ETV Bharat / state

ನೈಸ್ ಯೋಜನೆಯನ್ನು ಸರ್ಕಾರ ವಶಕ್ಕೆ ಪಡೆಯಬೇಕು: ಹೆಚ್.ಡಿ.ದೇವೇಗೌಡ

author img

By ETV Bharat Karnataka Team

Published : Jan 5, 2024, 3:52 PM IST

Updated : Jan 5, 2024, 4:11 PM IST

ನೈಸ್ ರೋಡ್ ಯೋಜನೆಯಲ್ಲಿ ಬಡವರಿಗೆ ಅನ್ಯಾಯವಾಗಿದೆ. ನಮ್ಮ ಪಕ್ಷ ಈ ವಿಷಯದಲ್ಲಿ ರಾಜಿ ಮಾಡಿಕೊಳ್ಳಲ್ಲ ಎಂದು ಜೆಡಿಎಸ್​ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.

former-pm-h-d-devegowda-reaction-on-nice-road-project
ನೈಸ್ ಯೋಜನೆಯನ್ನು ಸರ್ಕಾರ ವಶಕ್ಕೆ ಪಡೆಯಬೇಕು: ಹೆಚ್​ ಡಿ ದೇವೇಗೌಡ

ಜೆಡಿಎಸ್​ ವರಿಷ್ಠ ಹೆಚ್.ಡಿ.ದೇವೇಗೌಡ ಸುದ್ದಿಗೋಷ್ಠಿ

ಬೆಂಗಳೂರು: "ನಾನು ನನ್ನ ಜೀವನದಲ್ಲಿ ಒಂದೇ ಒಂದು ತಪ್ಪು ಮಾಡಿದೆ. ಒಳ್ಳೆಯ ರಸ್ತೆ ಆಗುತ್ತದೆ ಎಂಬ ಮಹಾತ್ವಕಾಂಕ್ಷೆಯಿಂದ ನೈಸ್ ಯೋಜನೆ ಮಾಡಿದೆ. ಮೈಸೂರಿಗೆ ಒಂದು ಗಂಟೆಯಲ್ಲಿ ಹೋಗಬಹುದು ಅಂತ ಇದನ್ನು ಮಾಡಲಾಯಿತು. ಆದರೆ‌ ಮಹಾನುಭಾವರು ದೊಡ್ಡ ಪೆಟ್ಟು ಕೊಟ್ಟರು. ಇದರ ವಿರುದ್ಧ ಮೂರು ದಶಕದಿಂದ ಹೋರಾಟ ಮಾಡುತ್ತಿದ್ದೇನೆ. ಸಿಎಂಗೂ ಪತ್ರ ಬರೆದಿದ್ದೇನೆ. ಹಾಗಾಗಿ ಕೂಡಲೇ ನೈಸ್ ಯೋಜನೆಯನ್ನು ಸರ್ಕಾರ ವಶಕ್ಕೆ ಪಡೆಯಬೇಕು" ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಆಗ್ರಹಿಸಿದರು.

ಶೇಷಾದ್ರಿಪುರದಲ್ಲಿರುವ ಪಕ್ಷದ ಪ್ರಧಾನ ಕಚೇರಿ ಜೆ.ಪಿ.ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "13,404 ಎಕರೆ ಭೂಮಿಯನ್ನು ನೈಸ್ ವಶಪಡಿಸಿಕೊಂಡಿದೆ. ಅದನ್ನು ಸರ್ಕಾರ ವಶಪಡಿಸಿಕೊಳ್ಳಬೇಕು ಎಂದು ಸಿಎಂಗೆ ಪತ್ರ ಬರೆದಿದ್ದೆ. 13 ಸಾವಿರ ಎಕರೆ ಬೆಲೆ 7 ಸಾವಿರ ಕೋಟಿ ರೂ ಅಂತ ಸದನ ಸಮಿತಿ ವರದಿ ಕೊಟ್ಟಿದೆ. ಅಧಿಕಾರಿಗಳೇ ಈ ವರದಿ ಕೊಟ್ಟಿದ್ದಾರೆ. ಇವತ್ತು ಇದರ ಬೆಲೆ ಇನ್ನೂ ಜಾಸ್ತಿ ಆಗುತ್ತದೆ. ಸಿದ್ದರಾಮಯ್ಯಗೆ ಏನ್ ಕಷ್ಟ ಇದೆಯೋ ಗೊತ್ತಿಲ್ಲ?, ಸಿದ್ದರಾಮಯ್ಯ ಇಷ್ಟೊಂದು ಅಕ್ರಮ ಆಗಿದ್ದರೂ ಏನೂ ಕ್ರಮ ತೆಗೆದುಕೊಂಡಿಲ್ಲ. ಬಡವರ ಪರ ಮಾತಾಡುವ ಸಿಎಂ ಯಾಕೆ ಕ್ರಮ ತೆಗೆದುಕೊಂಡಿಲ್ಲ?. ಸಿದ್ದರಾಮಯ್ಯ ಎಷ್ಟು ವರ್ಷ ಆಳಿದರೂ ಕಪ್ಪುಚುಕ್ಕೆಯಿಂದ ಹೊರಗೆ ಬರಲು ಸಾಧ್ಯವಿಲ್ಲ" ಎಂದರು.

"ನೈಸ್ ರೋಡ್ ಪ್ರಾಜೆಕ್ಟ್ ವಿಷಯ ಎಲ್ಲರಿಗೂ ಗೊತ್ತಿದೆ. ಬಡವರಿಗೆ ಇದರಿಂದ ಅನ್ಯಾಯ ಆಗಿದೆ. ನಮ್ಮ ಪಕ್ಷ ಇದರ ವಿರುದ್ಧ ಧ್ವನಿ ಎತ್ತಿದೆ. ವಿಧಾನಸಭೆಯಲ್ಲೂ ಸುದೀರ್ಘ ಚರ್ಚೆ ಆಗಿದೆ. ವಿಧಾನಸಭೆಯಲ್ಲಿ ಜಯಚಂದ್ರ ನೇತೃತ್ವದಲ್ಲಿ ಸದನ ಸಮಿತಿ ನೇಮಕ ಮಾಡಿತ್ತು. ಸದನ ಸಮಿತಿ ವರದಿ ಕೊಟ್ಟಿದೆ. ಎಷ್ಟು ಅಕ್ರಮ ಆಗಿದೆ ಮತ್ತು ಈ ಪ್ರಾಜೆಕ್ಟ್ ​ಅನ್ನು ಸರ್ಕಾರ ವಶಪಡಿಸಿಕೊಳ್ಳಬೇಕು ಅಂತ ವರದಿ ಕೊಟ್ಟಿದೆ. ಆದರೆ ಸರ್ಕಾರ ಅಂತಿಮ ನಿರ್ಧಾರ ಮಾಡಿಲ್ಲ. ಇದಕ್ಕೆ ಕಾರಣ ಗೊತ್ತಿಲ್ಲ. ಅಕ್ಟೋಬರ್ 19ರಲ್ಲಿ ಸಿಎಂ ಅವರಿಗೆ ಪತ್ರ ಬರೆದಿದ್ದೆ. ನೈಸ್ ವಿಚಾರವಾಗಿ ಕ್ರಮಕ್ಕೆ ಆಗ್ರಹಿಸಿದ್ದೇನೆ. ಸೋನಿಯಾ ಗಾಂಧಿ ಅವರ ಬಳಿಯೂ ಇದು ಚರ್ಚೆ ಆಗಿದೆ. ಧರ್ಮಸಿಂಗ್ ಕಾಲದಲ್ಲಿಯೇ ಚರ್ಚೆ ಆಗಿತ್ತು. ಆಗ ಸೋನಿಯಾ ಗಾಂಧಿ ಧರ್ಮಸಿಂಗ್ ಅವರಿಗೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದರು. ಆದರೆ ಇನ್ನೂ ಆಗಿಲ್ಲ" ಎಂದು ಹೇಳಿದರು.

"ನಮ್ಮ ಪಕ್ಷ ನೈಸ್ ವಿಷಯದಲ್ಲಿ ರಾಜಿ ಮಾಡಿಕೊಳ್ಳೊಲ್ಲ. ನಮ್ಮ ಪಕ್ಷ, ರೈತರು, ಬಡವರ ಪರ ಹೋರಾಟ ಮಾಡುತ್ತದೆ. ಯಡಿಯೂರಪ್ಪ ಅವಧಿಯಲ್ಲಿ ಹೆಚ್ಚುವರಿ ಭೂಮಿ ಕೊಡಲು ಆಗೋಲ್ಲ ಅಂತ ಅಫಿಡವಿಟ್ ಹಾಕಿದ್ದಾರೆ. ನೈಸ್​ಗೆ ಹೆಚ್ಚುವರಿ ಭೂಮಿ ಕೊಡೋಲ್ಲ ಅಂತ ಸುಪ್ರೀಂ ಕೋರ್ಟ್​ಗೆ ಯಡಿಯೂರಪ್ಪ ಅಫಿಡವಿಟ್ ಹಾಕಿದ್ದರು. ಇದು ದೊಡ್ಡ ಫ್ರಾಡ್ ಅಂತ ಯಡಿಯೂರಪ್ಪ ಅವರೇ ಅಫಿಡವಿಟ್ ಹಾಕಿದ್ದರು. ಕುಮಾರಸ್ವಾಮಿ ಈಗಾಗಲೇ ಬಿಜೆಪಿ ಜೊತೆ ಚರ್ಚೆ ಮಾಡಿದ್ದಾರೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡ್ತಾರೆ" ಎಂದರು.

ಮೈತ್ರಿ ಬಗ್ಗೆ ಸಂಶಯ ಬೇಡ: "ಕಾಂಗ್ರೆಸ್​ನ ಸೇಡಿನ ರಾಜಕೀಯ ಸರಿಯಲ್ಲ ಅಂತ ನಾವು ಹೇಳಿದ್ದೇವೆ. ಎನ್​ಡಿಎ ಪಾರ್ಟಿಯಾಗಿ ಇದ್ದಾಗ ಇದನ್ನು ಹೇಳುವುದು ನಮ್ಮ ಧರ್ಮ ಹೇಳಿದ್ದೇವೆ. ಮುಂದೆಯೂ ಹೇಳುತ್ತೇವೆ, ಎಲ್ಲಿಯವರೆಗೆ ಎನ್​ಡಿಎ ಭಾಗವಾಗಿ ಇರುತ್ತೇವೆಯೋ ಅಲ್ಲಿಯವರೆಗೂ ನಾವು ಹೇಳುತ್ತಲೇ ಇರುತ್ತೇವೆ. ಮುಂದಿನ ಲೋಕಸಭೆ ಚುನಾವಣೆಗೆ ಜೆಡಿಎಸ್​, ಬಿಜೆಪಿ ಜೊತೆ ಮೈತ್ರಿ ಆಗಿರುವ ಬಗ್ಗೆ ಯಾವುದೇ ಸಂಶಯ ಬೇಡ" ಎಂದು ಸ್ಪಷ್ಟನೆ ನೀಡಿದರು.

ಸಿದ್ದರಾಮ ಹೆಸರಲ್ಲಿ ಗೆಲ್ಲುವ ಕನಸು ನನಸಾಗಲ್ಲ: "ಅಲ್ಲಿ ಪ್ರಧಾನಿ ಮೋದಿ ಅವರು ಶ್ರೀರಾಮ ಅಂತಾರೆ. ಉಪವಾಸ, ನದಿ ಸ್ನಾನ ಇವೆಲ್ಲವನ್ನೂ ಮಾಡ್ತಾರೆ. ಇಲ್ಲಿ ಇವರಿಗೆ ಇರುವುದು ಸಿದ್ದರಾಮ ಮಾತ್ರ. ಸಿದ್ದರಾಮ ಹೆಸರಿನಲ್ಲಿ ಎನ್​ಡಿಎ ಸೋಲಿಸಿ 20 ಸೀಟು ಗೆಲ್ತೀವಿ ಅನ್ನೋ ಹಿನ್ನೆಲೆಯಲ್ಲಿ ಇವೆಲ್ಲವನ್ನೂ ಸೃಷ್ಟಿ ಮಾಡುತ್ತಿದ್ದಾರೆ. ಅದೆಲ್ಲಾ ಕನಸು ಮಾತ್ರ. ಈ‌ ಬಾರಿ ಮೋದಿ ನೇತೃತ್ವದಲ್ಲಿ ಕರ್ನಾಟಕದಲ್ಲಿ ಎಲ್ಲರ ನಿರೀಕ್ಷೆ ಮೀರಿ‌ ಜನ ಮೈತ್ರಿಗೆ ತೀರ್ಪು ಕೊಡ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ನಾವು ಕಾನೂನು ಬಿಟ್ಟು ಏನೂ ಮಾಡಿಲ್ಲ, ಬಿಜೆಪಿ ರಾಜಕೀಯವಾಗಿ ಬಳಸುತ್ತಿದೆ: ಪರಮೇಶ್ವರ್

Last Updated : Jan 5, 2024, 4:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.