ETV Bharat / state

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಆರೋಗ್ಯ ಸಂಜೀವಿನಿ ಯೋಜನೆ ಜಾರಿಗಾಗಿ ಪರಿಷ್ಕೃತ ಕಾರ್ಯನೀತಿ ಪ್ರಕಟ

author img

By

Published : Mar 11, 2023, 7:00 AM IST

Good news for government employees
Good news for government employees

ಆರೋಗ್ಯ ಸಂಜೀವಿನಿ ಯೋಜನೆ ಜಾರಿಗಾಗಿ ಪರಿಷ್ಕೃತ ಕಾರ್ಯನೀತಿ ಪ್ರಕಟ - ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ

ಬೆಂಗಳೂರು: ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಸಂಬಂಧ ರಾಜ್ಯ ಸರ್ಕಾರ ಪರಿಷ್ಕೃತ ಕಾರ್ಯನೀತಿ ಪ್ರಕಟಿಸಿದ್ದು, ಆ ಮೂಲಕ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದೆ. ಈ ಯೋಜನೆಯಡಿ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ನೌಕರರು (ಉದಾ: ಪತಿ, ಪತ್ನಿ, ತಂದೆ, ತಾಯಿ ಮತ್ತು ಮಕ್ಕಳು) ನಗದು ರಹಿತವಾಗಿ ಆರೋಗ್ಯ ಸೇವಾ ಸೌಲಭ್ಯವನ್ನು ಪಡೆಯಬಹುದಾಗಿದೆ.

ಈ ಯೋಜನೆಯನ್ನು 2020-21ನೇ ಸಾಲಿನ ಬಜೆಟ್​​ನಲ್ಲಿ ಘೋಷಣೆ ಮಾಡಲಾಗಿತ್ತು. ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಒದಗಿಸಲು ನೂತನ 'ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ' (KASS) ಯನ್ನು ಅನುಷ್ಠಾನಗೊಳಿಸುವ ಸಂಬಂಧ ಸರ್ಕಾರ ಕೆಲ ಸೂಚನೆಗಳನ್ನು ನೀಡಿ ಆದೇಶಿಸಿದೆ.

KASS ಯೋಜನೆಯ ಉದ್ದೇಶಕ್ಕಾಗಿ ಕುಟಂಬ ಎಂದರೆ ಸರ್ಕಾರಿ ನೌಕರನ ಪತಿ ಅಥವಾ ಪತಿ, ತಂದೆ ಮತ್ತು ತಾಯಿ (ಮಲ ತಾಯಿಯನ್ನೊಳಗೊಂಡಂತೆ) ಅವರು ಸರ್ಕಾರಿ ನೌಕರನೊಂದಿಗೆ ಸಾಮಾನ್ಯವಾಗಿ ವಾಸವಾಗಿದ್ದಲ್ಲಿ ಮತ್ತು ಅವರ ಒಟ್ಟು ಮಾಸಿಕ ಆದಾಯ- ಕನಿಷ್ಠ ಕುಟುಂಬ ಪಿಂಚಣಿ (ರೂ.85,000) ಹಾಗೂ ಚಾಲ್ತಿಯಲ್ಲಿದ್ದ ತುಟ್ಟಿ ಭತ್ಯೆಯನ್ನು ಒಳಗೊಂಡ ಮೊತ್ತವನ್ನು ಮೀರಿರಬಾರದು. ಸರ್ಕಾರಿ ನೌಕರನ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರುವ ಮಕ್ಕಳು (ದತ್ತು ಪಡೆದ ಮಕ್ಕಳು ಮತ್ತು ಮಲ ಮಕ್ಕಳನ್ನೊಳಗೊಂಡಂತೆ) ಈ ಯೋಜನೆಯಡಿ ನೋಂದಾಯಿಸಬಹುದಾಗಿದೆ.

ಈ ಯೋಜನೆ ಯಾರಿಗೆ ಅನ್ವಯಿಸಲ್ಲ..? ಈ ಯೋಜನೆಗೆ ರಾಜ್ಯ ಉಚ್ಚ ನ್ಯಾಯಾಲಯದ ನೌಕರರು, ರಾಜ್ಯ ವಿಧಾನ ಮಂಡಲದ ನೌಕರರು, 'ಆರೋಗ್ಯ ಭಾಗ್ಯ' ಯೋಜನೆಯ ಸೌಲಭ್ಯ ಪಡೆಯುತ್ತಿರುವ ಪೊಲೀಸ್‌ ಇಲಾಖೆಯ ಸಿಬ್ಬಂದಿ, ಅಖಿಲ ಭಾರತ ಸೇವೆಗೆ ಸೇರಿದ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ನಿಗಮ ಮಂಡಳಿಗಳು, ಸಹಕಾರ ಸಂಸ್ಥೆಗಳ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಇತರ ಸಂಸ್ಥೆಗಳ ನೌಕರರು ಒಳಪಡುವುದಿಲ್ಲ ಎಂದು ಸಹ ಆದೇಶದಲ್ಲಿ ತಿಳಿಸಲಾಗಿದೆ.

ಯೋಜನೆಗೆ ಒಳಪಡುವ ನೌಕರ ಪ್ರತಿಯೊಂದು ವಿವರಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ನೀಡಬೇಕು. ಸರ್ಕಾರಿ ನೌಕರನ ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಸದಸ್ಯರು ಯೋಜನೆಗೆ ಒಳಪಡಲು ಅರ್ಹತೆ ಹೊಂದಿದಲ್ಲಿ (ಉದಾ: ಕುಟುಂಬದಲ್ಲಿ ಸರ್ಕಾರಿ ನೌಕರನೊಂದಿಗೆ ವಾಸಿಸುತ್ತಿರುವ ಆತನ ಮಗ, ಮಗಳು ಅಥವಾ ತಂದೆ ಮತ್ತು ತಾಯಿ ಕೂಡ ಯೋಜನೆಗೆ ಒಳಪಟ್ಟಿದ್ದಲ್ಲಿ) ಅವರು ಕೂಡ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಉದ್ದೇಶಕ್ಕಾಗಿ ಅಂತಹ ನೌಕರರನ್ನು ಪ್ರತ್ಯೇಕ ಕುಟುಂಬ ಎಂದು ಪರಿಗಣಿಸಲಾಗುವುದು.

ವೈಯಕ್ತಿಕ ಧಾರ್ಮಿಕ ಸಂಪ್ರದಾಯಗಳಲ್ಲಿ ಏನೇ ಒಳಗೊಂಡಿದ್ದರೂ, ಪುರುಷ ಸರ್ಕಾರಿ ನೌಕರನ ಕಾನೂನುಬದ್ಧ ಸಂಪ್ರದಾಯದಂತೆ ವಿವಾಹವಾದ ಜೀವಿತ ಮೊದಲನೇ ಪತ್ನಿಯನ್ನು ಮತ್ತು ಆಕೆಯಿಂದ ಜನಿಸಿದ ಮಕ್ಕಳನ್ನು ಮಾತ್ರ ಯೋಜನೆಗೆ ಪರಿಗಣಿಸಲಾಗುವುದು. ಮೊದಲನೇ ಪತ್ನಿ, ಜೀವಂತವಾಗಿದ್ದು, ಸರ್ಕಾರದಿಂದ ಅನುಮತಿ ಪಡೆದು ಎರಡನೇ ವಿವಾಹವಾದ ಪ್ರಕರಣಗಳಿಗೆ ಇದು ಅನ್ವಯಿಸುವುದಿಲ್ಲ. ಅವಶ್ಯವಿರುವ ಕಡೆಗಳಲ್ಲಿ ಸೂಕ್ತ ದಾಖಲೆಗಳನ್ನು ತಪ್ಪದೇ ಒದಗಿಸಬೇಕು. (ಉದಾ: ಮಕ್ಕಳು ಜನಿಸಿದಾಗ ಅವರ ಜನನ ಪ್ರಮಾಣಪತ್ರ, ದತ್ತು ಪ್ರಕರಣಗಳಲ್ಲಿ ದತ್ತು ಪತ್ರ, ತಂದೆ- ತಾಯಿಯರ ಆದಾಯ ಪ್ರಮಾಣಪತ್ರ, ವಿವಾಹದ ಸಂದರ್ಭದಲ್ಲಿ ಸೂಕ್ತ ದಾಖಲೆ ಒದಗಿಸಬೇಕು.)

ಸರ್ಕಾರಿ ನೌಕರ ತನ್ನ ನೇಮಕಾತಿ ಆದೇಶ ಮತ್ತು ಕೆಜಿಐಡಿ ಪಾಲಿಸಿಯಲ್ಲಿ ನಮೂದಿಸಿದ ಹೆಸರನ್ನು ನಮೂದಿಸಬೇಕು. ಕಾನೂನು ಸಮ್ಮತವಾಗಿ ಹೆಸರನ್ನು ಬದಲಾಯಿಸಿದ್ದಲ್ಲಿ (ತನ್ನ ಹೆಸರನ್ನು ಬದಲಾವಣೆ ಮಾಡಿದಲ್ಲಿ, ವಿವಾಹದ ನಂತರದ ಹೆಸರು, ಇತ್ಯಾದಿ) ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಬೇಕು. ಅದೇ ರೀತಿ ಕುಟುಂಬದ ಸದಸ್ಯರ ಹೆಸರು ಆಧಾರ್ ಕಾರ್ಡ್​ನಲ್ಲಿ ಇರುವಂತೆ ನಮೂದಿಸಬೇಕು. ಆಧಾರ್ ಕಾರ್ಡ್​ನಲ್ಲಿ ಕೂಡ ಕಾಲ ಕಾಲಕ್ಕೆ ಉಂಟಾಗುವ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಕ್ರಮವಹಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಇದನ್ನೂ ಓದಿ: ಬಿಎಂಟಿಸಿ ಬಸ್ ಅಗ್ನಿ ಅವಘಡದಲ್ಲಿ ಮೃತ ಚಾಲಕನ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ, ಸರ್ಕಾರಿ ನೌಕರಿ: ಶ್ರೀರಾಮುಲು ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.