ETV Bharat / state

ರಮ್ಯಾ ವಿರುದ್ಧ ಶಿಸ್ತುಕ್ರಮಕ್ಕೆ 'ಕೈ' ನಾಯಕರ ಒತ್ತಡ; ಶಿಸ್ತು ಸಮಿತಿಗೆ ಸಲ್ಲಿಕೆ ಯಾಗುವುದೇ ದೂರು?

author img

By

Published : May 14, 2022, 10:58 PM IST

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸೇರಿದಂತೆ ಅನೇಕರ ವಿರುದ್ಧ ಟ್ವೀಟ್ ಮೂಲಕ ಹರಿಹಾಯ್ದಿರುವ ರಮ್ಯಾ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿ ಬರಲು ಶುರುವಾಗಿದೆ.

Former MP Ramya tweet against DKS
Former MP Ramya tweet against DKS

ಬೆಂಗಳೂರು: ಪಕ್ಷದ ಅಧ್ಯಕ್ಷರ ವಿರುದ್ಧವೇ ಟ್ವೀಟ್ ಮಾಡಿರುವ ಮಾಜಿ ಸಂಸದೆ ರಮ್ಯಾ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಕಾಂಗ್ರೆಸ್ ನಾಯಕರಿಂದ ಒತ್ತಡ ಕೇಳಿ ಬರುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ರಮ್ಯಾ ನಿರಂತರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಅವರ ಬೆಂಬಲಿತ ನಾಯಕರ ವಿರುದ್ಧ ಟ್ವೀಟ್ ಸಮರ ಸಾರಿದ್ದಾರೆ. ನೇರವಾಗಿ ಇದಕ್ಕೆ ಕಾರಣ ತಿಳಿಸುವ ಕಾರ್ಯವನ್ನು ಅವರು ಮಾಡಿಲ್ಲ. ಡಿಕೆ ಶಿವಕುಮಾರ್ ಸಹ ಇದಕ್ಕೆ ಸ್ಪಷ್ಟವಾದ ಪ್ರತಿಕ್ರಿಯೆ ನೀಡಿಲ್ಲ.

ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಬಿಆರ್ ನಾಯ್ಡು ಸೇರಿದಂತೆ ವಿವಿಧ ನಾಯಕರ ವಿರುದ್ಧ ಟ್ವೀಟ್ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ರಮ್ಯಾ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಡಿಕೆಶಿ ಹೇಳಿಕೆಗೆ ರಮ್ಯಾ ಭಿನ್ನರಾಗ; ಬಂಡೆಗೆ ಸೆಡ್ಡು ಹೊಡೆದ್ರಾ ಪದ್ಮಾವತಿ!?

ರಮ್ಯಾ ನಡೆಗೆ ಖಂಡನೆ: ಕಾಂಗ್ರೆಸ್ ಶಾಸಕರಾದ ರಿಜ್ವಾನ್ ಅರ್ಷದ್ ಸೇರಿದಂತೆ ಹಲವು ನಾಯಕರು ಮಾಜಿ ಸಂಸದ ನಡವಳಿಕೆ ಖಂಡಿಸಿದ್ದಾರೆ. ಇವರೆಲ್ಲರೂ ರಮ್ಯಾ ವಿರುದ್ಧ ಶಿಸ್ತುಕ್ರಮ ಆಗಲೇಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಈ ಹಿಂದೆಯೂ ಹಲವು ನಾಯಕರು ಪಕ್ಷದ ನಾಯಕರ ವಿರುದ್ಧವಾಗಿ ಮಾತನಾಡಿದ್ದಾರೆ. ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಆದರೆ, ಇದುವರೆಗೂ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಮಾಜಿ ಸಂಸದರು ಸೇರಿದಂತೆ ಯಾವೊಬ್ಬ ದೊಡ್ಡ ನಾಯಕರ ವಿರುದ್ಧವೂ ಕ್ರಮ ಆಗಿಲ್ಲ. ಇದೀಗ ರಮ್ಯಾ ವಿರುದ್ಧ ಕ್ರಮ ಆಗಲೇಬೇಕು ಎಂಬ ಒತ್ತಡ ಕಾಂಗ್ರೆಸ್ ಪಾಳೆಯದಲ್ಲಿ ಕೇಳಿ ಬರುತ್ತಿದೆ. ಮಾಜಿ ಸಂಸದ ಕೆ. ರಹಮಾನ್ ಖಾನ್ ನೇತೃತ್ವದಲ್ಲಿ ಕಾಂಗ್ರೆಸ್ ಶಿಸ್ತು ಸಮಿತಿ ರಚಿಸಲಾಗಿದೆ. ಆದರೆ, ಈ ಸಮಿತಿ ಮೂಲಕ ದೊಡ್ಡ ಮಟ್ಟದ ನಾಯಕರ ವಿರುದ್ಧ ಯಾವುದೇ ಕ್ರಮ ಜರುಗಿಸುವ ಕಾರ್ಯ ಆಗಿಲ್ಲ. ಈ ಹಿಂದೆ ಮಾಜಿ ಸಚಿವರಾದ ಜಮೀರ್ ಅಹ್ಮದ್​, ಶಾಸಕಿ ಸೌಮ್ಯ ರೆಡ್ಡಿ ಮತ್ತಿತರರು ನೀಡಿದ ಹೇಳಿಕೆಗೆ ಶಿಸ್ತುಕ್ರಮ ಕೈಗೊಳ್ಳುವ ಕಾರ್ಯವನ್ನು ಪಕ್ಷ ಮಾಡಿಲ್ಲ. ಆದರೆ, ಕೆಲ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು ಪಕ್ಷದ ಸಮನ್ವಯಕಾರರು ಸೇರಿದಂತೆ ಸಣ್ಣಪುಟ್ಟ ಹುದ್ದೆಯಲ್ಲಿ ಇರುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

Former MP Ramya tweet against DKS
ರಮ್ಯಾ ವಿರುದ್ಧ ಶಿಸ್ತುಕ್ರಮಕ್ಕೆ ಕಾಂಗ್ರೆಸ್ ನಾಯಕರ ಒತ್ತಡ

ಇದನ್ನೂ ಓದಿ: 'ಈ ಹುಡುಗ ನನ್ನ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಿದ್ದಾನೆ, ವಾಹ್!': ನಲಪಾಡ್‌ ವಿರುದ್ಧ ಗುಡುಗಿದ ರಮ್ಯಾ

ಶಿಸ್ತುಕ್ರಮಕ್ಕೆ ಪಟ್ಟು: ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿರುವ ಮಾಜಿ ಸಂಸದೆ ರಮ್ಯಾ ವಿರುದ್ಧ ಕ್ರಮ ಆಗಲೇಬೇಕು ಎಂದು ಹಲವು ಕಾಂಗ್ರೆಸ್ ನಾಯಕರು ಪಟ್ಟುಹಿಡಿದಿದ್ದಾರೆ. ರಾಷ್ಟ್ರೀಯ ಮಟ್ಟದ ಜವಾಬ್ದಾರಿ ವಹಿಸಿಕೊಂಡ ಬಳಿಕ ರಾಜ್ಯನಾಯಕರ ಸಂಪರ್ಕದಿಂದ ದೂರವೇ ಇದ್ದ ರಮ್ಯಾ ಇತ್ತೀಚೆಗೆ ಟ್ವೀಟ್ ಮೂಲಕ ರಾಜ್ಯ ರಾಜಕಾರಣದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಲು ಆರಂಭಿಸಿದ್ದಾರೆ. ತಮ್ಮ ಪಕ್ಷದ ಅಧ್ಯಕ್ಷರ ವಿರುದ್ಧವೇ ಹೇಳಿಕೆ ನೀಡಿ ಇದೀಗ ಸುದ್ದಿಯಾಗಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಡಕ್ಕೆ ಯಾವ ರೀತಿಯ ಗಮನವನ್ನು ಪಕ್ಷದ ಶಿಸ್ತು ಸಮಿತಿ ಕೈಗೊಳ್ಳ ಇದೆ ಎನ್ನುವುದನ್ನು ಕಾದು ನೋಡಬೇಕಿದೆ.

ಸದ್ಯ ರಾಜಸ್ಥಾನದ ಉದಯಪುರದಲ್ಲಿ ಕಾಂಗ್ರೆಸ್ ಚಿಂತನ ಶಿಬಿರ್ ನಡೆಯುತ್ತಿದ್ದು, ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ಹಲವು ಹಿರಿಯ ನಾಯಕರು ಪಾಲ್ಗೊಂಡಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ಸೇರಿದಂತೆ ಹಲವು ನಾಯಕರು ಉದಯಪುರದಲ್ಲಿದ್ದಾರೆ. ಅಲ್ಲಿಂದ ಮರಳಿ ಬಂದ ಬಳಿಕ ಶಿಸ್ತು ಸಮಿತಿ ಜೊತೆ ಚರ್ಚೆ ನಡೆಸಿ ರಮ್ಯಾ ವಿರುದ್ಧ ಕ್ರಮ ಕೈಗೊಳ್ಳಬೇಕೇ ಬೇಡವೇ ಎಂಬ ಬಗ್ಗೆ ತೀರ್ಮಾನಿಸಲಿದ್ದಾರೆ. ಈಗಾಗಲೇ ರಾಜ್ಯ ನಾಯಕರು ಕೆಲವರು ರಮ್ಯಾಗೆ ಯಾವುದೇ ಹೇಳಿಕೆ ನೀಡದಂತೆ ಸಲಹೆ ನೀಡಿದ್ದು, ಕಳೆದ ಎರಡು ದಿನಗಳಿಂದ ರಮ್ಯಾ ಸಹ ತಟಸ್ಥರಾಗಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರು ವಾಪಸಾದ ಬಳಿಕ ಈ ವಿಚಾರವಾಗಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.