ETV Bharat / state

ಯತ್ನಾಳ್​ರ ₹40 ಸಾವಿರ ಕೋಟಿ ಕೋವಿಡ್ ಅಕ್ರಮ ಆರೋಪ ನಂಬಲು ಅಸಾಧ್ಯ, ತನಿಖೆ ನಡೆಸಿ: ಹೆಚ್​ಡಿಕೆ

author img

By ETV Bharat Karnataka Team

Published : Dec 30, 2023, 3:36 PM IST

Updated : Dec 30, 2023, 4:58 PM IST

ಹೆಚ್​ಡಿ ಕುಮಾರಸ್ವಾಮಿ
ಹೆಚ್​ಡಿ ಕುಮಾರಸ್ವಾಮಿ

ಮಾಜಿ ಸಚಿವ ಬಸನಗೌಡ ಪಾಟೀಲ್​ ಯತ್ನಾಳ್ ಮಾಡಿರುವ 40 ಸಾವಿರ ಕೋಟಿ ಕೋವಿಡ್​ ಅವ್ಯವಹಾರದ ಬಗ್ಗೆ ತನಿಖೆ ಮಾಡಲು ಹೆಚ್​ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಹೆಚ್​ಡಿಕೆ ಮಾತು

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ 40 ಸಾವಿರ ಕೋಟಿ ರೂಪಾಯಿ ಕೋವಿಡ್​ ಅವ್ಯವಹಾರ ನಡೆದಿದೆ ಎಂದು ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆರೋಪ ಮಾಡಿರುವುದು ನಂಬಲು ಸಾಧ್ಯವಿಲ್ಲ. ಅದನ್ನೇ ಕಾಂಗ್ರೆಸ್​​ನವರು ತಮ್ಮ ರಕ್ಷಣೆಗೆ ಬಳಸುತ್ತಿದ್ದಾರೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಜೆ ಪಿ ಭವನದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಕೋವಿಡ್ ಅವಧಿಯಲ್ಲಿ ಅವ್ಯವಹಾರ ಎಸಗಿದ್ದಾರೆ ಎಂದು ಕಾಂಗ್ರೆಸ್ ಹೇಳುತ್ತಿದೆ. 40 ಸಾವಿರ ಕೋಟಿ ರೂಪಾಯಿ ಅಕ್ರಮ ನಡೆಸಲಾಗಿದೆ ಎಂದು ಯತ್ನಾಳ್ ಆರೋಪಿಸಿದ್ದಾರೆ. ಅದನ್ನೇ ಕಾಂಗ್ರೆಸ್​ನವರು ಡಿಫೆಂಡ್​ ಮಾಡಿಕೊಳ್ಳುತ್ತಾರೆ. ಇಷ್ಟು ಕೋಟಿ ಅಕ್ರಮದ ಆರೋಪವನ್ನು ನಂಬುವುದಕ್ಕೆ ಆಗುತ್ತಾ? ಎಂದು ಪ್ರಶ್ನಿಸಿದರು.

ತನಿಖೆ ನಡೆಸಲಿ: ನಾನು ಬಿಜೆಪಿ ವಿಚಾರವಾಗಿ ಮಾತನಾಡುತ್ತಿದ್ದೇನೆ. ಯತ್ನಾಳ್ ಪಕ್ಷದೊಳಗಿನ ಭಿನ್ನಾಭಿಪ್ರಾಯದಿಂದ ಈ ರೀತಿ ಹೇಳಿಕೆ ನೀಡಿದ್ದಾರೆ. ಈಗ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದೆ. ಸಚಿವ ದಿನೇಶ್ ಗುಂಡೂರಾವ್ ಅವರು ಈ ಬಗ್ಗೆ ತನಿಖೆ ನಡೆಸಿ ಅಂಕಿಅಂಶ ಬಯಲು ಮಾಡಲಿ. ಮಾಜಿ ಸ್ಪೀಕರ್ ಆಗಿದ್ದ ರಮೇಶ್​ಕುಮಾರ್ ಅವರು ಫ್ರೀಡಂ ಪಾರ್ಕ್​ನಲ್ಲಿ ಭಾಷಣ ಮಾಡಿ ಗಾಂಧಿ ಹೆಸರಲ್ಲಿ ತಿಂದು ತೇಗುವಷ್ಟು ಹಣ ಮಾಡಿದ್ದೇವೆ ಅಂದಿದ್ದರು. ಆಗ ಏಕೆ ಚರ್ಚೆ ಮಾಡಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಪಿಎಸ್​ಐ ನೇಮಕಾತಿ ಅಕ್ರಮದ ಬಗ್ಗೆ ಆಯೋಗ ನನಗೆ ನೋಟಿಸ್ ನೀಡಿದೆ. ಸಚಿವ ಪ್ರಿಯಾಂಕ್ ಖರ್ಗೆಗೆ ನೋಟಿಸ್ ಕೊಟ್ಟಿಲ್ಲ. ಪ್ರಿಯಾಂಕ್ ಅಕ್ರಮದ ಬಗ್ಗೆ ಆಡಿಯೋ, ದಾಖಲಾತಿಗಳನ್ನು ಬಿಡುಗಡೆ ಮಾಡಿದ್ದರು. ಅವರಿಗೆ ಮೊದಲು ನೋಟಿಸ್ ಕೊಡಬೇಕಾಗಿತ್ತು. ಆದರೆ, ಅವರಿಗೆ ಏನೂ ಕಳುಹಿಸಿಲ್ಲ. ನಾನು ಪಿಎಸ್​​ಐ ಅಕ್ರಮದ ಬಗ್ಗೆ ಏನೂ ಹೇಳೇ ಇಲ್ಲ. ಆದರೆ, ನನಗೆ ನೋಟಿಸ್ ನೀಡಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ತೆಗಳಲು ಆರೋಪ ಬಳಕೆ: ಬಿಜೆಪಿ ಅವಧಿಯಲ್ಲಿ ಕೊರೊನಾ ನಿರ್ವಹಣೆಯಲ್ಲಿ ಕೆಲ ಲೋಪದೋಷ ಆಗಿರಬಹುದು. ಅದನ್ನೇ ಈಗಿನ ಸರ್ಕಾರ ಟೀಕೆ ಮಾಡಲು ಬಳಸುತ್ತಿದೆ. ಸರ್ಕಾರದಲ್ಲಿ ಪಾರದರ್ಶಕತೆ ಇದ್ದರೆ ಯತ್ನಾಳ್ ಆರೋಪದ ಬಗ್ಗೆ ತನಿಖೆ ನಡೆಸಲಿ. ಇದನ್ನು ಬಿಟ್ಟು ಬರೀ ಬಿಜೆಪಿ ತೆಗಳಲು ಬಳಸಿಕೊಂಡರೆ ಹೇಗೆ ಎಂದರು.

ಯತ್ನಾಳ್ ಆರೋಪದಲ್ಲಿ ಸತ್ಯ ಇದ್ದರೆ, ಸರ್ಕಾರ ಜನರ ಮುಂದೆ ಅವ್ಯವಹಾರವನ್ನು ಬಯಲು ಮಾಡಲಿ. ಕಾಂಗ್ರೆಸ್ ಶಾಸಕ ಟಿ.ಬಿ. ಜಯಚಂದ್ರ ಸಮಿತಿ ಕೊಟ್ಟ ನೈಸ್ ವರದಿಯನ್ನು ಏನು ಮಾಡುತ್ತಿದ್ದಾರೆ? ಕೆಂಪಣ್ಣ ಆಯೋಗದ ವರದಿ ಎಲ್ಲಿದೆ?. ಯತ್ನಾಳ್ ಆರೋಪ ತನಿಖೆ ಮಾಡಿ, ಸತ್ಯಾಂಶ ಹೊರಗಿಡಿ. ಕೋವಿಡ್ ಸಂದರ್ಭದಲ್ಲಿ ಸರ್ಕಾರದ ನಿರ್ವಹಣೆಯಲ್ಲಿ ವ್ಯತ್ಯಾಸ ಆಗಿರಬಹುದು. ಆದರೆ, ಯತ್ನಾಳ್ ಮಾಡಿರುವ 40 ಸಾವಿರ ಕೋಟಿ ಆರೋಪ ನಂಬಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: ರಾಜ್ಯದಲ್ಲಿ ಬರದಿಂದ ರೈತರ ಆತ್ಮಹತ್ಯೆಗಳು ಆರಂಭವಾಗಿವೆ: ಕುಮಾರಸ್ವಾಮಿ ಆತಂಕ

Last Updated :Dec 30, 2023, 4:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.