ETV Bharat / state

ರಾಜಕಾಲುವೆ ಒತ್ತುವರಿ ಬಗ್ಗೆ ಸಿಎಜಿ ವರದಿ ವಿವರಣೆ ನೀಡಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

author img

By

Published : Sep 15, 2022, 3:02 PM IST

explain-the-cag-report-on-encroachment-of-rajakaluve-high-court
ರಾಜಕಾಲುವೆ ಒತ್ತುವರಿ ಬಗ್ಗೆ ಸಿಎಜಿ ವರದಿ ವಿವರಣೆ ನೀಡಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರಿನಲ್ಲಿ ಈಗ ಎಷ್ಟು ಒತ್ತುವರಿಗಳಾಗಿವೆ ಎಂಬ ಅಂಕಿ ಅಂಶ ನೀಡಬೇಕೆಂದು ಸರ್ಕಾರ ಮತ್ತು ಬಿಬಿಎಂಪಿಗೆ ಹೈಕೋರ್ಟ್ ತಾಕೀತು ಮಾಡಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿನ ಉಲ್ಲೇಖದ ಅಂಶಗಳ ಕುರಿತು ವಿವರಣೆ ನೀಡುವಂತೆ ಸರ್ಕಾರ ಮತ್ತು ಬಿಬಿಎಂಪಿಗೆ ಹೈಕೋರ್ಟ್ ಸೂಚಿಸಿದೆ.

ನಗರದ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿ, ಸೆ.16ಕ್ಕೆ ವಿಚಾರಣೆ ಮುಂದೂಡಿದೆ.

ರಾಜಕಾಲುವೆ ಒತ್ತುವರಿ ತೆರವಿಗೆ ತಡೆಯಾಜ್ಞೆ ಏನಾದರೂ ಇದೆಯಾ?. ಈ ಕುರಿತು ಪರ್ಯಾಯ ವಿಚಾರಣೆ ನಡೆಯುತ್ತಿದೆಯೇ ಎಂಬ ಬಗ್ಗೆ ಮಾಹಿತಿ ನೀಡುವಂತೆ ಬಿಬಿಎಂಪಿ ಪರ ವಕೀಲರಿಗೆ ಸೂಚನೆ ನೀಡಿತು. ರಸ್ತೆ ಗುಂಡಿ ಮುಚ್ಚುವ ಸಂಬಂಧ ಈ ಹಿಂದೆ (ಸೆ.7ರಂದು) ನೀಡಿದ್ದ ನಿರ್ದೇಶನಗಳನ್ನು ಜಾರಿ ಮಾಡಿರುವ ಸಂಬಂಧದ ಅನುಪಾಲನೆ ವರದಿ ಸಲ್ಲಿಸಬೇಕು. ಈ ವರದಿಯನ್ನು ಶುಕ್ರವಾರ ಪರಿಶೀಲಸಲಾಗುವುದು ಎಂದು ಪೀಠ ತಿಳಿಸಿತು.

ಇದನ್ನೂ ಓದಿ: ಯಾವುದೇ ತಾರತಮ್ಯ ಇಲ್ಲದೇ ಒತ್ತುವರಿ ತೆರವು ಮಾಡಲಿದ್ದೇವೆ: ಸಿಎಂ ಬೊಮ್ಮಾಯಿ ಭರವಸೆ

ಈಗಿನ ಅಂಕಿ ಅಂಶ ಕೊಡಿ: ರಾಜಕಾಲುವೆ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆಯೇ?. ಎಷ್ಟು ಒತ್ತುವರಿಯಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ನೀವು ಹಳೆಯ ಅಂಕಿ ಸಂಖ್ಯೆ ನೀಡಬೇಡಿ. ಈಗ ಎಷ್ಟು ಒತ್ತುವರಿಗಳಾಗಿವೆ ಎಂಬ ಅಂಕಿ ಅಂಶ ನೀಡಬೇಕೆಂದು ನ್ಯಾಯ ಪೀಠ ತಾಕೀತು ಮಾಡಿತು.

ಈ ವೇಳೆ ಒತ್ತುವರಿ ಪತ್ತೆ ಮಾಡುವ ಕೆಲಸ ದಿನನಿತ್ಯ ನಡೆಯುತ್ತಿದೆ. ಅಲ್ಲದೇ, ಒತ್ತುವರಿಗಳನ್ನು ತೆರವು ಮಾಡಲಾಗುತ್ತಿದೆ. ಎಷ್ಟು ಒತ್ತುವರಿಯಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ವರದಿ ನೀಡಲು ಕಾಲಾವಕಾಶ ನೀಡಬೇಕೆಂದು ವಕೀಲರು ಕೋರಿದರು.

ನ್ಯಾಯಪೀಠ ಅಸಮಾಧಾನ: ನಗರದಲ್ಲಿ ಎಲ್ಲ ಭಾಗಗಳಲ್ಲಿ ರಸ್ತೆ ಗುಂಡಿಗಳನ್ನು ಕಟ್ಟಡ ತ್ಯಾಜ್ಯ, ಸಿಮೆಂಟ್ ಪೀಸ್, ಸಣ್ಣ ಕಲ್ಲುಗಳಿಂದ ಸ್ಥಳೀಯರೇ ಮುಚ್ಚುತ್ತಿದ್ದಾರೆ. ಎಲ್ಲ ನಾವೇ ಮಾಡುತ್ತಿದ್ದೇವೆ ಎಂದು ನೀವು ದೊಡ್ಡದಾಗಿ ಜಂಬ ಕೊಚ್ಚಿಕೊಳ್ಳುತ್ತೀರಿ ಎಂದು ನ್ಯಾಯಪೀಠ ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿತು.

ಗುಂಡಿ ಮುಚ್ಚಲು ದೇಶದಲ್ಲೇ ಮೊದಲ ಯಂತ್ರ ಪರಿಚಯಿಸಲಾಯಿತು. ಅದು ಏನು ಕೆಲಸ ಮಾಡುತ್ತಿದೆ ಎಂಬುದು ಯಾರಿಗೂ ಗೊತ್ತಿಲ್ಲ. ರಸ್ತೆ ಗುಂಡಿ ಮುಚ್ಚುವ ಟೆಂಡರ್ ಪಡೆದಿರುವ ಕಂಪನಿ ಹಣ ಮಾಡಲು ಇದೆಯೇ ಎಂದೂ ಪ್ರಶ್ನಿಸಿತು.

ಇದನ್ನೂ ಓದಿ: ಒತ್ತುವರಿ ತೆರವು ನಿಲ್ಲಿಸಲು ಪ್ರಭಾವಿಗಳ ಒತ್ತಡ: ತಡೆಯಾಜ್ಞೆ ಬಾರದಂತೆ ಸರ್ಕಾರದ ಜಾಣ ನಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.