ETV Bharat / state

ಕರ್ನಾಟಕ ತಿಗಳ ಅಭಿವೃದ್ಧಿ ನಿಗಮ ರಚಿಸಿ ಸರ್ಕಾರದ ಆದೇಶ

author img

By

Published : Mar 14, 2023, 11:02 PM IST

ವಿಧಾನಸೌಧ
ವಿಧಾನಸೌಧ

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಆಡಳಿತ ಪಕ್ಷ ಬಿಜೆಪಿ ತಿಗಳ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ಹೊರಡಿಸಿದೆ.

ಬೆಂಗಳೂರು : ಕರ್ನಾಟಕ ತಿಗಳ ಅಭಿವೃದ್ಧಿ ನಿಗಮ ಸ್ಥಾಪಿಸಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇಂದು ಆದೇಶ ಹೊರಡಿಸಿದೆ. ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಹಲವು ಸಮುದಾಯಗಳ ಓಲೈಕೆಗೆ ಆಡಳಿತ ಪಕ್ಷ ಬಿಜೆಪಿ ಮುಂದಾಗಿದ್ದು, ಮತ್ತೊಂದು ಸಮುದಾಯಕ್ಕೆ ಅಭಿವೃದ್ಧಿ ನಿಗಮ ಪ್ರಕಟಿಸಲಾಗಿದೆ.

ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪ್ರವರ್ಗ-2ಎ ಅಡಿಯಲ್ಲಿ ಶೈಕ್ಷಣಿಕ ಮತ್ತು ಉದ್ಯೋಗ ಮೀಸಲಾತಿ ಕಲ್ಪಿಸಿ ಆದೇಶಿಸಿರುವ ತಿಗಳ, ಅಗ್ನಿವಂಶ, ಅಗ್ನಿವನ್ನಿ, ಅಗ್ನಿಕುಲಕ್ಷತ್ರಿಯ, ಧರ್ಮರಾಜ ಕಾಪು, ಪಳ್ಳಿ ಶಂಭುಕುಲ ಕ್ಷತ್ರಿಯ, ತಿಗಳ, ವನ್ನಿಯರ್, ವನ್ನಿಕುಲಕ್ಷತ್ರಿಯ, ತಿಗ್ಲರ್, ಕರೋವನ್ ಜಾತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ತಿಗಳ ಸಮುದಾಯ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಪ್ರತಿಪಕ್ಷ ಕಾಂಗ್ರೆಸ್ ತಿಗಳ ಕ್ಷತ್ರಿಯ ಸಮಾವೇಶವನ್ನು ಆಯೋಜಿಸಿ, ತಿಗಳ ಸಮುದಾಯದ ಅಭಿವೃದ್ಧಿಗೆ ನಿಗಮ ಅಥವಾ ಮಂಡಳಿ ರಚಿಸಬೇಕು ಎಂದು ಆಗ್ರಹಿಸಿತ್ತು.

ಅದೇ ರೀತಿ ನಗರದ ಬಿಜೆಪಿ ಅರಮನೆ ಮೈದಾನದಲ್ಲಿ ಕಳೆದ ತಿಂಗಳು ಕ್ಷತ್ರಿಯ ಸಮುದಾಯದ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೇರಿ ಪಕ್ಷದ ಹಲವು ನಾಯಕರು ಭಾಗವಹಿಸಿದ್ದರು.ಎರಡೂ ಸಮಾವೇಶಗಳ ಪರಿಣಾಮವಾಗಿ ತಿಗಳ ಸಮುದಾಯ ಅಭಿವೃದ್ಧಿ ಅಸ್ತಿತ್ವಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ.

ತಿಗಳ ಕ್ಷತ್ರಿಯ ನಡೆ ಕಾಂಗ್ರೆಸ್​ ಕಡೆ ಸಮಾವೇಶ: ಇನ್ನೊಂದೆಡೆ (ಭಾನುವಾರ)ದಂದು ರಾಜ್ಯ ಸರ್ಕಾರವು ತಿಗಳ ಕ್ಷತ್ರಿಯ ಜನಾಂಗವನ್ನು ಕಡೆಗಣಿಸಿದೆ. ಎಲ್ಲ ಸಮುದಾಯಕ್ಕೆ ಪ್ರತ್ಯೇಕ ನಿಗಮ ಮಂಡಳಿ ಮಾಡಲಾಗಿದೆ. ಆದರೆ ತಿಗಳ ಕ್ಷತ್ರಿಯ ಸಮುದಾಯಕ್ಕೆ ನಿಗಮ ಮಂಡಳಿ ಮಾಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಪಿ. ಆರ್ ರಮೇಶ್ ಹೇಳಿದ್ದರು.

ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ್ದ ಅವರು, ಈಗಿರುವ ನಿಗಮ ಮಂಡಳಿಯಲ್ಲಿ ಕೆಲಸ ಮಾಡುವವರಿಗೆ ಸರಿಯಾಗಿ ಸಂಬಳ ಸಿಕ್ಕಿಲ್ಲ. ಕಳೆದ ಬಜೆಟ್ ನಲ್ಲಿ ತಿಗಳ ಸಮುದಾಯಕ್ಕೆ 400 ಕೋಟಿ ಹಣ ಇಟ್ಟಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದರು. ಆದರೆ ಒಂದು ರೂಪಾಯಿಯನ್ನೂ ಇದುವರೆಗೂ ಖರ್ಚು ಮಾಡಿಲ್ಲ. ಮಾರ್ಚ್​ 14ರಂದು ತಿಗಳ ಸಮುದಾಯದ ಜಾಗೃತಿ ಸಭೆಯನ್ನು ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೇಸ್ ನಲ್ಲಿ ಹಮ್ಮಿಕೊಂಡಿದ್ದೇವೆ. ಈ ಜಾಗೃತಿ ಸಮಾವೇಶಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬರಲಿದ್ದಾರೆ ಎಂದು ತಿಳಿಸಿದ್ದರು.

ತಿಗಳ ಕ್ಷತ್ರಿಯ ನಡೆ ಕಾಂಗ್ರೆಸ್​ ಕಡೆ : ಜೊತೆಗೆ ತಿಗಳ ಕ್ಷತ್ರಿಯ ನಡೆ ಕಾಂಗ್ರೆಸ್ ಕಡೆ ಎಂದು ನಾವು ಕಾರ್ಯಕ್ರಮ ಮಾಡುತ್ತಿದ್ದೇವೆ. ತಿಗಳ ಸಮುದಾಯಕ್ಕೆ ಇರುವ ಕೆಲವು ಕಾರ್ಯಕ್ರಮಗಳನ್ನು ಈ ಸರ್ಕಾರ ರದ್ದು ಮಾಡಿದೆ. ಅದಕ್ಕಾಗಿ ತಿಗಳ ಕ್ಷತ್ರಿಯ ನಡೆ ಕಾಂಗ್ರೆಸ್ ಕಡೆ ಎಂಬ ಕಾರ್ಯಕ್ರಮ ಮಾಡುತ್ತಿದ್ದೇವೆ. ರಾಜ್ಯದಲ್ಲಿ ನಮ್ಮ ಸಮುದಾಯದ 40 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ಹಿಂದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ತಿಗಳ ಜನಾಂಗದ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿ ಓದಿದ್ದರು ಎಂದು ಹೇಳಿದ್ದರು.

ಇಂದು ತಿಗಳ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂಬ ಸಂದೇಶವನ್ನು ಪಿ.ಆರ್. ರಮೇಶ್ ನೀಡಿದ್ದರು. ಇದಕ್ಕೆ ಕೆಲವರು ಸಮ್ಮತಿ ಸೂಚಿಸಿದ್ದರು. ಆದರೆ ಸಂಪೂರ್ಣ ಸಮುದಾಯ ಕಾಂಗ್ರೆಸ್ ಬೆನ್ನಿಗೆ ನಿಲ್ಲುವುದೇ ಎನ್ನುವುದನ್ನು ಕಾದು ನೋಡಬೇಕಿದೆ. ಯಾವ ಕ್ಷೇತ್ರದಲ್ಲಿ ತಿಗಳ ಸಮುದಾಯದ ಮತದಾರರು ನಿರ್ಣಾಯಕರಾಗಿದ್ದಾರೋ, ಅಲ್ಲಿ ತಾವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂಬ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಗಿತ್ತು.

ತಿಗಳ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿದ್ದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸಾಕಷ್ಟು ಅನುಕೂಲ, ಅನುದಾನ ಸಿಕ್ಕಿತ್ತು. ಈಗಿನ ಬಿಜೆಪಿ ಸರ್ಕಾರ ನಮ್ಮನ್ನು ಕಡೆಗಣಿಸಿದೆ. ಸಮುದಾಯವನ್ನು ಒಡೆಯುವ ಕೆಲಸ ಮಾಡುತ್ತಿದೆ. ಇದರಿಂದ ನಾವು ಈಗ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಾದಿದೆ. ಆದಷ್ಟು ಬೇಗ ಒಂದು ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಸಮಾವೇಶ ಇದಕ್ಕೆ ಪರಿಹಾರ ಒದಗಿಸಲಿದೆ ಎಂದು ಪಿ. ಆರ್​ ರಮೇಶ್ ಅಭಿಪ್ರಾಯಪಟ್ಟಿದ್ದರು.​​

ಇದನ್ನೂ ಓದಿ : ಮಾ.14ರಂದು ತಿಗಳ ಕ್ಷತ್ರಿಯ ನಡೆ ಕಾಂಗ್ರೆಸ್ ಕಡೆ.. ಜಾಗೃತಿ ಸಮಾವೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.