ETV Bharat / state

ಪ್ರತಾಪ್ ಸಿಂಹರನ್ನು ಹೆದರಿಸಲು ಸಹೋದರನ ಬಂಧನ, ಮರ ಕಟಾವು ಹಿಂದೆ ಸಿಎಂ ಕೈವಾಡ: ಹೆಚ್​ಡಿಕೆ ಆರೋಪ

author img

By ETV Bharat Karnataka Team

Published : Jan 5, 2024, 5:22 PM IST

Updated : Jan 5, 2024, 6:24 PM IST

ಸಂಸದ ಪ್ರತಾಪ್ ಸಿಂಹ ಅವರ ಸಹೋದರನ ಬಂಧನ ವಿಚಾರವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

JDS state president HD Kumaraswamy spoke at the press conference.
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಹೆಚ್.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬೆಂಗಳೂರು: ಜಾಗ ಯಾರದ್ದೋ ಮರ ಕಡಿದಿದ್ದು ಇನ್ನ್ಯಾರೋ. ಆದರೆ ಬಂಧನವಾಗಿದ್ದು ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಂ ಸಿಂಹ. ವಿರೋಧಿಗಳ ಧ್ವನಿ ಅಡಗಿಸೋಕೆ ಕಾಂಗ್ರೆಸ್ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ಪ್ರತಾಪ್ ಸಿಂಹ ಅವರನ್ನು ಹೆದರಿಸಲು ಈ ರೀತಿ ಮಾಡಲಾಗಿದೆ. ಬೀಟೆ ಮರ ಕಡಿದಿರುವ ಹಿಂದೆ ಸಿಎಂ ಕೈವಾಡವಿದೆ. ಬೇಕಿದ್ದಲ್ಲಿ ಸಿಎಂ ಕಾಲ್ ಲಿಸ್ಟ್ ತೆಗೆಸಿ ನೋಡಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಅಧಿಕಾರ ದುರ್ಬಳಕೆ: ಶೇಷಾದ್ರಿಪುರದಲ್ಲಿರುವ ಜೆಡಿಎಸ್ ಪ್ರಧಾನ ಕಚೇರಿ ಜೆ.ಪಿ.ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಾಪ್ ಸಿಂಹ ಸಹೋದರನ ವಿರುದ್ಧ ಕೇಸ್ ಹಾಕಿ ಜೈಲಿಗೆ ಹಾಕಿದ್ದಾರೆ. ಇದರ ಸತ್ಯಾಸತ್ಯತೆ ಏನು? ಕಾಂಗ್ರೆಸ್‌ನವರು ತಮ್ಮ ವಿರೋಧಿಗಳ ಧ್ವನಿ ಅಡಗಿಸೋಕೆ ಅಧಿಕಾರ ದುರ್ಬಳಕೆ ಮಾಡಿಕೊಳ್ತಿದ್ದಾರೆ. 5 ಜನ ಅರಣ್ಯಾಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಅಮಾನತಾದ ಕಾರಣವೇನು? ಬೇಲೂರಿನ ಒಂದು ಗ್ರಾಮದಲ್ಲಿ ಪೂರ್ವಾನುಮತಿ ಇಲ್ಲದೆ ಮರ ಕಡಿದಿರುವ ಹಿನ್ನೆಲೆಯಲ್ಲಿ ವರದಿ ಹೋಗಿದೆ ಎಂದು ದೂರಿದರು.

ವರದಿಯಲ್ಲಿ ಸರ್ಕಾರದ ಭೂಮಿಯಲ್ಲಿ ಕಟ್ಟಿರುವ ಮನೆಗಳ ಸಕ್ರಮೀಕರಣ ಮಾಡೋಕೆ ಮನೆಗಳ ಬಗ್ಗೆ ತಹಸೀಲ್ದಾರರಿಗೆ ವರದಿ ಕೊಟ್ಟಿದ್ದರು. 40 ಎಕರೆ ಭೂಮಿಯನ್ನು 16 ಜನಕ್ಕೆ ಹಕ್ಕುಪತ್ರಗಳನ್ನು ಕೊಟ್ಟಿದ್ದಾರೆ. ‌4 ಎಕರೆ 12 ಗುಂಟೆ ಗೋಮಾಳ ಆಗಿದೆ. 16ನೇ ವ್ಯಕ್ತಿ ರಾಕೇಶ್ ಶೆಟ್ಟಿಗೆ ಸರ್ಕಾರದಿಂದ 4 ಎಕರೆ ಭೂಮಿ ಕೊಟ್ಟಿದ್ದಾರೆ. ಅವರ ಮಗಳು ಜಯಮ್ಮ ಅವರು ವಿಕ್ರಮ ಸಿಂಹಗೆ ಶುಂಠಿ ಬೆಳೆಯೋಕೆ ಲೀಸ್ ಕೊಟ್ಟಿದ್ದಾರೆ‌. ಲೀಸ್ ಪ್ರಾರಂಭ ಆಗೋದು 2024 ಜನವರಿಯಿಂದ. ಜಯಮ್ಮ ಮತ್ತು ರವಿ ಅನ್ನೋರು ಈ ಮಧ್ಯೆ ಮರ ಕಡಿದಿದ್ದಾರೆ. ಇದಕ್ಕೆ ವಿಕ್ರಂ ಸಿಂಹ ಕಾರಣ ಅಲ್ಲ ಎಂದರು.

ಪ್ರಕರಣದ ಎ1 ಜಯಮ್ಮ, ಎ 2 ರಾಕೇಶ್ ಶೆಟ್ಟಿ, ಎ 3 ಇರಲಿಲ್ಲ. ಅಲ್ಲಿರೋ ಒಬ್ಬ ಪುಢಾರಿ, ಸಿಎಂಗೆ ಮಾಹಿತಿ ಕೊಟ್ಟು ಪ್ರತಾಪ್ ಸಿಂಹಗೆ ಪಾಠ ಕಲಿಸೋಕೆ ಅಂತ ತಲೆ ತಿಂದ. ಆಗ ಸಿಎಂ ಅಧಿಕಾರಿಗಳಿಗೆ ಕರೆ ಮಾಡಿ ಬೀಟೆ ಮರ ಕಡಿದು ಆ ಜಾಗದಲ್ಲಿ ಹಾಕುವಂತೆ ಹೇಳಿದ್ದರು. ಬೇಕಿದ್ದರೆ ಸಿಎಂ ಫೋನ್ ಕಾಲ್ ಲೀಸ್ಟ್ ತೆಗೆಯಿರಿ, ಸತ್ಯ ಗೊತ್ತಾಗುತ್ತದೆ ಎಂದು ಹೇಳಿದರು.

ವಿಕ್ರಂ ಮರ ಕಡಿದಿಲ್ಲ: ಎ1, ಎ2ಗೆ ಅರಣ್ಯಾಧಿಕಾರಿಗಳೇ ಬೇಲ್ ಕೊಟ್ಟರು. ಆದರೆ ವಿಕ್ರಂ ಸಿಂಹರನ್ನು ಬಂಧಿಸಿದರು. ಎ1,ಎ2 ಗೆ ಕಚೇರಿಯಲ್ಲಿ ಬೇಲ್ ಕೊಟ್ಟು ಅವರನ್ನು ಯಾಕೆ ಅರೆಸ್ಟ್ ಮಾಡಿದಿರಿ ಎಂದು ಸರ್ಕಾರಕ್ಕೆ ಮ್ಯಾಜಿಸ್ಟ್ರೇಟ್ ಉಗಿದರು. ಆಗ ಕೋರ್ಟ್ ಬೇಲ್ ಕೊಟ್ಟರು. ಲೀಸ್ ಅಷ್ಟೇ ವಿಕ್ರಂ ತೆಗೆದುಕೊಂಡಿದ್ದನು.

ಮರ ಕಡಿದಿದ್ದು ಜಯಮ್ಮ, ರವಿ ಆದರೆ ಬೀಟೆ ಮರವನ್ನು ಇಲ್ಲಿ ತಂದು ಹಾಕಿ ಅಂದಿದ್ದು ಸರ್ಕಾರದ ಸಿಎಂ ಅವರೇ ಮರ ಕಡಿದು ಹಾಕಿ ಅಂತ ಹೇಳಿ ಬೀಟೆ ಮರ ಹಾಕಿಸಿದ್ದಾರೆ. ಬೀಟೆ ಮರವನ್ನು ಗೆಂಡೆಕೆರೆಯಿಂದ ಕಟ್ ಮಾಡಿಕೊಂಡು ಬಂದು ಇಲ್ಲಿ ಹಾಕಿದ್ದಾರೆ. ಪ್ರತಾಪ್ ಸಿಂಹನ ಸಹೋದರ ವಿಕ್ರಂ ಮರ ಕಡಿದಿಲ್ಲ, ಆದರೂ ಪ್ರತಾಪ್ ಸಿಂಹನ ಹೆದರಿಸೋಕೆ ಹೀಗೆ ಮಾಡಿದ್ದಾರೆ ಎಂದು ಹೇಳಿದರು.

ವಿಕ್ರಂ ಸಿಂಹ ತಪ್ಪು ಮಾಡದೇ ಹೋದರೂ ಅರೆಸ್ಟ್ ಮಾಡುತ್ತೀರಾ? ಸಿಎಂ ಅವರೇ ಬೀಟೆ ಮರ ಕಟ್ ಮಾಡಿ ಅಲ್ಲಿ ಹಾಕಿ ಅಂತ ಹೇಳಿದ್ದಾರೆ. ನನಗೆ ಅಧಿಕಾರಿಗಳೇ ಮಾಹಿತಿ ಕೊಟ್ಟಿದ್ದಾರೆ. ನಾಗಮೋಹನ್ ದಾಸ್ ಕಮಿಟಿಗೆ ತನಿಖೆ ಮಾಡಲು ಹೇಳಿ ಅಥವಾ ಹೊಸ ಆಯೋಗ ರಚಿಸಿ ತನಿಖೆ ನಡೆಸಲಿ ಎಂದು ಒತ್ತಾಯಿಸಿದರು.

ಹಣ ಪಡೆದು ಡಿಎಫ್ಓ ಹಾಸನಕ್ಕೆ ವರ್ಗಾವಣೆ: ಮಂಡ್ಯದಲ್ಲಿ ಪರಿಷತ್ ಸದಸ್ಯರೊಬ್ಬರು ಮರ ಕಡಿದರು. ಅವರ ವಿರುದ್ಧ ಯಾಕೆ ಕ್ರಮ ಆಗಿಲ್ಲ?. ಸಿಎಂ, ಗೃಹ ಸಚಿವರೇ ಇದಕ್ಕೆ ಉತ್ತರ ಕೊಡಿ. ಅಮಾನತು ಆಗಿರೋ ಡಿಎಫ್ಓ ದಲಿತ ಸಮುದಾಯ ವ್ಯಕ್ತಿ.ಯಾಕೆ ಅಧಿಕಾರಿ ಅಮಾನತು ಮಾಡಿದ್ರಿ.ಪ್ರಾಮಾಣಿಕ ದಲಿತ ಅಧಿಕಾರಿ.ಅವನ ವಿರುದ್ಧ ಯಾಕೆ ಕ್ರಮ ಆಯ್ತು‌? ಹಾಸನಕ್ಕೆ ಯಾರ ಶಿಫಾರಸು ಮಾಡಿ ಅವನನ್ನು ಹಾಕಿದ್ರಿ. ಆತನನ್ನು ಹಾಸನಕ್ಕೆ ಹಾಕಿಸಲು ಯಾವ ಎಂಎಲ್ಎ ಕುಳಿತಿದ್ದ ಎಷ್ಟು ಹಣ ಎಂಎಲ್ಎ ತೆಗೆದುಕೊಂಡ. ಯಶವಂತಪುರದಲ್ಲಿ ಹಣದ ವ್ಯವಹಾರ ಆಗಿದೆ. ಹಾಸನಕ್ಕೆ ಡಿಎಫ್ಓ ನೇಮಕದಲ್ಲಿ ಶಾಸಕ ಹಣ ಪಡೆದಿದ್ದಾನೆ ಎಂದು ಕುಮಾರಸ್ವಾಮಿ ಆರೋಪ ಮಾಡಿದರು.

ಸುಳ್ಳು ಕೇಸ್ ಹಾಕಿ ಹಿಂದೂ ಕಾರ್ಯಕರ್ತರ ಬಂಧನ: ಮಾಧ್ಯಮಗಳಲ್ಲೂ ಸಹ ಬೇರೆ ಯಾವುದೇ ವಿಷಯಗಳಿಗೆ ಗಮನ ಕೊಡೋಕೆ ಆಗುತ್ತಿಲ್ಲ. ಕಾರಣ ಹುಬ್ಬಳ್ಳಿ ಘಟನೆ. 30 ವರ್ಷದ ಹಿಂದಿನ ಕೇಸ್​​‌ನಲ್ಲಿ ಹಿಂದೂ ಕಾರ್ಯಕರ್ತನ ಬಂಧನ ಆಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯ ನಮ್ಮ ಸ್ನೇಹಿತರು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತಿದ್ದಾರೆ. ಅಧಿಕಾರ ದುರುಪಯೋಗ, ಸುಳ್ಳು ಕೇಸ್ ಹಾಕಿ ಹಿಂದೂ ಕಾರ್ಯಕರ್ತರ ಬಂಧನ ವಿಚಾರವಾಗಿ ಸಿಎಂ, ಗೃಹ ಸಚಿವರು ಅದನ್ನು ಸಮರ್ಥನೆ ಮಾಡಿಕೊಳ್ತಿದ್ದಾರೆ‌ ಎಂದು ಟೀಕಿಸಿದರು.

ಇವತ್ತು ಅಯೋಧ್ಯೆ ಉದ್ಘಾಟನೆ ಬಗ್ಗೆ ದೇಶದಲ್ಲಿ ಚರ್ಚೆ ಆಗ್ತಿದೆ. ನಮ್ಮ ರಾಜ್ಯದಲ್ಲಿ ಹಲವು ಸಮಸ್ಯೆ ಎದುರಿಸುತ್ತಿದ್ದೇವೆ. ರೈತರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಸರ್ಕಾರಕ್ಕೆ ಯಾವುದರ ಬಗ್ಗೆಯೂ ಕಾಳಜಿ ಇಲ್ಲ. ಇಂತಹ ವಿಷಯ ಮುನ್ನಲೆಗೆ ತಂದು ವಿಷಯ ಡೈವರ್ಟ್ ಮಾಡ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಶ್ರೀಕಾಂತ್ ಪೂಜಾರಿ ಪ್ರಕರಣ ದೊಡ್ಡದು ಮಾಡಿದ್ದಾರೆ. ಎಲ್ಲಾ ‌ಕೇಸ್ ಖುಲಾಸೆ ಆಗಿದೆ. ಮಾಧ್ಯಮಗಳೇ ಇದನ್ನು ತೋರಿಸಿವೆ. ಹಿಂದೂ ಕಾರ್ಯಕರ್ತರ ಮೇಲೆ ಸರ್ಕಾರ ದಬ್ಬಾಳಿಕೆ ಮಾಡ್ತಿದೆ.ಈ ಸರ್ಕಾರ ವಿರೋಧಿಗಳ ವಿರುದ್ಧ ದಬ್ಬಾಳಿಕೆ, ದಮನ ಮಾಡೋ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಇದನ್ನೂಓದಿ: ನೈಸ್ ಯೋಜನೆಯನ್ನು ಸರ್ಕಾರ ವಶಕ್ಕೆ ಪಡೆಯಬೇಕು: ಹೆಚ್.ಡಿ.ದೇವೇಗೌಡ

Last Updated :Jan 5, 2024, 6:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.