ETV Bharat / state

C T Ravi: ಸಿ.ಟಿ.ರವಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಬಹುತೇಕ ಖಚಿತ; ಇಂದು ದೆಹಲಿಗೆ ಪ್ರಯಾಣ

author img

By

Published : Jul 31, 2023, 7:14 AM IST

CT Ravi
ಸಿಟಿ ರವಿ

Karnataka BJP state President Post: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿ.ಟಿ.ರವಿ ಹೆಸರು ಕೇಳಿಬಂದಿರುವ ಬೆನ್ನಲ್ಲೇ, ಅವರು ಭಾನುವಾರ ಕೇಶವಕೃಪಾಕ್ಕೆ ಭೇಟಿ ನೀಡಿ ಸಂಘ ಪರಿವಾರದ ಪ್ರಮುಖರನ್ನು ಭೇಟಿಯಾದರು.

ಬೆಂಗಳೂರು: ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಗೆ ಸದ್ಯದಲ್ಲೇ ನೇಮಕಾತಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಬುಲಾವ್ ಮೇರೆಗೆ ಬಿಜೆಪಿ ನಾಯಕ ಸಿ.ಟಿ.ರವಿ ಸೋಮವಾರ (ಇಂದು) ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಇದಕ್ಕೂ ಮುನ್ನ ನಿನ್ನೆ ಕೇಶವಕೃಪಾಕ್ಕೆ ಭೇಟಿ ನೀಡಿ ಸಂಘ ಪರಿವಾರದ ಪ್ರಮುಖರ ಜೊತೆ ಅವರು ಮಾತುಕತೆ ನಡೆಸಿದರು.

ಹೈಕಮಾಂಡ್​ನಿಂದ​ ಕರೆ ಬರುತ್ತಿದ್ದಂತೆ ಚಾಮರಾಜಪೇಟೆಯಲ್ಲಿರುವ ಆರ್‌ಎಸ್‌ಎಸ್ ಕಚೇರಿ ಕೇಶವಕೃಪಾಕ್ಕೆ ಆಗಮಿಸಿದ ಸಿ.ಟಿ.ರವಿ, ಆರ್‌ಎಸ್‌ಎಸ್ ಮುಖಂಡರಾದ ಮುಕುಂದ್ ಅವರನ್ನು ಭೇಟಿ ಮಾಡಿದರು. ರಾಜ್ಯಾಧ್ಯಕ್ಷ ಹುದ್ದೆಯ ನೇಮಕ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ರಾಜ್ಯ ಬಿಜೆಪಿಗೆ ಸಿ.ಟಿ.ರವಿ ಹೊಸ ಸಾರಥಿ? : ಮುಂದಿನ ವಾರ ಅಧಿಕೃತವಾಗಿ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೆಸರು ಘೋಷಣೆ ಮಾಡುವ ಸಾಧ್ಯತೆ ಇದೆ. ನಳಿನ್​ ಕುಮಾರ್​ ಕಟೀಲ್ ಜಾಗಕ್ಕೆ ಹಿಂದೂ ಫೈರ್‌ಬ್ರಾಂಡ್ ಸಿ.ಟಿ.ರವಿ ನೇಮಕ ಬಹುತೇಕ ಖಚಿತವಾಗಿದ್ದು, ಹುದ್ದೆ ಸಿಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಸಂಘ ಪರಿವಾರದ ನಾಯಕರನ್ನು ಭೇಟಿ ಮಾಡಿದ್ದಾರೆ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ : C T Ravi: ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿಯಲ್ಲ, ಪಕ್ಷ ವಹಿಸುವ ಜವಾಬ್ದಾರಿ ನಿರ್ವಹಿಸುವೆ: ಸಿ.ಟಿ.ರವಿ

ಭಾನುವಾರ ರಾಜ್ಯಾಧ್ಯಕ್ಷ ಹುದ್ದೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಸಿ.ಟಿ.ರವಿ, "ನಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ, ಎಂದಿಗೂ ನಾನು ಪಕ್ಷದ ಕಾರ್ಯಕರ್ತ. ಪಕ್ಷ ನನಗೆ ಯಾವುದೇ ಜವಾಬ್ದಾರಿ ನೀಡಿದರೂ ಸಮರ್ಥವಾಗಿ ನಿಭಾಯಿಸುತ್ತೇನೆ. ನನ್ನನ್ನು ರಾಜ್ಯಾಧ್ಯಕ್ಷ ಮಾಡುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ಭವಿಷ್ಯ ಎನ್ನುವುದು ನಿರೀಕ್ಷೆ ಮತ್ತು ಆಕಾಂಕ್ಷೆ. ಭವಿಷ್ಯದ ಬಗ್ಗೆ ನನಗೆ ಮಾಹಿತಿ ಇಲ್ಲ. ರಾಜ್ಯಾಧ್ಯಕ್ಷ ಸ್ಥಾನ ಯಾರಿಗೆ ಕೊಡಬೇಕು?, ಯಾವಾಗ ಕೊಡಬೇಕು? ಎಂಬುದನ್ನು ದೊಡ್ಡವರು ನಿರ್ಧಾರ ಮಾಡುತ್ತಾರೆ" ಎಂದಿದ್ದರು.

ಇದನ್ನೂ ಓದಿ : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ ಟಿ ರವಿ ಬಿಡುಗಡೆ.. ರಾಜ್ಯಾಧ್ಯಕ್ಷ ಹೊಣೆ?

ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿ : ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯನ್ನು ಜುಲೈ 29ರಂದು ಬಿಜೆಪಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ.ರವಿ ಅವರನ್ನು ಕೈ ಬಿಡಲಾಗಿತ್ತು. ಬಿ.ಎಲ್.ಸಂತೋಷ್ ಅವರು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿದಿದ್ದಾರೆ. ಇದರ ಜೊತೆಗೆ, ತೆಲಂಗಾಣ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್, ರಾಜ್ಯಸಭಾ ಸಂಸದ ರಾಧಾ ಮೋಹನ್ ಅಗರವಾಲ್, ಸಂಸದರಾದ ಅರುಣ್ ಸಿಂಗ್ ಸೇರಿ 8 ಮಂದಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಛತ್ತೀಸ್​​ಗಡದ ಮಾಜಿ ಸಿಎಂ ರಮಣ್ ಸಿಂಗ್, ವಿಧಾನ ಪರಿಷತ್ ಸದಸ್ಯ ತಾರಿಕ್ ಮನ್ಸೂರ್ ಸೇರಿದಂತೆ 13 ನಾಯಕರು ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದಾರೆ. ಹಾಗೆಯೇ, ಎ.ಕೆ.ಆ್ಯಂಟನಿ ಪುತ್ರ ಅನಿಲ್ ಆ್ಯಂಟನಿ ಸೇರಿ 13 ನಾಯಕರು ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನ ಪಡೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.