ETV Bharat / state

ಒಂದು ತಿಂಗಳೊಳಗೆ ಶೇ. 50ರಷ್ಟು ಬಾಕಿ ಮೊತ್ತ ಬಿಡುಗಡೆ ಮಾಡಿ: ಸರ್ಕಾರಕ್ಕೆ ಗಡುವು ನೀಡಿದ ಕೆಂಪಣ್ಣ

author img

By ETV Bharat Karnataka Team

Published : Oct 13, 2023, 3:33 PM IST

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ

ಹೊಸ ಸರ್ಕಾರ ರಚನೆಯಾದಾಗ ಗುತ್ತಿಗೆದಾರರಿಗೂ ಹಲವು ಭಾಗ್ಯಗಳನ್ನು ಕರುಣಿಸಲಾಗುತ್ತದೆ ಎಂದು ನಿರೀಕ್ಷಿಸಿದ್ದೆವು. ಆದರೆ ಹಳೆಯ ಸಮಸ್ಯೆಗಳೊಂದಿಗೆ ಹೊಸ ಸಮಸ್ಯೆಗಳು ಸೇರ್ಪಡೆಯಾಗಿವೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ದೂರಿದರು.

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಮಾಧ್ಯಮಗೋಷ್ಟಿ

ಬೆಂಗಳೂರು : ಒಂದು ತಿಂಗಳೊಳಗೆ ಎಲ್ಲಾ ಇಲಾಖೆಗಳಲ್ಲೂ ಕನಿಷ್ಠ ಶೇ. 50ರಷ್ಟು ಬಾಕಿ ಇರುವ ಮೊತ್ತ ಬಿಡುಗಡೆ ಮಾಡದಿದ್ದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಚಾಮರಾಜಪೇಟೆಯಲ್ಲಿರುವ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಗುತ್ತಿಗೆದಾರರ ಸಮಸ್ಯೆಗಳು ಬಗೆಹರಿಯುವುದಕ್ಕೆ ಬದಲಾಗಿ ಹೊಸದಾಗಿ ಮತ್ತಷ್ಟು ಸಮಸ್ಯೆಗಳು ಸೇರ್ಪಡೆಯಾಗಿವೆ. ಈಗಾಗಲೇ ಹಲವು ವರ್ಷಗಳಿಂದ ಗುತ್ತಿಗೆದಾರರು ಬಾಕಿ ಬಿಲ್ ಬಿಡುಗಡೆ, ಜಿಎಸ್​ಟಿ ಗೊಂದಲ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದ್ದೇವೆ. ಹೊಸ ಸಕಾರ ರಚನೆಯಾದಾಗ ಗುತ್ತಿಗೆದಾರರಿಗೂ ಹಲವು ಭಾಗ್ಯಗಳನ್ನ ಕರುಣಿಸಲಾಗುತ್ತದೆ ಎಂದು ನಿರೀಕ್ಷೆ ಮಾಡಿದ್ದೆವು. ಆದರೆ ಹಳೆಯ ಸಮಸ್ಯೆಗಳ ಜೊತೆಗೆ ಹೊಸ ಸಮಸ್ಯೆಗಳು ಸೇರ್ಪಡೆಯಾಗಿವೆ. ತನಿಖೆ ಹೆಸರಿನಲ್ಲಿ ರಾಜ್ಯ ಸರ್ಕಾರ ಬಾಕಿ ಹಣ ತಡೆಹಿಡಿದಿದೆ. ಕೆಲವು ಇಲಾಖೆಗಳಲ್ಲಿ ಶೇ. 7ರಷ್ಟು ಹಣ ಬಿಡುಗಡೆ ಮಾಡಿದ್ದಾರೆ. ಒಂದು ತಿಂಗಳಲ್ಲಿ ಶೇ.50 ರಷ್ಟು ಬಾಕಿ ಮೊತ್ತ ಬಿಡುಗಡೆ ಮಾಡಬೇಕು" ಎಂದು ಗಡುವು ನೀಡಿದರು.

"ತಮಗೆ ಬೇಕಾದ ಕೆಲ ಗುತ್ತಿಗೆದಾರರಿಗೆ ಮಾತ್ರ ಹಣ ಬಿಡುಗಡೆ ಮಾಡುತ್ತಿದ್ದಾರೆ. ಈ ಬಗ್ಗೆ ಕೇಳಿದರೆ ಗೊತ್ತಿಲ್ಲವೆಂದು ಇಂಜಿನಿಯರ್​ಗಳು ಹೇಳುತ್ತಿದ್ದಾರೆ. ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ಮಾಡದಿದ್ದರೆ ಪ್ರತಿಭಟನೆ ಅನಿವಾರ್ಯವಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುತ್ತೇವೆ. ಪ್ರಧಾನ ಮಂತ್ರಿಗೂ ಪತ್ರ ಬರೆಯುತ್ತೇವೆ" ಎಂದು ಹೇಳಿದರು.

"ಈಗಾಗಲೇ ಹಲವಾರು ಬಾರಿ ತಮ್ಮ ಗಮನಕ್ಕೆ ತಂದಿರುವಂತೆ ಗುತ್ತಿಗೆದಾರರಿಗೆ ವಿವಿಧ ಇಲಾಖೆಗಳಿಂದ ಸುಮಾರು 20 ಸಾವಿರ ಕೋಟಿ ರೂ. ಗಳಿಗೂ ಅಧಿಕ ಮೊತ್ತವನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಈ ಮೊತ್ತವನ್ನು ಒಂದೇ ಬಾರಿಯಲ್ಲದಿದ್ದರೂ ಹಂತ ಹಂತವಾಗಿಯಾದರೂ ಬಿಡುಗಡೆ ಮಾಡುವ ಪ್ರಾಮಾಣಿಕತೆಯನ್ನು ಸರ್ಕಾರ ತೋರಬೇಕಾಗಿತ್ತು. ಆದರೆ ಸರ್ಕಾರ ಗುತ್ತಿಗೆದಾರರನ್ನು ನಿರ್ಲಕ್ಷ್ಯ ಮಾಡುತ್ತಾ ಬಂದಿದೆ. ಗುತ್ತಿಗೆದಾರರು ಪ್ರಮುಖವಾಗಿ ಕೆಲಸ ನಿರ್ವಹಿಸುವ ಜಲಸಂಪನ್ಮೂಲ, ಸಣ್ಣ ನೀರಾವರಿ, ಲೋಕೋಪಯೋಗಿ ಮತ್ತು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಗಳೆಲ್ಲವೂ ಹೊಸ ಸಮಸ್ಯೆಗಳನ್ನು ಸೃಷ್ಟಿ ಮಾಡಿವೆ. ಈ ಸರ್ಕಾರ ರಚನೆಯಾದ ನಂತರ ಬಾಕಿ ಮೊತ್ತವನ್ನು ಪಾವತಿಸುತ್ತಿಲ್ಲ. ತನಿಖೆಯ ಹೆಸರಿನಲ್ಲಿ ಹಣ ಪಾವತಿಯಾಗದಂತೆ ತಡೆ ಹಿಡಿಯಲಾಗಿದೆ".

"ಸರ್ಕಾರವೇ ಮಾಡಿರುವ ನಿಯಮಗಳ ಪ್ರಕಾರ, ಕಾಮಗಾರಿಗಳಿಗೆ ಒಂದು ವರ್ಷದ ಒಪ್ಪಂದ ಮಾತ್ರ ಇರುತ್ತದೆ. ಆದರೆ ಸರ್ಕಾರ ಮೂರು ವರ್ಷದ ತನಿಖೆ ನಡೆಸುವುದಾಗಿ ಹೇಳುತ್ತಿದೆ. ಇದು ಹೇಗೆ ಸಾಧ್ಯ? ಒಂದು ವರ್ಷದಿಂದೀಚೆಗಿನ ಕಾಮಗಾರಿಗಳ ಬಾಕಿ ಮೊತ್ತವನ್ನು ತಡೆ ಹಿಡಿದು ತನಿಖೆ ಮುಗಿದ ನಂತರವೇ ನೀಡಲು ಅಭ್ಯಂತರವಿಲ್ಲ. ಆದರೆ ಮೂರ‍್ನಾಲ್ಕು ವರ್ಷಗಳ ಬಾಕಿ ಬಿಲ್ ತಡೆ ಹಿಡಿಯುವುದು ಯಾವ ನ್ಯಾಯ? ಎಂದು ಕೇಳಲೇಬೇಕಾಗುತ್ತದೆ. ಕೆಲವು ಇಲಾಖೆಗಳಲ್ಲಿ ಕೇವಲ ಶೇ.7ರಷ್ಟು ಬಿಲ್ ಮೊತ್ತವನ್ನು ಪಾವತಿ ಮಾಡಲಾಗುತ್ತಿದೆ" ಎಂದರು.

"ಅಂದರೆ ಒಂದು ಕೋಟಿ ರೂಪಾಯಿ ಕಾಮಗಾರಿಗೆ ಕೇವಲ ರೂ. 7 ಲಕ್ಷ ಗುತ್ತಿಗೆದಾರರು ಶೇ.18 ರಷ್ಟು ಜಿಎಸ್​ಟಿ ತುಂಬಬೇಕಾಗುತ್ತದೆ. ಉಳಿದ ಶೇ.11 ರಷ್ಟು ಹಣವನ್ನು ಮತ್ತೆ ಎಲ್ಲಿಂದ ತರುವುದು. ಗುತ್ತಿಗೆದಾರರ ಬಳಿ ಜಿಎಸ್​ಟಿ ಪಾವತಿಸುವಷ್ಟೂ ಹಣ ಇಲ್ಲದೆ ಒದ್ದಾಡುತ್ತಿದ್ದಾರೆ".

"ಕೆಲವು ಇಲಾಖೆಗಳಲ್ಲಿ ಒಳಗೊಳಗೆ ತಮಗೆ ಬೇಕಾದವರಿಗೆ ಮಾತ್ರ ಬಾಕಿ ಮೊತ್ತ ಪಾವತಿಸುವ ಪರಿಪಾಠವನ್ನು ಬೆಳೆಸಿಕೊಂಡಿದೆ. ಈ ಸಂಬಂಧ ಪ್ರಶ್ನಿಸಿದರೆ ಸ್ಥಳಿಯ ಇಂಜಿನಿಯರ್ ಮತ್ತು ಅಧಿಕಾರಿಗಳಿಗೆ ಮಾಹಿತಿಯೇ ಇರುವುದಿಲ್ಲ. ನಮ್ಮ ಗಮನಕ್ಕೆ ಬಾರದೆ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳ ಗಮನಕ್ಕೂ ತರದೆ ಶಿಫಾರಸ್ಸು ತಂದವರಿಗೆ ರಾತ್ರೋರಾತ್ರಿ ಚೆಕ್ ನೀಡಿದ ಉದಾಹರಣೆಗಳಿವೆ. ನಾವು ನಿಸ್ಸಹಾಯಕರು ಎಂದು ಸ್ಥಳೀಯ ಅಧಿಕಾರಿಗಳು ಅಳಲು ತೋಡಿಕೊಳ್ಳುತ್ತಾರೆ. ಇಲಾಖೆಯ ಮುಖ್ಯಸ್ಥರು ವ್ಯವಸ್ಥಾಪಕ ನಿರ್ದೇಶಕರು. ಇವರಿಗೆ ಎಲ್ಲ ಅಧಿಕಾರ ಇರುತ್ತದೆ. ಆದರೆ ವ್ಯವಸ್ಥಾಪಕ ನಿರ್ದೇಶಕರೂ ನಮಗೆ ಅಧಿಕಾರ ಇಲ್ಲ. ಸಚಿವರೊಂದಿಗೆ ಮಾತನಾಡಿ ಎಂದು ಹೇಳುತ್ತಾರೆ ಎಂದರೆ ನಾವು ಯಾರ ಬಳಿ ಕಷ್ಟವನ್ನು ತೋಡಿಕೊಳ್ಳಬೇಕು" ಎಂದು ಪ್ರಶ್ನಿಸಿದರು.

"ಇನ್ನು ಮೂರು ಮತ್ತು ನಾಲ್ಕನೇ ದರ್ಜೆ ಗುತ್ತಿಗೆದಾರರ ಕಷ್ಟ ಯಾವ ಶತ್ರುವಿಗೂ ಬೇಡ ಅನ್ನಿಸುತ್ತದೆ. ಅವರು ಕೆಲಸ ನಿರ್ವಹಿಸುವುದೇ ಕೆಲವೇ ಲಕ್ಷ ರೂಪಾಯಿಗಳ ಕಾಮಗಾರಿ. ಆ ಹಣವನ್ನೂ ಬ್ಯಾಂಕ್, ಖಾಸಗಿ ಲೇವಾದೇವಿಗಾರರು, ಮತ್ತು ಆಸ್ತಿ ಅಡವಿಟ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಿರುತ್ತಾರೆ. ಮೂರು ನಾಲ್ಕು ವರ್ಷ ಬಿಲ್ ಪಾವತಿಸದಿದ್ದರೆ ಏನು ಮಾಡಬೇಕು? ಅದೆಷ್ಟೋ ಗುತ್ತಿಗೆದಾರರು ಊರು ಬಿಟ್ಟಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಓಡಾಡುತ್ತಿದ್ದಾರೆ. ಈ ನೋವನ್ನು ಯಾರಲ್ಲಿ ಹೇಳಿಕೊಳ್ಳಬೇಕು?. ಯಾವುದೇ ಇಲಾಖೆಯಲ್ಲಿ ಜ್ಯೇಷ್ಠತೆಯನ್ನು ಪಾಲಿಸುತ್ತಿಲ್ಲ. ಆಗಲೇ ಹೇಳಿದಂತೆ ತಮಗೆ ಬೇಕಾದವರಿಗೆ ರಾತ್ರೋರಾತ್ರಿ ಚೆಕ್​ಗಳನ್ನು ನೀಡಲಾಗುತ್ತಿದೆ. ಸೀನಿಯಾರಿಟಿ ಪಟ್ಟಿಯನ್ನೂ ನೀಡುತ್ತಿಲ್ಲ. ಪ್ರಶ್ನಿಸಿದರೆ ಯಥಾಪ್ರಕಾರ ಮೇಲಿನವರತ್ತ ಕೈ ತೋರಿಸಿ ಅಲ್ಲಿ ಕೇಳಿಕೊಳ್ಳಿ ಎನ್ನುತ್ತಾರೆ".

"ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯದ್ದು (ಬಿಬಿಎಂಪಿ) ಮತ್ತೊಂದು ರೀತಿಯ ಕಥೆ. ಇಲ್ಲಿ ಯಾರನ್ನು ಪ್ರಶ್ನಿಸಿದರೂ ಮತ್ತೊಬ್ಬರತ್ತ ಕೈ ತೋರಿಸುತ್ತಾರೆ. ಬಿಬಿಎಂಪಿಯಲ್ಲಿ ಗುತ್ತಿಗೆದಾರರು ಅನಾಥ ಮಕ್ಕಳಾಗಿದ್ದಾರೆ. ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿಸಲು ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಹಿರಿತನವನ್ನು ಆಧರಿಸಿ ಹಣ ಬಿಡುಗಡೆ ಮಾಡುವುದನ್ನು ಕೈಬಿಡಲಾಗಿದೆ" ಎಂದು ಬೇಸರ ವ್ಯಕ್ತಪಡಿಸಿದರು.

"ವಿವಿಧ ಕಾಮಗಾರಿಗಳನ್ನು ವರ್ಗೀಕರಿಸಿ ಅನುದಾನವನ್ನು ಬಿಡುಗಡೆ ಮಾಡುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಹೊಸ ಸಂಪ್ರದಾಯವನ್ನು ಹುಟ್ಟು ಹಾಕಿದೆ. ಈ ಸಂಬಂಧ ಬೆಂಗಳೂರು ಉಸ್ತುವಾರಿ ವಹಿಸಿಕೊಂಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಬಿಎಂಪಿ ಆಯುಕ್ತರು ಮತ್ತು ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ".

"ಕೆಲವು ವರ್ಗಗಳಿಗೆ ಕಾಮಗಾರಿ ಮುಗಿದ ತಕ್ಷಣ ಅನುದಾನ ಲಭ್ಯವಾದರೆ ಇನ್ನೂ ಕೆಲವು ವರ್ಗಗಳಲ್ಲಿ ವರ್ಷಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದು ತಾರತಮ್ಯಕ್ಕೆ ಕಾರಣವಾಗುತ್ತದೆ. ಆದರೂ ಪ್ರಭಾವಿ ಮತ್ತು ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಈ ನಿಯಮವನ್ನು ರೂಪಿಸಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಭ್ರಷ್ಟಾಚಾರಕ್ಕೆ ಅಸ್ಪದವಾಗುವ ಸಂಭವವಿರುತ್ತದೆ. ಮೇಲಾಗಿ ಬಾಕಿ ಮೊತ್ತವನ್ನು ಹಿರಿತನದ ಆಧಾರದಲ್ಲಿಯೇ ಬಿಡುಗಡೆ ಮಾಡಬೇಕೆಂದು ಹೈಕೋರ್ಟ್ ತೀರ್ಪು ನೀಡಿದೆ. ಯಾವುದೇ ವರ್ಗವಾದರೂ ಎಲ್ಲವೂ ಕಾಮಗಾರಿಗಳ ಪಟ್ಟಿಯ ಅಡಿಯಲ್ಲೇ ಬರುತ್ತದೆ. ಆದರೂ ತಾರತಮ್ಯ ಮತ್ತು ಆರ್ಥಿಕ ಅಸಮಾನತೆಯನ್ನು ಏಕೆ ಜಾರಿಗೊಳಿಸುತ್ತೀರಿ?" ಎಂದು ಕೇಳಿದರು.

ಸರ್ಕಾರ ಸ್ಪಂದಿಸುತ್ತಿಲ್ಲ: "ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳನ್ನು ಎರಡು ಮೂರು ಬಾರಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದೇವೆ. ವಿವಿಧ ಇಲಾಖೆಗಳ ಸಚಿವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ. ಗುತ್ತಿಗೆದಾರರ ಸಂಕಷ್ಟಗಳನ್ನು ಕುರಿತು ಮನವರಿಕೆ ಮಾಡಿಕೊಟ್ಟಿದ್ದೇವೆ. ಆದರೂ ಸರ್ಕಾರ ಉದಾಸೀನ ಮಾಡುತ್ತಿದೆ. ಗುತ್ತಿಗೆದಾರರು ಪ್ರಮುಖವಾಗಿ ಕಾಮಗಾರಿಗಳನ್ನು ನಿರ್ವಹಿಸುವ ಲೋಕೋಪಯೋಗಿ, ಜಲಸಂಪನ್ಮೂಲ, ಸಣ್ಣನೀರಾವರಿ, ಆರ್.ಡಿ.ಪಿ. ಆರ್ ಮತ್ತು ಬಿಬಿಎಂಪಿ ಉಸ್ತುವಾರಿ ವಹಿಸಿಕೊಂಡಿರುವ ಉಪಮುಖ್ಯಮಂತ್ರಿಗಳು, ಸಚಿವರು ಹಾಗೂ ಅಧಿಕಾರಿಗಳ ಸಭೆ ಕರೆದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಬೇಕೆಂದು ಹಲವಾರು ಮನವಿ ಮಾಡಿಕೊಂಡಿದ್ದೇವೆ."

"ಆದರೂ ಇದುವರೆಗೂ ಒಂದು ಸಭೆಯನ್ನು ಕರೆದು ಚರ್ಚೆ ನಡೆಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ಸರ್ಕಾರ ಒಂದು ತಿಂಗಳೊಳಗೆ ಎಲ್ಲ ಇಲಾಖೆಗಳಲ್ಲೂ ಕನಿಷ್ಠ ಶೇ. 50ರಷ್ಟು ಬಾಕಿ ಮೊತ್ತವನ್ನು ಬಿಡುಗಡೆ ಮಾಡಲೇಬೇಕು. ಯಾವುದೇ ಸಬೂಬುಗಳನ್ನು ಹೇಳಬಾರದು. ತನಿಖೆ, ಆಯೋಗದ ಹೆಸರಿನಲ್ಲಿ ಮುಂದೂಡಬಾರದು. ಇಲ್ಲವಾದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು" ಎಂದು ಎಚ್ಚರಿಕೆ ನೀಡಿದರು.

ಅಂಬಿಕಾಪತಿ ಮನೆ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕೆಂಪಣ್ಣ, "ಅಂಬಿಕಾಪತಿ ಅವರು ಬಹಳಷ್ಟು ವರ್ಷಗಳಿಂದ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿಲ್ಲ. ಐಟಿ ದಾಳಿ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ನನ್ನ ಪತ್ನಿ ದಾಳಿ ಬಗ್ಗೆ ಹೇಳಿದರು. ನಾನು ಬೆಳಗ್ಗೆ ಟಿವಿ ಸಹ ನೋಡಿಲ್ಲ. 42 ಕೋಟಿ ರೂ. ಪತ್ತೆಯಾಗಿರುವುದು ಗೊತ್ತಾಯಿತು. ಅವರದ್ದು ಇದೊಂದೇ ವ್ಯಾಪಾರವಲ್ಲ. ಕೃಷಿ, ಜಲ್ಲಿ ಕ್ರಷರ್ ಸೇರಿದಂತೆ ಅನೇಕ ವ್ಯಾಪಾರಗಳಿವೆ. ಅವರು ಈಗ ಕಂಟ್ರಾಕ್ಟರ್ ಕೆಲಸವನ್ನೇ ನಿಲ್ಲಿಸಿಬಿಟ್ಟಿದ್ದಾರೆ" ಎಂದು ಹೇಳಿದರು.

ಕೆಂಪಣ್ಣ ಕಾಣೆಯಾಗಿದ್ದಾರೆ ಎಂಬ ಮಾಜಿ ಸಚಿವ ಜಿ.ಟಿ.ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿ, "ಆಗ ಎಲ್ಲಿಗೆ ಹೋಗಿದ್ದರು. ಎಲ್ಲ ಶಾಸಕರಿಗೂ ಮನವಿ ಮಾಡಿದ್ದೆವು. ಯಾವುದೇ ಪಕ್ಷಗಳ ಪರ ನಾವು ನಿಂತಿಲ್ಲ" ಎಂದು ತಿರುಗೇಟು ನೀಡಿದರು.

ಈ ಸಂದರ್ಭದಲ್ಲಿ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಜಿ.ಎಂ.ರವೀಂದ್ರ, ಕಾರ್ಯಾಧ್ಯಕ್ಷ ಆರ್.ಮಂಜುನಾಥ್ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.