ETV Bharat / state

ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ನಕಲಿ ವಾಟ್ಸ್​ಆ್ಯಪ್ ಖಾತೆ ಸೃಷ್ಟಿ: ಪ್ರಕರಣ ದಾಖಲು

author img

By ETV Bharat Karnataka Team

Published : Dec 8, 2023, 11:29 AM IST

Creation of fake WhatsApp account: ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ನಕಲಿ ವಾಟ್ಸ್​ಆ್ಯಪ್ ಖಾತೆ ಸೃಷ್ಟಿ ಮಾಡಿರುವ ಕುರಿತು ಬೆಂಗಳೂರಿನಲ್ಲಿರುವ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

fake WhatsApp account
ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ನಕಲಿ ವಾಟ್ಸ್​ಆ್ಯಪ್ ಖಾತೆ ಸೃಷ್ಟಿ: ಪ್ರಕರಣ ದಾಖಲು

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರಾಜಕೀಯ ನಾಯಕರು, ಸಿನಿಮಾ ತಾರೆಯರು ಹಾಗೂ ಪೊಲೀಸ್​ ಅಧಿಕಾರಿಗಳು ಹೆಸರಿನಲ್ಲಿ ನಕಲಿ ಸಾಮಾಜಿಕ ಜಾಲತಾಣ ಖಾತೆಗಳನ್ನು ಸೃಷ್ಟಿ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಜಿಲ್ಲಾಧಿಕಾರಿಗಳ ಹೆಸರು ಬಳಸಿಕೊಂಡು ಹಣಕ್ಕೆ ಬೇಡಿಕೆ ಇಡುತ್ತಿರುವ ಪ್ರಕರಣಯೊಂದು ಬೆಂಗಳೂರಿನಲ್ಲಿ ವರದಿಯಾಗಿದೆ. ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಅವರ ಫೋಟೋ ಬಳಸಿಕೊಡು ಅವರ ಹೆಸರಿನಲ್ಲಿ ವಾಟ್ಸ್​ಆ್ಯಪ್ ಖಾತೆ ತೆರೆದಿರುವ ಆರೋಪಿ ಇಲಾಖೆಯ ಹಲವು ಅಧಿಕಾರಿಗಳಿಗೆ ಹಣ ನೀಡುವಂತೆ ಸಂದೇಶ ಕಳುಹಿಸಿದ್ದಾನೆ.

ತುರ್ತು ಕಾರ್ಯಕ್ಕೆ ಹಣ ಬೇಕಿದೆ ತಕ್ಷಣ ಕಳುಹಿಸಿ ಎಂದು ಸಂದೇಶ ರವಾನಿಸಿರುವುದನ್ನ ಕಂಡ ಅಧಿಕಾರಿಗಳು, ಅನುಮಾನಗೊಂಡು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸದ್ಯ ಈ ಕುರಿತು ಕೇಂದ್ರ ವಿಭಾಗದ ಸೈಬರ್ ಕ್ರೈಂ ಠಾಣೆಗೆ ಕೆ.ಎ. ದಯಾನಂದ್ ದೂರು ನೀಡಿದ್ದಾರೆ. ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.

ಹಿಂದಿನ ಪ್ರಕರಣಗಳು, ಶಿಕ್ಷಣ ಸಚಿವರ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಖಾತೆ: ಶಿಕ್ಷಣ ಹಾಗೂ ಸಾಕ್ಷರತಾ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೆಸರಿನಲ್ಲಿ ಇತ್ತೀಚೆಗೆ ನಕಲಿ ಫೇಸ್​ಬುಕ್​ ಖಾತೆ ತೆರೆಯಲಾಗಿತ್ತು. ಈ ಕುರಿತಂತೆ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು. ರಾಜ್ಯ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಸಂಚಾಲಕ ಜೆ.ಡಿ. ಮಂಜುನಾಥ್ ಅವರು ಈ ಬಗ್ಗೆ ದೂರು ದಾಖಲಿಸಿದ್ದರು.

ಫೇಸ್​ಬುಕ್​ನಲ್ಲಿ "ಶ್ರೀ ಮಧು ಬಂಗಾರಪ್ಪ ಜೀ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರು" ಎನ್ನುವ ಹೆಸರಿನಲ್ಲಿ ನಕಲಿ ಖಾತೆ ತೆರೆಯಲಾಗಿತ್ತು. ಫೇಸ್​ಬುಕ್​ನ ಡಿಪಿಗೆ ಮಧು ಬಂಗಾರಪ್ಪ ಅವರ ಭಾವಚಿತ್ರ ಹಾಕಲಾಗಿತ್ತು.‌ ಈ ಫೇಸ್​ಬುಕ್​ನ ನಕಲಿ ಖಾತೆಗೆ 58 ಸಾವಿರ ಜನ ಫಾಲೋ ಮಾಡುತ್ತಿದ್ದರು. ಈ ಕುರಿತು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ರಾಜ್ಯಪಾರ ಹೆಸರಿನಲ್ಲಿ ನಕಲಿ ಖಾತೆ: ರಾಜ್ಯಪಾಲರ ಹೆಸರಿನಲ್ಲಿ ಸೈಬರ್​ ವಂಚಕರು ನಕಲಿ ಫೇಸ್​​ಬುಕ್​ ಖಾತೆ ಸೃಷ್ಟಿಮಾಡಿದ್ದ ಪ್ರಕರಣ ಇತ್ತೀಚೆಗೆ ನಡೆದಿತ್ತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ ಅವರ ಭಾವಚಿತ್ರ, ಹೆಸರು ಬಳಸಿಕೊಂಡು ನಕಲಿ ಫೇಸ್‌ಬುಕ್ ಖಾತೆ ತೆರೆದಿರುವ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಈ ಕುರಿತು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ದೂರು ನೀಡಿದ್ದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ) ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ ಸೃಷ್ಟಿಸಿದ್ದ ಮೂವರು ಆರೋಪಿಗಳನ್ನು ಸೈಬರ್ ಕ್ರೈಮ್ ಪೊಲೀಸರು ಇತ್ತೇಚೆಗೆ ಬಂಧಿಸಿದ್ದರು. ವೆಂಕಟೇಶ್, ಧರಣೇಶ್ ಹಾಗೂ ಸಿದ್ದಾರ್ಥ್ ಬಂಧಿತ ಆರೋಪಿಗಳು. ಈ ಕುರಿತು ಕೆಪಿಸಿಸಿ ಕಾನೂನು ವಿಭಾಗದ ಕಾರ್ಯಕಾರಿ ಸಮಿತಿ ಸದಸ್ಯ ಶತಭಾಷ್ ಶಿವಣ್ಣ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ಕೊಟ್ಟಿದ್ದರು.

ಇದನ್ನೂ ಓದಿ: ಸೈಬರ್ ವಂಚನೆ ಪ್ರಕರಣಗಳಲ್ಲಿ ಬೆಂಗಳೂರಿಗೆ ಅಗ್ರಸ್ಥಾನ: ಕಾರಣಗಳೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.