ETV Bharat / state

ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ಖುದ್ದಾಗಿ ತೆರಳಿ ಗೌರವ ಸಲ್ಲಿಸಿದ ರಾಜ್ಯಪಾಲ ಗೆಹ್ಲೋಟ್

author img

By

Published : Aug 9, 2023, 7:05 PM IST

governor-thavarchand-gehlot-visited-the-home-of-freedom-fighters
ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ಖುದ್ದಾಗಿ ತೆರಳಿ ಗೌರವ ಸಲ್ಲಿಸಿದ ರಾಜ್ಯಪಾಲ ಗೆಹ್ಲೋಟ್

ಕ್ವಿಟ್​ ಇಂಡಿಯಾ ಚಳವಳಿ ವರ್ಷಾಚರಣೆ ಹಿನ್ನೆಲೆ ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್ ಅವರು ಐವರು ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ತೆರಳಿ ಗೌರವ ಸಲ್ಲಿಸಿದರು.

ಬೆಂಗಳೂರು : ಕ್ವಿಟ್ ಇಂಡಿಯಾ ಚಳವಳಿ ವರ್ಷಾಚರಣೆ ಅಂಗವಾಗಿ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಪ್ರಯುಕ್ತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸ್ವಾತಂತ್ರ್ಯಹೋರಾಟಗಾರರ ಮನೆಗೆ ಖುದ್ದಾಗಿ ಭೇಟಿ ನೀಡಿ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಯಾನಂದ್ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಇಂದು ಬೆಳಗ್ಗೆ ಬಸವನಗುಡಿಯಲ್ಲಿರುವ ಶ್ರೀಸಾಯಿ ವೃದ್ಧಾಶ್ರಮದಲ್ಲಿ ವಾಸಿಸುತ್ತಿರುವ ಶಕುಂತಲ ಅವರನ್ನು ರಾಜ್ಯಪಾಲರು ಭೇಟಿ ಮಾಡಿದರು. ಬಳಿಕ ಅವರನ್ನು ಸನ್ಮಾನಿಸಿ, ಪ್ರಮಾಣಪತ್ರ, ಸಿಹಿ ನೀಡಿ ಗೌರವಿಸಿದರು. ನಂತರ ಯಲಚೇನಹಳ್ಳಿಯ ನಂಜಪ್ಪ ಲೇಔಟ್ ನಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರಾದ ಎಸ್​ವಿಟಿ ಗುಪ್ತಾ ಅವರ ಮನೆಗೆ ತೆರಳಿ ಅವರನ್ನು ಸನ್ಮಾನಿಸಿ ಪ್ರಮಾಣ ಪತ್ರ ನೀಡಿದರು.

ಬಳಿಕ ಬನಶಂಕರಿ 3ನೇ ಹಂತದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರಾದ ಶಂಕರನಾರಾಯಣ ರಾವ್ ಅವರ ಮನೆಗೆ ತೆರಳಿ ಅವರನ್ನು ಸನ್ಮಾನಿಸಿ ಗೌರವಿಸಿದರು. ಬಳಿಕ ಸಿಹಿ ನೀಡಿ ಕುಶಲೋಪರಿ ವಿಚಾರಿಸಿದ ರಾಜ್ಯಪಾಲರು, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟ ತಮಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.

ನಂತರ ಮಲ್ಲೇಶ್ವರಂನಲ್ಲಿರುವ ನಾಗಭೂಷಣ್ ರಾವ್ ಅವರ ಮನೆಗೆ ತೆರಳಿದ ರಾಜ್ಯಪಾಲರು, ನಾಗಭೂಷಣ್ ರಾವ್ ಅವರನ್ನು ಸನ್ಮಾನಿಸಿದರು. ಬಳಿಕ ರಾಜ್ಯಪಾಲರು "ತಮ್ಮ ದೇಶ ಸೇವೆ ನಮ್ಮೆಲ್ಲರಿಗೆ ಸ್ಫೂರ್ತಿ ಎಂದು ಹೇಳಿದರು. ಭೂಪಸಂದ್ರದ ವಿನಾಯಕ ಲೌಔಟ್​​ನಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ಕೆ.ಸಿ ನಾರಾಯಣಪ್ಪ ಅವರನ್ನು ಭೇಟಿ ಮಾಡಿ ಸನ್ಮಾನಿಸಿದರು.

ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ : ಭಾರತ ಬಿಟ್ಟು ತೊಲಗಿ ಚಳವಳಿ ದಿನ ಅಂಗವಾಗಿ ಪಾಲಿಕೆ ಆಡಳಿತಗಾರ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ನಗರದ ಮಹಾತ್ಮ ಗಾಂಧೀಜಿ ರಸ್ತೆಯಲ್ಲಿರುವ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು.

ಈ ಸಂದರ್ಭ ನಡೆದ ಸರ್ವಧರ್ಮ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಪ್ರತಿಭಾ ಬಾಲಮಂದಿರ ಮಕ್ಕಳಿಂದ ಗೀತ ವಾಚನ, ದೀಪಿಕಾ ಶ್ರೀಕಾಂತ್ ಅವರಿಂದ ವೈಷ್ಣವ ಜನತೋ, ಹಡ್ಸನ್ ಚರ್ಚಿನ ಫಾದರ್ ರೆವೆರೆಂಡ್ ಆಲ್ಫ್ರೆಡ್ ಸುದರ್ಶನ್ ಮತ್ತು ತಂಡದಿಂದ ಬೈಬಲ್ ವಾಚನ, ಗುರುದ್ವಾರದ ಶ್ರೀ ಗುರುಸಿಂಗ್ ಸಭಾ ಮತ್ತು ತಂಡದವರಿಂದ ಗುರು ಗ್ರಂಥ ವಾಚನ, ಮೌಲ್ವಿ ಹಫೀಜ್ ಶಾಬೀರ್ ಹುಸೇನ್ ರಿಂದ ಖುರಾನಿನ ವಾಚನ ಮಾಡಲಾಯಿತು.

ಈ ವೇಳೆ ವಿಶೇಷ ಆಯುಕ್ತರು(ಆಡಳಿತ) ಹರೀಶ್ ಕುಮಾರ್, ಉಪ ಆಯುಕ್ತ ಮಂಜುನಾಥ್ ಸ್ವಾಮಿ, ವಲಯ ಜಂಟಿ ಆಯುಕ್ತೆ ಪಲ್ಲವಿ, ಮಾಜಿ ಸಚಿವ ರಾಮಚಂದ್ರೇಗೌಡ, ಮಾಜಿ ಮಹಾಪೌರ ಜೆ. ಹುಚ್ಚಪ್ಪ, ಎಂ.ರಾಮಚಂದ್ರಪ್ಪ, ಎಸ್.ಕೆ. ನಟರಾಜ್, ಡಿ.ವೆಂಕಟೇಶ್ ಮೂರ್ತಿ, ಬಿ.ಎಸ್. ಸತ್ಯನಾರಾಯಣ ಹಾಗೂ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ : ಮಕ್ಕಳಲ್ಲಿ ಮೊಬೈಲ್ ಮಿತ ಬಳಕೆ ಅಧ್ಯಯನಕ್ಕೆ 10 ತಂಡ ರಚನೆ: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ ನಾಗಣ್ಣ ಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.