ETV Bharat / state

ಮೋದಿ, ಅಮಿತ್ ಶಾ ಕರ್ನಾಟಕಕ್ಕೆ ನೂರು ಬಾರಿ ಬಂದರೂ ಬಿಜೆಪಿ ಅಧಿಕಾರಕ್ಕೆ ಬರಲ್ಲ: ಕುಮಾರಸ್ವಾಮಿ ಭವಿಷ್ಯ

author img

By

Published : Jan 14, 2023, 3:41 PM IST

ಬೆಂಗಳೂರಿನಲ್ಲಿ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿದ ಮಾಜಿ ಸಿಎಂ ಕುಮಾರಸ್ವಾಮಿ - ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್​ಡಿಕೆ - ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲ್ಲ

former-cm-kumaraswamy-participated-in-a-media-interaction-in-bangalore
ಮೋದಿ, ಅಮಿತ್ ಶಾ ಕರ್ನಾಟಕಕ್ಕೆ ನೂರು ಬಾರಿ ಬಂದರೂ ಬಿಜೆಪಿ ಅಧಿಕಾರಕ್ಕೆ ಬರಲ್ಲ : ಕುಮಾರಸ್ವಾಮಿ ಭವಿಷ್ಯ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕಕ್ಕೆ ನೂರು ಬಾರಿ ಬಂದರೂ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಭವಿಷ್ಯ ನುಡಿದಿದ್ದಾರೆ.

ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಇಂದು ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಹೆಸರಿಟ್ಟುಕೊಂಡೇ ರಾಜ್ಯದ ಬಿಜೆಪಿ ನಾಯಕರು ಚುನಾವಣೆಗೆ ಹೋಗುತ್ತಿದ್ದಾರೆ. ಕಾಂಗ್ರೆಸ್ ನವರು ಭಾರತ್ ಜೋಡೋ ಅಂತಾರೆ, ನಾವು ಕಾರ್ಯಕ್ರಮ ಆಧಾರದ ಮೇಲೆ ಮತ ಕೇಳುತ್ತಿದ್ದೇವೆ ಎಂದು ಹೇಳಿದರು. ಬಿಜೆಪಿಯವರ ನಡವಳಿಕೆಯಿಂದ ಜನ ಬೇಸತ್ತು ಹೋಗಿದ್ದಾರೆ. ಮಂಡ್ಯಕ್ಕೆ ಅಮಿತ್ ಶಾ ಬಂದು ಹೋಗಿರೋದು ಪರಿಣಾಮ ಬೀರಲ್ಲ. ಬೇಕಿದ್ದರೆ ಬರದಿಟ್ಟುಕೊಳ್ಳಿ. ಮಂಡ್ಯದಲ್ಲಿ ಏಳಕ್ಕೆ ಏಳು ಕ್ಷೇತ್ರ ಮತ್ತೆ ಈ ಬಾರಿ ಜೆಡಿಎಸ್ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ ಎಂದರು.

ಬಡತನ ಹೋಗಲಾಡಿಸುವುದು ನಮ್ಮ ಮುಖ್ಯ ಗುರಿ: ನನ್ನ ನಿಲುವು ಬಡತನ ಹೋಗಲಾಡಿಸುವುದು. ನಾಡಿನ ಜನತೆ ಏನು ಬಯಸುತ್ತಾರೋ ಅದನ್ನು ಈಡೇರಿಸುವ ನಿಲುವು ನಮ್ಮದು. 2006 ರಲ್ಲಿ ನಾವು 58 ಸ್ಥಾನ ಗೆದ್ದಿದ್ದೆವು. ಆಗ ಎಂ.ಪಿ.ಪ್ರಕಾಶ್ ಸೇರಿದಂತೆ ಅನೇಕ ನಾಯಕರು ಇದ್ದರು. ನಂತರ ಬಿಟ್ಟು ಹೋದರು. 2008, 2013 ಹಾಗೂ 2018 ರಲ್ಲಿ ನಮ್ಮದು ಏಕಾಂಗಿ ಹೋರಾಟ ಆಯಿತು. ಏಕಾಂಗಿ ಹೋರಾಟದಲ್ಲೂ ನಾವು 25 ಸ್ಥಾನಗಳನ್ನು ಗೆದ್ದಿದ್ದೇವೆ.

ಕಾಂಗ್ರೆಸ್ ಗೆದ್ದಿದ್ದು ನಮ್ಮ ದುಡಿಮೆಯಿಂದ. ಬಿ.ಎಸ್. ಯಡಿಯೂರಪ್ಪ ಆಗ ಬಿಜೆಪಿ ಬಿಟ್ಟಿದ್ದರಿಂದ ಅವರು ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಬಿಜೆಪಿ ಬಿ ಟೀಂ ಅವರ ಪರ ಮತ ಹಾಕಬೇಡಿ ಎಂದು ಇಡೀ ರಾಜ್ಯದಲ್ಲಿ ನಮ್ಮ ಪಕ್ಷದ ಬಗ್ಗೆ ಅಪಪ್ರಚಾರ ಮಾಡಿದರು. ಆದರೂ ಎಷ್ಟು ಸೀಟು ಬಂದವು. ಕಾಂಗ್ರೆಸ್ ಶಕ್ತಿ 60-70 ಸೀಟು ಮಾತ್ರ. ನಮಗೆ ಹಣದ ಕೊರತೆ ಇತ್ತು. ನಾನು ಈಗ ನಿತ್ಯ ಹಳ್ಳಿಗಳ ಮೇಲೆ ಹೋಗುತ್ತಿದ್ದೇನೆ. 116 ಕ್ಷೇತ್ರಗಳನ್ನು ಮಾರ್ಚ್ ವೇಳೆಗೆ ಪೂರ್ಣಗೊಳಿಸುತ್ತೇನೆ. ಉತ್ತರ ಕರ್ನಾಟಕಕ್ಕೆ ಹೋಗೋದೇ ಇಲ್ಲ ಅಂದ್ರು. ಇಂದು ಹೋಗಿ ಬಂದಿದ್ದೇನೆ ಎಷ್ಟು ಜನ ಸೇರಿದ್ದಾರೆ ನೋಡಿ ಎಂದು ವಿವರಿಸಿದರು.

ಜೆಡಿಎಸ್ ಬಗ್ಗೆ ಹಲವು ವ್ಯಾಖ್ಯಾನ : ನಾಲ್ಕುವರೆ ವರ್ಷದಲ್ಲಿ ಜೆಡಿಎಸ್ ಬಗ್ಗೆ ಅನೇಕ ವ್ಯಾಖ್ಯಾನಗಳೂ ಬಂದಿವೆ. ಜೆಡಿಎಸ್ ಶಕ್ತಿ ಸಂಪೂರ್ಣ ಕ್ಷೀಣಿಸಬಹುದು ಎಂದು ಹೇಳಿದ್ದು ಇದೆ. ಇದನ್ನೂ ನಾನು ಗಮನಿಸಿದ್ದೇವೆ. ಪಕ್ಷದ ಸಂಘಟನೆಯ ಹೆಸರಲ್ಲಿ ನಾನು ಕೊರೊನಾ ಸಮಯದಲ್ಲಿ ಜನರಿಗೆ ತೊಂದರೆ ಕೊಡೋದು ಬೇಡವೆಂದು ಸಮ್ಮನಿದ್ದೆ. ಆಗ ರಾಜಕೀಯ ಸಂಘಟನೆಯ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ. ದೇವೇಗೌಡರಿಗೆ ವಯಸ್ಸಾಗಿದೆ, ಆರೋಗ್ಯ ಸಮಸ್ಯೆ ಇದೆ. ಕುಮಾರಸ್ವಾಮಿ ರಾಜಕೀಯ ನಿರಾಸಕ್ತಿ ಇದೆ ಎಂದು ನಮ್ಮ ಪಕ್ಷದ ಕೆಲವು ಮುಖಂಡರು ಅಂದುಕೊಂಡಿದ್ದೂ ನಿಜ. ಅವರ ರಾಜಕೀಯ ಭವಿಷ್ಯಕ್ಕೆ ಅವರು ನಿರ್ಧಾರ ಮಾಡಿಕೊಂಡರು. ಅನೇಕರು ವಾಪಸ್ ಬರದೇ ಇದ್ದವರೂ ಇದ್ದಾರೆ, ವಾಪಸ್ ಬಂದವರೂ ಇದ್ದಾರೆ ಎಂದು ಹೇಳಿದರು.

ಜನರ ಅಭಿವೃದ್ಧಿಗೆ ಪಂಚರತ್ನ ಯೋಜನೆ : ಖಾಸಗಿ ಶಾಲೆಗಳಿಗೆ ಸೇರಿಸುವವರ ಸಂಖ್ಯೆ ಹೆಚ್ಚಾಗಿದೆ. ಮಕ್ಕಳ ಭವಿಷ್ಯದಿಂದ ಖಾಸಗಿ ಶಾಲೆಗಳಿಗೇನೋ ಸೇರಿಸ್ತಾರೆ. ಆದರೆ ನಂತರ ಶುಲ್ಕ ಕಟ್ಟಲು ಸಮಸ್ಯೆಯಾಗಿದೆ ಅಂತಾರೆ. ಆರೋಗ್ಯ ಅಥವಾ ಈಗಿನ ಆಸ್ಪತ್ರೆಗಳ ವ್ಯವಸ್ಥೆ ಬಗ್ಗೆ ಮಾತಾಡಲ್ಲ. ಪಿಹೆಚ್ ಸಿ ಸೆಂಟರ್ ನಲ್ಲಿ ವೈದ್ಯರು ಒಂದೆರಡು ಗಂಟೆ ಬಂದು ಕೆಲಸ ಮಾಡಿದ್ರೆ ಮುಗೀತು. ಸರ್ಕಾರಗಳು ಕಟ್ಟಡ ಕಟ್ಟಿಸಲು ಆಸಕ್ತಿ ವಹಿಸುತ್ತಾರೆ. ಆದರೆ, ಕಟ್ಟಡಕ್ಕೆ ಬೇಕಾದ ಸಿಬ್ಬಂದಿ ನೇಮಕಾತಿಯ ಬಗ್ಗೆ ಆಸಕ್ತಿ ಇರೋದಿಲ್ಲ. ಹೆಚ್ಚು ಹೊರೆ ಬೀಳಲಿದೆ ಎಂದು ಮಂತ್ರಿಗಳು, ಅಧಿಕಾರಿಗಳು ಹೇಳ್ತಾರೆ. ನಮ್ಮ ಸರ್ಕಾರಿ ಶಾಲೆಗಳಲ್ಲಿ ಶೇ. 50 ರಷ್ಟು ಶಿಕ್ಷಕರ ಕೊರತೆ ಇದೆ ಎಂದು ಕೇಂದ್ರವೇ ಮಾಹಿತಿ ಕೊಟ್ಟಿದೆ ಎಂದರು.

ರೈತರ ಖರ್ಚು ದ್ವಿಗುಣ ಆಗಿದೆ ಅಷ್ಟೇ : ಇನ್ನು ರೈತರ ಬದುಕು ಕೇಳಲೇ ಬೇಡಿ. ರೈತರ ಆದಾಯವನ್ನು ದ್ವಿಗುಣ ಮಾಡ್ತೀವಿ ಎಂದು ಕೇಂದ್ರ ಹೇಳಿತ್ತು. ಆದರೆ ರೈತರ ಖರ್ಚು ದ್ವಿಗುಣ ಆಗಿದೆ ಅಷ್ಟೆ. ಕಲಬುರಗಿ, ಬೀದರ್ ಮತ್ತಿತರ ಜಿಲ್ಲೆಗಳಲ್ಲಿ ತೊಗರಿ ಬೆಳೆ ಬೆಳೆಯುತ್ತಾರೆ. ಅದಕ್ಕೆ ರೋಗ ಹೆಚ್ಚಾಗಿ ಅವರು ಬೆಳೆದ ಬೆಳೆ ಸರಿಯಾಗಿ ಬರುತ್ತಿಲ್ಲ. ರೈತರು ಮತ್ತೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. 2006ರಲ್ಲೂ ಸಾಲ ಮನ್ನಾ ಮಾಡಿದ್ದೆ. ಕಳೆದ ಬಾರಿಯೂ ಸಾಲಮನ್ನಾ ಮಾಡಿದ್ದೆ. ಹೀಗಾಗಿ ಸಾಲಮನ್ನಾ ಮಾಡಿದ್ರೆ ಮತ್ತೆ ರೈತ ಸಾಲ ಮಾಡುತ್ತಾನೆ. ಅದಕ್ಕಾಗಿಯೇ ನಾನು ರೈತರಿಗೆ ಒಂದು ಯೋಜನೆ ನೀಡಲು ಚಿಂತಿಸಿದ್ದೇನೆ ಎಂದು ಹೇಳಿದರು.

ಇದೀಗ ಕಾಂಗ್ರೆಸ್ ನವರು 200 ಯುನಿಟ್ ವಿದ್ಯುತ್ ಕೊಡುತ್ತೇವೆಂದು ಹೇಳುತ್ತಿದ್ದಾರೆ. ನನ್ನ ಕಾರ್ಯಕ್ರಮ ಸರ್ಕಾರದ ಆಸ್ತಿ ಮೌಲ್ಯ ಹೆಚ್ಚಾಗುವಂತದ್ದು. ಉಚಿತ ಕಾರ್ಯಕ್ರಮ ನಿಲ್ಲಿಸಬೇಕೆಂದು ಒಂದು ಕಡೆ ಮೋದಿಯವರು ಹೇಳ್ತಾರೆ. ಜನರ ದುಡ್ಡು ಸುಮ್ನೆ ನಷ್ಟ ಆಗಬಾರದು. ಇದರಿಂದ ಸರ್ಕಾರಕ್ಕೆ ಯಾವುದೇ ಗಳಿಕೆ ಇಲ್ಲ. ಕುಶಲಕರ್ಮಿಗಳಿಗೆ ಏನೋ 10 ಪರ್ಸೆಂಟ್ ಸಬ್ಸಿಡಿ ಕೊಡ್ತೀವಿ ಅಂತ ಬಿಜೆಪಿಯವರು ಜಾಹೀರಾತು ಕೊಟ್ಟಿದ್ದಾರೆ.

40 ಕ್ಷೇತ್ರಗಳಲ್ಲಿ ಗೆಲ್ಲುವ ಭರವಸೆ ಇದೆ : ಪಂಚರತ್ನ ರಥಯಾತ್ರೆ ಮಾಡಿದ 45 ಕ್ಷೇತ್ರಗಳ ಪೈಕಿ 40 ಕ್ಷೇತ್ರಗಳಲ್ಲಿ ಗೆಲ್ಲುವ ಭರವಸೆ ಇದೆ. ನಾನು ಭೇಟಿ ಕೊಟ್ಟ ಕ್ಷೇತ್ರದಲ್ಲಿ ಜನರ ಶ್ರೀರಕ್ಷೆ ಇದೆ. ನಾಳೆ ಚುನಾವಣೆ ಆದರೂ ಗೆಲ್ಲುವ ಎಲ್ಲ ವಾತಾವರಣ ಇದೆ ಎಂದರು. ಕರ್ನಾಟಕ ಸಂಪದ್ಬರಿತವಾದ ರಾಜ್ಯ. ಕೊರೊನ ಅನಾಹುತಗಳು ಅನೇಕ ಆಗಿವೆ. ಸರ್ಕಾರದ ಅನೇಕ ನ್ಯೂನ್ಯತೆಗಳು ಇವೆ. ಯಾವುದೋ ಕಪಿ ಮುಷ್ಟಿಯಲ್ಲಿ ಸರ್ಕಾರ ಇದೆ. ಲವ್ ಜಿಹಾದ್ ಅಂತ ಹೇಳಿ ಎಲ್ಲಿಗೆ ತೆಗೆದುಕೊಂಡು ಹೋಗ್ತಾ ಇದ್ದೀರಾ?. ಬಿಹಾರ್, ಉತ್ತರ ಪ್ರದೇಶ ರೀತಿ ಮಾಡುತ್ತಿದ್ದೀರಾ. ನನ್ನ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ ಎಂದು ಬಿಜೆಪಿಯವರ ವಿರುದ್ಧ ವಾಗ್ದಾಳಿ ನಡೆಸಿದರು.

ಅತಂತ್ರ ಸರ್ಕಾರ ಬರಲ್ಲ : ಇನ್ನೂ ಅಭಿವೃದ್ಧಿ ಮಾಡೋದು ಇಲ್ಲಿ ಸಾಧ್ಯ ಇದೆ. ಉತ್ತರ ಕರ್ನಾಟಕದ ಅನೇಕ ಶಾಸಕರು ಇದ್ದಾರೆ. ಆ ಜನರ ಕಷ್ಟ ಸರ್ಕಾರಕ್ಕೆ ಮುಟ್ಟಲೇ ಇಲ್ಲ. ಜನರ ನಾಡಿ ಮಿಡಿತ ನಾನು ನೋಡ್ತಾನೇ ಇದ್ದೇನೆ. ಸಂಪೂರ್ಣ ಸ್ವತಂತ್ರ ಸರ್ಕಾರ ಬರಲಿದೆ. ನಾವು ಮೂರ್ನಾಲ್ಕು ಜಿಲ್ಲೆಗೆ ಸೀಮಿತ ಆಗಲ್ಲ. ನಮಗೆ ಸಂಪೂರ್ಣ ವಿಶ್ವಾಸ ಇದೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ : 2024ರ ಚುನಾವಣೆಯಲ್ಲಿ ಬೆಂಗಳೂರಿನಿಂದ ಸುಮಲತಾ ಅಂಬರೀಶ್ ಸ್ಪರ್ಧೆ: ನಿಖಿಲ್ ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.