ETV Bharat / state

ಆ್ಯಸಿಡ್ ದಾಳಿಗೊಳಗಾದವರಿಗೆ ನೀಡುತ್ತಿದ್ದ ಪರಿಹಾರ 3 ರಿಂದ 10 ಲಕ್ಷಕ್ಕೆ ಏರಿಕೆ: ಸಚಿವ ಹಾಲಪ್ಪ ಆಚಾರ್

author img

By

Published : Feb 21, 2023, 7:35 PM IST

ಸಚಿವ ಹಾಲಪ್ಪ ಆಚಾರ್
ಸಚಿವ ಹಾಲಪ್ಪ ಆಚಾರ್

ಆ್ಯಸಿಡ್​ ದಾಳಿಗೊಳಗಾದವರಿಗೆ ನೀಡುತ್ತಿದ್ದ ಪರಿಹಾರದ ಮೊತ್ತವನ್ನ ಏರಿಕೆ ಮಾಡಲಾಗಿದೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.

ಬೆಂಗಳೂರು: ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ವ್ಯಾಪಕ ಕ್ರಮಗಳನ್ನು ಕೈಗೊಂಡಿದೆ. ಆ್ಯಸಿಡ್ ದಾಳಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದೆಯಲ್ಲದೇ ಆ್ಯಸಿಡ್ ದಾಳಿಗೊಳಗಾದವರಿಗೆ ನೀಡುತ್ತಿದ್ದ 3 ಲಕ್ಷ ರೂ ಪರಿಹಾರವನ್ನು 10 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಶೇಷ ಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವ ಹಾಲಪ್ಪ ಆಚಾರ್ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್​ನ ಸಲೀಂ ಅಹಮದ್ ಅವರ ಪರವಾಗಿ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆ್ಯಸಿಡ್ ದಾಳಿ ಪ್ರಕರಣಗಳಲ್ಲಿ ರಾಜ್ಯ ಸರ್ಕಾರದಿಂದ ತಕ್ಷಣವೇ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇತ್ತೀಚೆಗೆ ಕನಕಪುರದಲ್ಲಿ ಬಾಲಕಿ ಮೇಲೆ ನಡೆದ ಆ್ಯಸಿಡ್ ದಾಳಿ ಸಂದರ್ಭದಲ್ಲಿಯೂ ನಮ್ಮ ಸರ್ಕಾರ ತಕ್ಷಣವೇ ಸ್ಪಂದಿಸಿದೆ. ನಾನು ಕೂಡ ಆಸ್ಪತ್ರೆಗೆ ತೆರಳಿ ಸಂತ್ರಸ್ತೆ ಭೇಟಿ ಮಾಡಿ ಧೈರ್ಯ ತುಂಬಿದ್ದೇನೆ. ಅಗತ್ಯವಿರುವ ಎಲ್ಲ ರೀತಿಯ ಸೂಕ್ತ ಚಿಕಿತ್ಸೆಗೂ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದರು. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ತಪ್ಪು ಮಾಡಿದವರ ಮೇಲೆ ಕಾನೂನು ಕ್ರಮ ತೆಗೆಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಮಕ್ಕಳಲ್ಲಿ ಅಪೌಷ್ಟಿಕತೆ ಪ್ರಮಾಣ ಶೇ 50 ರಷ್ಟು ಇಳಿಕೆ: ಕಳೆದ ಎರಡು ವರ್ಷಗಳಲ್ಲಿ ಮಕ್ಕಳ ಅಪೌಷ್ಟಿಕತೆ ಪ್ರಮಾಣ ಶೇಕಡ 50ರಷ್ಟು ಕಡಿಮೆಯಾಗಿದೆ. ಎಂದು ಡಾ.ತಳವಾರ್ ಸಾಬಣ್ಣ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಮತ್ತು ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಮಕ್ಕಳ ಅಪೌಷ್ಟಿತೆ ಹೋಗಲಾಡಿಸಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, 2019-20ಕ್ಕೆ ಹೋಲಿಸಿದರೆ 2021-22ರಲ್ಲಿ ಅಪೌಷ್ಟಿಕತೆಯ ಪ್ರಮಾಣ ಅರ್ಧದಷ್ಟು ಕಡಿಮೆಯಾಗಿದೆ ಎಂದರು.

ಬಜೆಟ್ ಅನುಮೋದನೆ ನಂತರ ಹೊಸ ಯೋಜನೆ ಜಾರಿ: ಮಹಿಳೆಯರು ಮತ್ತು ಮಕ್ಕಳ ಸಮಗ್ರ ಶ್ರೇಯೋಭಿವೃದ್ಧಿಗಾಗಿ ಈ ಬಾರಿಯ ಬಜೆಟ್ ನಲ್ಲಿ "ಗೃಹಿಣಿ ಶಕ್ತಿ” ಯೋಜನೆ ಘೋಷಣೆ ಮಾಡಲಾಗಿದೆ. ಇದರಡಿ, ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು 500 ರೂಪಾಯಿ ಪ್ರೋತ್ಸಾಹ ಧನ ನೀಡುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಪ್ರಕಟಿಸಿದ್ದು, ಬಜೆಟ್​ಗೆ ಅನುಮೋದನೆ ದೊರೆಯುತ್ತಿದ್ದಂತೆ ಪ್ರಕಟಿಸಿರುವ ಹೊಸ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಡಿ.ಎಸ್. ಅರುಣ್ ಪ್ರಶ್ನೆಗಳಿಗೆ ಉತ್ತರ ನೀಡಿದ ಸಚಿವರು ಮಹಿಳಾ ಸಬಲೀಕರಣಕ್ಕಾಗಿ ಹಲವು ಪ್ರಮುಖ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಬಾರಿ ಒಂದು ಲಕ್ಷ ಮಹಿಳೆಯರಿಗೆ ಗೃಹ ಆಧಾರಿತ ಉದ್ಯಮ ಬಗ್ಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಯೋಜನೆ ಜಾರಿಗೊಳಿಸುತ್ತಿದ್ದು, ಸ್ವಾವಲಂಬಿ ಬದುಕಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ಮಾತೃವಂದನಾ ಯೋಜನೆಯಡಿ ಮೊದಲ ಹೆರಿಗೆ ಸಂದರ್ಭದಲ್ಲಿ ಸರ್ಕಾರ ಐದು ಸಾವಿರ ರೂಗಳನ್ನು ಎರಡು ಕಂತುಗಳಲ್ಲಿ ನೀಡುತ್ತಿದ್ದು, ಎರಡನೇ ಹೆರಿಗೆಯಲ್ಲಿ ಹೆಣ್ಣು ಮಗುವಾದರೆ ಆರು ಸಾವಿರ ರೂಗಳನ್ನು ಒಂದೇ ಕಂತಿನಲ್ಲಿ ನೀಡಲಾಗುತ್ತಿದೆ ಎಂದರು.

ವಿಶೇಷ ಚೇತನರಿಗೆ ಪರಿಕರಗಳನ್ನು ಒದಗಿಸಲು 2023-24 ನೇ ಸಾಲಿಗೆ 50 ಕೋಟಿ ರೂ ನಿಗದಿ: ವಿಕಲಚೇತನರಿಗೆ ದ್ವಿಚಕ್ರ ವಾಹನ ಒಳಗೊಂಡಂತೆ ವಿವಿಧ ಪರಿಕರಗಳನ್ನು ಒದಗಿಸಲು ಪ್ರಸ್ತುತ ಲಭ್ಯವಿರುವ ಆರ್ಥಿಕ ಸಂಪನ್ಮೂಲ ಕಡಿಮೆ ಇದ್ದು, ಇದಕ್ಕಾಗಿ ಈ ಬಾರಿ ಬಜೆಟ್​ನಲ್ಲಿ 50 ಕೋಟಿ ರೂಪಾಯಿ ಒದಗಿಸಲಾಗಿದೆ ಎಂದು ಎಸ್.ರವಿ ಕುಮಾರ್ ಪ್ರಶ್ನೆಗೆ ಸಚಿವರು ಉತ್ತರಿಸಿದರು. 2022-23 ನೇ ಸಾಲಿನ ಬಜೆಟ್ ನಲ್ಲಿ ಈ ಉದ್ದೇಶಕ್ಕಾಗಿ 16 ಕೋಟಿ ರೂಪಾಯಿ ನಿಗದಿ ಮಾಡಲಾಗಿತ್ತು. ಈ ಬಾರಿ ಅಧಿಕ ಹಣ ನಿಗದಿ ಮಾಡಿದ್ದು, ಹೆಚ್ಚು ಮಂದಿ ವಿಕಲಚೇತರಿಗೆ ಸೌಲಭ್ಯಗಳು ದೊರೆಯಲಿವೆ ಎಂದು ತಿಳಿಸಿದರು.

ಇದನ್ನೂ ಓದಿ: ವಿಜಯಪುರ ನಗರದ 141 ಎಕರೆ ಪ್ರದೇಶದಲ್ಲಿ ವೈನ್​ ಪಾರ್ಕ್​ ನಿರ್ಮಾಣ: ಸಚಿವ ಮುನಿರತ್ನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.