ETV Bharat / state

ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ: ಮಂಕಾದ ಬಿಜೆಪಿ, ಚಿಗುರಿದ ಕಾಂಗ್ರೆಸ್, ಜೆಡಿಎಸ್​ ಧೂಳಿಪಟ!

author img

By

Published : Dec 30, 2021, 4:03 PM IST

Urban local body election results -2021: ರಾಜ್ಯದ ವಿವಿಧ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್​ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 400ಸ್ಥಾನಗಳಲ್ಲಿ ಗೆಲುವು ಪಡೆದಿದ್ದು, ಕಾಂಗ್ರೆಸ್ ಬರೋಬ್ಬರಿ 500 ಸ್ಥಾನಗಳಲ್ಲಿ ಗೆದ್ದು ಮರಳಿ ರಾಜ್ಯದ ಅಧಿಕಾರದ ಗದ್ದುಗೆ ಹಿಡಿಯುವ ಕನಸು ಕಾಣುತ್ತಿದೆ.

Congress got more than 500 seats in local body election
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಪಡೆದ ಕಾಂಗ್ರೆಸ್​, ಕುಸಿದ ಬಿಜೆಪಿ

ಬೆಂಗಳೂರು : ರಾಜ್ಯದ ವಿವಿಧ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್​ಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಮಣಿಸಿರುವ ಪ್ರತಿಪಕ್ಷ ಕಾಂಗ್ರೆಸ್‌ ಮರಳಿ ರಾಜ್ಯದ ಅಧಿಕಾರದ ಗದ್ದುಗೆ ಹಿಡಿಯುವ ಕನಸನ್ನು ಬಲಗೊಳಿಸಿಕೊಂಡಿದೆ.

ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್​ನ ಸಾವಿರಕ್ಕೂ ಹೆಚ್ಚು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 500ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ 400 ರ ಗಡಿ ದಾಟಿದೆ. ಅದೇ ರೀತಿ ಪಕ್ಷೇತರರು ಮೂರನೇ ಶಕ್ತಿಯಾಗಿ ಹೊರಹೊಮ್ಮಿದ್ದು, ಜಾತ್ಯಾತೀತ ಜನತಾದಳ ಎರಡಂಕಿಯನ್ನು ದಾಟಲಾಗದೆ ನಾಲ್ಕನೇ ಸ್ಥಾನಕ್ಕೆ ಕುಸಿದು ನಿರಾಶೆ ಅನುಭವಿಸಿದೆ.

ಆಪರೇಷನ್‌ ಕಮಲಕ್ಕೆ ಬಿಜೆಪಿ ಸಿದ್ಧತೆ:

ಪರಿಸ್ಥಿತಿ ತನ್ನ ಕೈ ಮೀರುತ್ತಿರುವುದನ್ನು ಅರಿತ ಬಿಜೆಪಿ ಇದೀಗ ಮತ್ತೊಮ್ಮೆ ಆಪರೇಷನ್‌ ಕಮಲ ಕಾರ್ಯಾಚರಣೆಗೆ ಸಜ್ಜಾಗಿದ್ದು, ಮೂರನೇ ಶಕ್ತಿಯಾಗಿ ಹೊರ ಹೊಮ್ಮಿರುವ ಪಕ್ಷೇತರರಿಗೆ ಗಾಳ ಹಾಕಿದೆ. ಅವರ ಬೆಂಬಲದೊಂದಿಗೆ ಬಹುತೇಕ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್​ಗಳ ಅಧಿಕಾರ ಸೂತ್ರ ವಶಪಡಿಸಿಕೊಳ್ಳಲು ವಿದ್ಯುಕ್ತ ಪ್ರಯತ್ನ ಆರಂಭಿಸಿದೆ ಎನ್ನಲಾಗ್ತಿದೆ. ಅದೇನೆ ಇದ್ದರೂ 5 ನಗರಸಭೆ, 19 ಪುರಸಭೆ, 38 ಪಟ್ಟಣ ಪಂಚಾಯತ್​ಗಳ ಚುನಾವಣೆಯಲ್ಲಿ ತನಗೆ ಸಿಕ್ಕ ಗೆಲುವಿನಿಂದ ಕಾಂಗ್ರೆಸ್‌ ಪಕ್ಷ ಮರಳಿ ರಾಜ್ಯದ ಅಧಿಕಾರ ಹಿಡಿಯುವ ಕನಸಿಗೆ ಹತ್ತಿರವಾದಂತಾಗಿದೆ.

ಕುಸಿದ ಜನರ ವಿಶ್ವಾಸ:

ಈ ಹಿಂದೆ ರಾಜ್ಯದ ಎರಡು ವಿಧಾನಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ, ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯ ನಡಿಗೆಗೆ ಬ್ರೇಕ್‌ ಹಾಕಿದ್ದ ಕಾಂಗ್ರೆಸ್‌, ಇದೀಗ ಹ್ಯಾಟ್ರಿಕ್‌ ಸಾಧನೆ ಮಾಡಿದೆ. ಈ ಬಾರಿ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರ ಹೊಮ್ಮಿದೆ. ಯಡಿಯೂರಪ್ಪನವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ನಂತರ ಬಸವರಾಜ ಬೊಮ್ಮಾಯಿಯವರು ಗದ್ದುಗೆ ಮೇಲೇರುವ ಅವಕಾಶ ಪಡೆದರಾದರೂ ಅವರ ಆಡಳಿತದ ಮೇಲೆ ಜನ ವಿಶ್ವಾಸ ತೋರಿಸಿಲ್ಲ ಎಂಬುದು ಫಲಿತಾಂಶದಿಂದ ಸ್ಪಷ್ಟವಾಗಿದೆ.

ಭ್ರಷ್ಟಾಚಾರ ಆರೋಪ :

ಅದೇ ರೀತಿ ಪ್ರಬಲ ಉಪಚುನಾವಣೆ, ವಿಧಾನಪರಿಷತ್‌ ಚುನಾವಣೆಗಳಲ್ಲಿ ಕಂಡಿದ್ದ ಪ್ರಬಲ ಲಿಂಗಾಯತ ಸಮುದಾಯದ ವಲಸೆಯ ಕುರುಹು ಈ ಬಾರಿಯ ಚುನಾವಣೆಯಲ್ಲಿ ಕಣ್ಣಿಗೆ ಕಟ್ಟುವಂತೆ ಗೋಚರಿಸಿದೆ. ಆಡಳಿತದ ವೈಫಲ್ಯದಿಂದ ಜನರ ಅಸಮಾಧಾನಕ್ಕೆ ಗುರಿಯಾಗಿರುವ ಬಿಜೆಪಿ ದಿನದಿಂದ ದಿನಕ್ಕೆ ಶಕ್ತಿ ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗಿದ್ದು, ಇತ್ತೀಚಿನ ಎಲ್ಲಾ ಚುನಾವಣೆಗಳ ಫಲಿತಾಂಶ ಅದನ್ನು ಪದೇ ಪದೇ ಎತ್ತಿ ತೋರಿಸಿದೆ. ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ, ಭ್ರಷ್ಟಾಚಾರ ಆರೋಪ, ಮತಬ್ಯಾಂಕ್‌ ವಿಭಜಿಸುವ ತಂತ್ರ ಸಮಾಜದ ಸ್ವಾಸ್ಥ್ಯ ಕುಸಿಯುವಂತೆ ಮಾಡುತ್ತಿದ್ದು, ಇದೆಲ್ಲದರ ಪ್ರತಿಫಲವನ್ನು ಅನುಭವಿಸುತ್ತಿರುವುದು ಇದೀಗ ಸ್ಪಷ್ಟವಾಗಿದೆ.

ಕೈ-ಕಮಲದ ನಡುವೆ ನೇರ ಹಣಾಹಣಿ ಸಾಧ್ಯತೆ:

ಈ ಬಾರಿಯ ಚುನಾವಣೆಯ ಫಲಿತಾಂಶ ಮೂರನೇ ಶಕ್ತಿ ಎಂಬ ಖ್ಯಾತಿಗೆ ಪಾತ್ರವಾಗಿದ್ದ ಜೆಡಿಎಸ್‌ಗೆ ನಿರಾಶೆಯುಂಟು ಮಾಡಿದ್ದು, ಅದರ ಕುಟುಂಬ ರಾಜಕಾರಣ ಮತ್ತು ಸಿದ್ಧಾಂತರಹಿತ ನಡೆಗೆ ಜನಾಕ್ರೋಶಗೊಂಡಿರುವುದು ಸ್ಪಷ್ಟವಾಗಿದೆ. ಅದರ ಜಾತ್ಯಾತೀತ ನೀತಿಗೆ ನೆಲೆಯೇ ಇಲ್ಲದಂತಾಗಿದ್ದು, ಸನ್ನಿವೇಶಕ್ಕೆ ಅನುಗುಣವಾಗಿ ಕಾಂಗ್ರೆಸ್‌ ಮತ್ತು ಬಿಜೆಪಿಯೊಂದಿಗೆ ಕೈ ಜೋಡಿಸುವ ಅದರ ಮನಸ್ಥಿತಿ ಜನರ ಭ್ರಮನಿರಸನಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಯ ನಡುವೆ ನೇರ ಹಣಾಹಣಿ ನಡೆಯುವುದು ನಿಶ್ಚಿತವಾಗಿದ್ದು, ತಮ್ಮ ಅನಿವಾರ್ಯತೆಯ ದೃಷ್ಟಿಯಿಂದ ಆಡಳಿತಾರೂಢ ಬಿಜೆಪಿ ಮತ್ತು ಜೆಡಿಎಸ್‌ ಪರಸ್ಪರ ಕೈಗೂಡಿಸುವ ಸಾಧ್ಯತೆ ಹೆಚ್ಚಾಗಿದೆ.

ಇತ್ತೀಚಿನ ಎಲ್ಲಾ ಚುನಾವಣೆಗಳ ಫಲಿತಾಂಶದಿಂದ ಭ್ರಮನಿರಸನಗೊಂಡ ಬಿಜೆಪಿ ವರಿಷ್ಠರು, ರಾಜ್ಯದ ಮುಂಚೂಣಿ ಕಾಂಗ್ರೆಸ್‌ ನಾಯಕರ ಮೇಲೆ ಕಣ್ಣಿಟ್ಟಿದ್ದು, ಮುಂದಿನ ದಿನಗಳಲ್ಲಿ ಅಚ್ಚರಿಯ ಬೆಳವಣಿಗೆಗಳು ನಡೆಯಲಿವೆ ಎಂಬ ಮಾತುಗಳು ರಾಜಕೀಯ ವಲಯಗಳಲ್ಲಿ ಕೇಳಿ ಬರುತ್ತಿವೆ.

ಇದನ್ನೂ ಓದಿ: ರಾಜ್ಯದ ಜನತೆಯ ಭಾವನೆ ಹೇಗಿದೆ ಅನ್ನೋದಕ್ಕೆ ಇಂದಿನ ಫಲಿತಾಂಶವೇ ಸಾಕ್ಷಿ: ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.