ETV Bharat / state

ಕಾಂಗ್ರೆಸ್‍ನಲ್ಲಿ ಸಾಮಂತರಾಗಿರಬಹುದು ಆದ್ರೆ ಮಹಾರಾಜರಾಗಲು ಸಾಧ್ಯವಿಲ್ಲ: ಸಿ.ಟಿ ರವಿ

author img

By

Published : Nov 27, 2021, 7:28 AM IST

ಸಿ.ಟಿ ರವಿ, CT Ravi
ಸಿ.ಟಿ ರವಿ

ವಂಶವಾದ, ಜಾತಿವಾದದ ರಾಜಕೀಯ, ಮತಬ್ಯಾಂಕ್ ಆಧರಿತ ರಾಜನೀತಿ ದೂರವಾಗಬೇಕು ಎಂಬುದೇ ಬಿಜೆಪಿ ಆಶಯವಾಗಿದೆ. ರಾಷ್ಟ್ರವಾದ, ಸಮರಸ ಸಮಾಜದ ನಿರ್ಮಾಣವೇ ಬಿಜೆಪಿಯ ಗುರಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.

ಬೆಂಗಳೂರು: ಬಿಜೆಪಿಯಲ್ಲಿ ಕೌಟುಂಬಿಕ ವಾರಸುದಾರಿಕೆ ಇಲ್ಲ. ಕಾಂಗ್ರೆಸ್‍ನಲ್ಲಿ ಸಾಮಂತರಾಗಿರಬಹುದು, ಮಹಾರಾಜರಾಗಲು ಸಾಧ್ಯವಿಲ್ಲ. ಜೆಡಿಎಸ್ ಪಕ್ಷ ಕೂಡ ಇದಕ್ಕೆ ಹೊರತಾಗಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.

ಭಾರತೀಯ ಜನತಾ ಯುವಮೋರ್ಚಾ ವತಿಯಿಂದ ಕ್ಲಬ್ ಹೌಸ್ ವೇದಿಕೆಯಲ್ಲಿ ಕಮಲ ಕ್ಲಬ್ ಏರ್ಪಡಿಸಿದ್ದ 'ಸಂವಿಧಾನ ಸಂಭ್ರಮ ಚಿಂತನ ಮಂಥನ ಕಾರ್ಯಕ್ರಮ'ದಲ್ಲಿ 'ಬಾಬಾ ಸಾಹೇಬ್ ಅಂಬೇಡ್ಕರ್ ಕನಸಿನ ಸಮರಸ ಸಮಾಜ ನಿರ್ಮಾಣದಲ್ಲಿ ನಮ್ಮ ಪಾತ್ರ' ಎಂಬ ವಿಷಯದ ಕುರಿತು ಮಾತನಾಡಿದ ಅವರು, ವಂಶವಾದ, ಜಾತಿವಾದದ ರಾಜಕೀಯ, ಮತಬ್ಯಾಂಕ್ ಆಧರಿತ ರಾಜನೀತಿ ದೂರವಾಗಬೇಕು ಎಂಬುದು ಬಿಜೆಪಿ ಆಶಯ. ರಾಷ್ಟ್ರವಾದ, ಸಮರಸ ಸಮಾಜದ ನಿರ್ಮಾಣವೇ ಬಿಜೆಪಿ ಗುರಿ. ಅದು ಸದ್ದಿಲ್ಲದ ಕ್ರಾಂತಿ ಆಗಬೇಕು ಎಂದು ಆಶಿಸಿದರು.

ಇದನ್ನೂ ಓದಿ: ಶತಮಾನದ ಇತಿಹಾಸ ಹೊಂದಿರುವ ಗಾಂಧೀಜಿಯ ನವಜೀವನ್‌ ಟ್ರಸ್ಟ್‌ ಇಂದಿಗೂ ಪರೋಪಕಾರಿ

ಕಾಂಗ್ರೆಸ್ ಪಕ್ಷ, ಪಿಡಿಪಿ, ಎನ್‍ಸಿಪಿ, ಆರ್​ಜೆಡಿ, ಸಮಾಜವಾದಿ ಪಾರ್ಟಿ, ಬಿಜೆಡಿ, ಟಿಎಂಸಿ, ಡಿಎಂಕೆ, ತೆಲುಗು ದೇಶಂ, ಟಿಆರ್​ಎಸ್, ವೈಎಸ್‍ಆರ್​ಗಳು ಕಂಪಾರ್ಟ್‍ಮೆಂಟ್ ಆಧರಿತವಾಗಿವೆ. ಬಿಜೆಪಿಯಲ್ಲಿ ಕೌಟುಂಬಿಕ ವಾರಸುದಾರಿಕೆ ಇಲ್ಲ. ಮೋದಿ, ನಡ್ಡಾ ಕೌಟುಂಬಿಕ ವಾರಸುದಾರಿಕೆ ನಡೆಸಲು ಬಿಡುವುದಿಲ್ಲ.

ಕಾಂಗ್ರೆಸ್‍ನಲ್ಲಿ ಸಾಮಂತರಾಗಿರಬಹುದು. ಮಹಾರಾಜರಾಗಲು ಸಾಧ್ಯವಿಲ್ಲ. ಕರ್ನಾಟಕದ ಜೆಡಿಎಸ್ ಕೂಡ ಆ ಕಂಪಾರ್ಟ್‍ಮೆಂಟ್‍ನ ಮೊದಲ ಸ್ಥಾನವನ್ನು ವಂಶದೊಳಗೇ ಇಟ್ಟುಕೊಂಡಿದೆ ಎಂದು ತಿಳಿಸಿದರು.

ಸಾಮಾಜಿಕ ನ್ಯಾಯವು ಪ್ರತಿ ಕಾರ್ಯಕರ್ತನ ಧ್ಯೇಯವಾಗಲಿ. ಜಾತಿ ಆಧಾರದಲ್ಲಿ ತಾರತಮ್ಯ ಮಾಡದಿರಿ ಎಂದು ಸಲಹೆ ನೀಡಿದ ಅವರು, ಪಂಚತೀರ್ಥದ ಅಭಿವೃದ್ಧಿ ಮಾಡಿದ್ದೇ ಬಿಜೆಪಿಯ ಕೇಂದ್ರ ಸರ್ಕಾರ, ಅಸ್ಪೃಶ್ಯತೆಗೆ ಮನೆ, ಮನದಲ್ಲಿ ಜಾಗ ಕೊಡಬೇಡಿ ಎಂದು ತಿಳಿಸಿದರು.

ಇದನ್ನೂ ಓದಿ: ಮನೆಯಲ್ಲಿ ಊಟ ಮಾಡುತ್ತಾ ಕುಳಿತಿದ್ದ ವ್ಯಕ್ತಿಗೆ ಗುಂಡು ಹಾರಿಸಿ ಕೊಲೆ

ಸುಧಾರಣೆ ನಮ್ಮ ಚಟುವಟಿಕೆಯ ಭಾಗವಾಗಬೇಕು

ಸಮಾಜ ಸುಧಾರಣೆಯೂ ನಮ್ಮ ಚಟುವಟಿಕೆಯ ಭಾಗ ಆಗಬೇಕು. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಿದೆ. ಇವತ್ತು ಹೊಸರೀತಿಯಲ್ಲಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಶಕ್ತಿಗಳು ತಲೆ ಎತ್ತುತ್ತಿವೆ. ನಮ್ಮ ಪಕ್ಷದಲ್ಲಿ ಎತ್ತರಕ್ಕೆ ಏರಲು ನಮಗೆ ದೊಡ್ಡ ರಾಜಕೀಯ ಕೌಟುಂಬಿಕ ಹಿನ್ನೆಲೆ ಬೇಕಾಗಿಲ್ಲ. ಪ್ರಧಾನಿಯವರಿಗೆ ಅಂಥ ರಾಜಕೀಯ ಕೌಟುಂಬಿಕ ಹಿನ್ನೆಲೆ ಇಲ್ಲ. ಕೆಲವು ರಾಜಕೀಯ ಪಕ್ಷಗಳನ್ನು ಗಮನಿಸಿದರೆ ಪಕ್ಷದೊಳಗೂ ಕಂಪಾರ್ಟ್‍ಮೆಂಟ್ ಇದೆ ಎಂದು ಸಿ ಟಿ ರವಿ ತಿಳಿಸಿದರು.

ಇದನ್ನೂ ಓದಿ: ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಬಸ್​ ಮೇಲೆ ಗುಂಡಿನ ದಾಳಿ: ಮೂವರ ಸಾವು

ಮೋದಿ ಅವರದ್ದು ಮತಬ್ಯಾಂಕ್​ ರಾಜಕೀಯವಲ್ಲ

ಜಾತಿ ಕಟ್ಟಿಕೊಂಡು ಅಧಿಕಾರ ಹಿಡಿಯುವುದು ನಮ್ಮ ಉದ್ದೇಶವಲ್ಲ. ರಾಷ್ಟ್ರಹಿತಕ್ಕೆ ಅಡ್ಡಿಯನ್ನು ದೂರ ಮಾಡಿ, ಸಮಾಜದಲ್ಲಿ ಏಕತೆಯ ಮೂಲಕ ಅಭಿವೃದ್ಧಿ ಸಾಧನೆಯೇ ನಮ್ಮ ಗುರಿ. ಮತಬ್ಯಾಂಕ್ ರಾಜಕೀಯವನ್ನು ಮೋದಿಯವರು ಜಾರಿಗೊಳಿಸಿಲ್ಲ. ಅವರ ಘೋಷಣೆಯೇ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಆಧಾರಿತವಾಗಿವೆ.

ಆದರೆ, ಸಿದ್ದರಾಮಯ್ಯ ಅವರು ಮತ ಬ್ಯಾಂಕ್ ರಾಜಕೀಯಕ್ಕಾಗಿ ಶಾದಿ ಭಾಗ್ಯ, ಕೆಲವೇ ಜಾತಿಯ ಮಕ್ಕಳಿಗೆ ಪ್ರವಾಸ ಭಾಗ್ಯ ಜಾರಿಗೊಳಿಸಿದ್ದರು. ಅದರ ಹಿಂದೆ ಜಾತಿಯ ವಾಸನೆ ಇತ್ತು ಎನ್ನುತ್ತಾ ಸಂಘದ ಶಾಖೆಯಲ್ಲಿ ಹೇಳಿಕೊಟ್ಟ ಅಸ್ಪೃಶ್ಯತೆ ವಿರೋಧಿಸುವ ಹಾಡನ್ನು ನೆನಪಿಸಿಕೊಂಡರು.

ಅಸ್ಪೃಶ್ಯತೆಯನ್ನು ಮನಸ್ಸಿನಿಂದ ದೂರಮಾಡಬೇಕು. ಡಾ. ಅಂಬೇಡ್ಕರ್ ಅವರ ಆಶಯವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರ್​ಎಸ್​ಎಸ್ ಕಾರ್ಯ ನಿರ್ವಹಿಸುತ್ತಿದೆ. ಸಮಾಜದ ಎಲ್ಲಾ ವರ್ಗಕ್ಕೂ ಬಲ ಬರಬೇಕು ಎಂಬುದೇ ಡಾ.ಅಂಬೇಡ್ಕರ್ ಅವರ ಆಶಯವಾಗಿತ್ತು.

ಸಮಾಜದೊಳಗಿನ ಕಂಪಾರ್ಟ್‍ಮೆಂಟ್, ಅಸ್ಪೃಶ್ಯತೆ, ಜಾತೀಯತೆ ವಿರುದ್ಧ ಅವರು ಹೋರಾಡಿದ್ದರು. ಬಿಜೆಪಿ ರಾಷ್ಟ್ರಹಿತದ ಹಿನ್ನೆಲೆಯಲ್ಲಿ ಹುಟ್ಟಿದ ಪಕ್ಷ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೇರಣೆ ನಮ್ಮೆದುರಿಗಿತ್ತು ಎಂದರು.

ಇದನ್ನೂ ಓದಿ: ಮತ್ತೊಬ್ಬನ ಪತ್ನಿ ಜೊತೆ ವಿವಾಹೇತರ ಸಂಬಂಧ: ರೆಡ್​​​ಹ್ಯಾಂಡ್​​ ಆಗಿ ಸಿಕ್ಕಿಬಿದ್ದ ಸಬ್‌ಇನ್ಸ್​​ಪೆಕ್ಟರ್​​ ಸಸ್ಪೆಂಡ್‌

ಭಗವಂತ ಎಂದೂ ಜಾತಿ ಗಮನಿಸಿ ಪ್ರತ್ಯಕ್ಷ ಆಗಲಿಲ್ಲ. ಭಕ್ತ ಕುಂಬಾರ, ಶಬರಿ, ಮಾರ್ಕಂಡೇಯ ಸೇರಿ ಜಾತಿ ಮೇಲೆ ಒಲಿಯುವವನಲ್ಲ ಎಂದು ಸಂದೇಶ ನೀಡಿದ್ದಾನೆ. ಋಷಿ ಮುನಿಗಳು ಸಮರಸ ಸಮಾಜದ ಸಂದೇಶವನ್ನೇ ನೀಡಿದ್ದರು ಎಂದು ವಿವರಿಸಿದರು. ಬಿಜೆಪಿ ಸುಧಾರಣೆಯ ನೇತೃತ್ವ ವಹಿಸಿದ ರಾಜಕೀಯ ಪಕ್ಷ. ಅಧಿಕಾರ ಎಂಬುದು ನಮ್ಮ ಅಂತಿಮ ಗುರಿಯಲ್ಲ. ಸಂವಿಧಾನದ ಆಶಯ ಅನುಷ್ಠಾನವೇ ನಮ್ಮ ಗುರಿ ಎಂದು ಸಿ ಟಿ ರವಿ ಇದೇ ವೇಳೆ ಪ್ರತಿಪಾದಿಸಿದರು.

ಇದನ್ನೂ ಓದಿ: ಮುಂದಿನ ತಿಂಗಳ ಹೊತ್ತಿಗೆ ಟೊಮೆಟೊ ದರ ಇಳಿಕೆಯಾಗಲಿದೆ : ಯಾಕೆ ಗೊತ್ತಾ?

ನೈತಿಕತೆ, ಕಾನೂನಿನ ಹಕ್ಕು ಬಾಧ್ಯತೆ ತಿಳಿಸುವ, ರಾಜಕೀಯ ವ್ಯವಸ್ಥೆ ಕುರಿತು ಮಾಹಿತಿ ಕೊಡುವ, ಅರ್ಥಶಾಸ್ತ್ರದ ಅರಿವು ಮೂಡಿಸುವ, ಸಾಮಾಜಿಕ ಸಮಾನವಾಗಿ ಸಮಭಾವವನ್ನು ಹೇಳಿಕೊಡುವ ಹಾಗೂ ಆಧ್ಯಾತ್ಮಿಕ ಮಾರ್ಗದರ್ಶನವನ್ನೂ ನೀಡುವ ಮಹತ್ವದ ಸಮಗ್ರ ಗ್ರಂಥವೇ ಸಂವಿಧಾನ ಎಂದು ಸಿ ಟಿ ರವಿ ವಿವರಿಸಿದರು.

ಬಾಬಾ ಸಾಹೇಬರ ಚಿಂತನೆ ಹಾಗೂ ಮೋದಿ ಸಾಧನೆ ಕುರಿತು ಶಾಸಕ ಪಿ.ರಾಜೀವ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿ ಪ್ರಧಾನಿ, ರಾಷ್ಟ್ರಪತಿ ಆಗಲು ಸಾಧ್ಯ ಇದೆ ಎಂದರೆ ಅದಕ್ಕೆ ಕಾರಣ ನಮ್ಮ ಸಂವಿಧಾನ ಗ್ರಂಥ ಎಂದರು. ಅಂಬೇಡ್ಕರರ ಸಾಮಾಜಿಕ ಸಮಾನತೆಯ ಪರಿಕಲ್ಪನೆಯನ್ನು ಮೋದಿಯವರು ಸಾಕಾರಗೊಳಿಸಿದ್ದಾರೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.