ETV Bharat / state

ಹೆಚ್​ಡಿಕೆ, ನಿಖಿಲ್​ ಉಚ್ಛಾಟನೆ ನಕಲಿ ಪತ್ರ ವೈರಲ್​; ಇಬ್ರಾಹಿಂ ಬಂಡಾಯದ ಹಿಂದೆ ಕಾಂಗ್ರೆಸ್ ಕೈವಾಡ ಎಂದ ಜಿಟಿಡಿ

author img

By ETV Bharat Karnataka Team

Published : Oct 17, 2023, 9:17 PM IST

ಜೆಡಿಎಸ್​
ಜೆಡಿಎಸ್​

ಇಬ್ರಾಹಿಂ ಬಂಡಾಯದ ಹಿಂದೆ ಕಾಂಗ್ರೆಸ್ ಪಕ್ಷದ ಕೈವಾಡವಿದೆ ಎಂದು ಜಿ.ಟಿ.ದೇವೇಗೌಡ ಆರೋಪಿಸಿದರೆ, ಇಬ್ರಾಹಿಂ ಅವರಲ್ಲಿ ಇನ್ನೂ ಕಾಂಗ್ರೆಸ್ ತತ್ವಗಳು ಜೀವಂತವಾಗಿವೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ. ಮತ್ತೊಂದೆಡೆ, ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರನ್ನು ಉಚ್ಛಾಟಿಸಿರುವ ನಕಲಿ ಆದೇಶ ಪತ್ರ ಜಾಲತಾಣದಲ್ಲಿ ವೈರಲ್​ ಆಗಿದೆ.

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಬಂಡಾಯದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಮಾಜಿ ಸಚಿವ ಹಾಗು ಜೆಡಿಎಸ್​ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ದೂರಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯೊಳಗೆ ಜೆಡಿಎಸ್ ಮುಗಿಸಲು ಕಾಂಗ್ರೆಸ್​ ಹೋರಾಟ ಮಾಡುತ್ತಿದೆ. ಇಬ್ರಾಹಿಂ ಅವರು ಕಾಂಗ್ರೆಸ್ ಮಾತು ಕೇಳಿ ನೀವು ದುಡುಕಬಾರದು. ನಿಮ್ಮೊಂದಿಗೆ ಜೆಡಿಎಸ್ ವರಿಷ್ಠರಿದ್ದಾರೆ ಎಂದು ಹೇಳಿದರು.

ಮೈತ್ರಿ ಸಭೆಯಲ್ಲಿ ಇಬ್ರಾಹಿಂ ಕೂಡಾ ಇದ್ದರು: ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಬಂಡಾಯ ಇಲ್ಲ. ಪಕ್ಷ ಎರಡು ಭಾಗ ಆಗುವುದಿಲ್ಲ. ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳುವ ಸಂಬಂಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕರೆದಿದ್ದ ಸಭೆಯಲ್ಲಿ ಸಿ.ಎಂ.ಇಬ್ರಾಹಿಂ ಕೂಡ ಇದ್ದರು. ಅವರು ಕೂಡಾ ಮೈತ್ರಿಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಜಿಟಿಡಿ ಹೇಳಿದರು. ಅಲ್ಲದೇ ಅರಮನೆ ಮೈದಾನದಲ್ಲಿ ಜೆಡಿಎಸ್ ಸಭೆ ನಡೆದಾಗ ಇಬ್ರಾಹಿಂ ಭಾಗವಹಿಸಿದ್ದರು. ಆ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬೆಂಬಲ ಘೋಷಿಸಿದ್ದರು. ಸೀಟು ಹಂಚಿಕೆ ವಿಚಾರದಲ್ಲೂ ಸರಿಯಾದ ತೀರ್ಮಾನ ಕೈಗೊಳ್ಳುವಂತೆ ಸಲಹೆಯನ್ನೂ ನೀಡಿದ್ದರು. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಷ್ಟರ ಮಟ್ಟಿಗೆ ಗೆಲ್ಲಿಸಲು ಆಗಲಿಲ್ಲ ಎಂದು ಇಬ್ರಾಹಿಂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ ದೇವೇಗೌಡರು ರಾಜೀನಾಮೆ ಬೇಡ, ಪಕ್ಷ ಕಟ್ಟೋಣ ಎಂದು ಕಿವಿಮಾತು ಹೇಳಿದ್ದರು. ಅವರೊಂದಿಗೆ ಮಾತನಾಡುವುದಾಗಿಯೂ ದೇವೇಗೌಡರು ಹೇಳಿದ್ದಾರೆ. ಯಾರದೋ ಒತ್ತಡಕ್ಕೆ ಮಣಿದು ಇಬ್ರಾಹಿಂ ಸಭೆ ನಡೆಸಿದ್ದಾರೆ ಎಂದು ಜಿಟಿಡಿ ತಿಳಿಸಿದರು.

ಇದೇ ವೇಳೆ, ಮಾಜಿ ಶಾಸಕ ಮಹಿಮಾ ಪಟೇಲ್ ಹಾಗೂ ಎಂ.ಪಿ.ನಾಡಗೌಡರು ಪಕ್ಷಕ್ಕೆ ಸೇರುವುದಾದರೆ ಅಭ್ಯಂತರವಿಲ್ಲ ಎಂದರು.

ವಿಧಾನಸಭೆ ಚುನಾವಣೆಗೆ ಮುನ್ನ ಜೆಡಿಎಸ್ ಮುಗಿಸಲು ಎರಡೂ ರಾಷ್ಟ್ರೀಯ ಪಕ್ಷಗಳು ತೀರ್ಮಾನ ಮಾಡಿದ್ದವು. ಆಗ ಇಬ್ರಾಹಿಂ ಅವರನ್ನು ರಾಜ್ಯಾಧ್ಯಕ್ಷರಾಗಿ ದೇವೇಗೌಡರು ಮಾಡಿದರು. ದೆಹಲಿಗೆ ಕುಮಾರಸ್ವಾಮಿ ಕರೆದಿಲ್ಲ ಎಂಬ ಕಾರಣಕ್ಕೆ ಅವರು ಬೇಸರಗೊಂಡಿದ್ದಾರೆ. ಪಕ್ಷ ಈಗ ಸಂಕಷ್ಟದಲ್ಲಿದ್ದು ಇಬ್ರಾಹಿಂ ಅವರೇ ರಾಜ್ಯಾಧ್ಯಕ್ಷರಾಗಬೇಕೆಂದು ಮನವಿ ಮಾಡುತ್ತೇವೆ ಎಂದು ಜಿಟಿಡಿ ಹೇಳಿದರು.

ತನ್ವೀರ್ ಸೇಠ್ ಹೇಳಿದ್ದೇನು?: ಹುಟ್ಟು ಗುಣ ಸುಟ್ಟರೂ ಹೋಗಲ್ಲ ಅನ್ನುವ ಹಾಗೆ ಸಿ.ಎಂ.ಇಬ್ರಾಹಿಂ ಅವರಲ್ಲಿ ಕಾಂಗ್ರೆಸ್ ಗುಣ ಇದೆ ಎಂದು ಶಾಸಕ ತನ್ವೀರ್ ಸೇಠ್ ಪ್ರತಿಕ್ರಿಯಿಸಿದರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ಕೊಡುವುದಾಗಿ ಹೇಳಿರುವ ಸಿ.ಎಂ.ಇಬ್ರಾಹಿಂ ಹೇಳಿಕೆ ವಿಚಾರಕ್ಕೆ ಮೈಸೂರಿನಲ್ಲಿ ಪ್ರತಿಕ್ರಿಯೆಸಿದ ಸೇಠ್, ಅವರು ಇನ್ನೂ ಕಾಂಗ್ರೆಸ್ ಮನಸ್ಥಿತಿಯಲ್ಲಿದ್ದಾರೆ. ಅವರ ರಾಜಕೀಯ ಆರಂಭವಾಗಿದ್ದು ಕಾಂಗ್ರೆಸ್​ನಿಂದ. ಹೀಗಾಗಿ ಹುಟ್ಟುಗುಣ ಸುಟ್ಟರೂ ಹೋಗಲ್ಲ ಎಂದರು.

ಅವರಲ್ಲಿ ಇನ್ನೂ ಕಾಂಗ್ರೆಸ್ ತತ್ವಗಳು ಜೀವಂತವಾಗಿದೆ ಅನ್ನಿಸುತ್ತಿದೆ. ನಾವು ಸೈದ್ಧಾಂತಿಕ ರಾಜಕಾರಣ ಮಾಡ್ತಿದ್ದೀವಿ. ಜನರಿಗೆ ಎಲ್ಲವೂ ಗೊತ್ತಾಗುತ್ತಿದೆ. ಜೆಡಿಎಸ್-ಬಿಜೆಪಿ ಹಿಂದಿನಿಂದಲೂ ಒಂದೇ ಮನಸ್ಥಿತಿ. ಈಗ ಅಧಿಕೃತವಾಗಿ ಮೈತ್ರಿ ಆಗಿದ್ದಾರೆ ಅಷ್ಟೇ ಎಂದು ಹೇಳಿದರು.

fake letter viral
ನಕಲಿ ಪತ್ರ ವೈರಲ್

ಹೆಚ್‌ಡಿಕೆ, ನಿಖಿಲ್ ಉಚ್ಛಾಟನೆಯ ನಕಲಿ ಪತ್ರ ವೈರಲ್: ಜೆಡಿಎಸ್ಪಕ್ಷದಿಂದ‌ ಮಾಜಿ ಮುಖ್ಯಮಂತ್ರಿ ಹಾಗೂ‌ ಶಾಸಕ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಉಚ್ಛಾಟಿಸಿರುವುದಾಗಿ ನಕಲಿ ಆದೇಶ ಪತ್ರವೊಂದು ಜಾಲತಾಣದಲ್ಲಿ ವೈರಲ್​ ಆಗಿದ್ದು ಇದನ್ನು ಹರಿಬಿಟ್ಟಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಬೆಂಗಳೂರಿನ ಜೆ.ಪಿ.ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಬಿಜೆಪಿಯೊಂದಿಗೆ‌ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಪಕ್ಷದ ಶಾಸಕಾಂಗ‌ ನಾಯಕ ಕುಮಾರಸ್ಚಾಮಿ, ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ತಕ್ಷಣದಿಂದ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಇಬ್ರಾಹಿಂ ಹೆಸರಿನ ಸಹಿ ಹಾಗೂ ಪತ್ರ ವೈರಲ್ ಆಗಿತ್ತು.

ಪತ್ರ ವೈರಲ್ ಆಗಿದ್ದರಿಂದ ಪರ-ವಿರೋಧ ಚರ್ಚೆಯಾಗಿತ್ತು. ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ಎಚ್ಚೆತ್ತುಕೊಂಡ ಇಬ್ರಾಹಿಂ, ನನ್ನ ಹೆಸರಿನಲ್ಲಿ ಯಾರೋ ಕಿಡಿಗೇಡಿಗಳು ಕುಮಾರಸ್ವಾಮಿ ಹಾಗೂ ನಿಖಿಲ್‌ ಕುಮಾರಸ್ವಾಮಿ ಅವರನ್ನು ಉಚ್ಛಾಟಿಸಿರುವುದಾಗಿ ನಕಲಿ‌ ಪತ್ರ ಹರಿಬಿಟ್ಟಿದ್ದಾರೆ. ಇಂತಹ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

"ಇದರಿಂದ ನನಗೆ ಮತ್ತು ಪಕ್ಷಕ್ಕೆ ಮುಜುಗರ ಆಗಿದೆ. ಕಿಡಿಗೇಡಿಗಳು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ.‌ ನಕಲಿ ಪತ್ರ ವೈರಲ್ ಆಗಿರುವುದರಿಂದ ನನಗೆ ವೈಯಕ್ತಿಕವಾಗಿ ಧಕ್ಕೆ ಆಗಿದೆ. ಈ ರೀತಿ ನಕಲಿ ಪತ್ರ ಹರಿಬಿಟ್ಟವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿ" ಎಂದು ದೂರಿನಲ್ಲಿ ಇಬ್ರಾಹಿಂ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಇದನ್ನೂಓದಿ: ಕೋಮುವಾದಿ ಬಿಜೆಪಿ ಜೊತೆ ಮದುವೆ ಆಗ್ತೇನೆ ಅಂತಿದಾರೆ ಕುಮಾರಸ್ವಾಮಿ: ಹೆಚ್.ವಿಶ್ವನಾಥ್ ಲೇವಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.