ETV Bharat / state

ದೇವರು, ಬಸವೇಶ್ವರ, ಛತ್ರಪತಿ ಶಿವಾಜಿ, ಸತ್ಯ ನಿಷ್ಠೆಯ ಮೇಲೆ 24 ಸಚಿವರ ಪದಗ್ರಹಣ

author img

By

Published : May 27, 2023, 2:29 PM IST

ರಾಜಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ 24 ಸಚಿವರು ದೇವರು, ಬಸವೇಶ್ವರ ಸೇರಿದಂತೆ ಹಲವು ದೈವಗಳ ಹೆಸರಿನಲ್ಲಿ ಪ್ರಮಾಣ ಪಡೆದರು.

24 ಸಚಿವರ ಪದಗ್ರಹಣ
24 ಸಚಿವರ ಪದಗ್ರಹಣ

24 ಸಚಿವರ ಪದಗ್ರಹಣ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಪೂರ್ಣಗೊಂಡಿದ್ದು, ಇಂದು ರಾಜಭವನದ ಗಾಜಿನ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 24 ಸಚಿವರು ಪದಗ್ರಹಣ ಮಾಡಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣವಚನ ಬೋಧಿಸಿದರು.

ಕಳೆದ ಶನಿವಾರ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಮತ್ತು ಇವರ ಜೊತೆ ಸಂಪುಟ ಸಚಿವರಾಗಿ 8 ಮಂದಿ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದರು. ಇದರಿಂದಾಗಿ ಈಗ ಸಿಎಂ, ಡಿಸಿಎಂ ಸೇರಿದಂತೆ ಒಟ್ಟು 34 ಸಚಿವರ ಪೂರ್ಣ ಪ್ರಮಾಣದ ಸಂಪುಟ ರಚನೆಯಾಗಿದೆ. ನೂತನ ಸಚಿವರು ತಮ್ಮ ಕುಟುಂಬ ಸದಸ್ಯರ ಜೊತೆ ರಾಜಭವನಕ್ಕೆ ಆಗಮಿಸಿದ್ದರು. ಅಪಾರ ಸಂಖ್ಯೆಯ ಅಭಿಮಾನಿಗಳು ರಾಜಭವನ ರಸ್ತೆಯ ಇಕ್ಕೆಲದಲ್ಲೂ ನಿಂತು ಡಿಜಿಟಲ್ ಡಿಸ್​ಪ್ಲೇ ಮೂಲಕ ಸಮಾರಂಭವನ್ನು ವೀಕ್ಷಿಸಿದರು.

24 ಸಚಿವರ ಪದಗ್ರಹಣ

ಯಾರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ?: ಗದಗ ಶಾಸಕ ಎಚ್ ಕೆ ಪಾಟೀಲ್, ನಾಗಮಂಗಲ ಶಾಸಕ ಚೆಲುವರಾಯಸ್ವಾಮಿ, ಪಿರಿಯಾಪಟ್ಟಣ ಶಾಸಕ ಕೆ. ವೆಂಕಟೇಶ್, ಭಾಲ್ಕಿ ಶಾಸಕ ಈಶ್ವರ್ ಖಂಡ್ರೆ, ಮುಧೋಳ ಶಾಸಕ ಆರ್ ಬಿ ತಿಮ್ಮಾಪುರ್, ದಾವಣಗೆರೆ ಉತ್ತರ ಶಾಸಕ ಎಸ್ ಎಸ್ ಮಲ್ಲಿಕಾರ್ಜುನ್, ಕನಕಗಿರಿ ಶಾಸಕ ಶಿವರಾಜ್ ತಂಗಡಗಿ, ಶಹಾಪೂರ ಶಾಸಕ ಶರಣಬಸಪ್ಪ ಬಾಪೂಗೌಡ ದರ್ಶನಾಪುರ್, ಸೇಡಂ ಶಾಸಕ ಶರಣಪ್ರಕಾಶ್ ಪಾಟೀಲ್, ಭಟ್ಕಳ ಶಾಸಕ ಮಾಂಕಾಳು ವೈದ್ಯ, ಕಲಘಟಗಿ ಶಾಸಕ ಸಂತೋಷ್ ಲಾಡ್, ಎಐಸಿಸಿ ಕಾರ್ಯದರ್ಶಿ ಎನ್. ಎಸ್. ಬೋಸರಾಜು, ಹೆಬ್ಬಾಳ ಶಾಸಕ ಭೈರತಿ ಸುರೇಶ್, ಸೊರಬ ಶಾಸಕ ಮಧು ಬಂಗಾರಪ್ಪ, ಚಿಂತಾಮಣಿ ಶಾಸಕ ಎಂ ಸಿ ಸುಧಾಕರ್ ಸಂಪುಟ ದರ್ಜೆ ಸಚಿವರಾಗಿ ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು.

24 ಸಚಿವರ ಪದಗ್ರಹಣ

ಅಲ್ಲದೇ, ಬ್ಯಾಟರಾಯನಪುರ ಶಾಸಕ ಕೃಷ್ಣಬೈರೇಗೌಡ ಶ್ರದ್ಧಾ ಪೂರ್ವಕವಾಗಿ ಪ್ರಮಾಣ ಪಡೆದರೆ, ಟಿ ನರಸೀಪುರ ಶಾಸಕ ಡಾ ಎಚ್ ಸಿ ಮಹದೇವಪ್ಪ ಸತ್ಯ ನಿಷ್ಠೆಯ ಹೆಸರಲ್ಲಿ, ಮಧುಗಿರಿ ಶಾಸಕ ಕೆ ಎನ್ ರಾಜಣ್ಣ ಮಹರ್ಷಿ ವಾಲ್ಮೀಕಿ ಹೆಸರಲ್ಲಿ, ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್ ಶ್ರದ್ಧಾ ಪೂರ್ವಕವಾಗಿ ದೃಢೀಕರಣ ಮಾಡಿದರು.

ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್ ಜಗಜ್ಯೋತಿ ಬಸವೇಶ್ವರ, ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಜಗಜ್ಯೋತಿ ಬಸವೇಶ್ವರ, ಛತ್ರಪತಿ ಶಿವಾಜಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನ ಹಾಗೂ ತಾಯಿ ಗಿರಿಜಾದೇವಿ ಹಟ್ಟಿಹೊಳಿ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು.

24 ಸಚಿವರ ಪದಗ್ರಹಣ

ಇಂಗ್ಲಿಷ್​ನಲ್ಲಿ ಪ್ರಮಾಣ: ಬೀದರ್ ಶಾಸಕ ರಹೀಮ್ ಖಾನ್ ಅವರು ಇಂಗ್ಲಿಷ್​ನಲ್ಲಿ ಸಂಪುಟ ದರ್ಜೆ ಸಚಿವರಾಗಿ ಅಲ್ಲಾ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಚಳ್ಳಕೆರೆ ಶಾಸಕ ಡಿ. ಸುಧಾಕರ್ ತೇರು ಮಲ್ಲೇಶ್ವರ ಹಾಗೂ ದೇವರ ಹೆಸರಲ್ಲಿ ಪ್ರಮಾಣ ಪಡೆದರೆ, ಬಳ್ಳಾರಿ ಗ್ರಾಮೀಣ ಶಾಸಕ ಬಿ ನಾಗೇಂದ್ರ ದೇವರು, ಚಳ್ಳಗುರಿಕೆ ಹಿರಿತಾತ, ಮಹರ್ಷಿ ವಾಲ್ಮೀಕಿ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸ್ಪೀಕರ್ ಯು.ಟಿ. ಖಾದರ್ ಮತ್ತಿತರ ನಾಯಕರು ಉಪಸ್ಥಿತರಿದ್ದರು.

ಇದನ್ನೂ ಓದಿ: MLA, MLC ಅಲ್ಲದಿದ್ದರೂ ಬೋಸರಾಜುಗೆ ಸಿಕ್ತು ಸಚಿವ ಪಟ್ಟ: ಮೊದಲ ಬಾರಿಗೆ ಮಂತ್ರಿ ಗಿರಿ ಪಡೆದವರ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.