ETV Bharat / state

ನೀರಾವರಿ ಇಲಾಖೆ ಭ್ರಷ್ಟಾಚಾರ ಬಗ್ಗೆ ಬಿಜೆಪಿ ಶಾಸಕರು ಆಡಿದ ಮಾತುಗಳು ನನ್ನ ಕಿವಿಯಲ್ಲಿದೆ: ಡಿಕೆಶಿ

author img

By

Published : May 30, 2023, 5:51 PM IST

Department of Water Resources
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

''ನನಗೂ 33 ವರ್ಷ ಅನುಭವ ಇದೆ. ನಿಮ್ಮ ಕೈಯಲ್ಲಿ ಮಾಡಬಾರದ್ದು ಮಾಡಿಸಲ್ಲ. ದಾರಿ ತಪ್ಪಬೇಡಿ, ಎಚ್ಚರಿಕೆಯಿಂದ ಕೆಲಸ ಮಾಡಿ. ಬದಲಾವಣೆ ತನ್ನಿ. ದೆಹಲಿಯಿಂದ ಯೋಜನೆಗಳನ್ನು ತರಬೇಕು. ನೆರೆಯ ತಮಿಳುನಾಡು, ಆಂಧ್ರ, ಮಹಾರಾಷ್ಟ್ರಕ್ಕೆ ಎಷ್ಟು ಯೋಜನೆಗಳು ಬಂದಿವೆ. ನಮ್ಮ ರಾಜ್ಯಕ್ಕೆ ಎಷ್ಟು ಬಂದಿವೆ ಎಂದು ನೀವೇ ಹೋಲಿಕೆ ಮಾಡಿಕೊಳ್ಳಿ'' ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಬೆಂಗಳೂರು: ''ನೀರಾವರಿ ಇಲಾಖೆಯ ಭ್ರಷ್ಟಾಚಾರ ಕುರಿತು ಹಿಂದಿನ ಆಡಳಿತ ಪಕ್ಷದ ಶಾಸಕರು ಆಡಿರುವ ಮಾತುಗಳು ನನ್ನ ಕಿವಿಯಲ್ಲಿದೆ'' ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ವಿಕಾಸಸೌಧದಲ್ಲಿ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಜೊತೆ ಪರಿಶೀಲನೆ ಸಭೆ ನಡೆಸಿದ ಬಳಿಕ ಮಾತನಾಡಿದರು. ಗೂಳಿಹಟ್ಟಿ ಶೇಖರ್ ಮತ್ತು ಎಚ್.ವಿಶ್ವನಾಥ ಆಡಿರುವ ಮಾತು ಸಹ ಒಂದೊಂದು ಕಿವಿಯಲ್ಲಿದೆ. ನಾನು ಕಿವಿಯಲ್ಲಿ ಕೇಳಿದ್ರೂ, ಕಣ್ಣಲ್ಲಿ ನೋಡಬೇಕು. ಆ ಮುತ್ತು ರತ್ನಗಳ ಬಗ್ಗೆ ಗೊತ್ತಿದೆ. ನಾನು ತನಿಖೆ ಸೇರಿದಂತೆ ಇತರ ವಿಚಾರಗಳ ಬಗ್ಗೆ ನಂತರ ಮಾತನಾಡುತ್ತೇನೆ ಎಂದು ತಿಳಿಸಿದರು.

''ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಜನರಿಗೆ ಮಾತು ಕೊಟ್ಟಿದ್ದೇನೆ. ನೀರಾವರಿಗೆ ಹೆಚ್ಚು ಆದ್ಯತೆ ಕೊಡಲಿದ್ದೇವೆ ಎಂದು ಭರವಸೆ ನೀಡಿದ್ದೇವೆ. ಅದಕ್ಕೆ ನಾವು ಬದ್ಧರಾಗಿದ್ದೇವೆ. ಆರ್ಥಿಕ ಪರಿಸ್ಥಿತಿಯ ಅರಿವಿದೆ. ಗರಿಷ್ಠ ಕೇಂದ್ರ ಸಹಾಯ ಅನುದಾನದ ಯೋಜನೆಗೆ ಆದ್ಯತೆ ನೀಡಬೇಕು. ರಾಜ್ಯದ ಎಂಪಿಗಳ ಮೂಲಕ ಕೇಂದ್ರದ ಮೇಲೆ ಒತ್ತಡ ಹೇರಬೇಕು‌. ಎಲ್ಲ ಯೋಜನೆಗಳಿಗೆ ರಾಷ್ಟ್ರೀಯ ಸ್ಥಾನಮಾನ ನೀಡಲು ಯತ್ನಿಸುವಂತೆ ಸೂಚನೆ ನೀಡಿದ್ದೇನೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ಕೇಂದ್ರ ಯೋಜನೆಯಾಗಿ ಘೋಷಣೆ ಮಾಡಲಾಗಿದೆ'' ಎಂದರು.

Department of Water Resources
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು.

''ಭೂ ಸ್ವಾಧೀನಕ್ಕೆ ಆದ್ಯತೆ ನೀಡಬೇಕು. ಭೂಸ್ವಾಧೀನ ಸಮಸ್ಯೆಗೆ ಪರಿಹಾರ ನೀಡಬೇಕು. ಗುಣಮಟ್ಟ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಏಜೆನ್ಸಿ ಮೂಲಕ ಗುಣಮಟ್ಟ ಪರಿಶೀಲನೆ ಮಾಡುತ್ತೇವೆ. ಪಾರದರ್ಶಕತೆ ಇರಬೇಕು. ಭ್ರಷ್ಟಾಚಾರ ನಿಯಂತ್ರಣ ಮಾಡಬೇಕು. ಉದ್ಯೋಗ ಸೃಜನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಖಾಲಿ ಹುದ್ದೆಯನ್ನು ಭರ್ತಿ ಮಾಡಬೇಕು. ಮಂಜೂರಾತಿ ಹುದ್ದೆಗಳನ್ನು ಭರ್ತಿ ಮಾಡಲು ಆದ್ಯತೆ ನೀಡಲಿದ್ದೇವೆ'' ಎಂದು ತಿಳಿಸಿದರು.

''ಮೇಕೆ ದಾಟು ಯೋಜನೆ, ಮಹದಾಯಿ ಯೋಜನೆ ಸಂಬಂಧ ಕೇಂದ್ರ ಸಚಿವರನ್ನು ಭೇಟಿ ಮಾಡಿ, ಅಡಚಣೆಗೆ ಪರಿಹಾರ ಏನಿದೆ ಎಂಬ ಬಗ್ಗೆ ಮಾತುಕತೆ ನಡೆಸುತ್ತೇವೆ. ಮೇಕೆದಾಟು ಯೋಜನೆಗೆ ಮೀಸಲಿಟ್ಟ 1,000 ಕೋಟಿ ರೂಪಾಯಿ ಅನುದಾನವನ್ನು ಭೂಸ್ವಾಧೀನದಂತಹ ಪೂರ್ವಸಿದ್ಧತೆ ಕೆಲಸಗಳಿಗೆ ಬಂದಿತ್ತು. ಈ ಹಣ ಏಕೆ ಬಳಕೆ ಮಾಡಿಲ್ಲ? ಹಾಗಾದರೆ ಹಣ ಇಟ್ಟಿದ್ದಾದರೂ ಏಕೆ? ಎಂದು ಪ್ರಶ್ನಿಸಿದರು. ಮೇಕೆದಾಟು, ಮಹದಾಯಿ ಯೋಜನೆಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಕ್ಕೆ ತರಬೇಕು. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಿ'' ಎಂದು ಸೂಚನೆ ನೀಡಿದ್ದಾರೆ.

ಉದ್ಯೋಗ ಸೃಷ್ಟಿಗೆ ಒತ್ತು: ''ಕೇಂದ್ರದಿಂದ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಅನುಮತಿ ತರುವುದೇ ನಾನು, ನಿಮಗೆ ನೀಡುತ್ತಿರುವ ಗುರಿ. ಜಲ ವಿವಾದ ಪರಿಹಾರ, ಬಾಕಿ ಯೋಜನೆಗಳ ಪೂರ್ಣ, ನೀರಾವರಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಡೀಕರಣ, ಕೇಂದ್ರದಿಂದ ಅನುದಾನ ತರುವುದು, ಉದ್ಯೋಗ ಸೃಷ್ಟಿಗೆ ಒತ್ತು ಕೊಡಬೇಕು. ನೀರಾವರಿ ಯೋಜನೆಗಳಿಗೆ 5 ವರ್ಷದಲ್ಲಿ 2 ಲಕ್ಷ ಕೋಟಿ ರೂ. ವಿನಿಯೋಗಿಸುತ್ತೇವೆ ಎಂದು ಮಾತು ಕೊಟ್ಟಿದ್ದೇವೆ. ಸರಕಾರ, ಸಂಸ್ಥೆಗಳು, ಕೇಂದ್ರದ ಅನುದಾನದ ಮೂಲಕ ಸಂಪನ್ಮೂಲ ಒಟ್ಟುಗೂಡಿಸಬೇಕು'' ಎಂದು ತಿಳಿಸಿದರು.

''ಕೇಂದ್ರ ಸಚಿವ ಶೇಖಾವತ್ ಉತ್ತಮ ವ್ಯಕ್ತಿ. ರಾಜ್ಯದ ಕೆಲಸಗಳಿಗೆ ಅವರ ಸಹಕಾರ ಪಡೆಯೋಣ. ಬಾಕಿ ಯೋಜನೆಗಳಿಗೆ ಭೂಸ್ವಾಧೀನ ತ್ವರಿತಗತಿಯಲ್ಲಿ ಮಾಡಿ. ಗುಣಮಟ್ಟದಲ್ಲಿ ರಾಜಿ ಇಲ್ಲ. ಬರೀ ಎಲ್ಒಸಿ, ಟೆಂಡರ್, ಗುತ್ತಿಗೆ ಹಂಚಿಕೆ, ಬಿಲ್ ಮಾಡೋ ಕೆಲಸಕ್ಕೆ ನಿಮ್ಮ ಶ್ರಮ ವಿನಿಯೋಗ ಆಗಬಾರದು. ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ. ನಿಷ್ಠೆ, ಪ್ರಾಮಾಣಿಕತೆಗೆ ಮಾತ್ರ ಪ್ರೋತ್ಸಾಹ. ಜಾತಿಯತೆ ಬೇಡ. ಮಾನವೀಯತೆ ಇರಲಿ. ನನಗೆ ಯಾವುದೇ ದ್ವೇಷ ಇಲ್ಲ. ಕೆಲಸ ಆಗಬೇಕು ಅಷ್ಟೇ. ನೀವು ಸರಕಾರಕ್ಕೆ ನಿಷ್ಠಾರಾಗಿರಬೇಕೆ ಹೊರತು ನಿಮಗೆ ಪೋಸ್ಟಿಂಗ್ ಕೊಟ್ಟವರಿಗಲ್ಲ. ಅಂತವರನ್ನು ಸಹಿಸೋದಿಲ್ಲ'' ಎಂದು ಎಚ್ಚರಿಕೆ ನೀಡಿದರು.

ದಾರಿ ತಪ್ಪಬೇಡಿ, ಎಚ್ಚರಿಕೆಯಿಂದ ಕೆಲಸ ಮಾಡಿ: ''ನನಗೂ 33 ವರ್ಷ ಅನುಭವ ಇದೆ. ನಿಮ್ಮ ಕೈಯಲ್ಲಿ ಮಾಡಬಾರದ್ದು ಮಾಡಿಸಲ್ಲ. ದಾರಿ ತಪ್ಪಬೇಡಿ, ಎಚ್ಚರಿಕೆಯಿಂದ ಕೆಲಸ ಮಾಡಿ. ಬದಲಾವಣೆ ತನ್ನಿ. ದೆಹಲಿಯಿಂದ ಯೋಜನೆಗಳನ್ನು ತರಬೇಕು. ನೆರೆಯ ತಮಿಳುನಾಡು, ಆಂಧ್ರ, ಮಹಾರಾಷ್ಟ್ರಕ್ಕೆ ಎಷ್ಟು ಯೋಜನೆಗಳು ಬಂದಿವೆ. ನಮ್ಮ ರಾಜ್ಯಕ್ಕೆ ಎಷ್ಟು ಬಂದಿವೆ ಎಂದು ನೀವೇ ಹೋಲಿಕೆ ಮಾಡಿಕೊಳ್ಳಿ. ನೀವು ಎಷ್ಟು ಚೆನ್ನಾಗಿ ಕೆಲಸ ಮಾಡಿದ್ದೀರಿ ಎಂದು ಗೊತ್ತಾಗುತ್ತದೆ.

ಕರ್ನಾಟಕಕ್ಕೆ ಬಹಳ ಅನ್ಯಾಯವಾಗಿದೆ. ನಾವು ಕರ್ನಾಟಕದ ಎಂಪಿಗಳ ಜೊತೆ ಸಭೆ ಮಾಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳೋಣ. ಪ್ರಧಾನಿಗಳು, ಕೇಂದ್ರದ ಜಲ ಸಂಪನ್ಮೂಲ ಸಚಿವರು ಸೇರಿದಂತೆ ಅಗತ್ಯ ಇರುವ ಎಲ್ಲರನ್ನೂ ಭೇಟಿ ಮಾಡೋಣ. ಕೇಂದ್ರದಿಂದ ಯೋಜನೆಗಳನ್ನು ತರುವ ಗುರಿಯನ್ನು ನಿಮಗೆ ನೀಡುತಿದ್ದೇನೆ. ಕೇಂದ್ರಕ್ಕೆ ಮನವರಿಕೆ ಮಾಡಿ, ಯೋಜನೆ ತರುವುದೇ ನಿಮ್ಮ ಕೆಲಸ. ಕೆಲಸ ಮಾಡಿದರೆ ನೀವು ಇಲ್ಲಿರುತ್ತೀರಿ. ಇಲ್ಲದಿದ್ದರೆ ನಿಮ್ಮ ಜಾಗದಲ್ಲಿ ಬೇರೆಯವರು ಇರುತ್ತಾರೆ'' ಎಂದರು.

''ನಾನು ಇಲಾಖೆ ವಹಿಸಿಕೊಂಡ ಏನೇನು ಕೆಲಸ ಮಾಡಿದ್ದೀರಿ ಎಂಬ ಬಗ್ಗೆ ಕಾಲ ಕಾಲಕ್ಕೆ ವರದಿ ಕೊಡಬೇಕು. ಯಾವ, ಯಾವ ಯೋಜನೆಗಳು ಯಾವ ಹಂತದಲ್ಲಿವೆ ಎಂಬ ಬಗ್ಗೆ ವಿಡಿಯೋ, ಫೋಟೋ ದಾಖಲೆ ಒದಗಿಸಬೇಕು. ಯೋಜನೆಗಳು ಕುಂಠಿತಗೊಳ್ಳಲು ಕಾರಣಗಳನ್ನು ಸಾಕ್ಷಿ ಸಮೇತ ನೀಡಬೇಕು. ಕತೆ, ಕಟ್ಟು ಕತೆ ಕೇಳುವುದಿಲ್ಲ. ನಾನು ಈ ಖಾತೆಯಿಂದ ಇಳಿದ ನಂತರ ಕಣ್ಣಿಗೆ ಕಾಣುವ ಯಾವುದೇ ಕೆಲಸ ಆಗಿಲ್ಲ. ಮೂರು ವರ್ಷದ ಹಿಂದೆ ಇದ್ದಂತೆಯೇ ಇದೆ. ನಾನು ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇನೆ ಎನ್ನುವುದಕ್ಕಿಂತ ಎಷ್ಟು ಕೆಲಸ ಮಾಡಿದೆ ಎಂಬುದೇ ಮುಖ್ಯವಾಗಬೇಕು. ನೀವು ಯಾವುದೇ ಯೋಜನೆ ಮಾಡಿದರೂ ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ'' ಎಂದು ಸಲಹೆ ನೀಡಿದರು.

''ಪ್ರತಿ ಹನಿ ನೀರು ರೈತರ, ಜನರ ಹಿತಕ್ಕೆ ಬಳಕೆ ಆಗಬೇಕು. ಪೋಲಾಗಬಾರದು. ಎಲ್ಲೆಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಬಹುದು ಎಂಬುದರ ಬಗ್ಗೆ ತ್ವರಿತಗತಿಯಲ್ಲಿ ನೀಲನಕ್ಷೆ ತಯಾರು ಮಾಡಿ. ಕೆಆರ್ ಎಸ್, ಮಂಚನಬೆಲೆ, ತಿಪ್ಪಗೊಂಡನಹಳ್ಳಿ, ಹೇಮಾವತಿ ಜಲಾಶಯ ಸೇರಿದಂತೆ ಈಗಾಗಲೇ ಸಿದ್ದವಾಗಿರುವ ಉದ್ಯಾನವನ, ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ತುರ್ತು ಕ್ರಮ ತೆಗೆದುಕೊಳ್ಳಿ'' ಎಂದು ಸಲಹೆ ನೀಡಿದರು.

ಇದನ್ನೂ ಓದಿ: ರಾಜ್ಯ ಸರಕಾರಿ ನೌಕರರಿಗೆ ಕಾಂಗ್ರೆಸ್ ಸರಕಾರದ ಮೊದಲ ಕೊಡುಗೆ: ಶೇ.4 ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಆದೇಶ ಜಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.