ETV Bharat / state

ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡು ಸಿಎಂ ಜೊತೆ ಒಳ ಒಪ್ಪಂದ: ಆರ್.ಅಶೋಕ್

author img

By ETV Bharat Karnataka Team

Published : Aug 22, 2023, 10:17 PM IST

ಮಾಜಿ ಸಚಿವ ಆರ್. ಅಶೋಕ್
ಮಾಜಿ ಸಚಿವ ಆರ್. ಅಶೋಕ್

ತಮಿಳುನಾಡಿಗೆ ನೀರು ಬಿಟ್ಟು ಕರ್ನಾಟಕದ ರೈತರಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ ಎಂದು ಮಾಜಿ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಬಿಟ್ಟ ಮೇಲೆ ಸರ್ವಪಕ್ಷ ಸಭೆ ಕರೆದಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಜೊತೆಗೆ ನಡೆದ ಒಳಒಪ್ಪಂದ ಇದು ಎಂದು ಕಾಂಗ್ರೆಸ್​ ಸರ್ಕಾರವನ್ನು ಮಾಜಿ ಸಚಿವ ಆರ್.ಅಶೋಕ್ ಟೀಕಿಸಿದರು.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೇಕೆದಾಟು ಅಂದ್ರು, ಈಗ ಮೇಕೆನೂ ಇಲ್ಲ, ದಾಟು ಇಲ್ಲ. ಅಧಿಕಾರ ಬಂದ ಮೇಲೆ ಕಾವೇರಿನೂ ಇಲ್ಲ ಮೇಕೆದಾಟು ಇಲ್ಲ. ನೀರು ಬಿಟ್ಟು ಕರ್ನಾಟಕದ ರೈತರಿಗೆ ಸರ್ಕಾರ ಅನ್ಯಾಯ ಮಾಡಿದೆ ಎಂದು ಆಕ್ರೋಶ ಹೊರಹಾಕಿದರು. ಇದೇ ವೇಳೆ ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಜೊತೆಗೆ ಸಭೆ ಕರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸೋಮಶೇಖರ್ ಜೊತೆಗೆ ಮೊನ್ನೆಯಿಂದ ಮಾತನಾಡುತ್ತಿದ್ದೇನೆ. ಮಂತ್ರಿಯಾಗಿ ಅಧಿಕಾರ ಅನುಭವಿಸಿದ್ದಾರೆ. ಶಿವರಾಂ ಹೆಬ್ಬಾರ್ ಹಾಗೂ ಸೋಮಶೇಖರ್ ಹೋಗಲ್ಲ ಅಂತ ಹೇಳಿದ್ದಾರೆ. ಯಾರೂ ಸಹ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ ಎಂದರು.

ಚಂದ್ರಯಾನ-3 : ನಮ್ಮ ಇಸ್ರೋ ವಿಜ್ಞಾನಿಗಳ ಚಂದ್ರಯಾನ-3 ನಾಳೆ ಲ್ಯಾಂಡ್ ಆಗುತ್ತಿದೆ. ಆರಂಭದಲ್ಲಿ ತಿರುಪತಿ ಹಾಗೂ ನಿನ್ನೆ ಕಟೀಲ್‌ ದೇವಿಯ ಆಶೀರ್ವಾದ ಪಡೆದಿದ್ದಾರೆ. ಭಗವಂತನ ಇಚ್ಚೆ ಇದೆ. ಹೀಗಾಗಿ ಚಂದ್ರಯಾನ 3ರ ಲ್ಯಾಂಡಿಂಗ್​ಗೆ ಶುಭ ಕೋರುವುದಾಗಿ ತಿಳಿಸಿದರು.

'ಪ್ರಕಾಶ್ ರೈ ಒಬ್ಬ ವಿಕೃತ ಮನುಷ್ಯ': ನಟ ಪ್ರಕಾಶ್ ರೈ ಕಾರ್ಟೂನ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅಶೋಕ್, ಪ್ರಕಾಶ್ ರೈ ಒಬ್ಬ ವಿಕೃತ ಮನುಷ್ಯ. ನಾನೂ ಕೂಡ ಕಾರ್ಟೂನ್ ನೋಡಿದ್ದೇನೆ. ಟೀ ಮಾರುವ ಮೂಲಕ ವಿಜ್ಞಾನಿಗಳನ್ನು ಟೀಕೆ ಮಾಡುವುದನ್ನು ನೋಡಿದರೆ, ಇದು ಕೀಳು ಪ್ರವೃತ್ತಿ ಅನಿಸುತ್ತದೆ ಎಂದು ಕಿಡಿಕಾರಿದರು. ಸಾಕಷ್ಟು ಕಲಾವಿದರನ್ನು ನೋಡಿದ್ದೇನೆ. ಈತನೂ ಸಹ ಕಲಾವಿದ. ಆದರೆ ಡಾ.ರಾಜ್‌ಕುಮಾರ್ ಹಾಗೂ ರಜನಿಕಾಂತ್ ಅವರೆಲ್ಲಾ ಉತ್ತಮ ಕಲಾವಿದರು. ಆದರೆ ಇವರನ್ನು ಕಲಾವಿದ ಅಂತ ಕರೆಯುವುದಕ್ಕೆ ಆಗಲ್ಲ. ಸಿನಿಮಾ ರೀತಿಯಲ್ಲೇ ನಿಜ ಜೀವನದಲ್ಲೂ ಪ್ರಕಾಶ್ ರೈ ವಿಲನ್ ಆಗಿದ್ದಾರೆ ಎಂದರು.

ಸರ್ವಪಕ್ಷ ಸಭೆಗೆ ಹಾಜರಾಗುತ್ತೇನೆ- ಹೆಚ್​ಡಿಕೆ : ಕಾವೇರಿ ನೀರಿನ ವಿಚಾರದ ಬಗ್ಗೆ ಚರ್ಚೆ ನಡೆಸಲು ಕರೆಯಲಾಗುವ ಸರ್ವಪಕ್ಷ ಸಭೆಯಲ್ಲಿ ಭಾಗಿಯಾಗುತ್ತೇನೆ. ಅಲ್ಲಿ ನಮ್ಮ ಪಕ್ಷದ ನಿಲುವನ್ನು ಸ್ಪಷ್ಟವಾಗಿ ಹೇಳಲಾಗುವುದು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ತಮಿಳುನಾಡಿಗೆ ನೀರು ಬಿಟ್ಟ ಕೂಡಲೇ ಮೊದಲು ದನಿ ಎತ್ತಿದವನೇ ನಾನು. ಸರ್ವಪಕ್ಷ ಸಭೆ ಕರೆಯಬೇಕು ಎಂದು ಒತ್ತಾಯ ಮಾಡಿದವನು ಕೂಡ ನಾನೇ ಎಂದರು.

ಆದರೆ, ರಾಜ್ಯದ ಹಿತ ಪರಿಗಣನೆಗೆ ಕ್ರಮ ಕೈಗೊಳ್ಳಬೇಕಾದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​, ಯಾವುದೋ ಹಳೆಯ ಟ್ವೀಟ್ ಪ್ರಸ್ತಾಪ ಮಾಡಿದ್ದಾರೆ. ಆ ಟ್ವೀಟ್‌ನಲ್ಲಿ ಏನು ಹೇಳಿದ್ದೇನೆ? ಎರಡೂ ರಾಜ್ಯಗಳ ಜನರು ಅಣ್ಣತಮ್ಮಂದಿರ ರೀತಿ ಇರಬೇಕೆಂದು ಹೇಳಿದ್ದೇನೆ. ಇದರಲ್ಲಿ ಹುಳುಕು ಹುಡುಕುವಂತಹ ಅಂಶ ಏನಿದೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ವಿಚಾರ: ರಾಷ್ಟ್ರೀಯ ಹೆದ್ದಾರಿ ಬಂದ್​ಗೆ ಮುಂದಾದ ಮಂಡ್ಯ ರೈತರು... ತಡೆದ ಪೊಲೀಸರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.