ETV Bharat / state

ಜೆಡಿಎಸ್​ಗೆ ಯಾವುದೇ ಭವಿಷ್ಯ ಇಲ್ಲ ಎಂದು ಈ ಫಲಿತಾಂಶದಿಂದ ಅರ್ಥ ಮಾಡಿಕೊಳ್ಳಬೇಕು : ಜಮೀರ್ ಅಹ್ಮದ್ ಖಾನ್

author img

By

Published : Nov 3, 2021, 6:48 AM IST

Former Minister Zameer Ahmed Khan
ಜಮೀರ್ ಅಹ್ಮದ್ ಖಾನ್

ಹಾನಗಲ್ ಹಾಗೂ ಸಿಂದಗಿ 2 ಕ್ಷೇತ್ರದಲ್ಲಿಯೂ ಜೆಡಿಎಸ್ ಪಕ್ಷ ಠೇವಣಿ ಕಳೆದುಕೊಂಡಿದೆ. ವಿಪರ್ಯಾಸ ಎಂದರೆ ಹಾನಗಲ್‌ನಲ್ಲಿ ಪಕ್ಷೇತರ ಅಭ್ಯರ್ಥಿಗಿಂತ ಕಡಿಮೆ ಮತ ಪಡೆದು ಜೆಡಿಎಸ್ 4ನೇ ಸ್ಥಾನಕ್ಕೆ ಕುಸಿದಿದೆ. ಮುಂದಿನ ದಿನಗಳಲ್ಲಿ ಜೆಡಿಎಸ್​ಗೆ ಯಾವುದೇ ಭವಿಷ್ಯ ಇಲ್ಲ ಎನ್ನುವುದನ್ನು ಈ ಫಲಿತಾಂಶದ ಮೂಲಕ ಅರ್ಥ ಮಾಡಿಕೊಳ್ಳಬೇಕು..

ಬೆಂಗಳೂರು : ಎರಡು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಫಲಿತಾಂಶ ಗಮನಿಸಿದಾಗ ಅಲ್ಪಸಂಖ್ಯಾತರು ಜೆಡಿಎಸ್ ಪಕ್ಷವನ್ನು ನಂಬುತ್ತಿಲ್ಲ ಎನ್ನುವುದು ಸಾಬೀತಾಗಿದೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಹಾನಗಲ್​ನಲ್ಲಿ ಜೆಡಿಎಸ್ 4ನೇ ಸ್ಥಾನಕ್ಕೆ ಕುಸಿದಿದೆ : ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಹಾನಗಲ್ ಹಾಗೂ ಸಿಂದಗಿ 2 ಕ್ಷೇತ್ರದಲ್ಲಿಯೂ ಜೆಡಿಎಸ್ ಪಕ್ಷ ಠೇವಣಿ ಕಳೆದುಕೊಂಡಿದೆ.

ವಿಪರ್ಯಾಸ ಎಂದರೆ ಹಾನಗಲ್​ನಲ್ಲಿ ಪಕ್ಷೇತರ ಅಭ್ಯರ್ಥಿಗಿಂತ ಕಡಿಮೆ ಮತ ಪಡೆದು ಜೆಡಿಎಸ್ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ದುರಂತ ಎಂದರೆ ಕಾಂಗ್ರೆಸ್​ನಲ್ಲಿ ಜಿಲ್ಲಾ ಪಂಚಾಯತ್‌ ಸದಸ್ಯರ ಆಪರೇಷನ್ ಮಾಡಿ, ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ ಆತನ ರಾಜಕೀಯ ಭವಿಷ್ಯವನ್ನು ಮಣ್ಣು ಪಾಲು ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಜೆಡಿಎಸ್​ಗೆ ಯಾವುದೇ ಭವಿಷ್ಯ ಇಲ್ಲ : ಪಕ್ಷದ ಎಲ್ಲ ನಾಯಕರು ಒಂದಾಗಿ ಪ್ರಚಾರ ಕಾರ್ಯದಲ್ಲಿ ನಿರತರಾಗುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸಿದ್ದರು. ಇದರಿಂದಲೇ ಗೆಲುವು ಸಾಧ್ಯವಾಯಿತು. ಹಾನಗಲ್ ವಿಧಾನಸಭೆ ಕ್ಷೇತ್ರವನ್ನು ಗೆದ್ದಿದ್ದು ಮಾತ್ರವಲ್ಲ ಸಿಂದಗಿಯಲ್ಲಿ ಸಹ ಕಳೆದ ಚುನಾವಣೆಗಿಂತ 40 ಸಾವಿರ ಮತಗಳನ್ನು ಹೆಚ್ಚುವರಿಯಾಗಿ ನಮ್ಮ ಅಭ್ಯರ್ಥಿ ಪಡೆದಿದ್ದಾರೆ.

ಮುಂದಿನ ದಿನಗಳಲ್ಲಿ ಜೆಡಿಎಸ್​ಗೆ ಯಾವುದೇ ಭವಿಷ್ಯ ಇಲ್ಲ ಎನ್ನುವುದನ್ನು ಈ ಫಲಿತಾಂಶದ ಮೂಲಕ ಅರ್ಥ ಮಾಡಿಕೊಳ್ಳಬೇಕು. ಅತ್ಯಂತ ಪ್ರಮುಖವಾಗಿ ಅಲ್ಪಸಂಖ್ಯಾತ ಸಮುದಾಯ ಈ ಬಗ್ಗೆ ಮನವರಿಕೆ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಶ್ರೀನಿವಾಸ್ ಮಾನೆ ಅವರಿಗೆ ಅಭಿನಂದನೆಗಳು : ಟ್ವೀಟ್ ಮೂಲಕ ಶ್ರೀನಿವಾಸ ಮಾನೆ ಅವರನ್ನು ಅಭಿನಂದಿಸಿರುವ ಜಮೀರ್, ಹಾನಗಲ್ ಉಪಚುನಾವಣೆಯಲ್ಲಿ ಜಯಗಳಿಸಿರುವ ಶ್ರೀನಿವಾಸ್ ಮಾನೆ ಅವರಿಗೆ ಅಭಿನಂದನೆಗಳು.

ಸಿಂದಗಿಯಲ್ಲಿ ಕಳೆದ ಬಾರಿಗಿಂತ 40,000 ಅಧಿಕ ಮತ ಗಳಿಸುವ ಮೂಲಕ ಕಾಂಗ್ರೆಸ್ ಪಕ್ಷ ಸೋತು ಗೆದ್ದಿದೆ. ಎರಡೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಯ ಪರವಾಗಿ ದುಡಿದ ಎಲ್ಲಾ ಕಾರ್ಯಕರ್ತರಿಗೆ ಹಾಗೂ ಮತ ನೀಡಿ ಆಶೀರ್ವದಿಸಿದ ಮತದಾರ ಬಂಧುಗಳಿಗೆ ಧನ್ಯವಾದಗಳು ಎಂದಿದ್ದಾರೆ.

ಓದಿ: ಹಾನಗಲ್ ಗೆಲುವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಬೇಡಿ: ರೇಣುಕಾಚಾರ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.