ETV Bharat / state

'ಸಲೀಂ ಅಹ್ಮದ್ ಪ್ರಶ್ನೆ ಕೇಳಿದ ಪ್ರತಿ ಸಲ ಸಮಸ್ಯೆ ಆಗುತ್ತೆ, ರಾಹು ಕಾಟ ಇದ್ದಂತೆ ಇದೆ': ಪರಿಷತ್​ನಲ್ಲಿ ಜ್ಯೋತಿಷ್ಯ, ನಿಂಬೆಹಣ್ಣಿನ ಹಾಸ್ಯ

author img

By

Published : Sep 21, 2022, 5:19 PM IST

congress-members-unsatisfied-on-minister-r-ashok-answer-in-legislative-council
'ಸಲೀಂ ಅಹ್ಮದ್ ಪ್ರಶ್ನೆ ಕೇಳಿದ ಪ್ರತಿ ಸಲ ಸಮಸ್ಯೆ ಆಗುತ್ತೆ, ರಾಹು ಕಾಟ ಇದ್ದಂತೆ ಇದೆ': ಪರಿಷತ್​ನಲ್ಲಿ ಜ್ಯೋತಿಷ್ಯ, ನಿಂಬೆಹಣ್ಣಿನ ಹಾಸ್ಯ

ಸಲೀಂ ಅಹ್ಮದ್ ಕೇಳುವ ಪ್ರಶ್ನೆಗೆ ಯಾವಾಗಲೂ ಇದೇ ಸಮಸ್ಯೆ ಆಗುತ್ತಿದೆ. ರಾಹು ಕಾಟ ಇದ್ದ ಹಾಗೆ ಇದೆ. ಅವರ ಸ್ಥಾನ ಬದಲಾವಣೆ ಮಾಡಿ ಎಂದು ಜೆಡಿಎಸ್ ಸದಸ್ಯ ಶರವಣ ಹಾಸ್ಯ ಚಟಾಕಿ ಹಾರಿಸಿದರು.

ಬೆಂಗಳೂರು: ಕಾಂಗ್ರೆಸ್ ಸದಸ್ಯ ಸಲೀಂ ಅಹ್ಮದ್​ ಕೇಳಿದ ಪ್ರಶ್ನೆಗೆ ಉತ್ತರ ನೀಡಲು ಕಾಲಾವಕಾಶ ಕೋರಿದ ವಿಷಯವು ವಿಧಾನ ಪರಿಷತ್​ನಲ್ಲಿ ಗದ್ದಲ, ಕೋಲಾಹಲ ಸೃಷ್ಟಿಸಿತು. ಇದರ ನಡುವೆ ಜ್ಯೋತಿಷ್ಯ, ನಿಂಬೆ ಹಣ್ಣಿನ ಹಾಸ್ಯ ಚಟಾಕಿಗಳು ಸಹ ಕೇಳಿ ಬಂದವು. ಸದಸ್ಯರ ಜೊತೆ ಸಭಾಪತಿಯೂ ಸೇರಿಕೊಂಡ ಸದನವನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡಿದರು.

ಗದ್ದಲದಿಂದಾಗಿ ಮುಂದೂಡಿಕೆಯಾಗಿದ್ದ ಕಲಾಪ ಪುನರಾರಂಭಗೊಳ್ಳುತ್ತಿದ್ದಂತೆ ಮಾತನಾಡಿದ ಜೆಡಿಎಸ್ ಸದಸ್ಯ ಶರವಣ, ಪ್ರತಿಪಕ್ಷಗಳು ಪ್ರಶ್ನೆಗಳು ಕೇಳಿದಾಗ ಉತ್ತರ ಕೊಡಬೇಕು. ಸದನ ಇನ್ನು ಎರಡು‌ ದಿನ ಇದೆ. ಯಾವಾಗ ಉತ್ತರ ಕೊಡುತ್ತಾರೆ?. ಸದನ ಮುಗಿಯುವುದರೊಳಗೆ ಉತ್ತರ ಕೊಡಿಸಿ. ಸಲೀಂ ಅಹ್ಮದ್ ಕೇಳುವ ಪ್ರಶ್ನೆಗೆ ಯಾವಾಗಲೂ ಇದೇ ಸಮಸ್ಯೆ ಆಗುತ್ತಿದೆ. ಅವರ ಚೇರ್​​ನಲ್ಲಿ ದೋಷ ಇದೆ ಅನ್ಸುತ್ತೆ. ರಾಹು ಕಾಟ ಇದ್ದ ಹಾಗೆ ಇದೆ. ದಯವಿಟ್ಟು ಅವರ ಸ್ಥಾನ ಬದಲಾವಣೆ ಮಾಡಿ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಇದಕ್ಕೆ ಪ್ರತಿಯಾಗಿ ಮಾತನಾಡಿದ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ, ನಿಮಗೆ ತುಂಬಾ ಜೋತಿಷಿಗಳು ಗೊತ್ತಿದೆ. ಅವರನ್ನು ಕೇಳಿ ನೀವೇ ನಿಂಬೆಹಣ್ಣು ಮಾಡಿಸಿಕೊಂಡು ಬಂದು ಕೊಡಿ ಎಂದು ಶರವಣ ಕಾಲೆಳೆದರು. ಈ ವೇಳೆ, ಮಾತನಾಡಿದ ಸಚಿವ ಸುಧಾಕರ್ ಶರವಣ ಜೋತಿಷಿಗಳ ವಿವಿಯಲ್ಲಿ ಓದಿದ್ದಾರೆ. ಅವರಿಗೆ ಅದರ ಬಗ್ಗೆ ಗೊತ್ತಿದೆ ಕೇಳಿ ಎಂದು ಹಾಸ್ಯ ಮಾಡಿದರು. ನಂತರ ವಿಷಯ ಮತ್ತೆ ಪ್ರಶ್ನೆಯತ್ತ ತಿರುಗಿ, ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು.

'ಸಲೀಂ ಅಹ್ಮದ್ ಪ್ರಶ್ನೆ ಕೇಳಿದ ಪ್ರತಿ ಸಲ ಸಮಸ್ಯೆ ಆಗುತ್ತೆ, ರಾಹು ಕಾಟ ಇದ್ದಂತೆ ಇದೆ': ಪರಿಷತ್​ನಲ್ಲಿ ಜ್ಯೋತಿಷ್ಯ, ನಿಂಬೆಹಣ್ಣಿನ ಹಾಸ್ಯ

ಈ ವೇಳೆ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್, ಪ್ರಶ್ನೆಗೆ ಉತ್ತರ ಸಮಯ ಕೋರಿದ್ದ ಕಾರಣಕ್ಕೆ ನನಗೆ ಏನೂ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ಅದಕ್ಕೆ ನಾನು ಓದಿದ ಸರ್ಕಾರಿ ಶಾಲೆಯೂ ಕಾರಣ ಇರಬಹುದು. ನನಗೆ ಓದು ಕಲಿಸಿಲ್ಲ ಎಂದರೆ ಸರ್ಕಾರಿ ಶಾಲೆ ತಪ್ಪು ಎಂದು ಖಾರವಾಗಿ ಹೇಳಿದರು.

ಅಲ್ಲದೇ, ನಾನು ಕೂಡ 15 ವರ್ಷ ವಿರೋಧ ಪಕ್ಷದಲ್ಲಿದ್ದೆ. ನಮ್ಮ ಹಲವು ಪ್ರಶ್ನೆಗೆ ಈ ರೀತಿಯಾಗಿ ಈ ಹಿಂದೆ ಕಾಲಾವಕಾಶ ಪಡೆದಿದ್ದಾರೆ. ನಾವೇನು ಹೊಸ ಸಂಪ್ರದಾಯ ಹಾಕಿಲ್ಲ. ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ದಾಖಲೆ ಕೊಡಬೇಕಾಗಲಿದೆ. ಹಾಗಾಗಿ ಸಲೀಂ ಅಹ್ಮದ್​, ಕೇಳಿದ ಆರು ಪ್ರಶ್ನೆಗಳಲ್ಲಿ ಮೊದಲ 2 ಬಿಟ್ಟು ಉಳಿದ ನಾಲ್ಕು ಪ್ರಶ್ನೆಗಳಿಗೆ ಈ ಸದನ ಮುಗಿಯುವ ಒಳಗೆ ಒತ್ತರ ನೀಡುವುದಾಗಿ ಅಶೋಕ್ ಭರವಸೆ ನೀಡಿದರು.

ಈ ವೇಳೆ ಪ್ರಶ್ನೆ ಕೇಳಿದ್ದ ಸಲೀಂ ಅಹ್ಮದ್​ ಮಾತನಾಡಿ, ನಾನು 75 ವರ್ಷದ ಮಾಹಿತಿ ಕೇಳಿಲ್ಲ. ಮೂರು ವರ್ಷದ ಮಾಹಿತಿ ಕೇಳಿದ್ದೇನೆ ಅಷ್ಟೆ ಎಂದರು. ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ಮೂರು ವರ್ಷದ್ದು ಕೇಳಿದ್ದಾರೆ, ಅಧಿಕಾರಿಗಳು ಮಾಹಿತಿ ನೀಡದಿದ್ದರೆ, ಅವರ ತಪ್ಪು ಕೂಡಲೇ ಉತ್ತರ ಕೊಡಿಸಿ ಎಂದರು. ಅಂತಿಮವಾಗಿ ಸಭಾಪತಿ ರಘುನಾಥ್ ಮಲ್ಕಾಪುರೆ ಶುಕ್ರವಾರದೊಳಗೆ ಉತ್ತರ ಕೊಡಿಸುವ ಭರವಸೆ ನೀಡಿ ಗದ್ದಲಕ್ಕೆ ತೆರೆ ಎಳೆದರು.

ಇದನ್ನೂ ಓದಿ: ಪ್ರಶ್ನೆಗೆ ಉತ್ತರಿಸಲು ಕಾಲಾವಕಾಶ ಕೋರಿದ ಸರ್ಕಾರ, ಕಾಂಗ್ರೆಸ್ ಆಕ್ಷೇಪ: ಕಲಾಪ ಮುಂದೂಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.