ETV Bharat / state

ಕಾಮಗಾರಿಗಳಿಗೆ ನೀಡಿರುವ ತಡೆಯಾಜ್ಞೆ ತೆರವು ಮಾಡಿ: ಸರ್ಕಾರಕ್ಕೆ ಶಾಸಕ ಜಿ.ಟಿ.ದೇವೇಗೌಡ ಆಗ್ರಹ

author img

By

Published : Jul 12, 2023, 5:44 PM IST

g-t-deve-gowda-demanded-for-vacate-the-injunction-against-sanctioned-works
ಮಂಜೂರಾಗಿರುವ ಕಾಮಗಾರಿಗಳಿಗೆ ನೀಡಿರುವ ತಡೆಯಾಜ್ಞೆ ತೆರವು ಮಾಡಿ: ಸರ್ಕಾರಕ್ಕೆ ಶಾಸಕ ಜಿ.ಟಿ.ದೇವೇಗೌಡ ಆಗ್ರಹ

ಹಿಂದೆ ಕಾಂಗ್ರೆಸ್ ಪಕ್ಷದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಪ್ರತಿಭಟನೆ ಮಾಡಿತ್ತು. ಈಗ ಅಧಿಕಾರಕ್ಕೆ ಬಂದಿರುವ ಅವರು ದರವನ್ನು ಕಡಿಮೆ ಮಾಡಬೇಕು ಎಂದು ಜೆಡಿಎಸ್​ ಶಾಸಕ ಜಿ ಟಿ ದೇವೇಗೌಡ ಒತ್ತಾಯಿಸಿದ್ದಾರೆ.

ಬೆಂಗಳೂರು: ಈಗಾಗಲೇ ಮಂಜೂರಾಗಿರುವ ಕಾಮಗಾರಿಗಳಿಗೆ ನೀಡಲಾಗಿರುವ ತಡೆಯಾಜ್ಞೆ ತೆರವು ಮಾಡುವಂತೆ ಜೆಡಿಎಸ್ ಶಾಸಕರು ಆಗ್ರಹಿಸಿದ್ದಾರೆ. ವಿಧಾನಸಭೆಯಲ್ಲಿಂದು ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತವಾಗಿದೆ. ಈಗಾಗಲೇ ಮಂಜೂರಾಗಿದ್ದ ಕೆಲಸಗಳು ಸ್ಥಗಿತಗೊಳ್ಳುತ್ತಿವೆ. ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಮುಂದುವರೆಸಲು ಅವಕಾಶ ಮಾಡಿಕೊಡಬೇಕು. ಶಾಸಕರ ಪ್ರವೇಶಾಭಿವೃದ್ಧಿ ನಿಧಿಯಡಿ ನೀಡಲಾಗುತ್ತಿರುವ 2 ಕೋಟಿ ರೂ.ಗಳನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಯಲ್ಲಿ ಅನುದಾನವಿಲ್ಲ. ಯಾಕೆ ಚುನಾವಣೆ ಮಾಡುತ್ತೀರಿ, ರದ್ದು ಮಾಡಿ ಎಂದು ಗರಂ ಆದರು. ಇದಕ್ಕೆ ದನಿಗೂಡಿಸಿದ ಶಾಸಕ ಎಂ.ಟಿ.ಕೃಷ್ಣಪ್ಪ, ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಿಸಿಕೊಳ್ಳುವುದೇ ಕಷ್ಟ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡುವುದೇ ಕಷ್ಟ. ಆಗೋ - ಇಗೋ ಮಂಜೂರಾಗಿರುವ ಅನುದಾನದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ತಕ್ಷಣ ಮಂಜೂರು ಮಾಡಿರುವ ಕಾಮಗಾರಿಗಳನ್ನು ಮುಂದುವರೆಸಲು ಟೆಂಡರ್ ಕರೆದು ಆರಂಭಿಸಬೇಕೆಂದು ಒತ್ತಾಯಿಸಿದರು.

ಅನ್ನಭಾಗ್ಯ, ಶಕ್ತಿ ಯೋಜನೆಗಳು ಬಡಜನರಿಗೆ ಸಾಕಷ್ಟು ನೆರವಾಗಿದೆ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿರುವ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಕ್ತಿ ಯೋಜನೆಗಳಿಂದ ರಾಜ್ಯದ ಪುರಾಣ ಪುಣ್ಯಕ್ಷೇತ್ರಗಳು, ದೇವಸ್ಥಾನಗಳು ತುಂಬಿ ತುಳುಕುತ್ತಿವೆ. ಅನ್ನಭಾಗ್ಯ ಯೋಜನೆ ಅತ್ಯಂತ ಮಹತ್ವದ್ದು. ಸಿದ್ದರಾಮಯ್ಯ ಅವರು ತಮ್ಮ ಅನುಭವದಿಂದ ಯೋಜನೆ ಜಾರಿಗೊಳಿಸಿದ್ದಾರೆ. ತಮಗೂ ಕೂಡ ಬಾಲ್ಯದಲ್ಲಿ ಅನ್ನದ ಮಹತ್ವ ಅರಿತುಕೊಳ್ಳುವಂತಹ ಅನುಭವಗಳಾಗಿವೆ ಎಂದರು.

ಕೇಂದ್ರ ಸರ್ಕಾರ ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡದೆ ಇರುವುದು ಖಂಡನೀಯ. ಬಿಜೆಪಿಯವರು ಗ್ಯಾರಂಟಿ ಯೋಜನೆಗಳನ್ನು ತಕ್ಷಣದಿಂದಲೇ ಜಾರಿಗೊಳಿಸಿಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುವ ನೈತಿಕ ಹಕ್ಕು ಹೊಂದಿಲ್ಲ. ಸರ್ಕಾರ ಹಣಕಾಸು ಸಂಪನ್ಮೂಲಗಳನ್ನು ಹೊಂದಿಸಿಕೊಂಡು ಜಾರಿ ಮಾಡಲಿ ಎಂದು ಸಲಹೆ ನೀಡಿದರು. ಹಿಂದೆ ಕಾಂಗ್ರೆಸ್ ಪಕ್ಷದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಪ್ರತಿಭಟನೆ ಮಾಡಿತ್ತು. ಈಗ ಆ ಪಕ್ಷವೇ ಅಧಿಕಾರಕ್ಕೆ ಬಂದಿರುವುದರಿಂದ ದರವನ್ನು ಕಡಿಮೆ ಮಾಡುವುದು ಅವರ ಕರ್ತವ್ಯ ಎಂದು ಹೇಳಿದರು.

ರಾಜ್ಯಪಾಲರ ಭಾಷಣಗಳು ಯಥಾವತ್ತು ನಕಲಾಗಿವೆ: ವಚನ ಸಾಹಿತ್ಯ ಕಾಲದ ಸಿದ್ದಾಂತಗಳನ್ನು ಸ್ಮರಿಸಿಕೊಂಡ ಜಿ.ಟಿ.ದೇವೇಗೌಡ ಅವರು, ದುಡಿದು ತಿನ್ನುವುದು ಸೂಕ್ತ ಎಂದು ಶರಣರು ಹೇಳಿದ್ದಾರೆ. ಸರ್ಕಾರದ ಉಚಿತ ಖಾತ್ರಿಗಳು ಶ್ರಮಿಕರನ್ನು ದುಡಿಮೆಯಿಂದ ವಿಮುಖರನ್ನಾಗಿ ಮಾಡುತ್ತದೆ ಎಂದು ಆರ್ಥಿಕ ತಜ್ಞರ ಅಭಿಪ್ರಾಯ ಎಂದರು.

ರಾಜಕೀಯ ಪಕ್ಷಗಳು ಸೃಜನಶೀಲ ಕಾಯಕ ಮತ್ತು ಉತ್ಪಾದನೆಗೆ ಬೆಂಬಲ ನೀಡಬೇಕೆಂದು ಅವರು ಸಲಹೆ ಕೊಟ್ಟರು. 2013 ಮತ್ತು ಈಗಿನ ರಾಜ್ಯಪಾಲರ ಭಾಷಣಗಳು ಯಥಾವತ್ತು ನಕಲಾಗಿವೆ. ಭ್ರಷ್ಟಾಚಾರ ನಿಯಂತ್ರಣಕ್ಕೆ ಆದ್ಯತೆ ನೀಡುವುದಾಗಿ ಉಲ್ಲೇಖಿಸಿರುವುದು ನಂಬಲರ್ಹವಲ್ಲ ಎಂದರು. ಉನ್ನತ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಮತ್ತು ಗುಣಮಟ್ಟ ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಹೆಚ್.ಡಿ.ರೇವಣ್ಣ ಆಕ್ಷೇಪ: ಹಾಸನದ ಸರ್ಕಾರಿ ಕಾಲೇಜಿನಲ್ಲಿ ಹಿರಿಯರ ಜೇಷ್ಠತೆಯನ್ನು ಕಡೆಗಣಿಸಿ ಕಿರಿಯರಿಗೆ ಪ್ರಾಂಶುಪಾಲರ ಹುದ್ದೆ ನೀಡಲಾಗಿದೆ ಎಂದು ಜೆಡಿಎಸ್ ಹಿರಿಯ ಶಾಸಕ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆಕ್ಷೇಪಿಸಿದರು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕವು ಅಲ್ಪಸಂಖ್ಯಾತರಿಗೆ ನ್ಯಾಯ ಸಿಗುತ್ತಿಲ್ಲ. ಅಲ್ಪಸಂಖ್ಯಾತ ಸಮುದಾಯದ ಉಪನ್ಯಾಸಕರು ಜೇಷ್ಠತೆ ಹೊಂದಿದ್ದರೂ ಅವರನ್ನು ಕಡೆಗಣಿಸಿ ಅವರಿಗಿಂತ ಕಿರಿಯರಿಗೆ ಪ್ರಾಂಶುಪಾಲರ ಹುದ್ದೆ ನೀಡಲಾಗಿದೆ ಎಂದು ದೂರಿದರು.

ಇದನ್ನೂ ಓದಿ: ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರ್ಕಾರ ಪ್ರಯತ್ನ ಪಟ್ಟಿದೆ: ಮಾಜಿ ಸಿಎಂ ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.