗಳಲ್ಲಿ ಮಳೆಯಿಂದಾಗಿ ಟ್ರಾಫಿಕ್ ಉಂಟಾಗಿ, ವಾಹನ ಸವಾರರು ಪರದಾಡಿದರು.

ಏಕಾಏಕಿ ಸುರಿದ ಮಳೆಯಿಂದ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ರಸ್ತೆ ಗುಂಡಿಗಳ ಭಯದಲ್ಲಿ ಸಂಚರಿಸಿದರು. ಬೆಂಗಳೂರಷ್ಟೇ ಅಲ್ಲದೇ ಮಂಡ್ಯ ಹಾಗೂ ಇತರೆಡೆಯೂ ಮಳೆಯಾಗಿದೆ.

ಏರ್​ಪೋರ್ಟ್​ ರಸ್ತೆ ಜಲಾವೃತ: ಒಂದು ಗಂಟೆಯಿಂದ ಸತತವಾಗಿ ಸುರಿದ ಧಾರಾಕಾರ ಮಳೆಗೆ ಕೇಂಪೇಗೌಡ ಏರ್​ಪೋರ್ಟ್‌​ ರಸ್ತೆಯಲ್ಲಿ ಮೂರು ಅಡಿಗಿಂತ ಹೆಚ್ಚು ನೀರು ನಿಂತಿದೆ. ಇದರಿಂದಾಗಿ ಸಂಚಾರ ಸಮಸ್ಯೆಯಾಗಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಉಂಟಾಗಿದೆ. ಇನ್ನು ಕೆಲವೆಡೆ ರಸ್ತೆಯ ಮಧ್ಯದಲ್ಲೇ ದ್ವಿಚಕ್ರ ವಾಹನಗಳ ಸವಾರರು ಸಿಲುಕಿ ಪಜೀತಿಗೆ ಸಿಲುಕಿದರು.

ಮಂಡ್ಯದಲ್ಲೂ ಅಬ್ಬರಿಸಿದ ವರುಣ: ಒಂದೆಡೆ ಕೃಷ್ಣರಾಜಸಾಗರ ಅಣೆಕಟ್ಟೆಗೆ ಮಳೆಯ ಪ್ರಮಾಣದ ಕೊರತೆಯಿಂದ ನೀರು ಹರಿದು ಬಂದಿಲ್ಲ. ಮತ್ತೊಂದೆಡೆ ನೀರು ಕಡಿಮೆಯಿದ್ದರೂ ರೈತರ ವಿರೋಧದ ನಡುವೆಯೂ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗಿದೆ. ನೀರು ಬಿಡುತ್ತಿರುವುದನ್ನು ವಿರೋಧಿಸಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಆಹೋರಾತ್ರಿ ಪ್ರತಿಭಟನೆ ಕೂಡ ನಡೆಸಲಾಗುತ್ತಿದೆ. ಇದೇ ವೇಳೆಯಲ್ಲಿ ಇದೀಗ ಮಂಡ್ಯ ಜಿಲ್ಲೆಯಾದ್ಯಂತ ವರುಣ ಆರ್ಭಟಿಸುತ್ತಿದ್ದಾನೆ.

Bengaluru rain
ಮಂಡ್ಯದಲ್ಲಿ ಅಬ್ಬರಿಸಿದ ಮಳೆ

ವರುಣಾರ್ಭಟಕ್ಕೆ ರಸ್ತೆಗಳೆಲ್ಲ ಜಲಾವೃತಗೊಂಡಿದ್ದು, ದಶಪಥ ಹೆದ್ದಾರಿಯಲ್ಲಿ ವಾಹನಗಳು ಸಂಚರಿಸಲು ಆಗದೇ ಸಾಲುಗಟ್ಟಿ ನಿಂತಿವೆ. ಮದ್ದೂರಿನಲ್ಲಿ ವರುಣಾರ್ಭಟಕ್ಕೆ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮದ್ದೂರು ಬೈಪಾಸ್​​ನಲ್ಲಿ ಎರಡು ಕಿಲೋಮೀಟರ್​ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಅಂದಾಜು 50ಕ್ಕೂ ಹೆಚ್ಚು ವಾಹನಗಳು ದಾರಿ ಕಾಣದೇ ರಸ್ತೆ ಇಕ್ಕೆಲೆಗಳಲ್ಲಿ ನಿಂತಿದ್ದು ಕಂಡುಬಂತು.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಎಡಬಿಡದೆ ಮಳೆ ಸುರಿದಿದ್ದು, ವಾಹನ ಸವಾರರು ಪರದಾಡುವಂತೆ ಆಗಿದೆ. ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​​ ವೇಯಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯುಂಟಾಯಿತು.

ಇದನ್ನೂ ಓದಿ: ಮಲೆನಾಡಲ್ಲಿ ಮರೆಯಾದ ಮಳೆ; ಮೆಕ್ಕೆಜೋಳ ಉಳಿಸಿಕೊಳ್ಳಲು ಸ್ಪ್ರಿಂಕ್ಲರ್ ಮೊರೆ ಹೋದ ರೈತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.