ETV Bharat / state

ಅಂಬಾನಿ-ಅದಾನಿ ಮಾತ್ರವಲ್ಲ, ಜನಸಾಮಾನ್ಯರ ಜೇಬಲ್ಲಿ ಹಣವಿದ್ದಲ್ಲಿ ಮಾತ್ರ ಆರ್ಥಿಕಾಭಿವೃದ್ಧಿ: ಸಿದ್ದರಾಮಯ್ಯ

author img

By ETV Bharat Karnataka Team

Published : Aug 25, 2023, 3:50 PM IST

ಬೆಂಗಳೂರಿನ ಗಾಂಧಿ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ದಿ.ಡಾ.ಸಿದ್ದಲಿಂಗಯ್ಯ ಸ್ಮರಣೆ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿ ಮಾತನಾಡಿದರು.

ಸಿದ್ದಲಿಂಗಯ್ಯ ಅವರ ಪುತ್ಥಳಿ ಲೋಕಾರ್ಪಣೆ
ಸಿದ್ದಲಿಂಗಯ್ಯ ಅವರ ಪುತ್ಥಳಿ ಲೋಕಾರ್ಪಣೆ

ಬೆಂಗಳೂರು : ಕೇವಲ ಅಂಬಾನಿ-ಅದಾನಿಯಂತಹ ವ್ಯವಹಾರಸ್ಥರಲ್ಲದೇ ತಿಮ್ಮ, ಬೋರ ಹಾಗೂ ಕಾಳನಂತಹ ಜನಸಾಮಾನ್ಯರ ಜೇಬಿನಲ್ಲಿ ಹಣವಿದ್ದಲ್ಲಿ ಆರ್ಥಿಕ ಸ್ಥಿತಿ ಬೆಳವಣಿಗೆ ಮತ್ತು ಮಧ್ಯಮ ವರ್ಗ ಅಭಿವೃದ್ಧಿಗೆ ನೆರವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ದಿ. ಡಾ. ಸಿದ್ದಲಿಂಗಯ್ಯ ಸ್ಮರಣೆ ಕಾರ್ಯಕ್ರಮ ಉದ್ಘಾಟನಾ ಸಮಾರಂಭ
ದಿ. ಡಾ. ಸಿದ್ದಲಿಂಗಯ್ಯ ಸ್ಮರಣೆ ಕಾರ್ಯಕ್ರಮ ಉದ್ಘಾಟನಾ ಸಮಾರಂಭ

ಕರ್ನಾಟಕ ಆದಿಜಾಂಬವರ ಸಾಂಸ್ಕೃತಿಕ ಸಮಿತಿ ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ದಿ.ಡಾ. ಸಿದ್ದಲಿಂಗಯ್ಯ ಸ್ಮರಣೆ ಕಾರ್ಯಕ್ರಮ ಉದ್ಘಾಟನೆ ಹಾಗೂ ಸಿದ್ದಲಿಂಗಯ್ಯ ಪುತ್ಥಳಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ದುಡಿಯುವವರು, ಶ್ರಮಿಕರಲ್ಲಿ ಹಣವಿದ್ದರೆ ದೇಶದ ಆರ್ಥಿಕತೆಯ ಬೆಳವಣಿಗೆ ಆಗುತ್ತದೆ. ಆದರೆ, ಕೇವಲ ಅಂಬಾನಿ, ಅದಾನಿ ಜೇಬು ತುಂಬಿಸುವವರ ಕೈಗೆ ಅಧಿಕಾರ ಕೊಟ್ಟು ಇಡೀ ದೇಶ ಪರಿತಪಿಸುವಂತಾಗಿದೆ ಎಂದರು.

ದೇಶದ ಆರ್ಥಿಕ ಸ್ಥಿತಿ ಬೆಳೆಯಬೇಕೆಂಬ ಕಾರಣದಿಂದ ನಮ್ಮ ಸರ್ಕಾರ ಶ್ರಮಿಕ ವರ್ಗದ ಜೇಬಿಗೆ ಹಣ ಹಾಕುವ ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಈ ಮೂಲಕ ಜನರ ಜೇಬಿಗೆ ಹಣ ಹಾಕುವ ಕೆಲಸಕ್ಕೆ ಮುಂದಾಗಿದ್ದೇವೆ. ಇದರಿಂದಾಗಿ ನಮ್ಮ ಆರ್ಥಿಕತೆ ಚೈತನ್ಯ ಪಡೆದುಕೊಳ್ಳುತ್ತಿದೆ ಎಂದು ಹೇಳಿದರು.

ಕವಿ ಸಿದ್ದಲಿಂಗಯ್ಯ ಸ್ಮರಣೆ ಕಾರ್ಯಕ್ರಮ
ಕವಿ ಸಿದ್ದಲಿಂಗಯ್ಯ ಸ್ಮರಣೆ ಕಾರ್ಯಕ್ರಮ

ಇದನ್ನೂ ಓದಿ: ಗ್ರಾಮೀಣಾಭಿವೃದ್ಧಿ, ಪಂ.ರಾಜ್ ಇಲಾಖೆ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ: ಅಧಿಕಾರಿಗಳಿಗೆ ಸಿಎಂ ಸೂಚನೆ

ಸಂವಿಧಾನ ವಿರೋಧಿಗಳಿಗೆ ಅಧಿಕಾರ ಕೊಟ್ಟು ಸಮಾನತೆ ಬರಬೇಕು ಎಂದರೆ ಹೇಗೆ ಸಾಧ್ಯ? ಅಂಬಾನಿ-ಅದಾನಿಯವರ ಜೇಬು ತುಂಬಿಸುವವರ ಕೈಗೆ ಕೇಂದ್ರದಲ್ಲಿ ಅಧಿಕಾರ ಕೊಟ್ಟು ಬಡವರ, ಮಧ್ಯಮ ವರ್ಗದವರ ಉದ್ಧಾರ ಆಗಬೇಕು ಎಂದರೆ ಸಾಧ್ಯವೇ ಎಂದು ಇದೇ ವೇಳೆ ಪ್ರಶ್ನಿಸಿದರು.

ಕವಿಯಾಗಿದ್ದ ಸಿದ್ದಲಿಂಗಯ್ಯರ ಆಶಯಗಳನ್ನು ಬದುಕಿನಲ್ಲಿ ಇಟ್ಟುಕೊಂಡವರಿಗೆ ಜೀವ ಬೆದರಿಕೆ ಪತ್ರಗಳು ಬರುತ್ತಿವೆ. ಈ ಬೆದರಿಕೆ ಪತ್ರ ಬರೆಯುವವರನ್ನು ಬೆಂಬಲಿಸುವವರ ಕೈಗೆ ಅಧಿಕಾರ ಕೊಟ್ಟು ಯಾರಿಗೆ ಬಂತು, ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ ಎಂದು ಪ್ರಶ್ನಿಸಿದರೆ ಹೇಗೆ ಎಂದು ಸಭಿಕರಿಗೆ ಮತ್ತೊಂದು ಪ್ರಶ್ನೆ ಎಸೆದರು.

ಇದನ್ನೂ ಓದಿ: ಸಾಹಿತಿಗಳಿಗೆ ಜೀವ ಬೆದರಿಕೆ ಹಿನ್ನೆಲೆ: ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ

ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಜನಚಳವಳಿಗಳ ಉತ್ಪತ್ತಿ, ಬಜೆಟ್​ನಲ್ಲಿ ಕೊಟ್ಟಿರುವ ಕಾರ್ಯಕ್ರಮಗಳು, ದಲಿತರ ಪರವಾದ ಕಾಯ್ದೆ ಮತ್ತು ಕಾರ್ಯಕ್ರಮಗಳನ್ನು ಜಾರಿ ಮಾಡುತ್ತಿದ್ದಾರೆ. ಅವರು ಸಂವಿಧಾನದ ನಿಜವಾದ ರಕ್ಷಕರು ಎಂದರು.

ಮಾಜಿ ಸಚಿವ ಹೆಚ್.ಆಂಜನೇಯ ಕಾಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿಗಳಾದ ಕೆ. ಮರುಳಸಿದ್ದಪ್ಪ, ಎಸ್.ಜಿ ಸಿದ್ದರಾಮಯ್ಯ, ಅಗ್ರಹಾರ ಕೃಷ್ಣಮೂರ್ತಿ ಹಾಗೂ ಹಿರಿಯ ಪತ್ರಕರ್ತ ರವೀಂದ್ರ ಭಟ್, ಶಿಕ್ಷಣ ತಜ್ಞ ನಿರಂಜನಾರಾಧ್ಯ, ಇಂದಿರಾ ಕೃಷ್ಣಪ್ಪ, ಪ್ರೊ.ಜಾಫೆಟ್, ಡಾ.ಮಾನಸ ಸಿದ್ದಲಿಂಗಯ್ಯ ಸೇರಿ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ: ಸಾಹಿತಿಗಳಿಗೆ ಬೆದರಿಕೆ ಕೇಸ್‌ಗಳು ಬೆಂಗಳೂರು ಪೊಲೀಸರಿಗೆ ಹಸ್ತಾಂತರ; ಎಸಿಪಿ ಮಟ್ಟದ ಅಧಿಕಾರಿಯಿಂದ ತನಿಖೆಗೆ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.