ETV Bharat / state

ಶೋರೂಂನಲ್ಲಿ ಮಾರಾಟಕ್ಕೆ ನಿಂತಿದ್ದ ಎಂಎಲ್​ಎ ಕಾರು: ನಕಲಿ ಕಾರು ಮಾರಾಟ ದಂಧೆಗೆ ಶಾಸಕರೇ ತಬ್ಬಿಬ್ಬು

author img

By

Published : Feb 25, 2023, 9:48 AM IST

Fake car sales
ನಕಲಿ ದಾಖಲೆ ಸೃಷ್ಟಿಸಿ ಕಾರು ಮಾರಾಟ ದಂಧೆ

ನಕಲಿ ದಾಖಲೆ ಸೃಷ್ಟಿಸಿ ಕಾರು ಮಾರಾಟ ದಂಧೆ - ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲು - ಶೋರೂಂ ಮಾಲೀಕ ಪೊಲೀಸ್​​ ವಶಕ್ಕೆ.

ಬೆಂಗಳೂರು: ನೀವೇನಾದ್ರೂ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ಯೋಚನೆಯಲ್ಲಿದ್ದರೆ ಹುಷಾರು. ಯಾಕೆಂದರೆ ಯಾವುದೋ‌ ಕಾರುಗಳಿಗೆ ಇನ್ಯಾವುದೋ ನಂಬರ್ ಪ್ಲೇಟ್ ಹಾಕಿ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವವರಿದ್ದಾರೆ. ವಿಧಾನ ಪರಿಷತ್ ಸದಸ್ಯ ಬೋಜೆಗೌಡ ಅವರ ಕಾರಿನ ನಂಬರ್ ಪ್ಲೇಟ್ ಅಳವಡಿಸಿ, ನಕಲಿ ದಾಖಲೆಗಳೊಂದಿಗೆ ಕಾರು ಮಾರಾಟಕ್ಕೆ ಇರಿಸಿದ್ದ ಘಟನೆ ನಗರದಲ್ಲಿ ನಡೆದಿದೆ.

ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಪಕ್ಕದಲ್ಲೇ ಇರುವ ಐ ಕಾರ್ಸ್ ಸ್ಟುಡಿಯೋದಲ್ಲಿ‌ ಭೋಜೇಗೌಡ ಅವರ ಕಾರಿನ ನಂಬರ್ ಪ್ಲೇಟ್ ಅಳವಡಿಸಲಾಗಿದ್ದ ಕಾರು ನಿಂತಿರುವುದನ್ನ ಅವರ ಆಪ್ತ ಸಹಾಯಕ ಗಮನಿಸಿದ್ದಾರೆ. ತಕ್ಷಣ ಶೋರೂಂ ಒಳಗೆ ತೆರಳಿ ಕಾರಿನ ಬಗ್ಗೆ ವಿಚಾರಿಸಿದಾಗ, 'ಕಾರು ಮಾರಾಟಕ್ಕಿದೆ, ನಿಮಗೆ ಬೇಕಿತ್ತಾ? ಟೆಸ್ಟ್ ರೈಡ್ ಮಾಡಿ ನೋಡ್ತಿರಾ?' ಅಂತಾ ಶೋರೂಂ ಸಿಬ್ಬಂದಿ ಕೇಳಿದ್ದಾರೆ.

ಮತ್ತಷ್ಟು ಅನುಮಾನಗೊಂಡು ಕಾರಿನ ದಾಖಲಾತಿಗಳನ್ನ ಪರಿಶೀಲಿಸಿದಾಗ ಅಚ್ಚರಿ ಎಂಬಂತೆ ಆರ್.ಸಿ ಕೂಡ ಬೋಜೇಗೌಡರ ಹೆಸರಿನಲ್ಲಿರುವುದು ಪತ್ತೆಯಾಗಿದೆ. ತಕ್ಷಣ ಬೋಜೇಗೌಡರಿಗೆ ಕರೆ ಮಾಡಿದ್ದ ಅವರ ಆಪ್ತ ಸಹಾಯಕ ಸರ್ ‌ನಿಮ್ಮ ಕಾರ್ ಸೇಲ್ ಮಾಡಿದ್ರಾ? ಅಂತಾ ಕೇಳಿದ್ದಾರೆ. ಅದಕ್ಕೆ ಬೋಜೇಗೌಡರು ಇಲ್ಲ, ಕಾರು ತಮ್ಮ ಬಳಿಯೇ ಇದೆ ಎಂದಾಗ, ಶೋರೂಂನಲ್ಲಿ ನಿಮ್ಮ‌ ಕಾರಿನ ನಂಬರ್​​ ಮತ್ತೊಂದು ಕಾರು ಇದೆ ಎಂದು ವಿಷಯ ಮುಟ್ಟಿಸಿದ್ದಾರೆ. ಬಳಿಕ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಶೋರೂಂ ಮಾಲೀಕ ವಶಕ್ಕೆ: ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಹೈಗ್ರೌಂಡ್ಸ್ ಪೊಲೀಸರು ಕಾರಿನ ಸಮೇತ ಐ ಕಾರ್ಸ್ ಸ್ಟುಡಿಯೋ ಮಾಲೀಕ ಇಮ್ರಾನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತನಗೆ ಬೇರೆಯವರು ಕಾರು ಕೊಟ್ಟಿದ್ದಾರೆ ಎಂದು ಇಮ್ರಾನ್ ಹೇಳುತ್ತಿದ್ದು, ವಿಚಾರಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರು ಕದ್ದು ನಂಬರ್‌ಪ್ಲೇಟ್ ಬದಲಿಸಿ ಮಾರಾಟ: ದುಬಾರಿ ಬೆಲೆಯ ಕಾರುಗಳನ್ನು‌ ಕ್ಷಣಾರ್ಧದಲ್ಲಿ ಕದ್ದು ನಂಬರ್ ಪ್ಲೇಟ್ ಬದಲಾಯಿಸಿ ಸಾರ್ವಜನಿಕರಿಗೆ ಕಡಿಮೆ ಬೆಲೆ‌ಗೆ ಮಾರಾಟ ಮಾಡುತ್ತಿದ್ದ ಕಳ್ಳನನ್ನು ಪುಲಕೇಶಿ ನಗರ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಮುಳಬಾಗಿಲು ಮೂಲದ ಮೊಹಮ್ಮದ್ ಫೈರೋಜ್ ಪಾಷಾ ಬಂಧಿತ ಆರೋಪಿ. ಈತನಿಂದ 20 ಲಕ್ಷ ರೂ. ಮೌಲ್ಯದ ಮಾರುತಿ ಬಲೆನೊ ಕಾರು, ಮಾರುತಿ ಈಕೋ ಹಾಗೂ ಮಿನಿ ಟೆಂಪೋವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ನಕಲಿ ದಾಖಲೆ ಸೃಷ್ಟಿಸಿ ಮಾರಾಟ: ಸಾರ್ವಜನಿಕ ಪ್ರದೇಶಗಳಲ್ಲಿ‌ ನಿಲ್ಲಿಸಿದ್ದ ಐಷಾರಾಮಿ ಕಾರುಗಳ‌ನ್ನು ಸುಲಭವಾಗಿ ಕಳ್ಳತನ ಮಾಡುತ್ತಿದ್ದ ಆರೋಪಿ ಓಎಲ್ಎಕ್ಸ್​ಗೆ ಹೋಗಿ ಮಾರಾಟವಾಗುವ ಕಾರಿನ ನೋಂದಣಿ ಸಂಖ್ಯೆಯನ್ನು ತೆಗೆದುಕೊಂಡು ಕದ್ದ ಕಾರಿಗೆ ಬದಲಾಯಿಸುತ್ತಿದ್ದ. ಬಳಿಕ ಗ್ರಾಹಕರನ್ನು ಸಂಪರ್ಕಿಸಿ ಅವರನ್ನು ವಿಶ್ವಾಸಕ್ಕೆ ಪಡೆದುಕೊಂಡು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಅಸಲಿ ದಾಖಲಾತಿಯಂತೆ ನಕಲಿ ದಾಖಲೆ ಸೃಷ್ಟಿಸಿ ಮಾಲೀಕನ ಹೆಸರಿನಲ್ಲಿ ಸಹಿ ಹಾಕುತ್ತಿದ್ದ.‌ ತ್ವರಿತವಾಗಿ ಹಣ ನೀಡುವಂತೆ ಒತ್ತಡ ಹಾಕುತ್ತಿರಲಿಲ್ಲ.‌ ಇದರಿಂದ ಆರೋಪಿ ಮೇಲೆ ಸಾರ್ವಜನಿಕರಿಗೆ ನಂಬಿಕೆ ಹುಟ್ಟುವಂತೆ ಮಾಡಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಕಾರು ಕದ್ದು ನಂಬರ್‌ಪ್ಲೇಟ್ ಬದಲಿಸಿ ಮಾರಾಟ; ಖತರ್‌ನಾಕ್ ಖದೀಮನ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.