ETV Bharat / state

ಧರಣಿ ಹಿಂಪಡೆದ ಬಿಜೆಪಿ; ಪರಿಷತ್​ನಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಆರಂಭ

author img

By

Published : Jul 5, 2023, 8:32 PM IST

ಕಾಂಗ್ರೆಸ್​ ಸದಸ್ಯ ಯು ಬಿ ವೆಂಕಟೇಶ್
ಕಾಂಗ್ರೆಸ್​ ಸದಸ್ಯ ಯು ಬಿ ವೆಂಕಟೇಶ್

ಸರ್ವ ಜನಾಂಗದ ಶಾಂತಿಯ ತೋಟ ಮಾಡುವುದು ನಮ್ಮ ಸರ್ಕಾರದ ಉದ್ದೇಶ ಎಂದು ಕಾಂಗ್ರೆಸ್​ ಸದಸ್ಯ ಯು ಬಿ ವೆಂಕಟೇಶ್ ತಿಳಿಸಿದ್ದಾರೆ.

ಬೆಂಗಳೂರು : ಗೋಹತ್ಯೆ ನಿಷೇಧ ಕಾಯ್ದೆ ಸಾಧಕ- ಬಾಧಕಗಳ ಕುರಿತು ನಾವು ನಮ್ಮಲ್ಲಿ ಚರ್ಚೆ ನಡೆಸಿದ್ದೇವೆ. ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸಚಿವ ಕೆ. ಆರ್ ವೆಂಕಟೇಶ್ ತಿಳಿಸಿದ್ದಾರೆ. ವಿಧಾನ ಪರಿಷತ್ ನಲ್ಲಿ ರವಿಕುಮಾರ್ ಚರ್ಚೆಗೆ ಉತ್ತರಿಸಿದ ಸಚಿವರು, ನಾವು ಕಾಯ್ದೆ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಒಂದೊಮ್ಮೆ ಸದಸ್ಯರ ಬಳಿ ಈ ವಿಚಾರಕ್ಕೆ ಸಂಬಂಧಿಸಿ ಮಾಹಿತಿ ಇದ್ದರೆ ಅವರು ಮಾಹಿತಿ ನೀಡಲಿ. ಕ್ರಮ ಕೈಗೊಳ್ಳುತ್ತೇವೆ ಎಂದರು.

ಮತ್ತಷ್ಟು ಚರ್ಚೆಗೆ ಮುಂದಾದ ರವಿಕುಮಾರ್​ಗೆ ತಡೆ ಒಡ್ಡಿದ ಸಭಾಪತಿ ಬಸವರಾಜ ಹೊರಟ್ಟಿ, ಇದೇ ವಿಚಾರದ ಚರ್ಚೆ ಪ್ರಶ್ನೋತ್ತರ ಅವಧಿಯಲ್ಲಿ ಬೇಡ. ಅರ್ಧ ಗಂಟೆ ಚರ್ಚೆಗೆ ಅವಕಾಶ ಕೋರಿ ಪತ್ರ ಸಲ್ಲಿಸಿ. ಅವಕಾಶ ನೀಡೋಣ ಎಂದರು. ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿ ಸದಸ್ಯ ರವಿಕುಮಾರ್, ಗೋಹತ್ಯೆ ನಿಷೇಧ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಆದರೆ, ಇದರ ನಿಷೇಧ ಕುರಿತು ಸಾಧಕ-ಬಾಧಕಗಳ ಚರ್ಚೆ ನಡೆಯುತ್ತಿದೆ ಎಂದಿದ್ದಾರೆ.

ಇದಕ್ಕೆ ಪುಷ್ಠಿ ನೀಡುವ ರೀತಿ ಸಚಿವರು ಮೈಸೂರಲ್ಲಿ ಮಾತನಾಡಿ ಎಮ್ಮೆ, ಕೋಣ ಕಡಿಯುವುದಾದರೆ ಗೋವನ್ನು ಯಾಕೆ ಹತ್ಯೆ ಮಾಡಬಾರದು ಎಂದಿದ್ದಾರೆ. ಇದರಿಂದ ಸಚಿವರಿಂದ ಸ್ಪಷ್ಟೀಕರಣ ಬೇಕು. ಅವರ ನಿಲುವು ಏನೆಂದು ಹೇಳಲಿ. ಬಕ್ರೀದ್ ಸಂದರ್ಭ ಹಲವೆಡೆ ಗೋಹತ್ಯೆ ಆಗಿದೆ. ಶಿರಸಿ ಬಳಿ ಹಳ್ಳಿಯೊಂದರ ರಸ್ತೆಯಲ್ಲಿ ಗೋವಿನ ತಲೆ ಸಿಕ್ಕಿದೆ. ಇದಕ್ಕೆ ಕ್ರಮ ಆಗಲಿ ಎಂದು ಹೇಳಿದರು. ಅಂತಿಮವಾಗಿ ಬಿಜೆಪಿ ಸದಸ್ಯರು ತಮ್ಮ ಹೋರಾಟ ಕೈಬಿಟ್ಟು ಸ್ಥಾನಕ್ಕೆ ವಾಪಸ್​ ಆದರು.

ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ: ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಕಾಂಗ್ರೆಸ್ ಸದಸ್ಯ ಯು ಬಿ ವೆಂಕಟೇಶ್ ಪ್ರಸ್ತಾಪ ಮಂಡಿಸಿದರು. ಸದಸ್ಯ ನಾಗರಾಜ್ ಯಾದವ್ ಅನುಮೋದಿಸಿದರು. ಇದಾದ ಬಳಿಕ ಚರ್ಚೆ ಆರಂಭಿಸಿದ ಯು. ಬಿ ವೆಂಕಟೇಶ್, ಹಿಂದೆ ಐದು ವರ್ಷ ಸರ್ಕಾರ ಇತ್ತೋ ಇಲ್ಲವೋ ಗೊತ್ತಿಲ್ಲ. ಮೂರು ಸಿಎಂ ಬಂದರು. ಒಂದೇ ಪಕ್ಷದ ಇಬ್ಬರು ಸಿಎಂ ಆದರು. ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ ಕೆಳಗಿಳಿಸಿದರು. ಪಂಚವಾರ್ಷಿಕ ಯೋಜನೆ ರೀತಿ ಹಿಂದಿನ ಸರ್ಕಾರ ಬಂದು ಹೋಯಿತು. ಯಾವುದೇ ಕೆಲಸ ಆಗಿಲ್ಲ. ಜನಶಕ್ತಿ ಮುಂದೆ ಇವರ ಆಟ ನಡೆದಿಲ್ಲ ಎಂದರು.

ಬಿಜೆಪಿ ಹಿರಿಯ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಮಧ್ಯ ಪ್ರವೇಶ ಮಾಡಿದರು. ಗದ್ದಲ ಶುರುವಾಯಿತು. ಸಭಾಪತಿಗಳು ಸಹ ಮಧ್ಯ ಪ್ರವೇಶಿಸಿ ಕೋಟಾ ಅವರೇ ನೀವು ಪ್ರತಿಪಕ್ಷ ನಾಯಕರಲ್ಲ. ಸುಮ್ನೆ ಕುಳಿತುಕೊಳ್ಳಿ ಎಂದರು. ಕಲಾಪದಲ್ಲಿ ಗದ್ದಲ ಹೆಚ್ಚಾಯಿತು. ಸಭಾಪತಿಗಳು ಸಮಾಧಾನಪಡಿಸಿ ಕಲಾಪ ಮುಂದುವರಿಸಲು ಅವಕಾಶ ಮಾಡಿಕೊಟ್ಟರು.

ಯು. ಬಿ ವೆಂಕಟೇಶ್ ಮಾತನಾಡಿ, ಇದನ್ನು ಶಿಸ್ತಿನ ಪಕ್ಷ ಅಂತಾರೆ, ಚುನಾವಣೆ ಆಗಿ 60 ದಿನ ಆಯಿತು. ಇನ್ನೂ ಪ್ರತಿಪಕ್ಷ ನಾಯಕರ ಆಯ್ಕೆ ಮಾಡಲು ಆಗಿಲ್ಲ. ನಮ್ಮದು ಶುಭಾರಂಭ. ಆದರೆ ಬಿಜೆಪಿಯವರದ್ದು ಆರಂಭ ಶೂರತ್ವ. ನಾವು ಉಚಿತ ಭಾಗ್ಯ ಕೊಡ್ತೇವೆ ಅಂದರೆ ಉರಿಯುತ್ತದೆ. ಬಡವರು ಸಂತಸ ಪಟ್ಟಿದ್ದಾರೆ. ಹೊಟ್ಟೆ ಉರಿ ಹೆಚ್ಚಾಗಿದೆ. ನಾವು ಭಾಗ್ಯ ಕೊಟ್ಟಿದ್ದನ್ನು ನಿಮ್ಮಿಂದ ಕೊಡಲಾಗಿಲ್ಲ. ನಮ್ಮ ಕಾರ್ಯಕ್ಕೆ ಬೆಂಬಲ ನೀಡಿ. ಶುಭಾಶಯ ಸಲ್ಲಿಸಿ ಎಂದರು. ಎಸ್.ವಿ. ಸಂಕನೂರು ಮಾತನಾಡಿ, ನಿರುದ್ಯೋಗಿ ಪದವೀಧರರಿಗೆ ಭತ್ಯೆ ಕೊಡ್ತೀವಿ ಅಂದಿದ್ದಿರಿ, ಆದರೆ ಈಗ ಕೊಡುತ್ತಿಲ್ಲ ಎಂದರು.

ಬಡವರಿಗೆ ಸರ್ಕಾರಿ ಸವಲತ್ತು ಸಿಗುತ್ತಿದೆ: ಯು. ಬಿ ವೆಂಕಟೇಶ್ ಮಾತನಾಡಿ, ನಾವು ನುಡಿದಂತೆ ನಡೆಯುತ್ತಿದ್ದೇವೆ. ಶಿಕ್ಷಕರ ನೇಮಕಾತಿ ಮಾಡಿಲ್ಲ. ವಿಧವೆಯರಿಗೆ ವೇತನ ಕೊಟ್ಟಿಲ್ಲ. ಮನೆ ಕಟ್ಟಿ ಕೊಟ್ಟಿಲ್ಲ. ಇವರು ಏನೂ ಮಾಡಿಲ್ಲ. ಅದಕ್ಕಾಗಿಯೇ ಅನುಭವಿಸುತ್ತಿದ್ದಾರೆ. ಬಡವರಿಗೆ ಸಹಾಯ ಆಗಬೇಕೆಂಬ ಆಶಯ ನಮ್ಮದಾಗಿದೆ. ಬಡವರಿಗೆ ಸರ್ಕಾರಿ ಸವಲತ್ತು ಸಿಗುತ್ತಿದೆ. ನಾವು ಕೊಡುತ್ತೇವೋ ಇಲ್ಲವೋ ಅನ್ನುವ ಅನುಮಾನ ಬೇಡ. ಎಲ್ಲವೂ ಜಾರಿಯಾಗಲಿದೆ. ಸರ್ವಜನಾಂಗದ ಶಾಂತಿಯ ತೋಟ ಮಾಡುವುದು ಸರ್ಕಾರದ ಆಶಯ. ಮತಕ್ಕಾಗಿ ಬಿಜೆಪಿ ಯವರು ಮತಗಳನ್ನು ಒಡೆದರು. ಇಂದು ಜನಶಕ್ತಿ ಏನು ಅನ್ನುವುದನ್ನು ತೋರಿಸಿದ್ದಾರೆ ಎಂದರು.

ಐದು ವರ್ಷದಲ್ಲಿ ನಾಲ್ಕು ಸಾರಿ ರಾಜ್ಯಪಾಲರಿಂದ ಭಾಷಣ ಮಾಡಿಸಿದರು. ಯಾವ ಯೋಜನೆ ಕೊಟ್ಟರು? ಅತಿವೃಷ್ಟಿಗೆ ಪರಿಹಾರ ಸಿಕ್ಕಿಲ್ಲ, ಜಿಎಸ್​ಟಿ ಪಾಲು ಬಂದಿಲ್ಲ. ಇವರಿಂದ ಅನಾನುಕೂಲ ಬಿಟ್ಟರೆ ಬೇರೇನೂ ಬರಲಿಲ್ಲ. ರಾಜ್ಯದ ಬಗ್ಗೆ ಕೇಂದ್ರದ ತಾರತಮ್ಯ ಏಕೆ? ಕೇಂದ್ರ ಅಕ್ಕಿ ಕೊಡಲ್ಲಾ ಅಂದಾಗ ಬಿಜೆಪಿ ದನಿ ಎತ್ತಬೇಕಿತ್ತು ಎಂದರು.

ನಿಜ ಹೇಳಿದಾಗ ಎಲ್ಲರಿಗೂ ಬೇಜಾರಾಗುತ್ತದೆ. 35 ವರ್ಷದಲ್ಲೇ ಅತಿದೊಡ್ಡ ಬಹುಮತವನ್ನು ರಾಜ್ಯದಲ್ಲಿ ಸರ್ಕಾರವೊಂದಕ್ಕೆ ಜನ ಬಹುಮತ ನೀಡಿದ್ದಾರೆ ಎಂದು ರಾಜ್ಯಪಾಲರು ಹೇಳಿದ್ದಾರೆ. ರಾಜ್ಯಪಾಲರ ಕೈಲಿ ಸರ್ಕಾರ ಅತ್ಯುತ್ತಮ ಭಾಷಣ ಮಾಡಿಸಿದ್ದಾರೆ ಎಂದು ವಿವರಿಸಿದ ಸಂದರ್ಭ ಕೋಟಾ ಶ್ರೀನಿವಾಸ ಪೂಜಾರಿ ಮಧ್ಯಪ್ರವೇಶಿಸಿ ತಮ್ಮ ಕಾಳಜಿ ವ್ಯಕ್ತಪಡಿಸಿದರು. ಯು.ಬಿ ವೆಂಕಟೇಶ್ ಮಾತಿನ ನಡುವೆ ಕೋಟಾ ಶ್ರೀನಿವಾಸ ಪೂಜಾರಿ ಅನ್ನುವ ಬದಲು ಜನಾರ್ದನ ಪೂಜಾರಿ ಎಂದರು. ಸದನದ ಚರ್ಚೆಯೇ ಸಂಪೂರ್ಣ ಜನಾರ್ಧನ ಪೂಜಾರಿ, ಅವರ ಸಾಲ ಮೇಳ ಇತ್ಯಾದಿ ವಿಚಾರ ಚರ್ಚೆಯಾಯಿತು. ಸುದೀರ್ಘ ಸಮಯ ಇದೇ ವಿಚಾರದ ಮೇಲೆ ಚರ್ಚೆ ನಡೆಯಿತು.

ನಾವು ಹೊಸ ಮಾದರಿ ಆಡಳಿತ ನೀಡುತ್ತೇವೆ: ರಾಜ್ಯಪಾಲರ ಭಾಷಣ ಶುರುವಾಗಿದ್ದೇ ಹೊಸ ಕನಸು, ಆಶಯದೊಂದಿಗೆ. ನಾವು ನುಡಿದಂತೆ ನಡೆಯುತ್ತೇವೆ. ಹಿಂದಿನ ಸರ್ಕಾರ ನಾಲ್ಕು ವರ್ಷದಲ್ಲಿ ಏನನ್ನೂ ಮಾಡಿಲ್ಲ. ನಾವು ಹೊಸ ಮಾದರಿ ಆಡಳಿತ ನೀಡುತ್ತೇವೆ. ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ಪೊಲೀಸ್ ವ್ಯವಸ್ಥೆ ಮಹಿಳಾ ಹಾಗೂ ಮಕ್ಕಳ ಸ್ನೇಹಿ ಆಗಿಸಿದ್ದೇವೆ. ಇಂತಹ ಬಜೆಟ್ ಇನ್ನಾವಾಗ ಬರುವುದೋ ಗೊತ್ತಿಲ್ಲ. ನಾವು ಹೇಳಿದ್ದನ್ನು ನಡೆಸುತ್ತೇವೆ. ರಾಜ್ಯಪಾಲರ ಭಾಷಣವನ್ನು ಬೆಂಬಲಿಸುತ್ತೇನೆ ಎಂದರು. ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ಅನುಮೋದಿಸಿದರು.

ಇದನ್ನೂ ಓದಿ: ವಿಧಾನಸಭೆಯಲ್ಲಿ ಎಪಿಎಂಸಿ ತಿದ್ದುಪಡಿ ಸೇರಿದಂತೆ 6 ವಿಧೇಯಕಗಳ ಮಂಡನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.