ETV Bharat / state

ರಾಜ್ಯದಲ್ಲಿ 3ನೇ ಡೋಸ್‌ ಲಸಿಕೆ ಪಡೆದಿದ್ದು ಶೇ.17ರಷ್ಟು ಮಂದಿ ಮಾತ್ರ!

author img

By

Published : Aug 11, 2022, 5:05 PM IST

only-17-percent-3rd-dose-of-covid-vaccination-in-karnataka-says-health-minister
ಶೇ.17 ಮಾತ್ರ ಕೋವಿಡ್​ 3ನೇ ಡೋಸ್‌ ಲಸಿಕಾಕರಣ: ಮಾಸ್ಕ್​, ಚಟುವಟಿಕೆಗಳ ನಿಯಂತ್ರಣದ ಬಗ್ಗೆ ಸುಧಾಕರ್ ಹೇಳಿದ್ದೇನು?

ರಾಜ್ಯದಲ್ಲಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ಮಾಸ್ಕ್‌ ವಿಚಾರದಲ್ಲಿ ನಿರ್ಲಕ್ಷ್ಯ ಕಂಡುಬರುತ್ತಿದೆ. ಎಲ್ಲರೂ ಮಾಸ್ಕ್‌ ಧರಿಸುವುದೂ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕೆಂದು ಸಚಿವ ಡಾ.ಸುಧಾಕರ್‌ ತಿಳಿಸಿದರು.

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಮೊದಲ ಹಾಗೂ ಎರಡನೇ ಡೋಸ್‌ ಲಸಿಕಾಕರಣದಲ್ಲಿ ಶೇ.100ರಷ್ಟು ಸಾಧನೆ ಮಾಡಲಾಗಿದೆ. ಆದರೆ, ಮೂರನೇ ಡೋಸ್‌ ಲಸಿಕೆಯನ್ನು ಶೇ.17ರಷ್ಟು ರಷ್ಟು ಮಂದಿ ಮಾತ್ರ ಪಡೆದಿದ್ದಾರೆ. ಉಚಿತವಾಗಿ ನೀಡುತ್ತಿದ್ದರೂ ಲಸಿಕೆ ಪಡೆಯದಿರುವುದು ತೀವ್ರ ಬೇಸರದ ಸಂಗತಿ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಕೋವಿಡ್​ನ ಮೂರನೇ ಡೋಸ್‌ ಕೂಡ ಉಚಿತವಾಗಿ ನೀಡಲು ಕ್ರಮ ವಹಿಸಿದ್ದಾರೆ. ಆದರೂ, ಈ ಡೋಸ್‌ ಪಡೆದವರ ಪ್ರಮಾಣ ಕಡಿಮೆ ಇದೆ. ಲಕ್ಷಾಂತರ ಲಸಿಕೆ ಡೋಸ್‌ ಲಭ್ಯವಿದ್ದರೂ ಜನರು ಮುಂದೆ ಬಾರದಿರುವುದು ಬೇಸರ ತಂದಿದೆ ಎಂದರು.

ಶೇ.17 ಮಾತ್ರ ಕೋವಿಡ್​ 3ನೇ ಡೋಸ್‌ ಲಸಿಕಾಕರಣ: ಮಾಸ್ಕ್​, ಚಟುವಟಿಕೆಗಳ ನಿಯಂತ್ರಣದ ಬಗ್ಗೆ ಸುಧಾಕರ್ ಹೇಳಿದ್ದೇನು?

ಮನೆಯ ಹಿರಿಯರಿಗೆ ಲಸಿಕೆ ಕೊಡಿಸಿ: ಲಸಿಕೆ ಪಡೆದವರಲ್ಲಿ 6-7 ತಿಂಗಳ ನಂತರ ರೋಗ ನಿರೋಧಕ ಶಕ್ತಿ ಕ್ಷೀಣಿಸುವುದರಿಂದ ಮೂರನೇ ಡೋಸ್‌ ನೀಡಲಾಗುತ್ತಿದೆ. ಮೂರನೇ ಡೋಸ್‌ ಪಡೆದರೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತದೆ. ಆಸ್ಪತ್ರೆಗೆ ದಾಖಲಾದರೂ ಸಾವು ಸಂಭವಿಸುವ ಸ್ಥಿತಿ ಸೃಷ್ಟಿಯಾಗುವುದಿಲ್ಲ. ಆದ್ದರಿಂದ ಉತ್ತಮ ಆರೋಗ್ಯಕ್ಕಾಗಿ ಅರ್ಹರೆಲ್ಲರೂ ಲಸಿಕೆ ಪಡೆಯಬೇಕು. ರಾಜ್ಯದಲ್ಲಿ ಈ ತಿಂಗಳ 10ರವರೆಗೂ 24 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಬಹುತೇಕರು 60 ವರ್ಷ ವಯಸ್ಸು ಮೇಲ್ಪಟ್ಟವರಾಗಿದ್ದಾರೆ. ಯುವಜನರು ಲಸಿಕೆ ಪಡೆಯುವುದರೊಂದಿಗೆ ತಮ್ಮ ಮನೆಯ ಹಿರಿಯರಿಗೂ ಕೊಡಿಸಬೇಕೆಂದು ಮನವಿ ಸಚಿವರು ಮಾಡಿದರು.

ರಾಜ್ಯದಲ್ಲಿ ಶೇ.7.2ರಷ್ಟು ಕೋವಿಡ್‌ ಪಾಸಿಟಿವಿಟಿ ದರ ಇದೆ. ಆದರೆ, ಕೆಲ ಜಿಲ್ಲೆಗಳಲ್ಲಿ ರಾಜ್ಯದ ಪಾಸಿಟಿವಿಟಿ ದರಕ್ಕಿಂತ ಹೆಚ್ಚು ದರ ದಾಖಲಾಗಿದೆ. ಧಾರವಾಡದಲ್ಲಿ ಅತಿ ಹೆಚ್ಚು ದಾಖಲಾಗಿದೆ. ರಾಜ್ಯದಲ್ಲಿ ಪ್ರತಿ ದಿನ 30 ಸಾವಿರ ಮಾದರಿಗಳನ್ನು ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಕೇಂದ್ರದ ಮಾರ್ಗಸೂಚಿಯಂತೆ ರೋಗ ಲಕ್ಷಣ ಇರುವವರಿಗೆ ಪರೀಕ್ಷೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ನಾಳೆಯಿಂದ ಕಾರ್ಬೆವಾಕ್ಸ್​ಗೆ ಅವಕಾಶ: ಕಾರ್ಬೆವಾಕ್ಸ್ ಎಂಬ ಹೊಸ ಲಸಿಕೆಯನ್ನು ಹೈದರಾಬಾದ್‌ ಸಂಸ್ಥೆ ಆವಿಷ್ಕಾರ ಮಾಡಿದ್ದು, ಅದಕ್ಕೆ ಪರವಾನಗಿ ದೊರೆತಿದೆ. ಮೂರನೇ ಡೋಸ್‌ ಆಗಿ ಕೋರ್ಬಿವ್ಯಾಕ್ಸ್‌ ಪಡೆಯಲು ನಾಳೆಯಿಂದ ಅವಕಾಶವಿದೆ. 60 ವರ್ಷ ವಯಸ್ಸು ಮೇಲ್ಪಟ್ಟವರು, ಕೋ ಮಾರ್ಬಿಡಿಟಿ ಇರುವವರು ಕಡ್ಡಾಯವಾಗಿ 3ನೇ ಡೋಸ್‌ ಪಡೆಯಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಮಂಕಿಪಾಕ್ಸ್‌ ಪತ್ತೆಯಾಗಿಲ್ಲ: ದೇಶದಲ್ಲಿ ಈವರೆಗೆ 9 ಮಂಕಿಪಾಕ್ಸ್‌ ಪ್ರಕರಣಗಳು ಪತ್ತೆಯಾಗಿದೆ. ಆದರೆ, ಇದುವರೆಗೆ ರಾಜ್ಯದಲ್ಲಿ ಮಂಕಿಪಾಕ್ಸ್‌ ಪತ್ತೆಯಾಗಿಲ್ಲ. ಆದರೂ, ಗಡಿ ಭಾಗದ ಐದಾರು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ. ಆಸ್ಪತ್ರೆಗಳಲ್ಲೂ ಅದಕ್ಕೆ ಬೇಕಾದ ಔಷಧಿ, ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಡೆತ್‌ ಆಡಿಟ್‌ : ತುಮಕೂರು, ಧಾರವಾಡ, ಬೆಂಗಳೂರಿನಲ್ಲಿ 16, 21 ವರ್ಷ ವಯಸ್ಸಿನವರು ಕೋವಿಡ್‌ ಸೋಂಕಿಗೊಳಗಾಗಿ ಮೃತಪಟ್ಟಿದ್ದಾರೆ. ಇದು ಬಹಳ ದುರದೃಷ್ಟಕರವಾಗಿದ್ದು, ಅವರ ಡೆತ್‌ ಆಡಿಟ್‌ ನಡೆಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳು ಕೋವಿಡ್‌ ರೋಗಿಗಳನ್ನು ದಾಖಲಿಸಿಕೊಳ್ಳಲು ನಿರಾಕರಿಸುವ ಬಗ್ಗೆ ದೂರು ಬಂದಿದೆ. ಇದು ಅಮಾನವೀಯ ನಡೆ. ಇಂತಹ ಪ್ರಕರಣ ಕಂಡುಬಂದರೆ ಕಾನೂನು ಪ್ರಕಾರ ಕಠಿಣ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಾಸ್ಕ್​ ಕಡ್ಡಾಯ: ರಾಜ್ಯದಲ್ಲಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸದ್ಯಕ್ಕೆ ದಂಡ ವಿಧಿಸುವ ಪ್ರಸ್ತಾಪ ಇಲ್ಲ. ಪರಿಸ್ಥಿತಿ ನೋಡಿಕೊಂಡು ಮತ್ತೆ ಸಭೆ ನಡೆಸಿ ಚರ್ಚಿಸಲಾಗುವುದು. ಮಾಸ್ಕ್‌ ವಿಚಾರದಲ್ಲಿ ನಿರ್ಲಕ್ಷ್ಯ ಕಂಡುಬರುತ್ತಿದೆ. ಎಲ್ಲರೂ ಮಾಸ್ಕ್‌ ಧರಿಸುವುದು ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಿಯಂತ್ರಿಸುವ ಪ್ರಸ್ತಾಪ ಸರ್ಕಾರ ಮುಂದೆ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಹೆಚ್ಚಿದ ಸಾಂಕ್ರಾಮಿಕ ರೋಗಗಳು: ರಾಜ್ಯದಲ್ಲಿ ಹೆಚ್ಚು ಮಳೆಯಾಗಿರುವುದರಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಕಳೆದ ವರ್ಷ ಇದೇ ಸಮಯದಲ್ಲಿ 419 ಮಲೇರಿಯಾ ಪ್ರಕರಣ ಕಂಡುಬಂದರೆ, ಈ ಬಾರಿ 114 ಕಂಡುಬಂದಿದೆ. ಇದು ಕಡಿಮೆ ಪ್ರಮಾಣದಲ್ಲಿದೆ. ಆದರೆ, ಕಳೆದ ವರ್ಷ 1,266 ಡೆಂಘೀ ಪ್ರಕರಣ ಕಂಡುಬಂದಿದ್ದು, ಈ ವರ್ಷ ಇವುಗಳ ಸಂಖ್ಯೆ 4,405ಕ್ಕೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ಉಡುಪಿ ಹಾಗೂ ಹಾಸನ ಜಿಲ್ಲೆಗಳಲ್ಲಿ ಡೆಂಘೀ ಪ್ರಕರಣ ಹೆಚ್ಚಿದೆ. ಕಳೆದ ವರ್ಷ ಚಿಕೂನ್‌ ಗುನ್ಯಾ ಪ್ರಕರಣ 454 ಇದ್ದು, ಈ ಬಾರಿ 978 ಆಗಿದೆ. ಎಚ್‌1ಎನ್‌1 ಕಳೆದ ವರ್ಷ 3 ಇದ್ದು, ಈ ಬಾರಿ 345 ಆಗಿದೆ ಎಂದು ಹೇಳಿದರು.

ಇದನ್ನೂ ಓದಿ: ಕೊರೊನಾ ಹೆಚ್ಚಳ: ದೆಹಲಿಯಲ್ಲಿ ಮಾಸ್ಕ್​ ಕಡ್ಡಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.